ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ಗಾಗಿ ಏಷ್ಯಾಕಪ್‌ ಟೂರ್ನಿ ಬಲಿಯಾಗದು ಎನ್ನುತ್ತಾರೆ ಪಿಸಿಬಿ ಸಿಇಒ

Last Updated 24 ಜೂನ್ 2020, 6:42 IST
ಅಕ್ಷರ ಗಾತ್ರ

ಕರಾಚಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕ್ರಿಕೆಟ್ ಟೂರ್ನಿಗಾಗಿ ಏಷ್ಯಾಕಪ್ ಟೂರ್ನಿಯನ್ನು ರದ್ದು ಮಾಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾಕಪ್ ಈ ವರ್ಷಾಂತ್ಯದೊಳಗೆ ನಡೆದೇ ನಡೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದೆ.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಂ ಖಾನ್ ‘ಶ್ರೀಲಂಕಾ ಅಥವಾ ಯುಎಇಯಲ್ಲಿ ಏಷ್ಯಾಕಪ್ ಟೂರ್ನಿಯ ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಸೆಪ್ಟೆಂಬರ್ ಎರಡರಂದು ಮರಳಲಿದ್ದು ಆ ತಿಂಗಳಲ್ಲಿ ಅಥವಾ ಅಕ್ಟೋಬರ್‌ನಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆ ಇದೆ’ ಎಂದರು.

‘ಸದ್ಯದ ಪರಿಸ್ಥಿತಿಯಲ್ಲಿಟೂರ್ನಿ ಆಯೋಜನೆಗೆ ಸಣ್ಣಪುಟ್ಟ ಅಡ್ಡಿಗಳಿದ್ದು ಅವುಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಶ್ರೀಲಂಕಾದಲ್ಲಿ ಕೊರೊನಾ ಹಾವಳಿ ಅಷ್ಟೊಂದು ತೀವ್ರವಾಗಿ ಇಲ್ಲ. ಆದ್ದರಿಂದ ಅಲ್ಲಿ ಪಂದ್ಯಗಳನ್ನು ಆಯೋಜಿಸಬಹುದಾಗಿದೆ. ಅಲ್ಲಿನ ಕ್ರಿಕೆಟ್ ಮಂಡಳಿ ಇದಕ್ಕೆ ಸಿದ್ಧ ಇಲ್ಲ ಎಂದಾದರೆ ಯುಎಇ ಸೂಕ್ತ ಸ್ಥಳ’ ಎಂದು ಖಾನ್ ಅಭಿಪ್ರಾಯಪಟ್ಟರು.

‘ಟೂರ್ನಿಯು ಪಾಕಿಸ್ತಾನದಲ್ಲಿ ನಡೆಯಬೇಕಾಗಿತ್ತು. ಆದರೆ ಪಿಸಿಬಿ ಈ ಅವಕಾಶವನ್ನು ಶ್ರೀಲಂಕಾಗೆ ನೀಡಿದ್ದು ಅಲ್ಲಿ ಭವಿಷ್ಯದಲ್ಲಿ ನಡೆಯುವ ಟೂರ್ನಿಯನ್ನು ತಾನು ಆಯೋಜಿಸುವುದಾಗಿ ಹೇಳಿದೆ. ಅಕ್ಟೋಬರ್–ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯು ಯೋಜನೆಯಂತೆ ನಡೆಯದೇ ಇದ್ದರೆ ಆ ಸಂದರ್ಭದಲ್ಲಿ ಬೇರೆ ಯಾವುದಾದರೂ ಸರಣಿಯನ್ನು ಆಯೋಜಿಸಲು ಪಿಸಿಬಿ ಚಿಂತನೆ ನಡೆಸಿದೆ’ ಎಂದೂ ಅವರು ತಿಳಿಸಿದರು.

‘ಡಿಸೆಂಬರ್‌ನಲ್ಲಿ ಪಾಕಿಸ್ತಾನ ತಂಡ ತವರಿನಲ್ಲಿ ಜಿಂಬಾಬ್ವೆ ಎದುರು ಸರಣಿಯಲ್ಲಿ ಪಾಲ್ಗೊಳ್ಳಲಿದ್ದು ನಂತರ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷದ ಜನವರಿ ಮತ್ತು ಫೆಬ್ರುವರಿಯಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ದಕ್ಷಿಣ ಆಫ್ರಿಕಾ ಸಜ್ಜಾಗಿದೆ. ಆ ತಂಡ ಇಲ್ಲಿ ಎರಡು ಅಥವಾ ಮೂರು ಟೆಸ್ಟ್ ಮತ್ತು ಕೆಲವು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ಕೊರೊನಾ ಹಾವಳಿಯಿಂದಾಗಿ ಸ್ಥಗಿತಗೊಂಡಿರುವ ಪಾಕಿಸ್ತಾನ ಸೂಪರ್ ಲೀಗ್‌ನ ಉಳಿದಿರುವ ಐದು ಪಂದ್ಯಗಳನ್ನು ನವೆಂಬರ್‌ನಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಖಾನ್ ವಿವರಿಸಿದರು.

ಮ್ಯಾಚ್ ಫಿಕ್ಸಿಂಗ್‌ ತಡೆಗೆ ಶಾಸನವಾಗಲಿ
ಪಾಕಿಸ್ತಾನದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವುದನ್ನು ಅಪರಾಧ ಎಂದು ಪರಿಗಣಿಸಲು ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆ ಕಿವಿಗೆ ಬೀಳುತ್ತಿದ್ದಂತೆ ಸಿಡಿಮಿಡಿಗೊಂಡ ವಾಸಿಂ ಖಾನ್ ‘ಕ್ರಿಕೆಟ್‌ ಭ್ರಷ್ಟಾಚಾರ ತಡೆಯಲು ಪೂರಕ ಶಾಸನ ರೂಪಿಸುವಂತೆ ಮಂಡಳಿಯ ಯಾರೊಬ್ಬರೂ ಇನ್ನು ಕೂಡ ಸರ್ಕಾರವನ್ನು ಒತ್ತಾಯಿಸದೇ ಇರುವುದು ಅಚ್ಚರಿಯ ವಿಷಯ’ ಎಂದರು.

‘ತಪ್ಪು ಎಸಗಿದರೆ ಜೈಲು ಶಿಕ್ಷೆ ಅಥವಾ ಕಾನೂನಿನಡಿ ದಂಡನೆ ಇದೆ ಎಂಬ ಭಯ ಇದ್ದರೆ ಮಾತ್ರ ಜನರು ಎಚ್ಚೆತ್ತುಕೊಳ್ಳುತ್ತಾರೆ. ಆದ್ದರಿಂದ ಶಾಸನ ರೂಪಿಸುವುದೊಂದೇ ಮ್ಯಾಚ್ ಫಿಕ್ಸಿಂಗ್‌ಗೆ ತಕ್ಕ ಶಾಸ್ತಿ’ ಎಂದು ಅವರು ಹೇಳಿದರು.

ಭಾರತದೊಂದಿಗಿನ ಕ್ರಿಕೆಟ್ ಸಂಬಂಧದ ಕುರಿತ ಪ್ರಶ್ನೆಗೆ ‘ಸದ್ಯೋಭವಿಷ್ಯದಲ್ಲಿ ಉಭಯ ದೇಶಗಳ ನಡುವೆ ಸರಣಿಗಳು ನಡೆಯುವ ಸಾಧ್ಯತೆಗಳೇ ಇಲ್ಲ. ಇದು ಬೇಸರದ ವಿಷಯ. ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಲು ಬಿಸಿಸಿಐಗೆ ಮನಸ್ಸು ಇದ್ದರೂ ಇರಬಹುದು. ಆದರೆ ಅವರು ಸರ್ಕಾರದಿಂದ ಅನುಮತಿ ಪಡೆಯಬೇಕಾಗಿದೆಯಲ್ಲ’ ಎಂದಾಗಿತ್ತು ಪಿಸಿಬಿ ಸಿಇಒ ನೀಡಿದ ಉತ್ತರ.

‘ಕೊರೊನಾ ಕಾಟದಿಂದಾಗಿ ಪಿಸಿಬಿ ವಾರ್ಷಿಕ ಬಜೆಟ್‌ನಲ್ಲಿ ಬದಲಾವಣೆ ಮಾಡಿದ್ದು ಸುಮಾರು ₹ 100 ಕೋಟಿ ಮೊತ್ತದ ವೆಚ್ಚ ಕಡಿತ ಮಾಡುವ ಯೋಜನೆ ಜಾರಿಯಲ್ಲಿದೆ. ಹೀಗಾಗಿ ಮೂರು ವರ್ಷಗಳ ಕ್ರಿಕೆಟ್ ಚಟುವಟಿಕೆ ಹಾಗೂ ವಾಣಿಜ್ಯ ವ್ಯವಹಾರಗಳಲ್ಲಿ ಬದಲಾವಣೆಯಾಗಲಿದೆ. ಎಲ್ಲದಕ್ಕೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು (ಐಸಿಸಿ) ಆಶ್ರಯಿಸುವುದನ್ನು ಬಿಟ್ಟು ಸ್ವಂತ ಕಾಲ ಮೇಲೆ ನಿಲ್ಲುವ ಪ್ರಯತ್ನ ನಡೆದಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT