ಕುಟಿನ್ಹೊ, ನೇಮರ್ ಮಿಂಚಿನ ಆಟ

7
ಸಮಬಲದ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯ; ಹೆಚ್ಚುವರಿ ಅವಧಿಯಲ್ಲಿ ಸಂಭ್ರಮಿಸಿದ ಸಾಂಬಾ ನಾಡಿನ ತಂಡ

ಕುಟಿನ್ಹೊ, ನೇಮರ್ ಮಿಂಚಿನ ಆಟ

Published:
Updated:

ಸೇಂಟ್ ಪೀಟರ್ಸ್‌ಬರ್ಗ್‌: ಗೋಲಿಗಾಗಿ ಚಾತಕ ಪಕ್ಷಿಯಂತೆ ಒಂದೂವರೆ ತಾಸು ಕಾದು ಕುಳಿತ ಫುಟ್‌ಬಾಲ್ ಪ್ರೇಮಿಗಳು ಹೆಚ್ಚುವರಿ ಅವಧಿಯಲ್ಲಿ ರೋಮಾಂಚನಗೊಂಡರು. ಫಿಲಿಪ್‌ ಕುಟಿನ್ಹೊ ಮತ್ತು ನೇಮರ್‌  ಅವರ ಮಿಂಚಿನ ಆಟದ ನೆರವಿನಿಂದ ಬ್ರೆಜಿಲ್ ತಂಡ ವಿಶ್ವಕಪ್ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿತು.

ಸೇಂಟ್ ಪೀಟರ್ಸ್‌ಬರ್ಗ್ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಕೋಸ್ಟರಿಕಾವನ್ನು ಬ್ರೆಜಿಲ್ 2–0ಯಿಂದ ಮಣಿಸಿತು. 90+1ನೇ ನಿಮಿಷದಲ್ಲಿ ಕುಟಿನ್ಹೊ ಮತ್ತು 90+7ನೇ ನಿಮಿಷದಲ್ಲಿ ನೇಮರ್ ಗೋಲು ಗಳಿಸಿ ತಂಡದ ಜಯಕ್ಕೆ ಕಾರಣರಾದರು.

ಎರಡು ಬಾರಿಯ ಚಾಂಪಿಯನ್‌ ಬ್ರೆಜಿಲ್‌, ಪಂದ್ಯದ ಆರಂಭದಿಂದಲೇ ಅಮೋಘ ಆಟವಾಡಿತು. ಆದರೆ ಆ ತಂಡದ ಗೋಲು ಗೋಲು ಗಳಿಸುವ ಪ್ರಯತ್ನವನ್ನು ಎದುರಾಳಿಗಳು ನಿರಂತರವಾಗಿ ವಿಫಲಗೊಳಿಸಿದರು.

ಒಂದು ಹಂತದ ವರೆಗೆ ನೇಮರ್ ಅವರನ್ನು ತಡೆಯುವಲ್ಲಿ ಕೋಸ್ಟರಿಕಾದ ಕ್ರಿಸ್ಟಿಯನ್ ಗಾಂಬೊ   ಯಶಸ್ವಿಯಾದರು. ಆದರೆ ಮಾರ್ಸೆಲೊ, ಫಿಲಿಪ್‌ ಕುಟಿನ್ಹೊ ಮತ್ತು ನೇಮರ್ ಜೊತೆಗೂಡಿ ಹೆಣೆದ ತಂತ್ರಗಳಿಗೆ ಉತ್ತರ ನೀಡಲು ಎದುರಾಳಿಗಳು ಪರದಾಡಿದರು. ಗ್ಯಾಬ್ರಿಯೆಲ್ ಜೀಸಸ್ ಮತ್ತು ಪೌಲಿನ್ಹೊ ಅವರು ಒಂದೆರಡು ಬಾರಿ ಎದುರಾಳಿ ಪಾಳಯದಲ್ಲಿ ಆತಂಕ ಸೃಷ್ಟಿಸುವಲ್ಲಿ ಯಶಸ್ವಿಯಾದರು.

ನೇಮರ್‌, ಗಾಂಬೊ ಹಣಾಹಣಿ
ಕೊನೆಯ 20 ನಿಮಿಷಗಳ ಬಾಕಿ ಉಳಿದಿರುವಾಗ ನೇಮರ್ ಮತ್ತು ಗಾಂಬೊ ನಡುವಿನ ನೇರ ಹಣಾಹಣಿಗೆ ಪಂದ್ಯ ಸಾಕ್ಷಿಯಾಯಿತು. 10 ನಿಮಿಷದ ಆಟ ಬಾಕಿ ಇದ್ದಾಗ ಜಿಯಾಂಕಾರ್ಲೊ ಗೊಂಜಾಲೆಸ್ ಕೂಡ ಗಾಂಬೊ ನೆರವಿಗೆ ಬಂದರು. ಹೀಗಾಗಿ ಪಂದ್ಯ ಮತ್ತಷ್ಟು ರೋಚಕವಾಯಿತು.

ನಿಗದಿತ ಅವಧಿ ವರೆಗೂ ಬ್ರೆಜಿಲ್‌ಗೆ ತೀವ್ರ ಪೈಪೋಟಿ ನೀಡುವಲ್ಲಿ ಯಶಸ್ವಿಯಾದ ಕೋಸ್ಟರಿಕಾ ಪಂದ್ಯವನ್ನು ಡ್ರಾ ಮಾಡುವತ್ತ ಚಿತ್ತ ನೆಟ್ಟಿತು. ಆದರೆ ಹೆಚ್ಚುವರಿ ಅವಧಿಯಲ್ಲಿ ತಂಡದ ಲೆಕ್ಕಾಚಾರ ತಲೆ ಕೆಳಗಾಯಿತು. ದೂರದಿಂದ ಮಾರ್ಸೆಲೊ ಕಳುಹಿಸಿದ ಕ್ರಾಸ್‌ ಅನ್ನು ನಿಯಂತ್ರಿಸಿದ ರಾಬರ್ಟೊ ಫಿರ್ಮಿನೊ, ಚೆಂಡನ್ನು ಜೀಸಸ್ ಅವರತ್ತ ಕಳುಹಿಸಿದರು. ಅವರು ಅದನ್ನು ಸುಲಭವಾಗಿ ಕುಟಿನ್ಹೊ ಅವರತ್ತ ತಳ್ಳಿದರು. ಕುಟಿನ್ಹೊ ಮೋಹಕ ಗೋಲು ಗಳಿಸಿ ಸಂಭ್ರಮಿಸಿದರು. ಆರು ನಿಮಿಷಗಳ ನಂತರ ಬದಲಿ ಆಟಗಾರ ಡಗ್ಲಾಸ್ ನೀಡಿದ ಪಾಸ್‌ನಿಂದ ನೇಮರ್ ಗೋಲು ಗಳಿಸಿ ಮಿಂಚಿದರು.


ಬ್ರೆಜಿಲ್‌ ತಂಡ ಕೋಸ್ಟರಿಕಾ ವಿರುದ್ಧ ಜಯ ಗಳಿಸಿದ ನಂತರ ರಿಯೊ ಡಿ ಜನೈರೊದಲ್ಲಿ ಬ್ರೆಜಿಲ್‌ ತಂಡದ ಅಭಿಮಾನಿಗಳು ಸಂಭ್ರಮಪಟ್ಟರು. –ಎಎಫ್‌ಪಿ ಚಿತ್ರ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !