ಗುರುವಾರ , ಫೆಬ್ರವರಿ 25, 2021
19 °C

IND vs AUS ಟೆಸ್ಟ್ | ವೇಗವಾಗಿ ಸಾವಿರ ರನ್; ಧೋನಿ ದಾಖಲೆ ಮುರಿದ ಪಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್‌: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ರಿಷಭ್‌ ಪಂತ್‌ ಟೆಸ್ಟ್‌ನಲ್ಲಿ ಸಾವಿರ ರನ್‌ ಪೂರೈಸಿದರು. ಇದರೊಂದಿಗೆ ಭಾರತ ಪರ ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಕೆಟ್‌ಕೀಪರ್‌–ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಇದುವರೆಗೆ 16 ಟೆಸ್ಟ್‌ಗಳ 27 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಪಂತ್, ಎರಡು ಶತಕ ಹಾಗೂ ನಾಲ್ಕು ಅರ್ಧಶತಕ ಸಹಿತ 1,088 ರನ್ ಕಲೆ ಹಾಕಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 23 ರನ್ ಗಳಿಸಿ ಔಟಾಗಿದ್ದ ಪಂತ್‌, ಎರಡನೇ ಇನಿಂಗ್ಸ್‌ನಲ್ಲಿ 89 ರನ್‌ ಗಳಿಸಿ ಔಟಾಗದೆ ಉಳಿದರು. ಈ ಪಂದ್ಯಕ್ಕೂ ಮುನ್ನ ಅವರ ಖಾತೆಯಲ್ಲಿ 976 ರನ್‌ ಗಳಿದ್ದವು.

ಇದಕ್ಕೂ ಮೊದಲು ವೇಗವಾಗಿ ಸಾವಿರ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರಲ್ಲಿತ್ತು. ಧೊನಿ 32 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಫಾರೂಕ್‌ ಇಂಜಿನಿಯರ್‌ 36 ಇನಿಂಗ್ಸ್‌, ವೃದ್ಧಿಮಾನ್‌ ಸಹಾ 37 ಇನಿಂಗ್ಸ್‌ ಮತ್ತು ನಯನ್‌ ಮೋಂಗಿಯಾ 39 ಇನಿಂಗ್ಸ್‌ಗಳಲ್ಲಿ ಸಾವಿರ ರನ್ ಪೂರೈಸಿದ್ದರು.

ಭಾರತಕ್ಕೆ ಜಯ
ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 369 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಭಾರತ 336 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ 294 ರನ್‌ಗಳಿಗೆ ಸರ್ವಪತನ ಕಂಡಿದೆ.

ಹೀಗಾಗಿ 328 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ಇನ್ನೂ 3 ವಿಕೆಟ್‌ಗಳು ಬಾಕಿ ಇರುವಂತೆಯೇ 329 ರನ್‌ ಗಳಿಸಿ ಜಯದ ನಗೆ ಬೀರಿತು. 138 ಎಸೆತಗಳನ್ನು ಎದುರಿಸಿದ ಪಂತ್‌ 9 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 89 ರನ್‌ ಗಳಿಸಿ ಅಜೇಯವಾಗಿ ಉಳಿದರು. ಯುವ ಆಟಗಾರ ಶುಬಮನ್‌ ಗಿಲ್‌ (91) ಹಾಗೂ ಚೇತೇಶ್ವರ ಪೂಜಾರ (56) ಗೆಲುವಿಗೆ ಕೊಡುಗೆ ನೀಡಿದರು.

ಇದರೊಂದಿಗೆ ಭಾರತ ತಂಡ ಸತತ ಎರಡನೇ ಬಾರಿಗೆ ಕಾಂಗರೂ ನಾಡಿನಲ್ಲಿ ಟೆಸ್ಟ್‌ ಸರಣಿ ಗೆದ್ದ ಸಾಧನೆ ಮಾಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು