ಮಂಗಳವಾರ, ಡಿಸೆಂಬರ್ 7, 2021
24 °C
ಚಾಂಪಿಯನ್ ವೆಸ್ಟ್ ಇಂಡೀಸ್‌ ಅಭಿಯಾನ ಮುಕ್ತಾಯ; ನಾಯಕ ಕೀರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್

DNP ವಾರ್ನರ್‌, ಮಾರ್ಷ್‌ ದಾಳಿ: ವೆಸ್ಟ್ ಇಂಡೀಸ್ ಕಂಗಾಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಮತ್ತು ಮೂರನೇ ಕ್ರಮಾಂಕದ ಮಿಚೆಲ್ ಮಾರ್ಷ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಸೂಪರ್ 12ರ ಒಂದನೇ ಗುಂಪಿನ ‍ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ವೆಸ್ಟ್ ಇಂಡೀಸ್ ಎದುರು ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಜಯ ಗಳಿಸಿ ಫೈನಲ್ ಪ್ರವೇಶದ ಹಾದಿಯನ್ನು ಸುಗಮ ಮಾಡಿಕೊಂಡಿತು. 158 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡ 22 ಎಸೆತ ಉಳಿದಿರುವಾಗಲೇ ದಡ ಸೇರಿತು. ನಾಯಕ ಆ್ಯರನ್ ಫಿಂಚ್ ಜೊತೆ ವಾರ್ನರ್ ಮೊದಲ ವಿಕೆಟ್‌ಗೆ 33 ರನ್ ಸೇರಿಸಿದ್ದರು.

ಫಿಂಚ್ ಔಟಾದ ನಂತರ ಭರ್ಜರಿ ಬ್ಯಾಟಿಂಗ್ ಮಾಡಿದ ವಾರ್ನರ್ ಮತ್ತು ಮಾರ್ಷ್ 124 ರನ್‌ಗಳ ಜೊತೆಯಾಟ ಆಡಿದರು. ಹೀಗಾಗಿ ಕೊನೆಯ ಪಂದ್ಯದಲ್ಲಿ ಜಯ ಗಳಿಸುವ ವೆಸ್ಟ್ ಇಂಡೀಸ್‌ ಕಸನು ಕಮರಿತು. ಐದು ಪಂದ್ಯಗಳಲ್ಲಿ ಏಕೈಕ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ನರು ವಿಶ್ವಕಪ್ ಅಭಿಯಾನ ಮುಗಿಸಿದರು. 

ಮಿಂಚಿದ ನಾಯಕ ಕೀರನ್ ಪೊಲಾರ್ಡ್

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ ಮೊದಲ ವಿಕೆಟ್‌ಗೆ 14 ಎಸೆತಗಳಲ್ಲಿ 30 ರನ್‌ಗಳನ್ನು ಸೇರಿಸಿದರು. ಎದುರಾಳಿ ತಂಡದ ಬೌಲರ್‌ಗಳ ದಾಳಿಗೆ ದಿಟ್ಟ ಉತ್ತರ ನೀಡಿದ ಇಬ್ಬರು ಬೌಂಡರಿಗಳೊಂದಿಗೆ ಮಿಂಚಿದರು. ಹೇಜಲ್‌ವುಡ್ ಓವರ್‌ನಲ್ಲಿ ಲೂಯಿಸ್ ಸತತ ಮೂರು ಬೌಂಡರಿಗಳನ್ನು ಸಿಡಿಸಿದರು. ಪ್ಯಾಟ್ ಕಮಿನ್ಸ್ ಎಸೆತ ಸೇರಿದಂತೆ ಗೇಲ್‌ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ ಅವರ ಎಸೆತದಲ್ಲೇ ಬೌಲ್ಡ್ ಆಗಿ ಮರಳಿದರು. ಇದು ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಗಿರುವ ಸಾಧ್ಯತೆ ಇದೆ. ಆದ್ದರಿಂದ ವಾಪಸಾಗುವಾಗ ತಂಡದ ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಕ್ರಿಸ್ ಗೇಲ್‌ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಎರಡು ಸಿಕ್ಸರ್‌ ಸಿಡಿಸಿದರೂ 15 ರನ ಗಳಿಸಿದ್ದಾಗ ವಿಕೆಟ್ ಕಳೆದುಕೊಂಡರು. ಅವರ ನಿರ್ಗಮನದ ನಂತರ ತಂಡ ಮತ್ತೆರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು.

ಆದರೆ ಲೂಯಿಸ್, ಶಿಮ್ರಾನ್ ಹೆಟ್ಮೆಯರ್ ಮತ್ತು ನಾಯಕ ಕೀರನ್ ಪೊಲಾರ್ಡ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡ ಏಳು ವಿಕೆಟ್‌ಗಳಿಗೆ 157 ರನ್ ಗಳಿಸಿತು. ಎವಿನ್ ಲೂಯಿಸ್ ಮತ್ತು ಶಿಮ್ರಾನ್ ಹೆಟ್ಮೆಯರ್ ನಾಲ್ಕನೇ ವಿಕೆಟ್‌ಗೆ 35 ರನ್ ಸೇರಿಸಿ ತಂಡದ ಮೊತ್ತವನ್ನು 70ಕ್ಕೆ ಏರಿಸಿದರು.

91ಕ್ಕೆ ಐದು ವಿಕೆಟ್ ಕಳೆದುಕೊಂಡಿದ್ದಾಗ ಪೊಲಾರ್ಡ್‌ ಸ್ಫೋಟಕ ಬ್ಯಾಟಿಂಗ್ ಮಾಡಿದರು. 31 ಎಸೆತಗಳಲ್ಲಿ 44 ರನ್ ಗಳಿಸಿದ ಅವರು ಡ್ವೇನ್ ಬ್ರಾವೊ ಜೊತೆ 35 ರನ್‌ಗಳನ್ನು ಸೇರಿಸಿದರು. ಕೊನೆಯ ಪಂದ್ಯ ಆಡಿದ ಬ್ರಾವೊ ಅವರಿಗೆ ಕೇವಲ 10 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮಿಚೆಲ್ ಸ್ಟಾರ್ಕ್‌ ಹಾಕಿದ ಇನಿಂಗ್ಸ್‌ನ  ಕೊನೆಯ ಓವರ್‌ನ ಕೊನೆಯ ಎರಡು ಎಸೆತಗಳನ್ನು ಆ್ಯಂಡ್ರೆ ರಸೆಲ್ ಸಿಕ್ಸರ್‌ಗೆ ಅಟ್ಟಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.