ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಅಂಗಳದಲ್ಲಿ ಪುಟಿಯುವುದೇ ಕ್ರಿಕೆಟ್ ಚೆಂಡು?

Last Updated 18 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಫ್ರಾ ನ್ಸ್ ದೇಶದ ಜನರು ಕ್ರಿಕೆಟ್ ಆಡಿರುವುದನ್ನು ನೋಡಿದ್ದೀರಾ?

ಇದೆಂಥಾ ಪ್ರಶ್ನೆ. ಫ್ರಾನ್ಸ್‌, ಅಮೆರಿಕ, ಜರ್ಮನಿಯಲ್ಲಿ ಕ್ರಿಕೆಟ್ ಆಡ್ತಾರಾ? ಅವರೆಲ್ಲ ಫುಟ್‌ಬಾಲ್‌ ದಿಗ್ಗಜರು, ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿರುವವರು. ಕ್ರಿಕೆಟ್ ಆಡುವುದು ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಎಂದು ಟೀಕಾಕಾರರು ವ್ಯಂಗ್ಯ ಮಾಡಬಹುದು. ಅದೇ ಕ್ರಿಕೆಟ್‌ಪ್ರಿಯರು ‘ನೋಡಿಲ್ಲ. ಆದರೆ ನಮ್ಮ ಭಾರತವೇ ಸೂಪರ್ ಪವರ್’ ಎಂದು ತಮ್ಮ ಬೆನ್ನು ಚಪ್ಪರಿಸಿಕೊಳ್ಳಬಹುದು.

ಒಲಿಂಪಿಕ್ಸ್‌ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಅಪರೂಪದ ಸಂಗತಿಯೊಂದು ಕಣ್ಮನ ಸೆಳೆಯುತ್ತದೆ. 1900ನೇ ಇಸವಿಯಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್‌ ಕ್ರಿಕೆಟ್ ಆಡಿದ್ದಷ್ಟೇ ಅಲ್ಲ, ಬೆಳ್ಳಿ ಪದಕವನ್ನೂ ಪಡೆದಿತ್ತು. ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ಚಿನ್ನ ಗೆದ್ದಿತ್ತು. ಅಂದು ಆ ಕೂಟದಲ್ಲಿ ಸ್ಪರ್ಧಿಸಿದ್ದು ಇವೇ ಎರಡು ತಂಡಗಳು ಮಾತ್ರ. ಆಗ ಫ್ರಾನ್ಸ್‌ ತಂಡದಲ್ಲಿ ಕೆಲವು ಇಂಗ್ಲಿಷ್ ಆಟಗಾರರೂ ಇದ್ದರು. 1896 ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ತಂಡಗಳ ಕೊರತೆಯಿಂದಾಗಿ ಕ್ರಿಕೆಟ್ ಸೇರ್ಪಡೆಯಾಗಿರಲಿಲ್ಲ. ಅದಕ್ಕಾಗಿ ನಂತರದ ಒಲಿಂಪಿಕ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ರಾಷ್ಟ್ರ ತಂಡ ಕಣಕ್ಕಿಳಿದಿದ್ದವು.

ಆದರೆ, ಇವತ್ತು ಕ್ರಿಕೆಟ್ ಆಡುವ ಮತ್ತು ಆಡದಿರುವ ಹಲವು ದೇಶಗಳು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ)ಯ ಮನಸೆಳೆಯಲು ಸಜ್ಜಾಗಿವೆ. ಹೇಗಾದರೂ ಮಾಡಿ ಒಲಿಂಪಿಕ್ಸ್‌ನ ಐದು ರಿಂಗ್‌ಗಳ ಲಾಂಛನದಡಿಯಲ್ಲಿ ಕ್ರಿಕೆಟ್‌ ಚೆಂಡನ್ನು ಪುಟಿಸುವತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶತಾಯಗತಾಯ ಪ್ರಯತ್ನಿಸುತ್ತಿದೆ. ಹೋದ ವಾರ ನಡೆದ ಎರಡು ಬೆಳವಣಿಗೆಗಳು ಐಸಿಸಿಯ ಪ್ರಯತ್ನಕ್ಕೆ ಮತ್ತಷ್ಟು ಬಲ ತುಂಬಿವೆ.

ನಾಡಾ ವ್ಯಾಪ್ತಿಗೆ ಬಿಸಿಸಿಐ

ಯಾವುದೇ ಕ್ರೀಡೆಯು ಒಲಿಂಪಿಕ್ಸ್‌ ಅಥವಾ ಐಒಸಿ ಕೂಟಗಳಲ್ಲಿ ಸೇರ್ಪಡೆಯಾಗಬೇಕಾದರೆ ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ (ವಾಡಾ) ವ್ಯಾಪ್ತಿಗೊಳಪಟ್ಟಿರಬೇಕು. ಬೇರೆ ಬೇರೆ ದೇಶಗಳಲ್ಲಿ ವಾಡಾದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕಗಳೊಂದಿಗೆ ಅಯಾ ದೇಶದ ಕ್ರೀಡಾ ಫೆಡರೇಷನ್‌ಗಳು ಸಂಯೋಜನೆ ಹೊಂದಿರಬೇಕು.

ಐಸಿಸಿಯು ಬಹುತೇಕ ಎಲ್ಲ ಕ್ರಿಕೆಟ್‌ ರಾಷ್ಟ್ರಗಳಿಂದ ವಾಡಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿತ್ತು. ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಭಾರತದಲ್ಲಿರುವ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಕಾರ್ಯವೈಖರಿ ಚೆನ್ನಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಸ್ವೀಡನ್ ಸಂಸ್ಥೆಯ ನೆರವಿನೊಂದಿಗೆ ತನ್ನದೇ ಆದ ವ್ಯವಸ್ಥೆಯೊಂದನ್ನು ಮಾಡಿಕೊಂಡಿತ್ತು.

ಆದರೆ ಈಚೆಗೆ ಯುವ ಕ್ರಿಕೆಟಿಗ ಪೃಥ್ವಿ ಶಾ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಸರಿಯಾಗಿ ನಿಭಾಯಿಸದ ಬಿಸಿಸಿಐ ಕೇಂದ್ರ ಕ್ರೀಡಾ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಆಗ ಬಿಸಿಸಿಐ ಅನಿವಾರ್ಯವಾಗಿ ನಾಡಾ ವ್ಯಾಪ್ತಿಗೆ ಬಂದಿತು. ಇದರಿಂದಾಗಿ ಐಸಿಸಿಯ ಹಾದಿ ಸುಗಮವಾದಂತಾಗಿದೆ. 2028ರ ಲಾಸ್‌ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗುವ ನಿರೀಕ್ಷೆ ಗರಿಗೆದರಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್

2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಸೇರ್ಪಡೆ ಮಾಡಿರುವುದು ಕೂಡ ಒಲಿಂಪಿಕ್ಸ್‌ನತ್ತ ಸಾಗುವ ಹಾದಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಐಒಸಿಯ ಮಹತ್ವದ ಕೂಟಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ಕೂಡ ಒಂದು. ಇದರಲ್ಲಿ ಕ್ರಿಕೆಟ್‌ ಹೆಚ್ಚು ಜನರನ್ನು ಆಕರ್ಷಿಸುವಂತಾದರೆ ಮುಂದಿನ ಹಾದಿ ಸುಗಮವಾಗಲಿದೆ. ತಂಡ ವಿಭಾಗದಲ್ಲಿ ಕ್ರಿಕೆಟ್‌ ನಡೆಯಲಿದೆ.

ಇಷ್ಟು ವರ್ಷ ಯಾಕೆ ನಡೆಯಲಿಲ್ಲ?

1900ನೇ ಇಸವಿಯ ನಂತರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಸಂಘಟಕರು ಹೆಚ್ಚು ಆಸಕ್ತಿ ತೋರಿಸಲಿಲ್ಲ. ಏಕೆಂದರೆ, ಆಗ ಇದ್ದದ್ದು ಟೆಸ್ಟ್‌ ಮಾದರಿಯಷ್ಟೇ. ಐದು ದಿನಗಳವರೆಗೆ ಪಂದ್ಯಗಳನ್ನು ನಡೆಸುವುದು ಕಷ್ಟಸಾಧ್ಯವಾಗಿತ್ತು. ಅಲ್ಲದೇ 15–20 ದಿನಗಳಲ್ಲಿ ಒಲಿಂಪಿಕ್ಸ್‌ ಕೂಟ ಮುಗಿಯುವುದರಿಂದ ಕ್ರಿಕೆಟ್‌ಗೆ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆ ದಿನಗಳಲ್ಲಿ ಕ್ರಿಕೆಟ್‌ ಅಷ್ಟೊಂದು ಜನಪ್ರಿಯ ಆಟವೂ ಆಗಿರಲಿಲ್ಲ. ಆದ್ದರಿಂದ ಒಲಿಂಪಿಕ್ಸ್‌ ಅಂಗಳದಿಂದ ದೂರವೇ ಉಳಿಯಿತು.

ಆದರೆ, 1983ರಲ್ಲಿ ಭಾರತವು ಇಂಗ್ಲೆಂಡ್‌ ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ ನಂತರ ಕ್ರಿಕೆಟ್‌ ಈಗ ಬಹುದೊಡ್ಡ ವಾಣಿಜ್ಯ ಚಟುವಟಿಕೆಯಾಗಿಯೂ ಬೆಳೆದು ನಿಂತಿದೆ. ಅದರಲ್ಲೂ ಟ್ವೆಂಟಿ–20 ಮಾದರಿಯ ಯಶಸ್ಸು ಈಗ ಒಲಿಂಪಿಕ್ಸ್‌ ಕನಸಿಗೆ ಬಲ ತುಂಬಿದೆ.

ಇದಲ್ಲದೇ ಕ್ರಿಕೆಟ್‌ನ ಅನಭಿಷಿಕ್ತ ದೊರೆಯಾಗಿರುವ ಭಾರತ (ಆರ್ಥಿಕ ಮತ್ತು ಅಭಿಮಾನಿಗಳ ಬೃಹತ್ ಬಳಗದ ವಿಷಯದಲ್ಲಿ)ದ ಮಾರುಕಟ್ಟೆ ಮೇಲೆ ಈಗ ಎಲ್ಲ ದೇಶಗಳ ಕಣ್ಣು ಬಿದ್ದಿದೆ. ಕ್ರಿಕೆಟ್ ಮೂಲಕ ಇಲ್ಲಿಯ ವಾಣಿಜ್ಯದ ಅಂಗಳ ಪ್ರವೇಶಿಸುವುದು ಸುಲಭವಾಗಿದೆ. ಇದರ ಲಾಭವನ್ನು ಪಡೆಯಲು ಐಒಸಿ ಕೂಡ ಮನಸ್ಸು ಮಾಡಿದ್ದರೆ ತಪ್ಪೇನಿಲ್ಲ ಅಲ್ಲವೇ?

ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ಗೆ ಸೇರ್ಪಡೆ ಮಾಡುವುದರಿಂದ ಐಸಿಸಿಯ ಬಲವೂ ಹೆಚ್ಚಲಿದೆ. ಇದರಿಂದಾಗಿ ಈ ಆಟವನ್ನು ಬೇರೆ ಬೇರೆ ದೇಶಗಳಲ್ಲಿ ಬೆಳೆಸುವ ಉದ್ದೇಶಕ್ಕೆ ಇಂಬು ದೊರೆತಿದೆ. ಕ್ರಿಕಟಿಗರಿಗೂ ವಿಶ್ವಕಪ್‌ ಆಚೆ ಮತ್ತೊಂದು ದೊಡ್ಡ ಮಟ್ಟದ ಟೂರ್ನಿಯಲ್ಲಿ ಆಡುವ ‘ಒಲಿಂಪಿಯನ್‌’ ಎನಿಸಿಕೊಳ್ಳುವ ಅವಕಾಶ ಲಭಿಸಲಿದೆ. ವಿಶ್ವಕಪ್, ಐಪಿಎಲ್, ಬಿಗ್‌ ಬ್ಯಾಷ್‌ ಲೀಗ್‌ಗಳಿಗೆ ಹೋಲಿಕೆ ಮಾಡಿದರೆ ಒಲಿಂಪಿಕ್ಸ್‌ನಿಂದ ಸಿಗುವ ದುಡ್ಡು ದೊಡ್ಡದಲ್ಲ. ಆದರೆ, ಗೌರವ ಅಮೂಲ್ಯವಾದದ್ದು. ಪ್ರತಿಷ್ಠಿತ ಕೂಟದಲ್ಲಿ ಭಾರತಕ್ಕೊಂದು ಪದಕ ಗೆಲ್ಲುವ ಅವಕಾಶವಂತೂ ಇದ್ದೇ ಇರುತ್ತದೆ ಅಲ್ಲವೇ?

ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್

ಇನ್ನು ಮೂರು ವರ್ಷಗಳ ನಂತರ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಆಯೋಜಿಸಲಾಗಿದೆ. ಇದು ಕೂಡ ಒಲಿಂಪಿಕ್ಸ್‌ ನಲ್ಲಿ ಈ ಕ್ರೀಡೆಯ ಸೇರ್ಪಡೆಗೆ ಅನುಕೂಲತೆ ಕಲ್ಪಿಸಲಿದೆ.

2010 ಮತ್ತು 2014ರ ಕೂಟಗಳಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಆದರೆ ಹೋದ ವರ್ಷದ ಕೂಟದಲ್ಲಿ ಕೈಬಿಡಲಾಗಿತ್ತು. ಭಾರತ ಕ್ರಿಕೆಟ್ ತಂಡವು ತ್ರಿಕೋನ ಸರಣಿಯಲ್ಲಿ ಆಡುತ್ತಿದ್ದ ಕಾರಣ ಏಷ್ಯನ್‌ ಗೇಮ್ಸ್‌ನಿಂದ ಹಿಂದೆ ಸರಿದಿತ್ತು. ಈಗ ಮತ್ತೆ ಸೇರ್ಪಡೆ ಮಾಡಲಾಗಿದೆ. ‘2022 ಏಷ್ಯನ್ ಗೇಮ್ಸ್‌ಗೆ ಇನ್ನೂ ಬಹಳಷ್ಟು ಸಮಯಾವಕಾಶವಿದೆ. ಈ ವಿಷಯದ ಕುರಿತು ಮಂಡಳಿಯಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT