ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ನಿಶ್ಚಲ್, ಶರತ್ ಆಸರೆ

7
ಬ್ಯಾಟಿಂಗ್ ವೈಫಲ್ಯ ಕಂಡ ಕರುಣ್ ನಾಯರ್‌, ಸ್ಟುವರ್ಟ್ ಬಿನ್ನಿ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ನಿಶ್ಚಲ್, ಶರತ್ ಆಸರೆ

Published:
Updated:
Deccan Herald

ನಾಗಪುರ: ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾಗಿ ಪೆವಿಲಿಯನ್‌ಗೆ ಮರಳಿದಾಗ ಆರಂಭಿಕ ಬ್ಯಾಟ್ಸ್‌ಮನ್‌ ಡಿ.ನಿಶ್ಚಲ್ ಮತ್ತು ಮಧ್ಯಮ ಕ್ರಮಾಂಕದ ಏಳನೇ ಕ್ರಮಾಂಕದ ಬಿ.ಆರ್.ಶರತ್‌ ಕರ್ನಾಟಕಕ್ಕೆ ಆಸರೆಯಾದರು. ವಿದರ್ಭ ಕ್ರಿಕೆಟ್ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂ‍ಪಿನ ಪಂದ್ಯದ ಎರಡನೇ ದಿನ ಇವರಿಬ್ಬರ ತಾಳ್ಮೆಯ ಬ್ಯಾಟಿಂಗ್‌ನಿಂದಾಗಿ ಕರ್ನಾಟಕ ನಿಟ್ಟುಸಿರು ಬಿಟ್ಟಿದೆ. ಆತಿಥೇಯ ವಿದರ್ಭ ತಂಡವನ್ನು 307 ರನ್‌ಗಳಿಗೆ ಆಲೌಟ್ ಮಾಡಿದ ವಿನಯ ಕುಮಾರ್ ಬಳಗ ದಿನದಾಟದ ಮುಕ್ತಾಯಕ್ಕೆ ಐದು ವಿಕೆಟ್ ಕಳೆದುಕೊಂಡು 208 ರನ್‌ ಗಳಿಸಿದೆ.

ಹಾಲಿ ಚಾಂಪಿಯನ್‌ ವಿದರ್ಭ ತಂಡದವರು ಮೊದಲ ದಿನವಾದ ಸೋಮವಾರ 87 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 245 ರನ್‌ ಗಳಿಸಿದ್ದರು. ಮಂಗಳವಾರ ಬೆಳಿಗ್ಗೆ ತಂಡದ ಅಂತಿಮ ಎರಡು ವಿಕೆಟ್‌ಗಳನ್ನು ಬೇಗನೇ ಉರುಳಿಸುವ ಕರ್ನಾಟಕದ ಲೆಕ್ಕಾಚಾರಕ್ಕೆ ಶ್ರೀಕಾಂತ್ ವಾಘ್ ಮತ್ತು ಅಕ್ಷಯ್ ವಕಾರೆ ಅಡ್ಡಿಯಾದರು. ಸೋಮವಾರ 37 ರನ್‌ ಗಳಿಸಿದ್ದ ಶ್ರೀಕಾಂತ್‌ ವಾಘ್‌ ಮಂಗಳವಾರ ಅಬ್ಬರಿಸಿದರು. ಒಂಬತ್ತು ಬೌಂಡರಿಗಳೊಂದಿಗೆ 57 ರನ್‌ ಗಳಿಸಿ ಮಿಂಚಿದರು.

ವಿನಯ ಕುಮಾರ್ ಬೌಲಿಂಗ್‌ನಲ್ಲಿ ವಾಘ್ ಔಟಾದ ನಂತರ ಅಕ್ಷಯ್ ವಕಾರೆ ಮತ್ತು ಲಲಿತ್‌ ಯಾದವ್ ಕರ್ನಾಟಕದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಕೊನೆಯ ವಿಕೆಟ್‌ಗೆ 34 ರನ್ ಸೇರಿಸಿ ತಂಡವನ್ನು 300ರ ಗಡಿ ದಾಟಿಸಿದರು.

ಸಮರ್ಥ್‌, ಕರುಣ್, ಬಿನ್ನಿ ವೈಫಲ್ಯ: ಕರ್ನಾಟಕ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಈಡಾಯಿತು. ತಂಡದ ಮೊತ್ತ ಒಂದು ರನ್ ಆಗಿದ್ದಾಗ ಆರ್.ಸಮರ್ಥ್ ಔಟಾದರು. ಆದಿತ್ಯ ಸರ್ವಟೆ ಎಸೆತದಲ್ಲಿ ಅವರು ವಾಸಿಂ ಜಾಫರ್‌ಗೆ ಕ್ಯಾಚ್ ನೀಡಿದರು. ಕೆ.ವಿ.ಸಿದ್ಧಾರ್ಥ್‌, ಕರುಣ್ ನಾಯರ್‌, ಮತ್ತು ಸ್ಟುವರ್ಟ್ ಬಿನ್ನಿ ಔಟಾದಾಗ ತಂಡದ ಮೊತ್ತ 87 ಮಾತ್ರ ಆಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಡಿ.ನಿಶ್ಚಲ್‌ ರನ್ ಕ್ರೀಸ್‌ನಲ್ಲಿ ತಳವೂರಿ ರನ್‌ ಕಲೆ ಹಾಕುತ್ತ ಸಾಗಿದರು. ಅವರಿಗೆ ಜೊತೆಯಾದ ಶ್ರೇಯಸ್ ಗೋಪಾಲ್‌ ಐದನೇ ವಿಕೆಟ್‌ಗೆ 62 ರನ್‌ ಸೇರಿಸಿದರು.

ಶ್ರೇಯಸ್ ಔಟಾದ ನಂತರ ನಿಶ್ಚಲ್ ಅವರ ಜೊತೆಗೂಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಬಿ.ಆರ್.ಶರತ್‌ (ಅಜೇಯ 46; 76 ಎಸೆತ, 9 ಬೌಂಡರಿ) ಆರನೇ ವಿಕೆಟ್‌ಗೆ 59 ರನ್‌ ಸೇರಿಸಿ ತಂಡವನ್ನು ಪತನದಿಂದ ಕಾಪಾಡಿದರು. 209 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 66 ರನ್ ಗಳಿಸಿರುವ ನಿಶ್ಚಲ್‌ ಕ್ರೀಸ್‌ ಕ್ರೀಸ್‌ನಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !