ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ನಿರ್ವಹಿಸಿದ ಖುಷಿಯಲ್ಲಿ ನಿತಿನ್ ಮೆನನ್

ಭಾರತ–ಇಂಗ್ಲೆಂಡ್ ಕ್ರಿಕೆಟ್ ಸರಣಿಗಳಲ್ಲಿ ಮೆಚ್ಚುಗೆ ಗಳಿಸಿದ ಐಸಿಸಿ ಎಲೀಟ್‌ ಪ್ಯಾನಲ್‌ ಅಂಪೈರ್‌
Last Updated 2 ಏಪ್ರಿಲ್ 2021, 13:11 IST
ಅಕ್ಷರ ಗಾತ್ರ

ನವದೆಹಲಿ: ‘ಆಟಗಾರರಂತೆ ಅಂಪೈರ್‌ಗಳೂ ಒತ್ತಡಕ್ಕೆ ಸಿಲುಕುವ ಸಂದರ್ಭಗಳು ಕೆಲವೊಮ್ಮೆ ಸೃಷ್ಟಿಯಾಗುತ್ತವೆ. ನಾನು ಅವುಗಳನ್ನು ನನ್ನ ಕೌಶಲ ವೃದ್ಧಿಗೆ ಬಳಸಿಕೊಂಡಿದ್ದೇನೆ’ ಎಂದು ಐಸಿಸಿ ಎಲೀಟ್‌ ಪ್ಯಾನಲ್‌ ಅಂಪೈರ್‌ ಭಾರತದ ನಿತಿನ್ ಮೆನನ್ ಹೇಳಿದರು.

ಇಂದೋರ್‌ನ 37 ವರ್ಷದ ನಿತಿನ್ ಅವರನ್ನು ಕಳೆದ ವರ್ಷದ ಜೂನ್‌ನಲ್ಲಿ ಎಲೀಟ್ ಪ್ಯಾನಲ್‌ಗೆ ಸೇರಿಸಲಾಗಿತ್ತು. ಎಸ್‌.ವೆಂಕಟರಾಘವನ್ ಮತ್ತು ಎಸ್‌.ರವಿ ನಂತರ ಈ ಗೌರವಕ್ಕೆ ಪಾತ್ರರಾದ ಭಾರತದ ಅಂಪೈರ್ ಆಗಿದ್ದಾರೆ ಅವರು. ಆದರೆ ಎಲೀಟ್‌ ಪ್ಯಾನಲ್‌ ಸೇರಿದ ಮೇಲೆ ಮೊದಲ ಪಂದ್ಯದಲ್ಲಿ ಕಾರ್ಯನಿರ್ವಹಿಸಲು ಈ ವರ್ಷದ ಫೆಬ್ರುವರಿ ವರೆಗೆ ಕಾಯಬೇಕಾಗಿತ್ತು.

ಕೋವಿಡ್ ಆತಂಕದಿಂದಾಗಿ ಐಸಿಸಿ ಈಚೆಗೆ ದ್ವಿಪಕ್ಷೀಯ ಸರಣಿಗಳಿಗೆ ಸ್ಥಳೀಯ ಅಂಪೈರ್‌ಗಳನ್ನೇ ನಿಯೋಜಿಸುತ್ತಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಗಳಲ್ಲಿ ನಿತಿನ್‌ಗೆ ಸುಲಭವಾಗಿ ಅವಕಾಶ ಲಭಿಸಿತ್ತು. ಎಲ್ಲ ನಾಲ್ಕು ಟೆಸ್ಟ್‌ಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ ಅವರು ಐದು ಟಿ20 ಪಂದ್ಯಗಳ ಪೈಕಿ ಮೂರರಲ್ಲಿ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ತೀರ್ಪು ನೀಡಿದ್ದು, ಮೆಚ್ಚುಗೆ ಗಳಿಸಿದ್ದಾರೆ. ಐಪಿಎಲ್‌ಗಾಗಿ ಈಗ ಚೆನ್ನೈನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

‘ಹಿಂದಿನ ಎರಡು ತಿಂಗಳು ನನ್ನ ಪಾಲಿಗೆ ಮಹತ್ವದ್ದಾಗಿದ್ದವು. ಉತ್ತಮವಾಗಿ ಕಾರ್ಯನಿರ್ವಹಿಸಿರುವುದಾಗಿ ಜನರು ಅಭಿನಂದನೆಯ ನುಡಿಗಳನ್ನಾಡಿದ್ದಾರೆ. ಇದರಿಂದ ಖುಷಿಯಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಸವಾಲಿನದ್ದಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಮೇಲೆ ಕಣ್ಣಿಟ್ಟು ಎರಡೂ ತಂಡಗಳು ಕಣಕ್ಕೆ ಇಳಿದಿದ್ದವು. ಟಿ20 ಮತ್ತು ಏಕದಿನ ಸರಣಿಯಲ್ಲಿ ಎರಡು ಪ್ರಮುಖ ತಂಡಗಳ ನಡುವಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಇರಬೇಕಾಗಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ನೋಡಿದರೆ ಮೂರೂ ಸರಣಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂತೃಪ್ತಿ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ಎರಡು ಬಲಿಷ್ಠ ತಂಡಗಳು ಕಣದಲ್ಲಿ ಸೆಣಸುತ್ತಿದ್ದರೆ ನಿತಿನ್ ಮೆನನ್ ಶಾಂತಚಿತ್ತರಾಗಿ ವಿಕೆಟ್ ಬಳಿ ನಿಂತಿದ್ದರು. ಅವರು ನೀಡಿದ ತೀರ್ಪುಗಳಿಗೆ ವಿರುದ್ಧವಾಗಿ 40 ಬಾರಿ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಲಾಗಿತ್ತು. ಈ ಪೈಕಿ ಐದರಲ್ಲಿ ಮಾತ್ರ ತೀರ್ಪು ಬದಲಿಸಲಾಗಿತ್ತು. ಎಲ್‌ಬಿಡಬ್ಲ್ಯುಗೆ ಸಂಬಂಧಿಸಿ 35 ತೀರ್ಪುಗಳ ಮರುಪರಿಶೀಲನೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಎರಡರಲ್ಲಿ ಮಾತ್ರ ತೀರ್ಪು ಬದಲಿಸಬೇಕಾಗಿ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT