ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ಪಿಚ್ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ: ಅಜಿಂಕ್ಯ ರಹಾನೆ

ಭಾರತ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ತಿರುಗೇಟು
Last Updated 2 ಮಾರ್ಚ್ 2021, 16:05 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಭಾರತದ ಸ್ಪಿನ್‌ ಸ್ನೇಹಿ ಪಿಚ್‌ಗಳ ಕುರಿತ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಹೋದ ಎರಡೂ ಟೆಸ್ಟ್‌ಗಳಲ್ಲಿ ಒದಗಿಸಲಾಗಿದ್ದ ಪಿಚ್‌ಗಳು ಒಂದೇ ತೆರನಾಗಿದ್ದವು. ಆದರೆ ಹಗಲು ರಾತ್ರಿ ಪಂದ್ಯದಲ್ಲಿ ಬಳಸಲಾದ ಪಿಂಕ್ ಬಾಲ್‌ಕೆಂಪು ಚೆಂಡಿಗಿಂತಲ ಹೆಚ್ಚು ವೇಗ ಮತ್ತು ಚುರುಕಾದ ಚಲನೆ ಹೊಂದಿತ್ತು. ಎರಡೂ ಚೆಂಡುಗಳಲ್ಲಿ ಆಡುವ ಶೈಲಿಯು ತುಸು ಭಿನ್ನವಾಗುತ್ತದೆ. ಅದಕ್ಕೆ ನಾವು ಒಗ್ಗಿಕೊಳ್ಳಬೇಕು‘ ಎಂದರು.

ಅಹಮದಾಬಾದಿನ ಮೊಟೇರಾದ ಪಿಚ್‌ನಲ್ಲಿ ನಡೆದಿದ್ದ ಪಂದ್ಯವು ಎರಡೇ ದಿನಗಳಲ್ಲಿ ಮುಕ್ತಾಯವಾಗಿತ್ತು. ಭಾರತವು ಗೆದ್ದಿತ್ತು. ಸ್ಪಿನ್ ಬೌಲರ್‌ಗಳು ಮೆರೆದಿದ್ದರು. ಅದರಿಂದಾಗಿ ಟೆಸ್ಟ್ ಕ್ರಿಕೆಟ್ ಆಡಲು ಪಿಚ್ ಯೋಗ್ಯವಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು.

’ವಿದೇಶಗಳಲ್ಲಿರುವ ’ಒದ್ದೆ‘ ಪಿಚ್‌ಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅಲ್ಲಿಯ ಪಿಚ್‌ಗಳಲ್ಲಿ ಚೆಂಡು ಪುಟಿಯುವ ಪ್ರಮಾಣ, ಚಲಿಸುವ ವೇಗದ ಬಗ್ಗೆ ಚರ್ಚೆಗಳು ನಡೆಯುವುದಿಲ್ಲ. ಆದರೆ ಅವುಗಳನ್ನು ಆಡುವ ಕೌಶಲದ ಕುರಿತು ಮಾತುಗಳು ಕೇಳಿಬರುತ್ತವೆ. ಆದ್ದರಿಂದ ಮಾತನಾಡುವವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಬೇರೆ ದೇಶಗಳಲ್ಲಿ ಪಂದ್ಯದ ಮೊದಲ ದಿನ ಪಿಚ್‌ನಲ್ಲಿ ತೇವಾಂಶ ಹೆಚ್ಚಿರುತ್ತದೆ. ಹುಲ್ಲಿನ ಪ್ರಮಾಣವೂ ಹೆಚ್ಚಿರುತ್ತದೆ. ಅದರಿಂದಾಗಿ ಚೆಂಡಿನ ವೇಗ ಹೆಚ್ಚಾಗಿರುತ್ತದೆ. ಆದರೆ ಪಿಚ್‌ ತುಸು ಒಣಗಲು ಆರಂಭಿಸಿದಾಗ ಚೆಂಡು ಅನಿರೀಕ್ಷಿತವಾಗಿ ಪುಟಿಯುತ್ತದೆ. ಅಪಾಯಕಾರಿಯಾಗಿರುತ್ತದೆ. ಆಗ ನಾವೆಂದೂ ದೂರು ನೀಡಿಲ್ಲ ಮತ್ತು ಆ ಕುರಿತು ಮಾತನಾಡಿಲ್ಲ‘ ಎಂದು ರಹಾನೆ ವಿವರಿಸಿದರು.

’ಸ್ಪಿನ್ ಎಸೆತಗಳನ್ನು ನೇರ ಲೈನ್‌ನಲ್ಲಿ ಆಡಬೇಕು. ಚೆಂಡು ನಿರೀಕ್ಷೆಗಿಂತ ಹೆಚ್ಚು ತಿರುವು ಪಡೆಯುತ್ತಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ರೀತಿಯ ಎಸೆತಗಳನ್ನು ಆಡುವಾಗ ಪಾದಚಲನೆಯ ಕೌಶಲವೇ ಮುಖ್ಯವಾಗುತ್ತದೆ. ಅದನ್ನು ಅಭ್ಯಾಸ ಮಾಡಬೇಕು‘ ಎಂದು ರಹಾನೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT