ಗುರುವಾರ , ಜುಲೈ 29, 2021
21 °C

ಇಂಗ್ಲೆಂಡ್‌ಗೆ ತೆರಳುವ ಮುನ್ನ ಪಾಕ್ ಕ್ರಿಕೆಟಿಗರಿಗೆ ಕೊರೊನಾ ‘ಡಬಲ್ ಟೆಸ್ಟ್‌’

ಪಿಟಿಐ Updated:

ಅಕ್ಷರ ಗಾತ್ರ : | |

ಮಿಸ್ಬಾ ಉಲ್ ಹಕ್

ಕರಾಚಿ: ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳುವ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಮತ್ತು ಸಿಬ್ಬಂದಿಯನ್ನು ಎರಡು ಬಾರಿ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗುವುದು.

ಮುಂದಿನ ತಿಂಗಳು ನಡೆಯಲಿರುವ ಸರಣಿಯಲ್ಲಿ ಆಡಲು ಪಾಕ್ ತಂಡವು ಇದೇ 28ರಂದು ಪ್ರಯಾಣ ಮಾಡಲಿದೆ. ಅದಕ್ಕೂ ಮುನ್ನ ಎರಡು ಪರೀಕ್ಷೆಗೆ ಆಟಗಾರರು ಒಳಗಾಗಲಿದ್ದಾರೆ. ಇದೇ 22 ಮತ್ತು 24ರಂದು  ಆಟಗಾರರ ತಪಾಸಣೆ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೂಲಗಳು ತಿಳಿಸಿವೆ.

‘ಆಟಗಾರರು ಮತ್ತು ಸಿಬ್ಬಂದಿಯನ್ನು ಅವರು ಇರುವ  ಊರು, ಪ್ರದೇಶಗಳಲ್ಲಿಯೇ ಪರೀಕ್ಷೆ ಮಾಡಲಾಗುವುದು. 24ರಂದು ಎಲ್ಲ ಆಟಗಾರರು, ಸಿಬ್ಬಂದಿ ಮತ್ತು ಅಧಿಕಾರಿಗಳು ಲಾಹೋರ್‌ನಲ್ಲಿ ಸೇರಲಿದ್ದಾರೆ. ಅಲ್ಲಿ  ಎರಡನೇ ಸುತ್ತಿನ ಪರೀಕ್ಷೆ ನಡೆಸಲಾಗುವುದು. ಅವರೆಲ್ಲರೂ ತಂಗುವ ಪಂಚತಾರಾ ಹೋಟೆಲ್‌ನ ಒಂದು ಅಂತಸ್ತನ್ನು ಜೀವ ರಕ್ಷಕ ಪ್ರದೇಶವನ್ನಾಗಿ ಸಿದ್ಧಪಡಿಸಲಾಗಿದೆ. 28ರವರಗೆ ಅವರು ಅಲ್ಲಿ ಪ್ರತಿಯೊಬ್ಬರೂ ಪ್ರತ್ಯೇಕವಾಸ ಮಾಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಈ ಎರಡು ಟೆಸ್ಟ್‌ಗಳಲ್ಲಿ ಯಾರಾದಾರೂ ಪಾಸಿಟಿವ್ ಎಂದು ಕಂಡು ಬಂದರೆ ಅವರನ್ನು ಇಂಗ್ಲೆಂಡ್‌ಗೆ ಕಳಿಸುವುದಿಲ್ಲ. ಬದಲೀ ಆಟಗಾರರನ್ನು ಕಳಿಸಲಾಗುವುದು’ ಎಂದೂ ಮೂಲಗಳು ಹೇಳಿವೆ. 

ಪಿಸಿಬಿಯು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ)ಯೊಂದಿಗೆ ಶುಕ್ರವಾರ  ಒಡಂಬಡಿಕೆಗೆ ಸಹಿ ಹಾಕುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ವರೆಗೂ ನಡೆಯಲಿರುವ ಸರಣಿಯಲ್ಲಿ ನೀತಿ, ನಿಯಮಗಳ ಒಡಂಬಡಿಕೆ ಇದಾಗಿದೆ.

ಪಾಕಿಸ್ತಾನ ತಂಡದ ಕೋಚ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥರೂ ಆಗಿರುವ ಮಿಸ್ಬಾ ಉಲ್ ಹಕ್ 29 ಆಟಗಾರರ ತಂಡವನ್ನು ಈಗಾಗಲೇ ಪ್ರಕಟಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಆಟಗಾರರು, ಸಿಬ್ಬಂದಿ ಮತ್ತು ಅಧಿಕಾರಿಗಳು ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗುವಂತಿಲ್ಲ. ವಿಶೇಷ ವಿಮಾನದಲ್ಲಿ ತೆರಳಲಿರುವ ತಂಡವು ಇಂಗ್ಲೆಂಡ್‌ಗೆ ಹೋದ ತಕ್ಷಣ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದೆ.

ಜುಲೈ 8ರಿಂದ ಇಂಗ್ಲೆಂಡ್‌ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ವಿಂಡೀಸ್ ತಂಡವು ಹತ್ತು ದಿನಗಳ ಹಿಂದೆಯೇ ಮ್ಯಾಂಚೆಸ್ಟರ್‌ಗೆ ತೆರಳಿದ್ದು ‘ಗೃಹಬಂಧನ’ದಲ್ಲಿದೆ.  ವಿಂಡೀಸ್ ಎದುರಿನ ಸರಣಿ ಮುಗಿದ ನಂತರ ಪಾಕ್‌ ವಿರುದ್ಧದ ಸರಣಿ ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು