ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಮ್ರಾ ದಿ ಗ್ರೇಟ್: 20 ತಿಂಗಳು..12 ಟೆಸ್ಟ್‌ಗಳು..62 ವಿಕೆಟ್‌ಗಳು..

Last Updated 9 ಸೆಪ್ಟೆಂಬರ್ 2019, 4:27 IST
ಅಕ್ಷರ ಗಾತ್ರ

ಇಪ್ಪತ್ತು ತಿಂಗಳು

ಹನ್ನೆರಡು ಟೆಸ್ಟ್‌ಗಳು

ಅರವತ್ತೆರಡು ವಿಕೆಟ್‌ಗಳು..

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ಸಾಧನೆಯನ್ನು ಬಿಂಬಿಸಲು ಈ ಮೂರು ಸಾಲುಗಳಷ್ಟೇ ಸಾಕಲ್ಲವೇ?

2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ‘ಜಸ್ಸಿ’ ಇವತ್ತು ಇಡೀ ಕ್ರಿಕೆಟ್‌ ಜಗತ್ತನ್ನು ಆವರಿಸಿಕೊಂಡಿರುವ ಬೌಲರ್‌. ತನಗಿಂತಲೂ ಅನುಭವಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರ ಪೈಪೋಟಿಯನ್ನು ಮೀರಿ ಬೆಳೆದಿರುವ 25 ವರ್ಷದ ಬೂಮ್ರಾ ಈಗ ಏಕದಿನ ಕ್ರಿಕೆಟ್‌ನಲ್ಲಿಯೂ ಅಗ್ರಶ್ರೇಯಾಂಕಿತ. ನಿಗದಿಯ ಓವರ್‌ಗಳ ಕ್ರಿಕೆಟ್‌ನಲ್ಲಿ ‘ಡೆತ್ ಓವರ್‌’ ಪರಿಣತನಾಗಿ ಬ್ಯಾಟ್ಸ್‌ಮನ್‌ಗಳ ಮೈಚಳಿ ಬಿಡಿಸಿರುವ ಬೌಲರ್‌ ಟೆಸ್ಟ್‌ನಲ್ಲಿ ಮಿಂಚುವುದು ಕಷ್ಟ. ಏಕೆಂದರೆ ದೀರ್ಘ ಮಾದರಿಯಲ್ಲಿ ಫಿಟ್‌ನೆಸ್‌ ಮುಖ್ಯ. ಟ್ವೆಂಟಿ–20ಯಲ್ಲಿ ನಾಲ್ಕು ಓವರ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ 10 ಓವರ್‌ ಮಾತ್ರ ಬೌಲಿಂಗ್ ಮಾಡಬೇಕು. ಆದರೆ ಟೆಸ್ಟ್‌ನಲ್ಲಿ ಸುದೀರ್ಘ ಸ್ಪೆಲ್‌ಗಳು ಇರುತ್ತವೆ. ಬೂಮ್ರಾಗೆ ಇದು ನಿಜಕ್ಕೂ ‘ಟೆಸ್ಟ್‌’ ಎಂದು ಹಲವು ದಿಗ್ಗಜರು ಅನುಮಾನಿಸಿದ್ದರು. ವೈಟ್‌ ಬಾಲ್ ಮತ್ತು ರೆಡ್‌ ಬಾಲ್‌ ಕ್ರಿಕೆಟ್‌ಗೆ ವ್ಯತ್ಯಾಸ ಇದೆ ಅಂದಿದ್ದರು.

ಅಂದು 85ನೇ ರ‍್ಯಾಂಕ್‌ನೊಂದಿಗೆ ಕಣಕ್ಕಿಳಿದಿದ್ದ ಬೂಮ್ರಾ ದಕ್ಷಿಣ ಆಫ್ರಿಕಾ ಪ್ರವಾಸದ ಮೂರು ಟೆಸ್ಟ್‌ಗಳು ಮುಗಿದಾಗ 42ನೇ ಸ್ಥಾನಕ್ಕೇರಿದ್ದರು. 14 ವಿಕೆಟ್‌ಗಳು ಅವರ ಖಾತೆಯಲ್ಲಿದ್ದವು. ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಜಾದೂ ಮುಂದುವರಿಯಿತು. ಅಬಾಲ ವೃದ್ಧರಾದಿಯಾಗಿ ಅವರ ಬೌಲಿಂಗ್ ಶೈಲಿ ಮತ್ತು ರನ್‌ ಅಪ್ ಅನುಕರಣೆ ಮಾಡುವ ವಿಡಿಯೋ ತುಣುಕುಗಳು ಜಾಲತಾಣಗಳಲ್ಲಿ ಲಕ್ಷ ಲಕ್ಷ ಲೈಕ್ ಗಿಟ್ಟಿಸಿಕೊಂಡವು. ಭಾರತ ಸರಣಿ ಸೋತರೂ ಬೂಮ್ರಾ ವಿಕೆಟ್‌ ಬೇಟೆ ನಿರಂತರವಾಗಿತ್ತು. ರ‍್ಯಾಂಕಿಂಗ್‌ನಲ್ಲಿ ಒಂಬತ್ತು ಸ್ಥಾನಗಳ ಬಡ್ತಿ ಪಡೆದರು.

ಆಸ್ಟ್ರೇಲಿಯಾದಲ್ಲಿಯೂ ಅವರು ಮಿಂಚಿದರು. ಬೂಮ್ರಾ ತಮ್ಮ ವಿಶಿಷ್ಟ ಶೈಲಿಯ ಛಾಪು ಮೂಡಿಸಿದ್ದಾರೆ. ಆಡಿರುವ ಒಂದು ಡಜನ್ ಪಂದ್ಯಗಳಲ್ಲಿಯೇ ಐದು ಸಲ ಐದು ವಿಕೆಟ್‌ ಗೊಂಚಲುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈಚೆಗೆ ವೆಸ್ಟ್ ಇಂಡೀಸ್ ತಂಡದ ಎದುರಿನ ಸರಣಿಯ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ಕೂಡ ಗಳಿಸಿದರು.

ವಿದೇಶಿ ನೆಲದ ಸಾಧಕ

ಬೂಮ್ರಾ ಸಾಧನೆಯ ಹಾದಿ ಇನ್ನೊಂದು ವಿಶೇಷ ಏನು ಗೊತ್ತಾ? ಅವರು ಇದುವರೆಗೆ ಭಾರತದಲ್ಲಿ ಒಂದೇ ಒಂದು ಪಂದ್ಯ ಆಡಿಲ್ಲ. ಎಲ್ಲ ಪಂದ್ಯಗಳನ್ನೂ ಅವರು ಆಡಿರುವುದು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ. ಮಧ್ಯಮವೇಗಿಗಳಿಗೆ ನೆರವು ನೀಡುವ ಪಿಚ್‌ಗಳು ಅಲ್ಲಿವೆ. ಆದರೆ, ಅ ಪಿಚ್‌ಗಳಿಗೆ ಹೊಂದಿಕೊಂಡು ಬೌಲಿಂಗ್ ಮಾಡುವುದು ಕೂಡ ಕಷ್ಟಸಾಧ್ಯವಾದ ಸಾಧನೆ. ವಿಂಡೀಸ್‌ನಲ್ಲಿ ವಿಪರೀತ ಬಿಸಿಲಿನಲ್ಲಿ ಪಿಚ್ ವರ್ತಿಸಿದ ರೀತಿಯನ್ನು ನೋಡಿದ್ದೇವೆ. ಅಲ್ಲಿಯ ಬೌಲರ್‌ಗಳೇ ಲಯ ಕಂಡುಕೊಳ್ಳಲು ಪರದಾಡಿದ್ದರು. ಆದರೆ ಅದೇ ಪಿಚ್‌ನಲ್ಲಿ ಅಹಮದಾಬಾದಿನ ಹುಡುಗ ಜಸ್ಸಿ ಹ್ಯಾಟ್ರಿಕ್ ಮಾಡಿದ್ದರು. ಒಂದೇ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಕೂಡ ಕಬಳಿಸಿದರು.

‘ನಾನು ತಂಡದಲ್ಲಿ ಹೊಸಬ. ಆದ್ದರಿಂದ ಸೀನಿಯರ್ ಆಟಗಾರರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ಕಲಿಯುವ ಅವಕಾಶವನ್ನು ಬಿಡುವುದಿಲ್ಲ’ ಎಂದು ಹೇಳುವ ಜಸ್‌ಪ್ರೀತ್, ‘ಈ ಹ್ಯಾಟ್ರಿಕ್ ಸಾಧನೆಯನ್ನು ನಾಯಕ ವಿರಾಟ್ ಕೊಹ್ಲಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ.

ಭಾರತ ತಂಡದ ಸಾಧನೆಗಳ ಇತಿಹಾಸವನ್ನು ನೋಡಿದಾಗ. ವಿದೇಶಿ ನೆಲದಲ್ಲಿ ಹೆಚ್ಚು ಯಶಸ್ವಿಯಾದ ನಾಯಕರ ಬಳಗದಲ್ಲಿ ಪರಿಣಾಮಕಾರಿ ಮಧ್ಯಮ ವೇಗಿಗಳಿದ್ದರು. ಮೊಹಮ್ಮದ್ ಅಜರುದ್ದೀನ್‌ಗೆ ಜಾವಗಲ್ ಶ್ರೀನಾಥ್, ಸೌರವ್ ಗಂಗೂಲಿಗೆ ಜಹೀರ್ ಖಾನ್, ಇಶಾಂತ್ ಶರ್ಮಾ ಅವರ ಸಾಥ್ ಸಿಕ್ಕಿತ್ತು. ಮಹೇಂದ್ರಸಿಂಗ್ ಧೋನಿ ಸಮಯದಲ್ಲಿ ಜಹೀರ್, ಇರ್ಫಾನ್ ಪಠಾಣ್, ಉಮೇಶ್ ಯಾದವ್, ಇಶಾಂತ್, ಶಮಿ, ಭುವನೇಶ್ವರ್ ಕುಮಾರ್ ಅವರಂತಹ ಬೌಲರ್‌ಗಳು ಮಿಂಚಿದರು.

ಮಧ್ಯಮವೇಗಿಗಳು ಗಾಯಗೊಳ್ಳುವುದು ಹೆಚ್ಚು ಅದರಲ್ಲೂ ಇಂದಿನ ಕ್ರಿಕೆಟ್‌ನಲ್ಲಿ ಆಟಗಾರರು ಬಿಡುವಿಲ್ಲದೇ ಆಡುತ್ತಿದ್ದಾರೆ. ಮೂರು ಮಾದರಿಗಳಲ್ಲಿ ದೇಶಿ–ವಿದೇಶಿ ಟೂರ್ನಿಗಳು, ಪ್ರೊ ಲೀಗ್‌ಗಳು ನಡೆಯುತ್ತಿವೆ ಇದೆಲ್ಲದರಲ್ಲಿಯೂ ಮಿಂಚುವ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಸವಾಲು ಮಧ್ಯಮವೇಗಿಗಳಿಗೆ ಇದೆ. ಬ್ಯಾಟ್ಸ್‌ಮನ್‌ಗಳಿಗೆ ಸಿಕ್ಕಷ್ಟು ತಾರಾಮೌಲ್ಯ ಬೌಲರ್‌ಗಳಿಗೆ ಸಿಗುವುದು ಕಡಿಮೆ. ಕಪಿಲ್, ಶ್ರೀನಾಥ್, ಜಹೀರ್ ಅವರು ಆ ಸಾಧನೆ ಮಾಡಿದ ಪ್ರಮುಖರು.

ಇದೀಗ ಜಸ್‌ಪ್ರೀತ್ ಅದೇ ಹಾದಿಯಲ್ಲಿದ್ದಾರೆ. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌, ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಪಾಕಿಸ್ತಾನದ ಮೊಹಮ್ಮದ್ ಅಮೀರ್, ಬಾಂಗ್ಲಾದ ಮುಸ್ತಫಿಜುರ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಲುಂಗಿ ಗಿಡಿ ಅವರ ಪೈಪೋಟಿಯೂ ಬೂಮ್ರಾಗೆ ಇದೆ.ಸದ್ಯಕ್ಕಂತೂ ಅವರೆಲ್ಲರನ್ನೂ ಹಿಂದಿಕ್ಕಿ ಮುಂದೆ ಸಾಗುತ್ತಿರುವ ‘ಪಂಜಾಬಿ ಸರ್ದಾರ್‌’ ಎಷ್ಟು ಸಮಯದವರೆಗೆ ಉತ್ತುಂಗ ಶಿಖರದಲ್ಲಿ ಮೆರೆಯುತ್ತಾರೆ ಎನ್ನುವ ಕುತೂಹಲವನ್ನು ಅಭಿಮಾನಿಗಳ ವಲಯದಲ್ಲಿ ಗರಿಗೆದರಿದೆ.

ನೋಬಾಲ್ ಕಳಂಕ ಮೀರಿದ ಸಾಧಕ

ಎರಡು ವರ್ಷಗಳ ಹಿಂದೆ ಪಂದ್ಯದ ಮಹತ್ವದ ಘಟ್ಟದಲ್ಲಿ ನೋಬಾಲ್ ಎಸೆತಗಳನ್ನು ಹಾಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಬೂಮ್ರಾ. ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅವರ ಈ ನೋಬಾಲ್ ಭಾರತ ತಂಡದ ಗೆಲುವಿಗೂ ಅಡ್ಡಿಯಾಗಿತ್ತು. ಆದರೆ ಸತತ ಪರಿಶ್ರಮ ಮತ್ತು ಛಲದಿಂದ ಆ ದೌರ್ಬಲ್ಯವನ್ನು ಮೀರಿ ನಿಂತರು. ತಮ್ಮ ರನ್‌ ಅಪ್‌ನಲ್ಲಿ ತುಸು ಬದಲಾವಣೆ ಮಾಡಿಕೊಂಡ ಅವರು ಮೊದಲಿಗಿಂತಲೂ ಪರಿಣಾಮಕಾರಿ ಬೌಲರ್‌ ಆಗಿ ರೂಪುಗೊಂಡರು.ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ರ‍್ಯಾಂಕಿಂಗ್‌ ಗಳಿಸಿದ್ದಾರೆ. ಈಚೆಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT