ಶನಿವಾರ, ಜನವರಿ 25, 2020
22 °C

ರಾಹುಲ್‌ ದ್ರಾವಿಡ್ ನನ್ನ ನೆಚ್ಚಿನ ಆಟಗಾರ: ದೀಪಿಕಾ ಪಡುಕೋಣೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ನನ್ನ ನೆಚ್ಚಿನ ಆಟಗಾರ ಎಂದು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ದೀಪಿಕಾ, ‘ನನ್ನ ನೆಚ್ಚಿನ ಆಟಗಾರ ರಾಹುಲ್‌ ದ್ರಾವಿಡ್‌. ನಾನು ಮೆಚ್ಚುವವರು ಕ್ರೀಡೆಯಲ್ಲಿ ಏನನ್ನು ಸಾಧಿಸಿದ್ದಾರೆ ಎನ್ನುವುದಕ್ಕಿಂತಲೂ, ಅದರಿಂದ ಆಚೆಗೂ ತಮ್ಮನ್ನು ತಾವು ಹೇಗೆ ರೂಪಿಸಿಕೊಂಡಿದ್ದಾರೆ ಎಂಬುದು ಮುಖ್ಯ. ನಾನು ಮೆಚ್ಚಿದ ಅಂತಹ ಕೆಲವರಲ್ಲಿ ದ್ರಾವಿಡ್‌ ಕೂಡ ಒಬ್ಬರು’ ಎಂದಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆಯ ಮನತಟ್ಟಿದ ಆಸಿಡ್ ಸಂತ್ರಸ್ತೆಯ ಬದುಕು ಹೀಗಿದೆ

ಮಾನಸಿಕ ಆರೋಗ್ಯವು ಕ್ರೀಡಾ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದಿರುವ ಪಡುಕೋಣೆ, ‘ನಮಗೆ ದೈಹಿಕ ಆರೋಗ್ಯಕ್ಕೆ ಎಷ್ಟು ಮುಖ್ಯವೋ, ಮಾನಸಿಕ ಸದೃಢತೆ ಮತ್ತು ಸಹನೆಯೂ ಅಷ್ಟೇ ಮುಖ್ಯ. ಇಲ್ಲವಾದರೆ, ನಿಮ್ಮ ದೇಹ ಮತ್ತು ಮನಸ್ಸಿನ ನಡುವೆ ಹೊಂದಾಣಿಕೆ ಇಲ್ಲ ಎಂಬ ಭಾವನೆ ಕಾಡಬಹುದು. ಅಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯದತ್ತ ಗಮನಹರಿಸುವುದು ತುಂಬ ಅಗತ್ಯ. ಕ್ರೀಡಾಪಟುಗಳು ಸ್ಥೈರ್ಯ, ಆತ್ಮವಿಶ್ವಾಸ, ಧೈರ್ಯ, ತ್ಯಾಗ, ಛಲ ಹಾಗೂ ಉತ್ಸಾಹದ ಮೂಲಕ ಮನಸ್ಸನ್ನು ಸದೃಢವಾಗಿಟ್ಟುಕೊಳ್ಳುವುದರತ್ತ ಗಮನಹರಿಸುವುದು ಮುಖ್ಯ’ ಎಂದು ಹೇಳಿದ್ದಾರೆ.

ದೀಪಿಕಾರ ಮುಂದಿನ ಸಿನಿಮಾ ‘ಛಪಾಕ್‌’ 2020ರ ಜನವರಿ 10ರಂದು ತೆರೆಕಾಣಲಿದೆ. ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರವಾಲ್‌ ಅವರ ಜೀವನಾಧಾರಿತ ಸಿನಿಮಾ ಸಿನಿಮಾ ಇದಾಗಿದ್ದು, ದೀಪಿಕಾ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಮೇಘನ್‌ ಗುಲ್ಜರ್ ಅವರು ನಿರ್ದೇಶಿಸುತ್ತಿರುವ ಈ ಸಿನಿಮಾದ ಪೋಸ್ಟರ್‌ ಹಾಗೂ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಛಪಾಕ್‘ ಟ್ರೇಲರ್ ಬಿಡುಗಡೆ ವೇಳೆ ಕಣ್ಣೀರಾದ ದೀಪಿಕಾ

ಮಾತ್ರವಲ್ಲದೆ, ಕಬೀರ್‌ ಖಾನ್‌ ನಿರ್ದೇಶನವಿರುವ ಕಪಿಲ್‌ ದೇವ್‌ ಜೀವನಾಧಾರಿತ ‘83’ ಸಿನಿಮಾದಲ್ಲಿ ದೇವ್‌ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಪಿಲ್‌ ಪಾತ್ರಕ್ಕೆ ದೀಪಿಕಾ ಪತಿ ರಣವೀರ್‌ ಸಿಂಗ್‌ ಬಣ್ಣ ಹಚ್ಚುತ್ತಿರುವುದು ವಿಶೇಷ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು