ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಜಯ: 37 ಪಂದ್ಯಗಳಲ್ಲೇ ವಿರಾಟ್ ಹಿಂದಿಕ್ಕಿದ ರೋಹಿತ್

Last Updated 1 ಸೆಪ್ಟೆಂಬರ್ 2022, 7:17 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹಾಂಗ್‌ಕಾಂಗ್‌ ತಂಡದ ವಿರುದ್ಧ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ. ಇದರೊಂದಿಗೆ ರೋಹಿತ್‌ ಶರ್ಮಾ ಅವರು ಟಿ20 ಪಂದ್ಯಗಳಲ್ಲಿ ಭಾರತಕ್ಕೆ ಅತಿಹೆಚ್ಚು ಗೆಲುವು ತಂದುಕೊಟ್ಟ ನಾಯಕರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ್ಕಕೇರಿದ್ದಾರೆ.

ರೋಹಿತ್‌, ಭಾರತ ತಂಡವನ್ನು ಇದುವರೆಗೆ 37 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ಪೈಕಿ 31 ಜಯ ಮತ್ತು 6 ಸೋಲು ಅನುಭವಿಸಿದ್ದಾರೆ.

ಭಾರತ ಪರ ನಾಯಕನಾಗಿ ಅತಿಹೆಚ್ಚು ಗೆಲುವು ಕಂಡ ದಾಖಲೆ ಇರುವುದು ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರಲ್ಲಿ. ಬರೋಬ್ಬರಿ 72 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಧೋನಿ 41 ಜಯ ಸಾಧಿಸಿದ್ದಾರೆ.

ಮೂರನೇ ಸ್ಥಾನದಲ್ಲಿರುವ ವಿರಾಟ್‌, 50 ಪಂದ್ಯಗಳಿಂದ 30 ಗೆಲುವುಗಳನ್ನು ಕಂಡಿದ್ದಾರೆ.

ಒಟ್ಟಾರೆ ಹೆಚ್ಚು ಜಯ ಸಾಧಿಸಿದ ನಾಯಕರ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ಆಸ್ಗರ್‌ ಸ್ತಾನಿಕ್‌ಜೈ ಹಾಗೂ ಇಂಗ್ಲೆಂಡ್‌ನ ಎಯಾನ್‌ ಮಾರ್ಗನ್‌ ಮೊದಲ ಸ್ಥಾನದಲ್ಲಿದ್ದಾರೆ. ಇವರಿಬ್ಬರೂ 42 ಪಂದ್ಯಗಳಲ್ಲಿ ತಮ್ಮ ತಂಡಗಳಿಗೆ ಜಯ ತಂದುಕೊಟ್ಟಿದ್ದಾರೆ. ಆಸ್ಗರ್‌ 52 ಪಂದ್ಯಗಳಲ್ಲಿ ಅಫ್ಗಾನ್‌ ತಂಡ ಮುನ್ನಡೆಸಿದ್ದರೆ, ಮಾರ್ಗನ್‌ 72 ಪಂದ್ಯಗಳಲ್ಲಿ ಇಂಗ್ಲೆಂಡ್‌ ನಾಯಕರಾಗಿದ್ದರು.

ರೋಹಿತ್ ಮತ್ತೊಂದು ದಾಖಲೆ
ಚುಟುಕು ಕ್ರಿಕೆಟ್‌ನಲ್ಲಿ 3,500 ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ಸಾಧನೆಯನ್ನೂ ರೋಹಿತ್‌ ಶರ್ಮಾ ಮಾಡಿದ್ದಾರೆ.

ಹಾಂಗ್‌ಕಾಂಗ್‌ ವಿರುದ್ಧ 13 ಎಸೆತೆಗಳಲ್ಲಿ 21 ರನ್ ಗಳಿಸಿದ ರೋಹಿತ್, ಈ ವರೆಗೆ 134 ಪಂದ್ಯಗಳ 136 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದು, 3,520 ರನ್‌ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 4 ಶತಕ ಹಾಗೂ 27 ಅರ್ಧಶತಕಗಳು ಸಿಡಿದಿವೆ.

ರೋಹಿತ್‌ ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ (3,497) ಹಾಗೂ ವಿರಾಟ್‌ ಕೊಹ್ಲಿ (3,402) ಇದ್ದಾರೆ. ಗಪ್ಟಿಲ್‌ ಈ ವರೆಗೆ 121 ಪಂದ್ಯಗಳ117 ಇನಿಂಗ್ಸ್‌ಗಳಲ್ಲಿ ಮತ್ತು ಕೊಹ್ಲಿ 101 ಪಂದ್ಯಗಳ93 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಭಾರತ 'ಸೂಪರ್‌ 4' ಹಂತಕ್ಕೆ
ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ 'ಎ' ಗುಂಪಿನಲ್ಲಿರುವ ಭಾರತ ಮತ್ತು ಹಾಂಗ್‌ಕಾಂಗ್‌ ತಂಡಗಳುಬುಧವಾರ ರಾತ್ರಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಹಾಂಗ್‌ಕಾಂಗ್‌ ಬೌಲಿಂಗ್‌ ಆಯ್ದುಕೊಂಡಿತ್ತು. ಅದರಂತೆ ಇನಿಂಗ್ಸ್‌ ಆರಂಭಿಸಿದ ಭಾರತ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಗಳಿಸಿದ ಅರ್ಧಶತಕಗಳ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 192 ರನ್ ಕಲೆಹಾಕಿತ್ತು.

ಆರಂಭಿಕರಾದ ಕೆ.ಎಲ್‌.ರಾಹುಲ್‌ 36 ರನ್‌ ಗಳಿಸಿದರೆ, ರೋಹಿತ್‌ 21 ರನ್‌ ಬಾರಿಸಿ ಔಟಾದರು.

ನಂತರಕೊಹ್ಲಿ ಹಾಗೂಯಾದವ್‌ ಜೋಡಿ ಮುರಿಯದ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 42 ಎಸೆತಗಳಲ್ಲಿ 98 ರನ್ ಕಲೆಹಾಕಿತು.

ಕೊಹ್ಲಿ 44 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 59 ರನ್ ಗಳಿಸಿದರೆ, ಸೂರ್ಯಕುಮಾರ್‌ ಕೇವಲ 26 ಎಸೆತಗಳಲ್ಲಿ 68 ರನ್ ಚಚ್ಚಿದರು. ಅವರ ಇನಿಂಗ್ಸ್‌ನಲ್ಲಿ ತಲಾ ಆರು ಬೌಂಡರಿ ಮತ್ತು ಸಿಕ್ಸರ್‌ಗಳಿದ್ದವು.

ಭಾರತದ ಸವಾಲಿನ ಗುರಿ ಬೆನ್ನತ್ತಿದ ಹಾಂಗ್‌ಕಾಂಗ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 152ರನ್‌ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT