ಶುಕ್ರವಾರ, ನವೆಂಬರ್ 22, 2019
26 °C
ಮಾಸ್ಕ್‌ ಧರಿಸಿ ಅಭ್ಯಾಸ ನಡೆಸಿದ ಬಾಂಗ್ಲಾ ಆಟಗಾರರು

‘ಆಡಲು ಪಕ್ವವಲ್ಲ, ಆದರೆ ಜೀವಕ್ಕೆ ಹಾನಿಯಾಗದು’

Published:
Updated:
Prajavani

ನವದೆಹಲಿ (ಪಿಟಿಐ): ಭಾರತ ಮತ್ತು ಬಾಂಗ್ಲಾದೇಶ ನಡುವಣ ಟಿ–20 ಸರಣಿಯ ಮೊದಲ ಪಂದ್ಯಕ್ಕೆ ಎರಡೇ ದಿನ ಉಳಿದಿರುವಂತೆ ವಾಯುಮಾಲಿನ್ಯ ‘ಮಿತಿ ಮೀರಿದ ಮಟ್ಟ’ ತಲುಪಿದ್ದು, ಆರೋಗ್ಯ ತುರ್ತುಸ್ಥಿತಿ ಘೋಷಿಸಲಾಗಿದೆ.  ಇದರ ನಡುವೆಯೇ ಶುಕ್ರವಾರ ಎರಡೂ ತಂಡಗಳು ಅಭ್ಯಾಸ ನಡೆಸಿದವು. ಮಾತ್ರವಲ್ಲ, ಇಂಥ ಸ್ಥಿತಿಯಲ್ಲೂ ಆಡುವುದಾಗಿ ಸಂಕೇತ ನೀಡಿದವು.

ಫಿರೋಜ್‌ ಷಾ ಕೋಟ್ಲಾದ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರವಾಸಿ ತಂಡದ ಆಟಗಾರರಾದ ಅಲ್‌ ಅಮಿನ್‌ ಹೊಸೇನ್‌, ಮಹಮದುಲ್ಲಾ, ಸೌಮ್ಯ ಸರ್ಕಾರ್‌ ಜೊತೆ ಸ್ಪಿನ್‌ ಕನ್ಸಲ್ಟೆಂಟ್ ಡೇನಿಯಲ್‌ ವೆಟ್ಟೋರಿ ಶುಕ್ರವಾರ ಬೆಳಿಗ್ಗೆ ಮಾಸ್ಕ್‌ ಧರಿಸಿ ತರಬೇತಿಯಲ್ಲಿ ತೊಡಗಿದ್ದು ಕಂಡುಬಂತು. 

‘ಇಂಥದ್ದನ್ನು (ವಾಯು ಮಾಲಿನ್ಯ) ಯಾರೂ ಬಯಸುವುದಿಲ್ಲ. ಆದರೆ ಇದರ ಬಗ್ಗೆ ಯಾರೇನೂ ಮಾಡಲೂ ಆಗುವುದಿಲ್ಲ’ ಎಂದು ಬಾಂಗ್ಲಾದೇಶ ತಂಡದ ಮುಖ್ಯ ಕೋಚ್‌ ರಸೆಲ್‌ ಡೊಮಿಂಗೊ ಹೇಳಿದರು.

‘ನಾವು ಇದಕ್ಕೆ ಸಜ್ಜಾಗುವಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಎದುರಿಸಬೇಕು. ಕೆಲವರಿಗೆ ಕಣ್ಣುರಿ ಅನುಭವವಾಗಬಹುದು. ಗಂಟಲು ಕೆರೆತ ಕಾಣಿಸಿಕೊಳ್ಳಬಹುದು. ಆದರೆ ಮಾಲಿನ್ಯ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿಲ್ಲ’ ಎಂದೂ ಹೇಳಿದರು.

ಪರಿಸ್ಥಿತಿ ಕೊಂಚ ಸುಧಾರಿಸಿದಂತೆ ಕಂಡಮೇಲೆ ಆಟಗಾರರು ಮಾಸ್ಕ್‌ ತೆಗೆದರು. ಆದರೆ ವೆಟೋರಿ ಮತ್ತು ಪ್ರವಾಸಿ ತಂಡದಲ್ಲಿರುವ ವಿದೇಶಿ ನೆರವು ಸಿಬ್ಬಂದಿ ಮುಖಗವಸಿನಲ್ಲೇ ಕಾಣಿಸಿಕೊಂಡರು.

‘ಶ್ರೀಲಂಕಾ ತಂಡದವರೂ ಹಿಂದೆ ಇಲ್ಲಿ ಇಂಥದ್ದೇ ಪರಿಸ್ಥಿತಿ ಎದುರಿಸಿದ್ದಾರೆ. ಬಾಂಗ್ಲಾದೇಶದಲ್ಲೂ ಸ್ವಲ್ಪ ಮಟ್ಟಿಗೆ ವಾಯು ಮಾಲಿನ್ಯದ ಸಮಸ್ಯೆಯಿದೆ. ಹೀಗಾಗಿ ಇದನ್ನು ದೊಡ್ಡ ಆಘಾತದ ರೀತಿ ಭಾವಿಸಿಲ್ಲ. ಆಟಗಾರರು ಆಟದ ಕಡೆ ಗಮನಹರಿಸುತ್ತಿದ್ದಾರೆ. ಮಾಲಿನ್ಯದ ಬಗ್ಗೆ ದೂರು ಹೇಳಿಕೊಂಡಿಲ್ಲ’ ಎಂದು ಡೊಮಿಂಗೊ ಸುದ್ದಿಗಾರರಿಗೆ ತಿಳಿಸಿದರು.

 ಇದೇ ವೇಳೆ, ದೆಹಲಿ–ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಶುಕ್ರವಾರ ವಾಯುಮಾಲಿನ್ಯ ‘ಮಿತಿ ಮೀರಿದ ಮಟ್ಟ’ ತಲುಪಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಭಾರತದ ಬ್ಯಾಟಿಂಗ್ ಕೋಚ್‌ ವಿಕ್ರಂ ರಾಥೋರ್‌ ಪ್ರತಿಕ್ರಿಯೆ ಕೇಳಿದಾಗ– ‘ನೀವು ಸಂಬಂಧಪಡದ ವ್ಯಕ್ತಿಗೆ ಪ್ರಶ್ನೆ ಕೇಳುತ್ತಿದ್ದೀರಿ. ನಾನು ಕ್ರಿಕೆಟ್‌ ಆಡಿದ್ದೇ ಉತ್ತರ ಭಾರತದಲ್ಲಿ (ಪಂಜಾಬ್‌ ಮತ್ತು ಹಿಮಾಚಲ ಪ್ರದೇಶ). ನನಗೇನೂ  ವಿಶೇಷ ಕಾಣುತ್ತಿಲ್ಲ. ಮಾಲಿನ್ಯವಿರುವುದು ನಿಜ. ಆದರೆ ಪಂದ್ಯ ನಿಗದಿಯಾಗಿದೆ. ನಾವು ಆಡಬೇಕಷ್ಟೇ’ ಎಂದು ಉತ್ತರಿಸಿದರು.

ದೀಪಾವಳಿ ನಂತರ ಈ ಭಾಗದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ವೇಳಾಪಟ್ಟಿ ನಿಗದಿ ಮಾಡಿದ ರೀತಿ ಪ್ರಶ್ನೆ ಏಳುವಂತೆ ಮಾಡಿದೆ.

ಆದರೆ, ‘ಕಡೆ ಗಳಿಗೆಯಲ್ಲಿ ಪಂದ್ಯ ರದ್ದು ಮಾಡಲು ಆಗುವುದಿಲ್ಲ. ಆದರೆ ಭವಿಷ್ಯದಲ್ಲಿ ವೇಳಾಪಟ್ಟಿ ಸಿದ್ಧಪಡಿಸುವಾಗ ಇಂಥ ವಿಷಯ ಗಮನದಲ್ಲಿಡಲಾಗವುದು’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಗುರುವಾರ ಹೇಳಿದ್ದರು.

 

ಪ್ರತಿಕ್ರಿಯಿಸಿ (+)