ಭಾನುವಾರ, ನವೆಂಬರ್ 29, 2020
24 °C

ನ್ಯೂಜಿಲೆಂಡ್ ಪ್ರವಾಸ: ಪಾಕ್‌ ತಂಡದಲ್ಲಿ ಶಫೀಕ್‌, ಆಮಿರ್, ಶೊಯೆಬ್‌ಗೆ ಇಲ್ಲ ಸ್ಥಾನ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಲಾಹೋರ್: ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ತಂಡಗಳನ್ನು ಬುಧವಾರ ಪ್ರಕಟಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೆಸ್ಟ್ ತಂಡದಿಂದ ಅಸಾದ್ ಶಫೀಕ್ ಅವರನ್ನು ಕೈಬಿಟ್ಟಿದೆ. ‘ಗೋ ಯಂಗ್’ ಯೋಜನೆಗೆ (ಯುವ ಆಟಗಾರರಿಗೆ ಅವಕಾಶ) ಒತ್ತು ನೀಡಿದ್ದು ಮೊಹಮ್ಮದ್ ಆಮಿರ್ ಮತ್ತು ಶೊಯೆಬ್ ಮಲಿಕ್ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ.

ಆಗಸ್ಟ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ತಂಡದಲ್ಲಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಟೆಸ್ಟ್ ಪಂದ್ಯಗಳ ಐದು ಇನಿಂಗ್ಸ್‌ಗಳಲ್ಲಿ ಕೇವಲ 67 ರನ್‌ ಗಳಿಸಿದ್ದರು. ಸರಣಿಯಲ್ಲಿ ಪಾಕಿಸ್ತಾನ 0–1ರ ಅಂತರದಲ್ಲಿ ಸೋತಿತ್ತು.  ಒಟ್ಟು 35 ಮಂದಿಯ ತಂಡವನ್ನು ಪ್ರಕಟಿಸಿದ ನಂತರ ಮಾತನಾಡಿದ ಮುಖ್ಯ ಕೋಚ್‌ ಮಿಸ್ಮಾ ಉಲ್ ಹಕ್ ‘ಫಾರ್ಮ್‌ನಲ್ಲಿ ಇಲ್ಲದ ಕಾರಣ ಅಜಾದ್ ಶಫೀಕ್ ಅವರನ್ನು ಕೈಬಿಡಲಾಗಿದೆ. ಸರ್ಫರಾಜ್ ಅಹಮ್ಮದ್ ಕೂಡ ತಂಡದಲ್ಲಿಲ್ಲ. ಇವರಿಬ್ಬರೂ ಈ ಅವಕಾಶವನ್ನು ಬಳಸಿಕೊಂಡು ಹೆಚ್ಚು ಶ್ರಮವಹಿಸಿ ದೇಶಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಸಾಮರ್ಥ್ಯ ಪ್ರದರ್ಶಿಸುವ ನಿರೀಕ್ಷೆ ಇದೆ. ಅದು ಸಾಧ್ಯವಾದರೆ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಎದುರಿನ ಟೆಸ್ಟ್ ಸರಣಿಗಳಿಗೆ ತಂಡ ಆಯ್ಕೆ ಮಾಡುವ ಸಂದರ್ಭದಲ್ಲಿ ಅವರಿಗೂ ಅವಕಾಶ ಸಿಗಲಿದೆ’ ಎಂದರು.

ನ್ಯೂಜಿಲೆಂಡ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 26ರಂದು ಮೌಂಟ್ ಮಾಂಗನೂಯಿಯಲ್ಲಿ ಆರಂಭವಾಗಲಿದೆ. ಈ ಪಂದ್ಯದ ಮೂಲಕ ಬಾಬರ್ ಆಜಂ ಪಾಕಿಸ್ತಾನದ ಟೆಸ್ಟ್ ತಂಡದ ನಾಯಕನಾಗಿ ಪದಾರ್ಪಣೆ ಮಾಡುವರು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಟೆಸ್ಟ್ ಸರಣಿಯ ನಂತರ ಟಿ20 ಸರಣಿ ನಡೆಯಲಿದ್ದು ವೇಗಿ ಆಮಿರ್ ಮತ್ತು ಆಲ್‌ರೌಂಡರ್ ಮಲಿಕ್ ಸರಣಿಯಲ್ಲಿ ಆಡುವುದಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಆಲ್‌ರೌಂಡರ್‌, 40 ವರ್ಷದ ಮೊಹಮ್ಮದ್ ಹಫೀಜ್ ಮತ್ತು ಎಡಗೈ ವೇಗಿ 35 ವರ್ಷದ ವಹಾಬ್ ರಿಯಾಜ್ ಅವರನ್ನು ಟಿ20 ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಮಿಸ್ಬಾ ವಿವರಿಸಿದರು. ‘ಎ’ ತಂಡವೂ ಒಳಗೊಂಡ ಪಾಕಿಸ್ತಾನ ಕ್ರಿಕೆಟಿಗರು ನವೆಂಬರ್ 23ರಂದು ಹೊರಡಲಿದ್ದು ಲಿಂಕ್‌ನಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು