ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯ: ಭಾರತಕ್ಕೆ ಸರಣಿ ಗೆಲುವಿನ ವಿಶ್ವಾಸ

ಟಿ20: ರಾಜ್‌ಕೋಟ್‌ನಲ್ಲಿ ಲಂಕಾ ವಿರುದ್ಧದ ಕೊನೆಯ ಪಂದ್ಯ ಇಂದು
Last Updated 6 ಜನವರಿ 2023, 19:30 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಯುವ ಬೌಲರ್‌ಗಳು ಮತ್ತು ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿರುವ ಭಾರತ ತಂಡ, ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ.

ಮೊದಲ ಪಂದ್ಯವನ್ನು ಎರಡು ರನ್‌ಗಳಿಂದ ಗೆದ್ದಿದ್ದ ಹಾರ್ದಿಕ್‌ ಪಾಂಡ್ಯ ಬಳಗ, ಗುರುವಾರ ನಡೆದಿದ್ದ ಎರಡನೇ ಪಂದ್ಯವನ್ನು 16 ರನ್‌ಗಳಿಂದ ಸೋತಿತ್ತು. ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮಬಲದಲ್ಲಿದ್ದು, ರಾಜ್‌ಕೋಟ್‌ನಲ್ಲಿ ಶನಿವಾರ ನಡೆಯಲಿರುವ ಪಂದ್ಯ ನಿರ್ಣಾಯಕ ಎನಿಸಿದೆ.

ಯುವ ಬೌಲರ್‌ಗಳ ಅಸ್ಥಿರ ಪ್ರದರ್ಶನವೇ ಪುಣೆಯಲ್ಲಿ ಗುರುವಾರ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಉಮ್ರಾನ್‌ ಮಲಿಕ್‌ ಮತ್ತು ಶಿವಂ ಮಾವಿ ಅವರನ್ನು ಲಂಕಾ ಬ್ಯಾಟರ್‌ಗಳು ನಿರಾಯಾಸವಾಗಿ ಎದುರಿಸಿದ್ದರು. ಇಬ್ಬರೂ ಉತ್ತಮ ಲೈನ್‌ ಮತ್ತು ಲೆಂಗ್ತ್‌ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದರು.

ಎಡಗೈ ವೇಗಿ ಆರ್ಷದೀಪ್‌ ಸಿಂಗ್‌ ಅವರೂ ಎಂದಿನ ಲಯದಲ್ಲಿ ಬೌಲ್‌ ಮಾಡಿರಲಿಲ್ಲ. ಎರಡು ಓವರ್‌ಗಳಲ್ಲಿ ಐದು ನೋಬಾಲ್‌ ಎಸೆದಿದ್ದರು. ಆದಷ್ಟು ಬೇಗ ತಪ್ಪುಗಳನ್ನು ತಿದ್ದಿಕೊಳ್ಳುವ ಸವಾಲು ವೇಗದ ಬೌಲರ್‌ಗಳ ಮುಂದಿದೆ.

ಯುವ ಆಟಗಾರರು ಅನುಭವ ಪಡೆಯಲಿ ಎಂಬ ಉದ್ದೇಶದಿಂದ ತಂಡದ ಆಡಳಿತ ಅವರಿಗೆ ಇನ್ನಷ್ಟು ಅವಕಾಶ ನೀಡುವ ಸಾಧ್ಯತೆಯಿದೆ.

‘ಯುವ ಆಟಗಾರರಿಗೆ ಕೆಲವೊಮ್ಮೆ ಇಂತಹ ಪಂದ್ಯಗಳು ಎದುರಾಗುತ್ತವೆ. ಅವರು ಇನ್ನೂ ಕಲಿಯುವ ಹಂತದಲ್ಲಿದ್ದಾರೆ. ಆದ್ದರಿಂದ ಅವರ ಬಗ್ಗೆ ನಾವು ತಾಳ್ಮೆಯಿಂದ ಇರಬೇಕಾಗುತ್ತದೆ‘ ಎಂದು ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

ತಂಡವನ್ನು ಕಾಡುತ್ತಿರುವ ಇನ್ನೊಂದು ಚಿಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ. ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರೆತಿಲ್ಲ. ಶುಭಮನ್‌ ಗಿಲ್‌ ಕ್ರಮವಾಗಿ 7 ಹಾಗೂ 5 ರನ್‌ ಗಳಿಸಿ ಔಟಾಗಿದ್ದರು.

ಅಕ್ಷರ್‌ ಪಟೇಲ್‌ ಅವರ ಆಲ್‌ರೌಂಡ್‌ ಆಟ ತಂಡದ ಬಲ ಹೆಚ್ಚಿಸಿದೆ. ರವೀಂದ್ರ ಜಡೇಜ ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಎಲ್ಲ ಸೂಚನೆಗಳನ್ನು ಅಕ್ಷರ್‌ ನೀಡಿದ್ದಾರೆ. ಪುಣೆಯಲ್ಲಿ ನಡೆದಿದ್ದ ಪಂದ್ಯದಲ್ಲಿ 24 ರನ್‌ಗಳಿಗೆ ಎರಡು ವಿಕೆಟ್‌ ಪಡೆದಿದ್ದ ಅವರು ಆ ಬಳಿಕ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 31 ಎಸೆತಗಳಲ್ಲಿ 65 ರನ್‌ ಪೇರಿಸಿದ್ದರು.

ಮತ್ತೊಂದೆಡೆ ಶ್ರೀಲಂಕಾ ತಂಡ ಆತ್ಮವಿಶ್ವಾಸದಲ್ಲಿದ್ದು, ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ರಾಜ್‌ಕೋಟ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದು, ಬೃಹತ್‌ ಮೊತ್ತದ ಹೋರಾಟ ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT