ನಾಯಕತ್ವದ ಜವಾಬ್ದಾರಿ ಹೊರೆಯಲ್ಲ: ನಿಕಿನ್‌ ಜೋಸ್‌ ಮನದಾಳದ ಮಾತು

7

ನಾಯಕತ್ವದ ಜವಾಬ್ದಾರಿ ಹೊರೆಯಲ್ಲ: ನಿಕಿನ್‌ ಜೋಸ್‌ ಮನದಾಳದ ಮಾತು

Published:
Updated:
Deccan Herald

ರಾಜ್ಯದ ಕ್ರಿಕೆಟ್‌ನಲ್ಲಿ ಜೂನಿಯರ್‌ ವಿಭಾಗದಲ್ಲಿ ಭರವಸೆ ಮೂಡಿಸಿರುವ ಆಟಗಾರ ಎಸ್‌.ಜೆ.ನಿಕಿನ್‌ ಜೋಸ್‌. ಮೈಸೂರಿನ ಈ ಯುವ ಆಟಗಾರ ವಿವಿಧ ಟೂರ್ನಿಗಳಲ್ಲಿ ಬ್ಯಾಟ್ಸ್‌ಮನ್‌ ಮತ್ತು ನಾಯಕನಾಗಿ ಯಶಸ್ಸು ಕಾಣುತ್ತಿದ್ದಾರೆ.

ಮೈಸೂರಿನ ಸೇಪಿಯಂಟ್‌ ಕಾಲೇಜಿನಲ್ಲಿ ಪ್ರಥಮ ಬಿಕಾಂನಲ್ಲಿ ಕಲಿಯುತ್ತಿರುವ ಅವರು ವಿವಿಧ ವಯೋವರ್ಗಗಳ ಟೂರ್ನಿಗಳಲ್ಲಿ ಈಗಾಗಲೇ ಹಲವು ಶತಕ ಮತ್ತು ದ್ವಿಶತಕ ಗಳಿಸಿದ್ದು, ಭವಿಷ್ಯದ ಆಟಗಾರನಾಗಿ ಬೆಳೆಯುವ ಸೂಚನೆ ನೀಡಿದ್ದಾರೆ.

16 ವರ್ಷ ಮತ್ತು 19 ವರ್ಷ ವಯಸ್ಸಿನೊಳಗಿನವರ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಅವರು 23 ವರ್ಷ ವಯಸ್ಸಿನೊಳಗಿನವರ ವಿಭಾಗದ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕಳೆದ ವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ನಿಕಿನ್‌ ಜೋಸ್‌ ನೇತೃತ್ವದ ರಾಜ್ಯ ತಂಡ ಜಾರ್ಖಂಡ್‌ ವಿರುದ್ಧ ಜಯ ಪಡೆದಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ 18ರ ಹರೆಯದ ನಿಕಿನ್‌ ತಮ್ಮ ಸ್ಪಿನ್‌ ಬೌಲಿಂಗ್‌ ಮೂಲಕವೂ ಹಲವು ಸಲ ತಂಡದ ಗೆಲುವಿಗೆ ನೆರವಾಗಿದ್ದಾರೆ.

16 ವರ್ಷ, 19 ವರ್ಷದೊಳಗಿನ ರಾಜ್ಯ ತಂಡದ ನಾಯಕತ್ವದ ಬಳಿಕ 23 ವರ್ಷದೊಳಗಿನವರ ತಂಡದ ನಾಯಕತ್ವ ಲಭಿಸಿದೆ. ಈ ಜವಾಬ್ದಾರಿ ಒತ್ತಡ ಎನಿಸಿಲ್ಲವೇ?

ನಾಯಕತ್ವದ ಜವಾಬ್ದಾರಿಯನ್ನು ಒತ್ತಡ ಎಂದು ಭಾವಿಸಿಯೇ ಇಲ್ಲ. ಪ್ರತಿ ಪಂದ್ಯವೂ ಹೊಸ ಪಂದ್ಯ ಎಂದು ಭಾವಿಸಿ ಕಣಕ್ಕಿಳಿಯುವೆ. ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡುತ್ತಿರುವ ರಾಜ್ಯ ತಂಡದಲ್ಲಿ ಹೆಚ್ಚಿನವರು ವಯಸ್ಸಿನಲ್ಲಿ ನನಗಿಂತ ದೊಡ್ಡವರು. ಆಯ್ಕೆಗಾರರು ನಂಬಿಕೆಯಿಟ್ಟು ನನಗೆ ನೀಡಿರುವ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ. ನಾಯಕತ್ವವು ಹೊರೆಯೆಂದು ಅನಿಸಿಯೇ ಇಲ್ಲ.

ನಾಯಕನಾಗಿಯೇ ಹೆಚ್ಚು ಪಂದ್ಯಗಳನ್ನು ಆಡಿದ್ದೀರಿ. ಇದು ಬ್ಯಾಟಿಂಗ್‌ ಮೇಲೆ ಕೆಟ್ಟ ಪರಿಣಾಮ ಬೀರಿದೆಯೇ?

ನಾಯಕತ್ವದ ಜವಾಬ್ದಾರಿ ಬ್ಯಾಟಿಂಗ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನನ್ನನ್ನು ನಾನೇ ಉತ್ತೇಜಿಸುತ್ತಾ, ಪ್ರದರ್ಶನ ಉತ್ತಮಪಡಿಸಿಕೊಳ್ಳಲು ದೊರೆತ ಅತ್ಯುತ್ತಮ ಅವಕಾಶವೆಂದು ಭಾವಿಸಿ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಎಲ್ಲರಿಗೂ ಮಾದರಿಯಾಗಬೇಕು, ಯಾವುದೇ ಸಮಯದಲ್ಲೂ ಬಿಟ್ಟುಕೊಡಬಾರದು ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ. ಆದ್ದರಿಂದ ನಾಯಕತ್ವವು ನನ್ನ ಆಟದ ಮಟ್ಟವನ್ನು ಹೆಚ್ಚಿಸಿದೆಯೇ ಹೊರತು ಎಳ್ಳಷ್ಟೂ ಕಡಿಮೆ ಮಾಡಿಲ್ಲ. ಸವಾಲುಗಳನ್ನು ಧನಾತ್ಮಕವಾಗಿ ತೆಗೆದುಕೊಂಡರೆ ವೈಯಕ್ತಿಕ ಪ್ರದರ್ಶನ ಉತ್ತಮಪಡಿಸಲು ಮತ್ತು ತಂಡಕ್ಕೆ ನೆರವಾಗಲು ಸಹಾಯಕವಾಗುತ್ತದೆ.

ಕೆಪಿಎಲ್‌ ಟೂರ್ನಿ ನಿಮ್ಮ ಬೆಳವಣಿಗೆಗೆ ಯಾವ ರೀತಿ ನೆರವಾಗಿದೆ?

ಟಿವಿಯಲ್ಲಿ ನೇರ ಪ್ರಸಾರ ಆಗುವ ಪಂದ್ಯಗಳಲ್ಲಿ ಆಡುವಾಗಿನ ಅನುಭವ ಹೇಗಿರುತ್ತದೆ ಎಂಬುದನ್ನು ನನಗೆ ಕೆಪಿಎಲ್‌ ಟೂರ್ನಿ ತಿಳಿಸಿಕೊಟ್ಟಿದೆ.

ನಮ್ಮ ವಯೋವರ್ಗದವರು (19 ವರ್ಷ, 23 ವರ್ಷ) ಆಡುವ ದೇಸಿ ಕ್ರಿಕೆಟ್‌ ಟೂರ್ನಿಗಳ ಪಂದ್ಯಗಳು ನೇರ ಪ್ರಸಾರ ಆಗುವುದಿಲ್ಲ. ಕೆಪಿಎಲ್‌ ಪಂದ್ಯಗಳು ನೇರ ಪ್ರಸಾರವಾಗುತ್ತವೆ. ಆಟದಲ್ಲಿ ಒಂದು ಚಿಕ್ಕ ತಪ್ಪು ಮಾಡಿದರೂ ಅದು ಎಲ್ಲರಿಗೂ ತಿಳಿದುಬಿಡುತ್ತದೆ. ಪಂದ್ಯದ ಬಗ್ಗೆ ನಡೆಯುವ ಚರ್ಚೆಗಳಲ್ಲೂ ಆ ತಪ್ಪನ್ನು ವಿವರಿಸುತ್ತಾರೆ. ಅದನ್ನು ನೋಡಿ ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯ.

ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಕೆ.ಎಲ್‌.ರಾಹು‌ಲ್, ಮನೀಷ್‌ ಪಾಂಡೆ, ರಾಬಿನ್‌ ಉತ್ತಪ್ಪ ಮುಂತಾದ ಆಟಗಾರರ ಜತೆ ಆಡುವ ಅಥವಾ ಎದುರಾಳಿ ತಂಡದಲ್ಲಿ ಅವರು ಆಡುವಾಗ ಹತ್ತಿರದಿಂದ ನೋಡುವ ಅವಕಾಶವನ್ನು ಕೆಪಿಎಲ್‌ ಒದಗಿಸಿಕೊಟ್ಟಿದೆ. ಹಿರಿಯ ಆಟಗಾರರಿಂದ ಸಲಹೆ ಪಡೆದು ಆಟದ ಮಟ್ಟ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗಿದೆ.

ಜೂನಿಯರ್‌ ವಿಭಾಗದಲ್ಲಿ ಹೆಚ್ಚಿನ ಟ್ವೆಂಟಿ–20 ಟೂರ್ನಿಗಳು ಇರುವುದಿಲ್ಲ. ಚುಟುಕು ಕ್ರಿಕೆಟ್‌ ಮಾದರಿಗೆ ಒಗ್ಗಿಕೊಳ್ಳಲು ಮತ್ತು ಒತ್ತಡ ನಿಭಾಯಿಸುವುದನ್ನು ಕಲಿಯಲು ಸಾಧ್ಯವಾಗಿದೆ.

ರಣಜಿ ತಂಡದಲ್ಲಿ ಆಡುವ ಕನಸು ಯಾವಾಗ ಈಡೇರಬಹುದು?

ರಣಜಿ ಆಡಬೇಕು ಎಂಬ ಹಂಬಲ ಎಲ್ಲ ಯುವ ಆಟಗಾರರಲ್ಲಿರುತ್ತದೆ. ಪ್ರತಿಯೊಬ್ಬರೂ ಎತ್ತರದ ಹಂಬಲ ಇಟ್ಟುಕೊಂಡೇ ಆಡುತ್ತಾರೆ. ಒಬ್ಬ ಆಟಗಾರನಾಗಿ ಹಂತ ಹಂತವಾಗಿ ಮೇಲಕ್ಕೇರುತ್ತೇನೆ ಎಂಬ ವಿಶ್ವಾಸ ನನ್ನದು. ಈಗ ಆಡುತ್ತಿರುವ ಪ್ರತಿ ಪಂದ್ಯದಲ್ಲಿ ಶೇ 100 ರಷ್ಟು ಪ್ರದರ್ಶನ ನೀಡುವುದು ನನ್ನ ಗುರಿ. ಅದರಲ್ಲಿ ಯಶಸ್ವಿಯಾದರೆ ಮುಂದೊಂದು ದಿನ ರಣಜಿ ತಂಡದಲ್ಲಿ ಅವಕಾಶ ಸಿಗಬಹುದು.

ಇದುವರೆಗಿನ ಕ್ರಿಕೆಟ್‌ ಪಯಣದಲ್ಲಿ ನಿಮಗೆ ಖುಷಿ ಕೊಟ್ಟ ಇನಿಂಗ್ಸ್...

ನನ್ನ ಮೊದಲ ಶತಕವನ್ನು ಮರೆಯಲು ಸಾಧ್ಯವಿಲ್ಲ. ಮೈಸೂರಿನಲ್ಲಿ ನಡೆದ 12 ವರ್ಷ ವಯಸ್ಸಿನೊಳಗಿನವರ ಲೀಗ್‌ ಪಂದ್ಯದಲ್ಲಿ ಮೊದಲ ಬಾರಿಗೆ ಮೂರಂಕಿಯ ಗಡಿ ದಾಟಿದಾಗ ಅತಿಯಾಗಿ ಸಂಭ್ರಮಿಸಿದ್ದೆ. ಆ ಬಳಿಕ ರಾಜ್ಯ 14 ವರ್ಷದೊಳಗಿನ ತಂಡದಲ್ಲಿ ಆಡಿ ಗಳಿಸಿದ ಮೊದಲ ಶತಕವನ್ನೂ ಮರೆಯುವಂತಿಲ್ಲ.

ನಿಮ್ಮ ರೋಲ್‌ ಮಾಡೆಲ್‌ ಯಾರು?

ಯಾವುದೇ ಕ್ರಿಕೆಟ್‌ ಆಟಗಾರ ಅಥವಾ ಕ್ರೀಡಾಪಟುವನ್ನು ರೋಲ್‌ ಮಾಡೆಲ್‌ ಆಗಿ ನೋಡಿಲ್ಲ. ನನ್ನಪ್ಪನೇ ನನಗೆ ರೋಲ್‌ ಮಾಡೆಲ್‌.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !