ಶುಕ್ರವಾರ, ಡಿಸೆಂಬರ್ 6, 2019
18 °C
ಉತ್ತಮ ಲಯದಲ್ಲಿ ಮುಂದುವರಿಯುವ ಭರವಸೆಯಲ್ಲಿ ಕೆಕೆಆರ್‌ನ ಎಡಗೈ ಬ್ಯಾಟ್ಸ್‌ಮನ್‌

ಭಿನ್ನ ಸ್ಥಾನ: ಯಶಸ್ಸಿನ ಹಾದಿಯಲ್ಲಿ ರಾಣಾ

Published:
Updated:
Prajavani

ಕೋಲ್ಕತ್ತ: ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌. ಎರಡನೇ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌. ಎರಡೂ ಪಂದ್ಯಗಳಲ್ಲಿ ಅರ್ಧಶತಕದ ಮಿಂಚು.

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್‌ ನಿತೀಶ್ ರಾಣಾ ಈ ಬಾರಿಯ ಐಪಿಎಲ್‌ನ ಮೊದಲ ಎರಡೂ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ಮೆರೆದಿದ್ದಾರೆ. ಟೂರ್ನಿ ಆರಂಭಕ್ಕೂ ಮೊದಲು ಫಾರ್ಮ್‌ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ಅವರಲ್ಲಿ ಇದು ಭರವಸೆ ತುಂಬಿದೆ. ಇದೇ ಲಯದಲ್ಲಿ ಮುಂದುವರಿಯುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಸುನಿಲ್ ನಾರಾಯಣ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ರಾಣಾ ಇನಿಂಗ್ಸ್ ಆರಂಭಿಸಿದ್ದರು. 68 ರನ್‌ ಗಳಿಸಿ ಗಮನ ಸೆಳೆದಿದ್ದರು. ಬುಧವಾರ ನಡೆದ ಕಿಂಗ್ಸ್ ಇಲೆವನ್ ಎದುರಿನ ಪಂದ್ಯದಲ್ಲಿ 63 ರನ್‌ ಗಳಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದರು.

ರಾಣಾ (63; 34 ಎಸೆತ, 7 ಸಿಕ್ಸರ್‌, 2 ಬೌಂಡರಿ), ರಾಬಿನ್ ಉತ್ತಪ್ಪ (ಅಜೇಯ 67; 50 ಎಸೆತ, 2 ಸಿಕ್ಸರ್‌, 6 ಬೌಂಡರಿ) ಮತ್ತು ಆ್ಯಂಡ್ರೆ ರಸೆಲ್‌ (48; 17 ಎಸೆತ, 5 ಸಿಕ್ಸರ್‌, 3 ಬೌಂಡರಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನೈಟ್ ರೈಡರ್ಸ್‌ ನಾಲ್ಕು ವಿಕೆಟ್‌ಗಳಿಗೆ 218 ರನ್‌ ಗಳಿಸಿತ್ತು.

ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್ ಪಂಜಾಬ್‌ ನಾಲ್ಕು ವಿಕೆಟ್‌ಗಳಿಗೆ 190 ರನ್‌ ಗಳಿಸಿ ಸೋಲೊಪ್ಪಿಕೊಂಡಿತ್ತು. ಮಯಂಕ್ ಅಗರವಾಲ್‌ (58;34 ಎಸೆತ, 1 ಸಿಕ್ಸರ್‌, 6 ಬೌಂಡರಿ) ಮತ್ತು ಡೇವಿಡ್ ಮಿಲ್ಲರ್‌ (ಅಜೇಯ 59; 40 ಎಸೆತ, 3 ಸಿ, 5 ಬೌಂ) ಹೊರತುಪಡಿಸಿದರೆ ಕಿಂಗ್ಸ್ ಪರ ಯಾರಿಗೂ ಮಿಂಚಲು ಆಗಲಿಲ್ಲ.

‘ಮುಂದಿನ ಪಂದ್ಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹಿಂದಿನ ಆವೃತ್ತಿಗಳಲ್ಲಿ ಉತ್ತಮ ಆರಂಭ ಕಂಡರೂ ಲಯವನ್ನು ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಈ ಬಾರಿ ಹೀಗೆ ಆಗಬಾರದು ಎಂಬುದು ನನ್ನ ಆಸೆ. ಈ ಹಿನ್ನೆಲೆಯಲ್ಲಿ ಈ ಪ್ರಯತ್ನ ನಡೆಯುತ್ತಿದೆ’ ಎಂದು ರಾಣಾ ಹೇಳಿದರು.

ನೋ ಬಾಲ್ ತೀರ್ಪಿಗೆ ಬೇಸರ

ಕೆಕೆಆರ್ ತಂಡದ ಆ್ಯಂಡ್ರೆ ರಸೆಲ್ ಔಟಾದಾಗ ಅಂಪೈರ್‌ಗಳು ನೋಬಾಲ್ ತೀರ್ಪು ನೀಡಿದ್ದಕ್ಕೆ ಕಿಂಗ್ಸ್ ನಾಯಕ ರವಿಚಂದ್ರನ್ ಅಶ್ವಿನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಬುಧವಾರದ ಪಂದ್ಯದ 17ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಅವರ ಯಾರ್ಕರ್‌ನಲ್ಲಿ ರಸೆಲ್ ಔಟಾಗಿದ್ದರು. ಆದರೆ ಈ ಸಂದರ್ಭದಲ್ಲಿ ಫೀಲ್ಡಿಂಗ್ ನಿಯಮ ಉಲ್ಲಂಘಿಸಲಾಗಿದೆ ಎಂದು ಅಂಪೈರ್ ನೋ ಬಾಲ್ ತೀರ್ಪು ನೀಡಿದ್ದರು. ನಾಲ್ವರು ಫೀಲ್ಡರ್‌ಗಳ ಬದಲಿಗೆ ಮೂವರು ಮಾತ್ರ ಈ ಸಂದರ್ಭದಲ್ಲಿ 30 ಗಜದ ಒಳಗೆ ಇದ್ದರು.

‘ಅಂಪೈರ್ ನೀಡಿದ ಈ ತೀರ್ಪು ಪಂದ್ಯಕ್ಕೆ ತಿರುವು ನೀಡಿತು. ರಸೆಲ್ ನಂತರ ಅಬ್ಬರಿಸಿದರು. ಇದೇ ತಂಡದ ಸೋಲಿಗೆ ಪ್ರಮುಖ ಕಾರಣ’ ಎಂದು ಅಶ್ವಿನ್ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು