‘ಓಲ್ಡ್‌’ ಟ್ರಾಫರ್ಡ್‌ ನೆನಪುಗಳಲ್ಲಿ ತೇಲಿದ ಶಾಸ್ತ್ರಿ

ಬುಧವಾರ, ಜೂಲೈ 17, 2019
29 °C
ಮೊದಲ ವಿಶ್ವಕಪ್ ವಿಜಯಕ್ಕೆ 36 ವರ್ಷ: ವಿಂಡೀಸ್‌ ಎದುರಿನ ಆ ಜಯ

‘ಓಲ್ಡ್‌’ ಟ್ರಾಫರ್ಡ್‌ ನೆನಪುಗಳಲ್ಲಿ ತೇಲಿದ ಶಾಸ್ತ್ರಿ

Published:
Updated:
Prajavani

ಮ್ಯಾಂಚೆಸ್ಟರ್: ‘1983ರ ಆ ಬೇಸಿಗೆಯ ದಿನ ಇಲ್ಲಿಂದಲೇ (ಓಲ್ಡ್ ಟ್ರಾಫರ್ಡ್) ಎಲ್ಲವೂ ಆರಂಭವಾಗಿತ್ತು. ಅಲ್ಲಿಯವರೆಗೂ ವಿಶ್ವಕಪ್ ಇತಿಹಾಸದಲ್ಲಿ ಒಂದೂ ಪಂದ್ಯ ಸೋಲದ ವೆಸ್ಟ್ ಇಂಡೀಸ್ ತಂಡವನ್ನು ನಾವು ಸೋಲಿಸಿದ್ದೆವು’–

 ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಮಂಗಳವಾರ ನೆನಪಿನಂಗಳದಲ್ಲಿ ತೇಲಿದರು. ಭಾರತವು ಮೊದಲ ವಿಶ್ವಕಪ್ ಗೆದ್ದು 36 ವರ್ಷಗಳು (ಜೂನ್ 25, 1983) ತುಂಬಿದ ದಿನವನ್ನು ಸ್ಮರಿಸಿದರು. ಆ ಟೂರ್ನಿಯ ಮೊದಲ ಪಂದ್ಯವು ಜೂನ್ 9ರಂದು ವಿಂಡೀಸ್‌ ಎದುರು ನಡೆದಿತ್ತು. ಅದರಲ್ಲಿ ಭಾರತ ಗೆದ್ದಿತ್ತು. ಆಗ ತಂಡದಲ್ಲಿದ್ದ ರವಿಶಾಸ್ತ್ರಿ ಮೂರು ವಿಕೆಟ್ ಗಳಿಸಿದ್ದರು.

ಇದೇ ಮೈದಾನದಲ್ಲಿ ಗುರುವಾರ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಕುರಿತು ಬಿಸಿಸಿಐ ಡಾಟ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಶಾಸ್ತ್ರಿ ಮಾತನಾಡಿದರು.

‘ಆಗಿದ್ದ ಕ್ರೀಡಾಂಗಣಕ್ಕೂ ಈಗಿನದ್ದಕ್ಕೂ ಬಹಳ ವ್ಯತ್ಯಾಸವಿದೆ. ಈ ಮೈದಾನದ ಹಿಂದೆ ಒಂದು ರೈಲ್ವೆ ಟ್ರ್ಯಾಕ್ ಇತ್ತು. ಆ ಪಂದ್ಯದಲ್ಲಿ ಜೋಯೆಲ್ ಗಾರ್ನರ್ ಆಡಿದ ಒಂದು ಹೊಡೆತಕ್ಕೆ  ಚೆಂಡು ಆ ಟ್ರ್ಯಾಕ್‌ ಮೇಲೆ ಹೋಗಿಬಿದ್ದಿತ್ತು. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಆ ಇನಿಂಗ್ಸ್‌ನ ಕೊನೆಯ ವಿಕೆಟ್‌ ಅನ್ನು ನಾನು ಪಡೆದಿದ್ದೆ. ಅದು ಎಂದಿಗೂ ಹಸಿರಾದ ನೆನಪು’ ಎಂದು ಶಾಸ್ತ್ರಿ ಹೇಳಿದರು.

‘ಅಂದು ಇಲ್ಲಿ ವಿಂಡೀಸ್ ಎದುರು ಗಳಿಸಿದ್ದ ಜಯವು ನಮ್ಮ ವಿಶ್ವಾಸವನ್ನು ದ್ವಿಗುಣಗೊಳಿಸಿತ್ತು. ಆ ನಂಬಿಕೆಯೇ ನಮ್ಮನ್ನು ವಿಶ್ವಕಪ್ ವಿಜೇತರಾಗುವತ್ತ ಮುನ್ನಡೆಸಿತ್ತು. ಭಾರತದ ಕ್ರಿಕೆಟ್‌ನ ಚಹರೆಯನ್ನೇ ಬದಲಿಸಿದ್ದ ಸಾಧನೆ ಅದು. ಇದೀಗ ಮತ್ತೆ ಈ ಕ್ರೀಡಾಂಗಣಕ್ಕೆ ಮರಳಿದ್ದೇವೆ’ ಎಂದರು.

ಆ ಪಂದ್ಯದಲ್ಲಿ ಭಾರತ ತಂಡವು 60 ಓವರ್‌ಗಳಲ್ಲಿ 8ಕ್ಕೆ262 ರನ್‌ ಗಳಿಸಿತ್ತು. ಯಶಪಾಲ್ ಶರ್ಮಾ 89 (120ಎಸೆತ) ರನ್ ಗಳಿಸಿದ್ದರು. ವಿಂಡೀಸ್ ಬಳಗವು 228 ರನ್ ಗಳಿಸಿ ಆಲೌಟ್ ಆಗಿತ್ತು. ರೋಜರ್ ಬಿನ್ನಿ ಮತ್ತು ರವಿಶಾಸ್ತ್ರಿ ಅವರು ತಲಾ ಮೂರು ವಿಕೆಟ್ ಕಬಳಿಸಿದ್ದರು.

ಆ ಟೂರ್ನಿಯಲ್ಲಿ ಫೈನಲ್‌ನಲ್ಲಿ ಭಾರತಕ್ಕೆ ಮತ್ತೆ ವಿಂಡೀಸ್ ಮುಖಾಮುಖಿಯಾಗಿತ್ತು. ಲಾರ್ಡ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 183 ರನ್‌ಗಳ ಗುರಿ ನೀಡಿತ್ತು.  ವಿಂಡೀಸ್ ತಂಡವನ್ನು 52 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್ ಮಾಡಿದ್ದ ಕಪಿಲ್ ದೇವ್ ಬಳಗವು ವಿಶ್ವಕಪ್‌ಗೆ ಮುತ್ತಿಕ್ಕಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !