ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್‌ ಸರಣಿ | ಪ್ಯಾಟ್‌ಗೆ ಐದರ ಗೊಂಚಲು, ಇಂಗ್ಲೆಂಡ್ ಬ್ಯಾಟರ್‌ಗಳು ತತ್ತರ

ವೇಗದ ದಾಳಿಗೆ ಉರುಳಿದ ಇಂಗ್ಲೆಂಡ್‌ ತಂಡದ ಬ್ಯಾಟರ್‌ಗಳು
Last Updated 8 ಡಿಸೆಂಬರ್ 2021, 11:39 IST
ಅಕ್ಷರ ಗಾತ್ರ

ಬ್ರಿಸ್ಬೇನ್: ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಅಮೋಘ ದಾಳಿ ನಡೆಸಿದ ವೇಗದ ಬೌಲರ್‌ ಪ್ಯಾಟ್ ಕಮಿನ್ಸ್ ಅವರು ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿಆಸ್ಟ್ರೇಲಿಯಾಗೆ ಕನಸಿನ ಆರಂಭ ಒದಗಿಸಿದರು.

ಐದು ವಿಕೆಟ್‌ ಗಳಿಸಿದ ಕಮಿನ್ಸ್ ಸೇರಿದಂತೆ ಮೂವರು ವೇಗಿಗಳ ಪ್ರಬಲ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ ಸರಣಿಯ ಮೊದಲ ಪಂದ್ಯದ ಮೊದಲ ದಿನ 147 ರನ್‌ಗಳಿಗೆ ಪತನಗೊಂಡಿತು. ಮಳೆ ಕಾಡಿದ್ದರಿಂದ ಆತಿಥೇಯರಿಗೆ ಬ್ಯಾಟಿಂಗ್ ಆರಂಭಿಸಲು ಸಾಧ್ಯವಾಗಲಿಲ್ಲ.

ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹಸಿರು ತುಂಬಿದ ಪಿಚ್‌ನಲ್ಲಿ ಪುಟಿದೇಳುತ್ತಿದ್ದ ಚೆಂಡಿನ ಗತಿಯನ್ನು ಗಮನಿಸಲು ವಿಫಲರಾದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. 50.1 ಓವರ್‌ಗಳಲ್ಲಿ ಇನಿಂಗ್ಸ್‌ಗೆ ತೆರೆ ಎಳೆಯಲು ಆಸ್ಟ್ರೇಲಿಯಾ ಬೌಲರ್‌ಗಳು ಯಶಸ್ವಿಯಾದರು.

ಮೊದಲ ಪಂದ್ಯದಲ್ಲೇ ರೋರಿ ಬರ್ನ್ಸ್‌ ಅವರನ್ನು ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್ ಆಘಾತ ನೀಡಿದರು. ತಂಡದ ಮೊತ್ತ 11 ರನ್ ಆಗುವಷ್ಟರಲ್ಲಿ ಡೇವಿಡ್ ಮಲಾನ್ ಅವರನ್ನು ಜೋಶ್ ಹ್ಯಾಜಲ್‌ವುಡ್ ವಾಪಸ್ ಕಳುಹಿಸಿದರು. ಅದೇ ಮೊತ್ತಕ್ಕೆ ರೂಟ್ ಕೂಡ ಮರಳಿದರು. ಒಂಬತ್ತು ಎಸೆತೆ ಎದುರಿಸಿದ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಬೆನ್ ಸ್ಟೋಕ್ಸ್ ವಿಕೆಟ್ ಗಳಿಸುವ ಮೂಲಕ ಪ್ಯಾಟ್ ಕಮಿನ್ಸ್ ಈ ಪಂದ್ಯದಲ್ಲಿ ತಮ್ಮ ಮೊದಲ ಬಲಿ ಪಡೆದುಕೊಂಡರು. ಅರಂಭಿಕ ಬ್ಯಾಟರ್ ಹಸೀಬ್ ಹಮೀದ್ ಮತ್ತು ಆರನೇ ಕ್ರಮಾಂಕದ ಒಲಿ ಪೋಲ್ ಇನಿಂಗ್ಸ್‌ಗೆ ಚೇತರಿಕೆ ತುಂಬುವ ಭರವಸೆ ಮೂಡಿಸಿದರು. ಆದರೆ ಹಸೀಬ್ ವಿಕೆಟ್ ಉರುಳಿಸುವ ಮೂಲಕ 31 ರನ್‌ಗಳ ಜೊತೆಯಾಟವನ್ನು ಕಮಿನ್ಸ್ ಮುರಿದರು.

ಒಲಿ ಪೋಪ್ ಮತ್ತು ಜೋಸ್ ಬಟ್ಲರ್ ಸ್ವಲ್ಪ ಪ್ರತಿರೋಧ ತೋರಿದರು. ಬಟ್ಲರ್ ಆಕ್ರಮಣಕಾರಿ ಆಟದ ಮೂಲಕ ರಂಜಿಸಿದರು. ಮೊತ್ತ ಮೂರಂಕಿ ದಾಟಿ ಸ್ವಲ್ಪದರಲ್ಲೇ ಬಟ್ಲರ್ ಪದಾರ್ಪಣೆ ಮಡಿದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿದರು. ನಂತರ ವಿಕೆಟ್‌ಗಳು ಬೇಗನೇ ಉರುಳಿದವು. 24 ಎಸೆತಗಳಲ್ಲಿ 21 ರನ್ ಗಳಿಸಿದ ಕ್ರಿಸ್ ವೋಕ್ಸ್ ಕೊನೆಯದಾಗಿ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್, ಮೊದಲ ಇನಿಂಗ್ಸ್‌: 50.1 ಓವರ್‌ಗಳಲ್ಲಿ 147 (ಹಸೀಬ್ ಹಮೀದ್ 25, ಒಲಿ ಪೋಪ್ 35, ಜೋಸ್ ಬಟ್ಲರ್ 39, ಕ್ರಿಸ್ ವೋಕ್ಸ್ 21; ಮಿಚೆಲ್ ಸ್ಟಾರ್ಕ್ 35ಕ್ಕೆ2, ಜೋಶ್ ಹ್ಯಾಜಲ್‌ವುಡ್ 42ಕ್ಕೆ2, ಪ್ಯಾಟ್ ಕಮಿನ್ಸ್ 38ಕ್ಕೆ5, ಕ್ಯಾಮರಾನ್ ಗ್ರೀನ್ 6ಕ್ಕೆ1).

ಇಂಗ್ಲೆಂಡ್‌ಗೆ ಪೊಲೀಸ್‌ ತನಿಖೆಯ ಬಿಸಿ!
ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ಬ್ಯಾಟರ್‌ಗಳು ಸ್ಥಳೀಯ ಪೊಲೀಸರ ದಾಳಿಯನ್ನೂ ಎದುರಿಸಬೇಕಾಗಿದೆ!

ಮೊದಲ ಇನಿಂಗ್ಸ್‌ನಲ್ಲಿ 150 ರನ್ ಗಳಿಸುವುದಕ್ಕೂ ವಿಫಲವಾದ ಇಂಗ್ಲೆಂಡ್ ತಂಡವನ್ನು ಛೇಡಿಸಿರುವ ಕ್ವೀನ್ಸ್‌ಲ್ಯಾಂಡ್ ಪೊಲೀಸರು ’ಟೆಸ್ಟ್‌ ಬ್ಯಾಟಿಂಗ್ ಕ್ರಮಾಂಕವನ್ನು ಸುಮ್ಮನೇ ಸಾಗಹಾಕುವುದಕ್ಕಾಗಿ ಗುಂ‍‍ಪೊಂದು ಪ್ರಯತ್ನಿಸಿದ್ದು ಅದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

ಆಸ್ಟ್ರೇಲಿಯಾ ತಂಡದ ಆಟಗಾರರ ಹೆಸರನ್ನು ಬಳಸಿ ಸಂದೇಶಗಳನ್ನು ರವಾನಿಸುವ ಮೂಲಕವೂ ಪೊಲೀಸರು ಕ್ರಿಕೆಟ್ ಬಗ್ಗೆ ತಮಗಿರುವ ಕುತೂಹಲವನ್ನು ಬಹಿರಂಗಗೊಳಿಸಿದ್ದರು. ಟ್ರಾಫಿಕ್‌ ಮಾಹಿತಿಯನ್ನು ಅಪ್‌ಡೇಟ್ ಮಾಡುವಾಗ ನಾಯಕ ಪ್ಯಾಟ್ ಕಮಿನ್ಸ್ ಹೆಸರನ್ನು ಉಲ್ಲೇಖಿಸಿದ್ದ ಪೊಲೀಸರು ’ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಧಾವಿಸುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ‘ಕಮಿನ್ಸ್‌’ ಮತ್ತು ಗೋಯಿಂಗ್ಸ್‌ (ಬರುವಿಕೆ ಮತ್ತು ಹೋಗುವಿಕೆ) ಮೇಲೆ ಎಚ್ಚರವಿರಲಿ’ ಎಂದು ಹೇಳಿದ್ದರು.

ಗಾಬಾ ಕ್ರೀಡಾಂಗಣದ ಬಳಿ ಗ್ರೀನ್‌ ಲೈಟ್ಸ್‌ (ಕ್ಯಾಮರಾನ್ ಗ್ರೀನ್) ಮಾತ್ರ ಇವೆ ಎಂದು ಹೇಳಿದರೆ ನಾವು ಲಯನ್ (ನೇಥನ್ ಲಯನ್) ಎನಿಸಿಕೊಳ್ಳುವೆವು. ಆದ್ದರಿಂದ ನಾವು ವಾರ್ನರ್ (ಡೇವಿಡ್ ವಾರ್ನರ್) ಅಲ್ಲವೆಂದು ತಿಳಿದುಕೊಳ್ಳಬೇಡಿ’ ಎಂದು ಟ್ವೀಟ್ ಮಾಡಿಯೂ ಕ್ವೀನ್ಸ್‌ಲ್ಯಾಂಡ್ ರಾಜಧಾನಿ ಬ್ರಿಸ್ಬೇನ್‌ನ ಪೊಲೀಸರು ನಗೆಯುಕ್ಕಿಸಿದ್ದರು.

**
ಎಲ್ಲರೂ ಉತ್ತಮ ಲಯದಲ್ಲಿದ್ದೇವೆ. ಸರಣಿಯಲ್ಲಿ ಸರಿಯಾದ ಅರಂಭ ಕಂಡಿದ್ದೇವೆ. ಇಂಗ್ಲೆಂಡ್ ತಂಡವನ್ನು 150 ರನ್‌ಗಳ ಒಳಗೆ ನಿಯಂತ್ರಿಸಲು ಸಾಧ್ಯವಾದದ್ದು ಅತ್ಯಂತ ಖುಷಿಯ ಸಂಗತಿ.
-ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT