ಶನಿವಾರ, ಅಕ್ಟೋಬರ್ 31, 2020
20 °C

ಟಿ20 ಪಂದ್ಯದಲ್ಲಿ ಎರಡು ಬೌನ್ಸರ್‌ಗೆ ಅವಕಾಶ ಇರಲಿ; ಗಾವಸ್ಕರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಒಂದು ಓವರ್‌ಗೆ ಎರಡು ಬೌನ್ಸರ್‌ಗಳನ್ನು ಹಾಕಲು ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.

‘ಟಿ20 ಕ್ರಿಕೆಟ್ ತುಂಬಾ ಚೆನ್ನಾಗಿ ನಡೆಯುತ್ತಿದೆ. ಅದರ ನಿಯಮಗಳನ್ನು ಮತ್ತಷ್ಟು ತಿದ್ದಿ ತೀಡುವ ಪ್ರಯತ್ನ ಸಲ್ಲದು. ಈಗಾಗಲೇ ಇದು ಬ್ಯಾಟ್ಸ್‌ಮನ್‌ಗಳ ಪಾರುಪತ್ಯದ ಆಟವೇ ಆಗಿದೆ. ಆದ್ದರಿಂದ ಬೌಲರ್‌ಗಳಿಗೂ ಕೆಲವು ಅವಕಾಶ ನೀಡುವುದು ಉತ್ತಮ. ವೇಗಿಗಳಿಗೆ ಪ್ರತಿ ಓವರ್‌ನಲ್ಲಿ ಎರಡು ಬೌನ್ಸರ್ ಹಾಕುವ ಅವಕಾಶ ಕೊಟ್ಟರೆ ತಪ್ಪಿಲ್ಲ’ ಎಂದು ಐಪಿಎಲ್ ವೀಕ್ಷಕ ವಿವರಣೆಗಾರರೂ ಆಗಿರುವ ಸುನೀಲ್ ಹೇಳಿದ್ಧಾರೆ.

‘ಬೌಲರ್‌ ಎಸೆತ ಪ್ರಯೋಗಿಸುವ ಮುನ್ನವೇ ನಾನ್‌ ಸ್ಟ್ರೈಕರ್‌ ತುದಿಯಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್‌ ನಿಂದ ಮುಂದಡಿ ಇಟ್ಟಿರುವುದನ್ನು ಪರಿಶೀಲಿಸುವ ಅಧಿಕಾರವನ್ನು ಟಿ.ವಿ. ಅಂಪೈರ್‌ಗೆ ನೀಡಬೇಕು. ಬೌಲರ್ ಹಾಕುವ ನೋಬಾಲ್‌ ಕುರಿತ ತೀರ್ಪನ್ನು ಈಗ ಟಿ.ವಿ ಅಂಪೈರ್ ಕೊಡುತ್ತಿದ್ದಾರೆ. ಆದ್ದರಿಂದ  ಅವರಿಗೆ ನಾನ್‌ಸ್ಟ್ರೈಕರ್ ಬ್ಯಾಟ್ಸ್‌ಮನ್  ಕ್ರೀಸ್‌ ಬಿಟ್ಟಿರುವ ಕುರಿತು ನಿರ್ಣಯಿಸುವುದು ಸುಲಭ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಾನ್‌ಸ್ಟ್ರೈಕರ್ ಕ್ರೀಸ್‌ ಬಿಟ್ಟಾಗ, ಬೌಲರ್  ಎಸೆತದ ಬದಲಿಗೆ ಸ್ಟಂಪ್‌ಗೆ ಥ್ರೋ ಮಾಡಿ ರನ್‌ಔಟ್ ಮಾಡುವುದನ್ನು ಮಂಕಡಿಂಗ್ ಎಂದು ಕರೆಯುವುದು ಉಚಿತವಲ್ಲ. ಅದನ್ನು ಬ್ರೌನ್‌ ಎಂದು ಕರೆಯಬೇಕು. ಕ್ರಿಕೆಟ್‌ನಲ್ಲಿ ರೂಢಿಗತವಾಗಿ ಬಂದಿರುವ ಚೈನಾಮೆನ್ ಮತ್ತು ಫ್ರೆಂಚ್ ಕಟ್ ಪದಗಳನ್ನೂ ಬದಲಿಸಬೇಕು’ ಎಂದು ಸಲಹೆ ನೀಡಿದರು.

‘ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಆರ್‌ಸಿಬಿ ನಡುವಣ ಪಂದ್ಯದಲ್ಲಿ   ಆಫ್‌ಸ್ಪಿನ್ನರ್ ಅಶ್ವಿನ್ ಅವರು ಆ್ಯರನ್‌ ಫಿಂಚ್‌ಗೆ ನಾನ್‌ ಸ್ಟ್ರೈಕರ್ ತುದಿಯಲ್ಲಿ ಎಚ್ಚರಿಕೆ ಕೊಟ್ಟಿದ್ದು ಒಳ್ಳೆಯ ಕ್ರಮ. ಇದು ಕೊನೆಯ ಎಚ್ಚರಿಕೆಯೆಂದೂ ಅಶ್ವಿನ್ ಘೋಷಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಆಡಬೇಕು. ಹೆಜ್ಜೆ ತಪ್ಪಿದರೆ ವಿಕೆಟ್ ಕಳೆದುಕೊಳ್ಳುವುದು ಖಚಿತ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು