ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಪ್ರಶಸ್ತಿಯ ಪುಳಕ

ಇಂಟರ್ ಕಾಂಟಿನೆಂಟಲ್ ಕಪ್ ಫುಟ್‌ಬಾಲ್: ಎರಡು ಗೋಲು ಗಳಿಸಿ ಮಿಂಚಿದ ನಾಯಕ ಚೆಟ್ರಿ
Last Updated 10 ಜೂನ್ 2018, 20:30 IST
ಅಕ್ಷರ ಗಾತ್ರ

ಮುಂಬೈ: ಭಾನುವಾರ ರಾತ್ರಿ ಮುಂಬೈ ಫುಟ್‌ಬಾಲ್ ಅರೆನಾದ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಫುಟ್‌ಬಾಲ್‌ ಪ್ರಿಯರನ್ನು ನಾಯಕ ಸುನಿಲ್ ಚೆಟ್ರಿ ನಿರಾಸೆಗೊಳಿಸಲಿಲ್ಲ.

ಅಮೋಘ ಆಟದ ಮೂಲಕ ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ ಅವರು ಇಂಟರ್‌ ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿಯ ಕಾಣಿಕೆ ನೀಡಿದರು. ಕಿನ್ಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 2–0 ಗೋಲುಗಳಿಂದ ಗೆದ್ದಿತು.

ಆರಂಭದ ಕೆಲವು ನಿಮಿಷಗಳಲ್ಲಿ ಉಭಯ ತಂಡಗಳ ರಕ್ಷಣಾ ವಿಭಾಗ ದವರು ಪ್ರಬಲ ಪೈಪೋಟಿ ನಡೆಸಿದರು. ಆದರೆ ಏಳನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿ ಸಿದ ಅನಿರುದ್ಧ ಥಾಪ ಮತ್ತು ಸುನಿಲ್ ಚೆಟ್ರಿ ಜೋಡಿ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಎಡಭಾಗದಲ್ಲಿ ಸುನಿಲ್ ಚೆಟ್ರಿ ಅವರನ್ನು ಕಿನ್ಯಾ ಆಟಗಾರ ನೆಲಕ್ಕೆ ಕೆಡವಿದರು. ಹೀಗಾಗಿ ಭಾರತಕ್ಕೆ ಫ್ರೀ ಕಿಕ್‌ ಅವಕಾಶ ಲಭಿಸಿತು.

ಕಿಕ್‌ ತೆಗೆದ ಥಾಪ ಚೆಂಡನ್ನು ನಿಖರವಾಗಿ ಚೆಟ್ರಿ ಬಳಿಗೆ ತಲುಪಿಸಿದರು. ಕ್ಷಣಾರ್ಧವೂ ಕಾಯದ ಚೆಟ್ರಿ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಕಿನ್ಯಾ ಗೋಲ್‌ ಕೀಪರ್‌ ಪ್ಯಾಟ್ರಿಕ್ ಮಟಾಸಿ ಅವರಿಗೆ ಚೆಂಡನ್ನು ತಡೆಯಲು ಅವಕಾಶವೇ ಸಿಗಲಿಲ್ಲ.

29ನೇ ನಿಮಿಷದಲ್ಲಿ ಚೆಟ್ರಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದರು. ಮಧ್ಯ ಭಾಗ ದಿಂದ ಅನಾಸ್ ಎಡತೋಡಿಕಾ ನೀಡಿದ ಪಾಸ್‌ ಅನ್ನು ಗೋಲು ಪೆಟ್ಟಿಗೆಯ ಬಳಿ ನಿಯಂತ್ರಿಸಿದ ಅವರು ರಕ್ಷಣಾ ವಿಭಾಗದ ಮೂವರನ್ನು ಕಬಳಿಸಿ ಮುನ್ನಡೆದರು. ಎಡಗಾಲಿನಿಂದ ಗೋಲು ಪೆಟ್ಟಿಗೆಯ ಎಡಬದಿಗೆ ಮೋಹಕವಾಗಿ ಒದ್ದು ಚೆಂಡನ್ನು ಗುರಿ ಮುಟ್ಟಿಸಿದರು.

ಪ್ಯಾಟ್ರಿಕ್ ಮಟಾಸಿ ಎಡಬದಿಗೆ ಜಿಗಿದು ತಡೆಯಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ.

ಪ್ರಬಲ ಆಕ್ರಮಣ: 2–0 ಮುನ್ನಡೆ ಯೊಂದಿಗೆ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ಭಾರತ ಆಕ್ರಮಣವನ್ನು ಮತ್ತಷ್ಟು ಬಿಗಿಗೊಳಿಸಿತು.

ಖಾತೆ ತೆರೆಯಲು ಕಿನ್ಯಾ ಕೂಡ ಶ್ರಮಿಸಿತು. 76ನೇ ನಿಮಿಷದಲ್ಲಿ ಪ್ರವಾಸಿ ತಂಡಕ್ಕೆ ಪೆನಾಲ್ಟಿ ಕಿಕ್‌ ಅವಕಾಶ ಲಭಿಸಿತ್ತು. ಆದರೆ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಎಡಕ್ಕೆ ಜಿಗಿದು ಚೆಂಡನ್ನು ಗೋಲು ಪೆಟ್ಟಿಗೆಯ ಆಚೆ ಅಟ್ಟಿ ಪ್ರೇಕ್ಷಕರನ್ನು ರಂಜಿಸಿದರು. ದ್ವಿತೀಯಾರ್ಧದಲ್ಲಿ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್‌ ಒಟ್ಟು ನಾಲ್ಕು ಬದಲಾ ವಣೆಗಳನ್ನು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT