ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹15 ಸಾವಿರದಿಂದ ಬಂಗಾರ ಖರೀದಿ!

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಚಂದು ನಾಯಕ ತಾಂಡಾದಲ್ಲಿ ಒಂದು ತಿಂಗಳ ಹೆಣ್ಣು ಶಿಶುವನ್ನು ಮಾರಾಟ ಮಾಡಿದ ತಾಯಿ ಅನುಸೂಯಾ ಆ ಹಣದಿಂದ 5 ಗ್ರಾಂ ಬಂಗಾರ ಖರೀದಿಸಿದ್ದಾರೆ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

‘ಶಿಶು ಮಾರಾಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಬಂಗಾರ ಖರೀದಿಸಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ’ ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ಹೇಳುತ್ತವೆ.

‘5 ಗ್ರಾಂ ಬಂಗಾರದಿಂದ ಗುಂಡು ಮಾಡಿಸಿಕೊಂಡು ಮಂಗಳಸೂತ್ರದಲ್ಲಿ ಹಾಕಿಕೊಂಡಿದ್ದಾರೆ. ಅದು ಎಲ್ಲಿದೆ ಎಂದು ಪ್ರಶ್ನಿಸಿದಾಗ, ಮನೆಯಲ್ಲಿ ಇಟ್ಟಿರುವುದಾಗಿ ಹೇಳಿದ್ದಾರೆ. ಅನುಸೂಯಾ ಬಂಗಾರ ಖರೀದಿಸಿರುವುದನ್ನು ಮಧ್ಯವರ್ತಿ ಸುವರ್ಣ ಕೂಡ ಒಪ್ಪಿದ್ದಾರೆ’ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.

‘ವಾಸಕ್ಕೆ ಸೂರಿಲ್ಲದೇ ಸರ್ಕಾರದ ಕಟ್ಟಡದಲ್ಲಿ ವಾಸಿಸುವ ಇವರು ಬಂಗಾರ ಖರೀದಿಸಿದ್ದು ಏಕೆ, ಬಂಗಾರ ಇವರು ಖರೀದಿಸಿದ್ದಾರೋ ಅಥವಾ ಮಗುವನ್ನು ಖರೀದಿಸಿದ ಆರೋಪಿ ಟಿ.ಪೌಲ್‌ ಕೊಟ್ಟಿದ್ದಾರೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ’ ಎಂಬುದು ಅಧಿಕಾರಿಗಳ ವಿವರಣೆ.

ಶೀಘ್ರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಸಕ ಡಾ.ಉಮೇಶ ಜಾಧವ್‌ ಅವರೊಂದಿಗೆ ಚರ್ಚಿಸಿ, ಶೀಘ್ರವೇ ತಾಂಡಾಕ್ಕೆ ಭೇಟಿ ನೀಡುತ್ತೇನೆ’ ಎಂದು ಅವರು ಹೇಳಿದರು.

ಕಠಿಣ ಕ್ರಮಕ್ಕೆ ಒತ್ತಾಯ: ‘ಶಿಶುವನ್ನು ಮಾರಾಟ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಡವರು ಎಂಬ ಕಾರಣಕ್ಕೆ ಸಹಾನುಭೂತಿ ತೋರಬಾರದು. ಮಗು ಖರೀದಿಸಿದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ, ಶಿಕ್ಷೆ ವಿಧಿಸಬೇಕು’ ಎಂದು ಸಾಮಾಜಿಕ ಜಾಗರಣ ಮಂಚ್‌ ಅಧ್ಯಕ್ಷ ರಮೇಶ ಯಾಕಾಪುರ ಒತ್ತಾಯಿಸಿದ್ದಾರೆ.

ಪೂರ್ಣಶಕ್ತಿ ಯೋಜನೆ

‘2011ರಲ್ಲಿ ಮಗು ಮಾರಾಟ ಪ್ರಕರಣ ನಡೆದಿತ್ತು. ಹೀಗಾಗಿ 2013ರಲ್ಲಿ ಸರ್ಕಾರ ಪೂರ್ಣಶಕ್ತಿ ಯೋಜನೆ ಜಾರಿಗೊಳಿಸಲಾಗಿದ್ದು, ಆ ಯೋಜನೆ 2017ರ ಸೆಪ್ಟೆಂಬರ್‌ಗೆ ಪೂರ್ಣಗೊಂಡಿದೆ. ಯೋಜನೆ ಜಾರಿಯಲ್ಲಿದ್ದಾಗ ಇಂತಹ ಪ್ರಕರಣ ನಡೆದಿಲ್ಲ’ ಎಂದು ಯೋಜನೆಯ ಸಂಯೋಜಕ ಶ್ರೀಕಾಂತ ಹೇಳುತ್ತಾರೆ.

ಚಿಂಚೋಳಿ ತಾಲ್ಲೂಕು ಚಂದು ನಾಯಕ ತಾಂಡಾದಲ್ಲಿ ಶಿಶು ಮಾರಾಟ ಮಾಡಿರುವ ಪ್ರಕರಣ ಗಮನಕ್ಕೆ ಬಂದಿದೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
-ಡಾ. ಶರಣಪ್ರಕಾಶ ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT