ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ವಿಶ್ವಕಪ್‌ ಇತಿಹಾಸದಲ್ಲೇ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಮೊದಲ ಸೋಲು

Last Updated 24 ಅಕ್ಟೋಬರ್ 2021, 17:59 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.

ಇದರೊಂದಿಗೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಆರಂಭಿಕರಾದ ನಾಯಕ ಬಾಬರ್ ಆಜಂ (68*) ಹಾಗೂ ಮೊಹಮ್ಮದ್ ರಿಜ್ವಾನ್ (79*) ಶತಕದ ಜೊತೆಯಾಟದ ನೆರವಿನಿಂದ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ದಾಖಲಿಸಿದೆ.

ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಮೊದಲ ಸೋಲು...
ಸವಾಲಿನ ಮೊತ್ತ ಬೆನ್ನತ್ತಿದ ಪಾಕಿಸ್ತಾನಕ್ಕೆ ನಾಯಕ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಭಾರತೀಯ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿದರು.

10 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿತ್ತು. ಅಲ್ಲದೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 81 ರನ್‌ಗಳ ಅಗತ್ಯವಿತ್ತು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಕೇವಲ 40 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು.

ಅಲ್ಲದೆ 77 ಎಸೆತಗಳಲ್ಲೇ ತಂಡದ ಮೊತ್ತ 100ರ ಗಡಿ ದಾಟಿತು. ಬಾಬರ್‌ಗೆ ಸಾಥ್ ನೀಡಿದ ರಿಜ್ವಾನ್ 41 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಂತಿಮವಾಗಿ 17.5 ಓವರ್‌ಗಳಲ್ಲಿ ಗುರಿ ತಲುಪಿತು. ಈ ಮೂಲಕ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು.

55 ಎಸೆತಗಳನ್ನು ಎದುರಿಸಿದ ರಿಜ್ವಾನ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 79 ರನ್ ಗಳಿಸಿ ಔಟಾಗದೆ ಉಳಿದರು. ಇನ್ನೊಂದೆಡೆ ನಾಯಕ ಬಾಬರ್ 52 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 68 ರನ್ ಗಳಿಸಿ ಅಜೇಯರಾಗುಳಿದರು.

ಕೊಹ್ಲಿ ಫಿಫ್ಟಿ ಆಸರೆ...
ಭಾರತದ ಆರಂಭ ಉತ್ತಮವಾಗಿರಲಿಲ್ಲ. ಪ್ರಥಮ ಓವರ್‌ನಲ್ಲೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (0) ಅವರನ್ನು ಎಡಗೈ ವೇಗಿ ಶಾಹೀನ್ ಆಫ್ರಿದಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಇದರಿಂದಾಗಿ ರೋಹಿತ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು.

ಬೆನ್ನಲ್ಲೇ ಕೆ.ಎಲ್. ರಾಹುಲ್‌ರನ್ನು (3) ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ 6 ರನ್ನಿಗೆ ಆರಂಭಿಕರನ್ನು ಕಳೆದುಕೊಂಡ ಭಾರತ ಒತ್ತಡಕ್ಕೊಳಗಾಯಿತು. ಶಾಹೀನ್ ದಾಳಿಯಲ್ಲೇ ಸಿಕ್ಸರ್ ಬಾರಿಸಿದ ಸೂರ್ಯಕುಮಾರ್ ಯಾದವ್ (11) ಭರವಸೆ ಮೂಡಿಸಿದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ಅತ್ತ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಅವರಿಗೆ ರಿಷಭ್ ಪಂತ್ ಅವರಿಂದ ಬೆಂಬಲ ದೊರಕಿತು. 10 ಓವರ್ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತ್ತು.

ಹಸನ್ ಅಲಿ ಅವರ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಎರಡು ಸಿಕ್ಸರ್ ಸೇರಿದಂತೆ 15 ರನ್ ಚಚ್ಚಿದ ರಿಷಭ್ ಪಂತ್, ನಾಯಕ ವಿರಾಟ್ ಕೊಹ್ಲಿ ಜೊತೆಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಶಾದಾಬ್ ಖಾನ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 30 ಎಸೆತಗಳನ್ನು ಎದುರಿಸಿದ ರಿಷಭ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು.

ಇನ್ನೊಂದೆಡೆ ಅತಿ ಒತ್ತಡದ ಪರಿಸ್ಥಿತಿಯನ್ನು ಸರ್ಥವಾಗಿ ಎದುರಿಸಿದ ಕೊಹ್ಲಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು. 49 ಎಸೆತಗಳನ್ನು ಎದುರಿಸಿದ ವಿರಾಟ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು.

ಅಂತಿಮವಾಗಿ ಭಾರತ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಇನ್ನುಳಿದಂತೆ ರವೀಂದ್ರ ಜಡೇಜ (13), ಹಾರ್ದಿಕ್ ಪಾಂಡ್ಯ (11) ಹಾಗೂ ಭುವನೇಶ್ವರ್ ಕುಮಾರ್ (5*) ರನ್ ಗಳಿಸಿದರು. ಪಾಕ್ ಪರ ಶಾಹೀನ್ ಮೂರು ವಿಕೆಟ್ ಕಿತ್ತು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT