ರಾವಲ್ಪಿಂಡಿ: ಅನುಭವಿ ಬ್ಯಾಟರ್ ಮುಷ್ಫಿಕುರ್ ರಹೀಂ ಅವರ 191 ರನ್‌ಗಳ ಅಮೋಘ ಆಟದ ನೆರವಿನಿಂದ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿತು.
ಪಾಕಿಸ್ತಾನದ 448 ರನ್‌ಗಳಿಗೆ ಉತ್ತರವಾಗಿ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 565 ರನ್‌ಗಳ ದೊಡ್ಡ ಮೊತ್ತ ಗಳಿಸಿ 117 ರನ್‌ಗಳ ಮುನ್ನಡೆ ಪಡೆಯಿತು. ಇದು ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶವು ಟೆಸ್ಟ್ ಇನಿಂಗ್ಸ್‌ನಲ್ಲಿ ಗಳಿಸಿದ ಅತಿ ದೊಡ್ಡ ಮೊತ್ತ. ಖುಲ್ನಾದಲ್ಲಿ 2015ರಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ್ದ 6 ವಿಕೆಟ್‌ಗೆ 555 ರನ್ ಆ ತಂಡದ ಈ ಹಿಂದಿನ ಗರಿಷ್ಠ ಮೊತ್ತ.
ಎಂಟು ಗಂಟೆ 42 ನಿಮಿಷ ಆಡಿ 341 ಎಸೆತ ಎದುರಿಸಿದ ರಹೀಂ 22 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಇದು 89 ಟೆಸ್ಟ್‌ಗಳಲ್ಲಿ ರಹೀಂ ಅವರಿಗೆ 11ನೇ ಶತಕ. ಏಳನೇ ವಿಕೆಟ್‌ಗೆ ಅವರು, ಮೆಹಿದಿ ಹಸನ್ ಮಿರಾಜ್ (77, 179ಎ) ಜೊತೆ 196 ರನ್ ಸೇರಿಸಿದರು. ಇದು ಪಾಕ್ ಎದುರು ಈ ವಿಕೆಟ್‌ಗೆ ದಾಖಲಾದ ಅತಿ ದೊಡ್ಡ ಜೊತೆಯಾಟ. 1976ರಲ್ಲಿ ನ್ಯೂಜಿಲೆಂಡ್‌ನ ವಾರೆನ್ ಲೀಸ್ ಮತ್ತು ರಿಚರ್ಡ್ ಹ್ಯಾಡ್ಲಿ 186 ರನ್ ಸೇರಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.
ದಿನದಾಟ ಮುಗಿದಾಗ ಆತಿಥೇಯ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗೆ 23 ರನ್ ಗಳಿಸಿದ್ದು, ಒಂದಿಷ್ಟು ಆತಂಕ ಎದುರಿಸುತ್ತಿದೆ. ಪಾಕಿಸ್ತಾನ ವಿರುದ್ಧ ಆಡಿರುವ 13 ಟೆಸ್ಟ್‌ಗಳ ಪೈಕಿ 12ರಲ್ಲಿ ಬಾಂಗ್ಲಾ ಸೋತಿದೆ.
ಸ್ಕೋರುಗಳು:
ಮೊದಲ ಇನಿಂಗ್ಸ್: ಪಾಕಿಸ್ತಾನ: 6 ವಿಕೆಟ್‌ಗೆ 448 ಡಿಕ್ಲೇರ್; ಬಾಂಗ್ಲಾದೇಶ: 167.3 ಓವರುಗಳಲ್ಲಿ 565 (ಶಾದ್ಮನ್ ಇಸ್ಲಾಂ 93, ಮುಷ್ಫಿಕುರ್ ರಹೀಂ 191, ಮೆಹಿದಿ ಹಸನ್ ಮಿರಾಜ್ 77; ನಸೀಮ್ ಶಾ 93ಕ್ಕೆ3); ಎರಡನೇ ಇನಿಂಗ್ಸ್: ಪಾಕಿಸ್ತಾನ: 10 ಓವರುಗಳಲ್ಲಿ 1 ವಿಕೆಟ್‌ಗೆ 23