ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ರಿಜ್ವಾನ್, ಭಾರತದ ವಿರಾಟ್ ಕೊಹ್ಲಿಯನ್ನು 'ನಮ್ಮ ಕೊಹ್ಲಿ' ಎಂದದ್ದೇಕೆ?

ಅಕ್ಷರ ಗಾತ್ರ

ಪಾಕಿಸ್ತಾನದ ಸ್ಟಾರ್‌ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು 'ನಮ್ಮ ಕೊಹ್ಲಿ' ಎಂದು ಸಂಬೋಧಿಸಿದ್ದರು. ಆ ಮೂಲಕ ಜಗತ್ತಿನಾದ್ಯಂತ ಇರುವ ಕೊಹ್ಲಿ ಅಭಿಮಾನಿಗಳ ಮನ ಗೆದ್ದಿದ್ದರು.

'Cricwick' ವೆಬ್‌ಸೈಟ್‌ಜೊತೆಗಿನ ಮಾತುಕತೆ ವೇಳೆ ಅವರು, ಕ್ರಿಕೆಟ್‌ ಬಳಗವೇ ಒಂದು ಎಂದೂ, ಅದೊಂದು ದೊಡ್ಡ ಘಟಕವೆಂದು ಪ್ರತಿಪಾದಿಸಿದ್ದರು. ಮುಂದುವರಿದು, ನಾವೆಲ್ಲರೂ ಒಂದೇ ಕುಟುಂಬದವರು. ಹಾಗಾಗಿ ನಾನು 'ನಮ್ಮ ವಿರಾಟ್‌ ಕೊಹ್ಲಿ' ಎಂದರೆ ಅದರಲ್ಲಿ ತಪ್ಪಿಲ್ಲ. ಅಥವಾ 'ನಮ್ಮ ಪೂಜಾರಾ', 'ನಮ್ಮ ಸ್ಮಿತ್‌' ಅಥವಾ 'ನಮ್ಮ ರೂಟ್‌' ಎಂದು ಬಳಸಬಹುದು. ಏಕೆಂದರೆ ನಾವೆಲ್ಲರೂ ಒಂದೇ ಕುಟುಂಬದಲ್ಲಿದ್ದೇವೆ' ಎಂದು ಹೇಳಿದ್ದರು.

ಇದೀಗ ಅವರು 'ನಮ್ಮ ಕೊಹ್ಲಿ' ಎಂದು ಹೇಳಿದ್ದು ಏಕೆ ಎಂಬುದನ್ನು ಮತ್ತೊಂದು ಮಾತುಕತೆ ವೇಳೆ ವಿವರಿಸಿದ್ದಾರೆ. ಅದಕ್ಕಾಗಿ ಅವರು ಕೊಹ್ಲಿಯನ್ನು ಮೊದಲ ಸಲ ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

ಕೊಹ್ಲಿ ಹಾಗೂ ರಿಜ್ವಾನ್‌ ಮೊದಲ ಸಲ ಭೇಟಿಯಾದದ್ದು ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಸಂದರ್ಭದಲ್ಲಿ. ಆಟೂರ್ನಿಯಲ್ಲಿ ಭಾರತ ತಂಡವನ್ನು ವಿರಾಟ್‌ ಮುನ್ನಡೆಸಿದ್ದರು.

ಭಾರತ ಹಾಗೂ ಪಾಕಿಸ್ತಾನ ಅಕ್ಟೋಬರ್‌ 24ರಂದು ಸೆಣಸಾಟ ನಡೆಸಿದ್ದವು. ಆ ಪಂದ್ಯದಲ್ಲಿ ಪಾಕ್‌ ನಾಯಕ ಬಾಬರ್‌ ಅಜಂ (68) ಹಾಗೂ ರಿಜ್ವಾನ್‌ (79) ಅಮೋಘ ಬ್ಯಾಟಿಂಗ್‌ ನಡೆಸಿ ಭಾರತವನ್ನು 10 ವಿಕೆಟ್‌ ಅಂತರದಿಂದ ಮಣಿಸಿದ್ದರು.ಅಂದಹಾಗೆ ಅದು, ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತದ ವಿರುದ್ಧ ಪಾಕ್‌ಗೆ ದಕ್ಕಿದ ಮೊದಲ ಜಯವಾಗಿತ್ತು. ಪಂದ್ಯದ ಬಳಿಕವಿರಾಟ್‌, ರಿಜ್ವಾನ್‌ ಅವರನ್ನು ಆಲಂಗಿಸಿ ಅಭಿನಂದಿಸಿದ್ದರು.

ಆ ಕ್ಷಣದ ಕುರಿತು ಮಾತನಾಡಿರುವ ರಿಜ್ವಾನ್‌, 'ಅದೇ ಮೊದಲ ಸಲ(ವಿಶ್ವಕಪ್‌ ಟೂರ್ನಿ ವೇಳೆ) ಕೊಹ್ಲಿಯನ್ನು ಭೇಟಿ ಮಾಡಿದ್ದೆ. ಬೇರೆ ಆಟಗಾರರು ಕೊಹ್ಲಿ ಬಗ್ಗೆ 'ಆತ ಆಕ್ರಮಣಕಾರಿ' ಎಂದೆಲ್ಲ ಹೇಳಿದ್ದನ್ನು ಕೇಳಿದ್ದೆ. ಆದರೆ, ಆತ ಪಂದ್ಯಕ್ಕೂ ಮುನ್ನ ಮತ್ತು ನಂತರ ನಮ್ಮನ್ನು ಭೇಟಿ ಮಾಡಿದ ರೀತಿ ನಿಜವಾಗಿಯೂ ಅಮೋಘವಾಗಿತ್ತು. ನಾನು ವಿರಾಟ್‌ ಕೊಹ್ಲಿಯನ್ನು 'ನಮ್ಮ ಕೊಹ್ಲಿ' ಎಂದು ಹೇಳುತ್ತೇನೆ ಎಂದರೆ, ನಾವು ಒಂದೇ ಕುಟುಂಬದವರು ಎಂಬ ಕಾರಣದಿಂದ. ಖಂಡಿತವಾಗಿ, ಮೈದಾನಕ್ಕೆ ಇಳಿದಾಗ ಯಾರೊಬ್ಬರೂ ಸ್ಟಾರ್‌ ಅಲ್ಲ. ಆ ಕ್ಷಣ ಸಹೋದರತ್ವ ಅಥವಾ ಮತ್ತೇನೂ ಇರುವುದಿಲ್ಲ. ಆದರೆ ಮೈದಾನದ ಹೊರಗೆ ನಾವು ಸಾಕಷ್ಟು ಪ್ರೀತಿ ಮತ್ತು ಅಕ್ಕರೆಯಿಂದ ವಿರಾಟ್‌ ಕೊಹ್ಲಿಯನ್ನು ಭೇಟಿ ಮಾಡಿದೆವು.ನಮ್ಮ ಆಟಗಾರರು ಎಂಎಸ್‌ ಧೋನಿಯವರನ್ನೂ ಭೇಟಿಯಾಗಿದ್ದರು' ಎಂದು 'ಕ್ರಿಕೆಟ್‌ ಬಾಜ್‌ ವಿತ್‌ ವಹೀದ್‌ ಖಾನ್‌'ಯುಟ್ಯೂಬ್‌ ಶೋನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT