ಭಾನುವಾರ, ಆಗಸ್ಟ್ 14, 2022
19 °C

ಬ್ಲ್ಯಾಕ್‌ವುಡ್ ಶತಕ ವ್ಯರ್ಥ; ಕಿವೀಸ್‌ಗೆ ಇನ್ನಿಂಗ್ಸ್ ಹಾಗೂ 134 ರನ್ ಅಂತರದ ಜಯ

ಎಎನ್ಐ Updated:

ಅಕ್ಷರ ಗಾತ್ರ : | |

ಹ್ಯಾಮಿಲ್ಟನ್: ಜರ್ಮೈನ್ ಬ್ಲ್ಯಾಕ್‌ವುಡ್ (104) ಹಾಗೂ ಅಲ್ಜಾರಿ ಜೋಸೆಫ್ (86) ಹೋರಾಟದ ಹೊರತಾಗಿಯೂ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಇನ್ನಿಂಗ್ಸ್ ಹಾಗೂ 134 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ. 

ಫಾಲೋ ಆನ್‌ಗೆ ಗುರಿಯಾಗಿ ನಾಲ್ಕನೇ ದಿನದಾಟದಲ್ಲಿ 196/6 ಎಂಬಲ್ಲಿದ್ದ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ ವಿಂಡೀಸ್, 58.5 ಓವರ್‌ಗಳಲ್ಲಿ 247 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 

ದಿಟ್ಟ ಹೋರಾಟ ನೀಡಿದ ಜರ್ಮೈನ್ ಶತಕ ಸಾಧನೆಯ ಹೊರತಾಗಿಯೂ ತಂಡವನ್ನು ಬೃಹತ್ ಸೋಲಿನ ದವಡೆಯಿಂದ ಪಾರು ಮಾಡಲಾಗಲಿಲ್ಲ. ಜರ್ಮೈನ್ ಹಾಗೂ ಅಲ್ಜಾರಿ ಏಳನೇ ವಿಕೆಟ್‌ಗೆ 155 ರನ್‌ಗಳ ಜೊತೆಯಾಟ ನೀಡಿದರು. 

ಇದನ್ನೂ ಓದಿ: 

ಈ ವಿಕೆಟ್ ಪತನದ ಬೆನ್ನಲ್ಲೇ ದಿಢೀರ್ ಕುಸಿತ ಕಂಡ ವಿಂಡೀಸ್ ಬೇಗನೇ ಸೋಲೊಪ್ಪಿಕೊಂಡಿತು. 141 ಎಸೆತಗಳನ್ನು ಎದುರಿಸಿದ ಜರ್ಮೈನ್ 11 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 104 ರನ್ ಗಳಿಸಿದರು. 

ಇನ್ನೊಂದೆಡೆ ಚೊಚ್ಚಲ ಅರ್ಧಶತಕ ಬಾರಿಸಿದ ಅಲ್ಜಾರಿ, ಶತಕವಾಗಿ ಪರಿವರ್ತಿಸಲು ವಿಫಲವಾದರು. 125 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 86 ರನ್ ಗಳಿಸಿದರು. ಕಿವೀಸ್ ಪರ ನೀಲ್ ವ್ಯಾಗ್ನರ್ ನಾಲ್ಕು ಮತ್ತು ಕೈಲ್ ಜೆಮಿಸನ್ ಎರಡು ವಿಕೆಟ್ ಕಿತ್ತು ಮಿಂಚಿದರು. 

ಈ ಮೊದಲು ಕಿವೀಸ್‌ನ 519 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಟಿಮ್ ಸೌಥಿ (35/4) ದಾಳಿಗೆ ಕುಸಿದಿದ್ದ ವಿಂಡೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 138 ರನ್‌ಗಳಿಗೆ ಸರ್ವಪತನಗೊಂಡಿತ್ತು. ಈ ಮೂಲಕ 381 ರನ್‌ಗಳ ಬೃಹತ್ ಹಿನ್ನೆಡೆಯೊಂದಿಗೆ ಫಾಲೋ ಆನ್‌ಗೆ ಗುರಿಯಾಗಿತ್ತು. 

ಇದನ್ನೂ ಓದಿ: 

ಇದಕ್ಕೂ ಮುನ್ನ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಹಾಗೂ ಜೀವನಶ್ರೇಷ್ಠ ದ್ವಿಶತಕ ಸಾಧನೆ (251) ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 519 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. 

ಎರಡು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವು ಡಿ.11ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. 

ಸಂಕ್ಷಿಪ್ತ ಸ್ಕೋರ್ ಪಟ್ಟಿ:  
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 519/7 ಡಿ. (ವಿಲಿಯಮ್ಸನ್ 251, ಲೇಥಮ್ 86, ಜೇಮಿಸನ್ 51*)
ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್ 138ಕ್ಕೆ ಆಲೌಟ್ (ಕ್ಯಾಂಪ್‌ಬೆಲ್ 26, ಸೌಥಿ 35/4) 
ವೆಸ್ಟ್‌ಇಂಡೀಸ್ ದ್ವಿತೀಯ ಇನ್ನಿಂಗ್ಸ್ 247ಕ್ಕೆ ಆಲೌಟ್ (ಜರ್ಮೈನ್ 104, ಜೋಸೆಫ್ 86, ವ್ಯಾಗ್ನರ್ 66/4)

ಫಲಿತಾಂಶ: ನ್ಯೂಜಿಲೆಂಡ್‌ಗೆ ಇನ್ನಿಂಗ್ಸ್ ಹಾಗೂ 134 ರನ್ ಅಂತರದ ಗೆಲುವು  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು