ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿಯನ್ನು ಸಾಮಾನ್ಯ ಬ್ಯಾಟ್ಸ್‌ಮನ್ ಎಂದುಕೊಂಡಿದ್ದೆ: ಪಾಕ್ ಮಾಜಿ ಕ್ರಿಕೆಟಿಗ

Last Updated 27 ಜುಲೈ 2020, 6:22 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ಹಾಗೂ ಸದ್ಯ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿರುವ ವಿರಾಟ್‌ ಕೊಹ್ಲಿ ಅವರನ್ನು ಸಾಮಾನ್ಯ ಬ್ಯಾಟ್ಸ್‌ಮನ್‌ ಎಂದುಕೊಂಡಿದ್ದೆ ಎಂದು ಪಾಕಿಸ್ತಾನದ ವೇಗದ ಬೌಲರ್‌ ಜುನೈದ್‌ ಖಾನ್‌ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ತಂಡ2012ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಆ ವೇಳೆ ಉಭಯ ತಂಡಗಳು ಎರಡು ಪಂದ್ಯಗಳ ಟಿ–20 ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಿದ್ದವು. ಟಿ20 ಸರಣಿ 1–1 ಅಂತರದಲ್ಲಿ ಸಮಬಲ ಮಾಡಿಕೊಂಡಿದ್ದ ಪಾಕ್‌, ಏಕದಿನ ಸರಣಿಯನ್ನು 1–2ರಿಂದ ಗೆದ್ದು ಬೀಗಿತ್ತು.

ಎರಡೂ ಮಾದರಿಯಲ್ಲಿ ವೈಫಲ್ಯ ಕಂಡಿದ್ದ ಕೊಹ್ಲಿ ಐದು ಇನಿಂಗ್ಸ್‌ಗಳಿಂದ ಕೇವಲ 49 (9, 27, 0, 6, 7) ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು. ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದ ಜುನೈದ್‌ ಮೂರೂಇನಿಂಗ್ಸ್‌ಗಳಲ್ಲಿ ಕೊಹ್ಲಿ ವಿಕೆಟ್‌ ಕಬಳಿಸಿ ಮಿಂಚಿದ್ದರು. ಪಾಕ್‌ ವೇಗಿ ಹಾಕಿದ 24 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕೇವಲ 3 ರನ್‌ ಗಳಿಸಿದ್ದರು.

ಈ ಬಗ್ಗೆ ಯೂಟ್ಯೂಬ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಜುನೈದ್‌, ‘ನಾನು ಕೊಹ್ಲಿಗೆ ಹಾಕಿದ ಮೊದಲ ಎಸೆತ ವೈಡ್‌ ಆಗಿತ್ತು. ನಂತರದ ಎಸೆತದಲ್ಲಿ ಆತ ರನ್‌ ಗಳಿಸಿರಲಿಲ್ಲ. ಆಗ ನಾನು ಓಹ್‌, ಈತ ಸಾಮಾನ್ಯ ಬ್ಯಾಟ್ಸ್‌ಮನ್ ಎಂದು ಕೊಂಡಿದ್ದೆ’ ಎಂದಿದ್ದಾರೆ.

‘ಸರಣಿ ಮಧ್ಯೆ ವಿರಾಟ್‌, ಇವು ಭಾರತದ ಪಿಚ್‌ಗಳು ಮತ್ತು ಚೆಂಡು ಹೆಚ್ಚು ವೇಗವಾಗಿ ಬರುವುದಿಲ್ಲ ಎಂದು ತಮಾಷೆಯಾಗಿ ಹೇಳಿದ್ದರು. ನಾನು, ನೋಡೋಣ. ಏಕೆಂದರೆ ನನ್ನಲ್ಲಿ ಸಾಕಷ್ಟು ಆವೇಗವಿದೆ ಎಂದಿದ್ದೆ’ ಎಂದು ನೆನಪಿಸಿಕೊಂಡಿದ್ದಾರೆ.

‘ಭಾರತ ವಿರುದ್ಧದ ಸರಣಿಗೂ ಮೊದಲು ನಾನು ಫೈಸಲಾಬಾದ್‌ನಲ್ಲಿ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ್ದೆ. ಪ್ರತಿ ಪಂದ್ಯದಲ್ಲಿಯೂ 35–40 ಓವರ್‌ ಬೌಲಿಂಗ್‌ ಮಾಡಿದ್ದೆ. ಹಾಗಾಗಿ ವೇಗ ಸುಧಾರಿಸಿಕೊಂಡಿದ್ದೆ’ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ನಂ.1 ರ‍್ಯಾಂಕಿಂಗ್‌ನಲ್ಲಿರುವ ಕೊಹ್ಲಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟಿ20 ಮಾದರಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ, ಬಾಬರ್ ಅಜಂ, ಸ್ಟೀವ್‌ ಸ್ಮಿತ್‌, ಕೇನ್‌ ವಿಲಿಯಮ್ಸನ್‌, ಜೋ ರೂಟ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳೆಂದು ಗುರುತಿಸಿಕೊಂಡಿದ್ದಾರೆ. ಆದರೆ, ಕೊಹ್ಲಿಯನ್ನು ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದಿದ್ದಾರೆಜುನೈದ್‌.

ಕೊಹ್ಲಿಯ ಫಾರ್ಮ್‌ ಬಗ್ಗೆ ಮಾತನಾಡಿರುವ ಅವರು, ‘ಕೊಹ್ಲಿ ಎಲ್ಲ ಮಾದರಿಯ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನ್ನುವದರಲ್ಲಿ ಅನುಮಾನವೇ ಇಲ್ಲ. ನೀವು ಯಾರನ್ನಾದರೂ ಕೇಳಿದರೆ, ವಿರಾಟ್‌ ಕೊಹ್ಲಿ,ಬಾಬರ್‌ ಅಜಂ, ಜೋ ರೂಟ್‌, ಕೇನ್‌ ವಿಲಿಯಮ್ಸನ್‌, ಸ್ಟೀವ್‌ ಸ್ಮಿತ್‌ ಅವರನ್ನು ಈ ತಲೆಮಾರಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎನ್ನುತ್ತಾರೆ. ಆದರೆ, ಕೊಹ್ಲಿ ಮೂರು ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT