ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬರ್ ಹ್ಯಾಟ್ರಿಕ್ ಶತಕ; ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ

ಅಕ್ಷರ ಗಾತ್ರ

ಮುಲ್ತಾನ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸತತ ಮೂರನೇ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ದ ಮುಲ್ತಾನ್‌ನಲ್ಲಿ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕನ ಆಟವಾಡಿದ ಬಾಬರ್, ಮ್ಯಾಚ್ ವಿನ್ನಿಂಗ್ ಶತಕ ಗಳಿಸಿದರು.

ಈ ಮೂಲಕ ವಿಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಪಾಕಿಸ್ತಾನ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ.

ಕೊಹ್ಲಿ ದಾಖಲೆ ಮುರಿದ ಬಾಬರ್...
ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 1,000 ರನ್ ಗಳಿಸಿದ ದಾಖಲೆಗೆ ಭಾಜನರಾಗಿರುವ ಬಾಬರ್, ಭಾರತದ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ನಾಯಕನಾಗಿ 13ನೇ ಇನ್ನಿಂಗ್ಸ್‌ನಲ್ಲಿ ಬಾಬರ್, ಸಹಸ್ರ ರನ್‌‌ಗಳ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (17 ಇನ್ನಿಂಗ್ಸ್), ದ.ಆಫ್ರಿಕಾದ ಎಬಿ ಡಿವಿಲಿಯರ್ಸ್ (18), ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (20) ಹಾಗೂ ಇಂಗ್ಲೆಂಡ್‌ನ ಆಲಿಸ್ಟಾರ್ ಕುಕ್ (21) ಅವರನ್ನು ಹಿಂದಿಕ್ಕಿದ್ದಾರೆ.

2ನೇ ಸಲ ಹ್ಯಾಟ್ರಿಕ್ ಶತಕಗಳ ಸಾಧನೆ...
ಬಾಬರ್ ಆಜಂ ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಸಲ ಹ್ಯಾಟ್ರಿಕ್ ಶತಕಗಳ ಸಾಧನೆಗೈದಿದ್ದಾರೆ. ಈ ಹಿಂದೆ 2016ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧವೇ ಸತತ ಮೂರು ಶತಕಗಳ (120, 123 ಹಾಗೂ 117) ಸಾಧನೆ ಮಾಡಿದ್ದರು.

ಬಾಬರ್ ಮತ್ತದೇ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಬಾಬರ್ ಸೆಂಚುರಿ (114, 105*) ಗಳಿಸಿದ್ದರು. ಈಗ ವೆಸ್ಟ್‌ಇಂಡೀಸ್ ವಿರುದ್ಧ ಶತಕ ಗಳಿಸುವ ಮೂಲಕ ಕೊನೆಯ ಮೂರು ಏಕದಿನ ಪಂದ್ಯಗಳಲ್ಲಿ ಮೂರಂಕಿಯ ಗಡಿ ದಾಟಿದರು.

ಬಾಬರ್ ಶತಕದ ಅಬ್ಬರ, ಪಾಕ್‌ಗೆ ಗೆಲುವು...
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, ಶಾಯಿ ಹೋಪ್ ಶತಕದ (127) ಬಲದೊಂದಿಗೆ ಎಂಟು ವಿಕೆಟ್ ನಷ್ಟಕ್ಕೆ 305 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪಾಕ್ ವೇಗಿ ಹ್ಯಾರಿಸ್ ರೌಫ್, ನಾಲ್ಕು ವಿಕೆಟ್ ಗಳಿಸಿದ್ದರು.

ಬಳಿಕ ಗುರಿ ಬೆನ್ನಟ್ಟಿದ ಪಾಕ್, ಬಾಬರ್ ಶತಕ ಹಾಗೂ ಇಮಾಮ್ ಉಲ್ ಹಕ್ (65) ಹಾಗೂ ಮೊಹಮ್ಮದ್ ರಿಜ್ವಾನ್ ಆಕರ್ಷಕ ಅರ್ಧಶತಕಗಳ (59) ನೆರವಿನಿಂದ ಇನ್ನೂ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆಯೇ 49.2 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಖುಷ್‌ದಿಲ್ ಶಾ ಕೂಡಾ 41 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದರು.

107 ಎಸೆತಗಳನ್ನು ಎದುರಿಸಿದ ಬಾಬರ್ ಒಂಬತ್ತು ಬೌಂಡರಿಗಳ ನೆರವಿನಿಂದ 103 ರನ್ ಗಳಿಸಿದರು. ಬಳಿಕ ತಮಗೆ ಲಭಿಸಿದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಖುಷ್‌ದಿಲ್ ಶಾ ಅವರಿಗೆ ಹಸ್ತಾಂತರಿಸುವ ಮೂಲಕ ಪಾಕ್ ಅಭಿಮಾನಿಗಳ ಹೃದಯ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT