ಭಾನುವಾರ, ಸೆಪ್ಟೆಂಬರ್ 20, 2020
21 °C
ರಾಜಸ್ಥಾನ್‌ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಉಪ್ಟನ್‌ ಹೇಳಿಕೆ

ಐಪಿಎಲ್‌: ಆಡುವ ಬಳಗದ ಆಯ್ಕೆಯಲ್ಲಿ ಎಡವುತ್ತಿದ್ದೇವೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೊಹಾಲಿ: ‘ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಲ್ಲಿ ನಾವು ಎಡವುತ್ತಿದ್ದೇವೆ. ಹೀಗಾಗಿ ಈ ಆವೃತ್ತಿಯಲ್ಲಿ ತಂಡದಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರುತ್ತಿಲ್ಲ’ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಪ್ಯಾಡಿ ಉಪ್ಟನ್‌ ಹೇಳಿದ್ದಾರೆ.

ಮಂಗಳವಾರ ನಡೆದಿದ್ದ ಹಣಾಹಣಿಯಲ್ಲಿ ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ್‌ ತಂಡ 12ರನ್‌ಗಳಿಂದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರು ಮಣಿದಿತ್ತು. ತಂಡವು ಈ ಬಾರಿ ಸೋತ ಆರನೇ ಪಂದ್ಯ ಇದಾಗಿತ್ತು.

ಪಂದ್ಯದ ಬಳಿಕ ಮಾತನಾಡಿದ ಉಪ್ಟನ್‌ ‘ನಾವು ಒಂದು ತಂಡವಾಗಿ ಆಡಲು ವಿಫಲವಾಗುತ್ತಿದ್ದೇವೆ. ಹೀಗಾಗಿ ನಿರಾಸೆ ಎದುರಾಗುತ್ತಿದೆ. ಎಲ್ಲಾ ಪಂದ್ಯಗಳಲ್ಲೂ ಆಡುವ ಬಳಗದಲ್ಲಿ ಸ್ಥಾನ ಗಳಿಸುವ ಹನ್ನೊಂದು ಮಂದಿಯೂ ಮಿಂಚಬೇಕು ಎಂದು ಬಯಸುವುದಿಲ್ಲ. ಕೆಲವರು ಒಂದೆರಡು ಪಂದ್ಯಗಳಲ್ಲಿ ವೈಫಲ್ಯ ಕಾಣಬಹುದು. ಹಾಗಂತ ಅವರನ್ನು ಕೈಬಿಡಲು ಆಗುವುದಿಲ್ಲ. ಲಯ ಕಂಡುಕೊಳ್ಳಲು ಅವರಿಗೆ ಅವಕಾಶ ನೀಡಬೇಕಾಗುತ್ತದೆ’ ಎಂದರು.

‘ಎಲ್ಲಾ ಆಯಾಮಗಳಿಂದ ಯೋಚಿಸಿಯೇ ತಂಡವನ್ನು ಆಯ್ಕೆ ಮಾಡುತ್ತೇವೆ. ಆದರೆ ಪಂದ್ಯದ ದಿನ ಯಾವುದಾದರೂ ಒಂದು ವಿಭಾಗದಲ್ಲಿ ನಮ್ಮವರು ತಪ್ಪು ಮಾಡಿಬಿಡುತ್ತಾರೆ. ಹಿಂದಿನ ಎಲ್ಲಾ ಪಂದ್ಯಗಳಲ್ಲೂ ನಾವು ಚೆನ್ನಾಗಿ ಆಡಿದ್ದೇವೆ. ಆದರೆ ಗೆಲುವಿನ ಅಂಚಿಗೆ ಬಂದು ಎಡವುತ್ತಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಈ ತಪ್ಪು ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ಪ್ಯಾಡಿ ನುಡಿದಿದ್ದಾರೆ.

‘ಕಿಂಗ್ಸ್‌ ಇಲೆವನ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ ಮತ್ತು ಮುರುಗನ್‌ ಅಶ್ವಿನ್‌ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು. ನಮ್ಮ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟ ಆಡಿದರು. ಹೀಗಿದ್ದರೂ ಹೆಚ್ಚೆಚ್ಚು ಬೌಂಡರಿಗಳನ್ನು ಗಳಿಸಲು ಆಗಲಿಲ್ಲ. ಆದ್ದರಿಂದ ಗೆಲುವು ಕೈ ಜಾರಿತು’ ಎಂದು ಹೇಳಿದರು.

‘ನಮ್ಮ ಬೌಲರ್‌ಗಳಿಂದ ಕೆಲ ತಪ್ಪುಗಳು ಆದವು. ನಿಖರ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಲು ಆಗಲಿಲ್ಲ. ಹೀಗಾಗಿ ಎದುರಾಳಿ ಬ್ಯಾಟ್ಸ್‌ಮನ್‌ಗಳು ಮೇಲುಗೈ ಸಾಧಿಸಿದರು. ಇದು ನಮಗೆ ಮುಳುವಾಯಿತು’ ಎಂದರು.

‘ಜೊಫ್ರಾ ಆರ್ಚರ್‌ ಪ್ರತಿಭಾನ್ವಿತ ಬೌಲರ್‌. ಯಾವ ಹಂತದಲ್ಲಿ ಹೇಗೆ ಬೌಲ್‌ ಮಾಡಬೇಕು. ಯಾರಿಗೆ ಯಾವ ಎಸೆತ ಹಾಕಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಅವರು ಎಲ್ಲಾ ಪಂದ್ಯಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ’ ಎಂದು ಜೊಫ್ರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಆರ್ಚರ್‌, ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌ ಮತ್ತು ಸ್ಟೀವ್‌ ಸ್ಮಿತ್‌ ಅವರು ವಿಶ್ವಕಪ್‌ ಪೂರ್ವಭಾವಿ ಶಿಬಿರಗಳಲ್ಲಿ ಪಾಲ್ಗೊಳ್ಳಲು ತಮ್ಮ ದೇಶಗಳಿಗೆ ತೆರಳಲಿದ್ದು, ಅಂತಿಮ ಹಂತದ ಐ‍‍ಪಿಎಲ್‌ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಬದಲಿ ಆಟಗಾರರನ್ನು ತಂಡಕ್ಕೆ ಸೇರ್ಪಡೆಮಾಡಿಕೊಳ್ಳಲಾಗಿದೆ’ ಎಂದು ನುಡಿದರು.

ಅಶ್ವಿನ್‌ ಬಗ್ಗೆ ಮಿಲ್ಲರ್‌ ಮೆಚ್ಚುಗೆ: ಕಿಂಗ್ಸ್‌ ಇಲೆವನ್‌ ನಾಯಕ ರವಿಚಂದ್ರನ್‌ ಅಶ್ವಿನ್‌ ಬಗ್ಗೆ ಸಹ ಆಟಗಾರ ಡೇವಿಡ್‌ ಮಿಲ್ಲರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಅಶ್ವಿನ್‌ ಅತ್ಯುತ್ತಮ ಆಲ್‌ರೌಂಡರ್‌. ಅವರು ತಂಡದ ಆಧಾರಸ್ಥಂಭ. ಅಭ್ಯಾಸದ ವೇಳೆ ಯುವ ಬೌಲರ್‌ಗಳಿಗೆ ಹಲವು ಕೌಶಲಗಳನ್ನು ಹೇಳಿಕೊಡುತ್ತಾರೆ’ ಎಂದರು.

‘ಅಶ್ವಿನ್‌ ಮತ್ತು ಮುರುಗನ್‌ ಅಶ್ವಿನ್‌ ಅವರು ಬಿಗುವಿನ ದಾಳಿ ನಡೆಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಹೀಗಾಗಿ ನಮ್ಮ ಗೆಲುವು ಸುಲಭವಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು