ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವೆದ ಶೂ ಚಿತ್ರ ಟ್ವೀಟ್‌ ಮಾಡಿದ ಜಿಂಬಾಬ್ವೆ ಕ್ರಿಕೆಟಿಗ

ಪ್ರಾಯೋಜಕರಿಲ್ಲದೇ ಕಂಗೆಟ್ಟ ತಂಡ
Last Updated 23 ಮೇ 2021, 12:20 IST
ಅಕ್ಷರ ಗಾತ್ರ

ಹರಾರೆ: ಹಣಕಾಸಿನ ತೊಂದರೆಯಿಂದ ಜಿಂಬಾಬ್ವೆ ಕ್ರಿಕೆಟಿಗರು ಕಂಗೆಟ್ಟಿದ್ದಾರೆ. ರಾಷ್ಟ್ರೀಯ ತಂಡದ ಬ್ಯಾಟ್ಸ್‌ಮನ್‌ ರಯಾನ್‌ ಬರ್ಲ್‌ ಅವರು, ರಾಷ್ಟ್ರೀಯ ತಂಡಕ್ಕೆ ಪ್ರಾಯೋಜಕರು ಬೇಕೆಂದು ವಿನಂತಿ ಮಾಡಿದ್ದು, ತಮ್ಮ ದುಸ್ಥಿತಿಯನ್ನು ಎತ್ತಿತೋರಿಸಲು ಪೂರ್ಣ ಸವೆದುಹೋದ ಶೂಗಳ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.

ಮಧ್ಯಮ ಕ್ರಮಾಂಕದ ಎಡಗೈ ಆಟಗಾರ ಬರ್ಲ್‌, ರಾಷ್ಟ್ರೀಯ ತಂಡದ ಪರ ಮೂರು ಟೆಸ್ಟ್‌ಗಳನ್ನು ಆಡಿದ್ದಾರೆ. ಇದರ ಜೊತೆ ಅವರು 18 ಏಕದಿನ, 25 ಟಿ–20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಟ್ವೀಟ್‌ನಲ್ಲಿ 27 ವರ್ಷದ ಬಲ್‌ ಅವರು, ಸವೆದಿರುವ ಶೂ ಜೊತೆಗೆ ಅಂಟು, ಅಂಟುಹಾಕಿದ ಒತ್ತಲು ಬಳಸುವ ಪರಿಕರದ ಚಿತ್ರವನ್ನೂ ಹಾಕಿದ್ದಾರೆ.

‘ಪ್ರತಿ ಸರಣಿಯ ನಂತರ ಮತ್ತೆ ಶೂಗಳಿಗೆ ಅಂಟು ಹಾಕುವ ದುಸ್ಥಿತಿ ತಪ್ಪಿಸಲು ನಮಗೆ ಪ್ರಾಯೋಜಕರು ಸಿಗುವ ಚಾನ್ಸ್‌ ಏನಾದರೂ ಇದೆಯೇ’ ಎಂದು ಅವರು ದೈನ್ಯದಿಂದ ಕೇಳಿದ್ದಾರೆ. ಕೆಲವು ದೇಶಗಳ ಕ್ರಿಕೆಟ್‌ ಮಂಡಳಿಗಳು ಕೇವಲ ಪ್ರಾಯೋಜಕತ್ವ ಒಂದರಿಂದಲೇ ಕೋಟಿಗಟ್ಟಲೆ ಹಣ ಗಳಿಸುವ ಸಂದರ್ಭದಲ್ಲಿ ಅವರು ಈ ಟ್ವೀಟ್‌ ಪೋಸ್ಟ್‌ ಮಾಡಿದ್ದಾರೆ.

ಜಿಂಬಾಬ್ವೆ 1983ರ ವಿಶ್ವಕಪ್‌ಗೆ ಸ್ವಲ್ಪ ಮೊದಲು ಏಕದಿನ ಪಂದ್ಯ ಆಡಲು ಮತ್ತು 1992ರಲ್ಲಿ ಟೆಸ್ಟ್‌ ಆಡುವ ತಂಡವಾಗಿ ಮಾನ್ಯತೆ ಪಡೆದಿತ್ತು. ಆದರೆ ದೀರ್ಘಕಾಲದಿಂದ ಆ ದೇಶದ ಕ್ರಿಕೆಟ್‌ ಮಂಡಳಿ ಆರ್ಥಿಕ ಅಡಚಣೆಯಿಂದ ತಾಪತ್ರಯದಲ್ಲಿದೆ.

ತಂಡದಲ್ಲಿ ಈ ಹಿಂದೆ, ಫ್ಲವರ್‌ ಸೋದರರು (ಆ್ಯಂಡಿ ಮತ್ತು ಗ್ರ್ಯಾಂಟ್‌), ಆಲಿಸ್ಟರ್‌ ಕ್ಯಾಂಪ್‌ಬೆಲ್‌, ಡೇವ್ ಹಾಟನ್‌, ಹೀತ್‌ ಸ್ಟ್ರೀಕ್‌ ಮತ್ತು ನೀಲ್‌ ಜಾನ್ಸನ್‌ ಮೊದಲಾದ ಹೆಸರಾಂತ ಆಟಗಾರರಿದ್ದು, ಆಫ್ರಿಕ ಖಂಡದ ಈ ರಾಷ್ಟ್ರ ತಕ್ಕಮಟ್ಟಿಗೆ ಯಶಸ್ಸನ್ನು ಕಂಡಿತ್ತು.

ಸರ್ಕಾರದ ಹಸ್ತಕ್ಷೇಪದಿಂದಾಗಿ, ಐಸಿಸಿ 2019ರಲ್ಲಿ ಜಿಂಬಾಬ್ವೆಯ ಕ್ರಿಕೆಟ್‌ ಮಂಡಳಿಯನ್ನು ಅಮಾನತಿನಲ್ಲಿರಿಸಿತ್ತು. ಕಳೆದ ವರ್ಷ ಟಿ–20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಆಡುವುದಕ್ಕೂ ಅವಕಾಶ ಕೊಟ್ಟಿರಲಿಲ್ಲ. ಆದರೆ ನಂತರ ಈ ನಿರ್ಬಂಧ ತೆರವು ಮಾಡಲಾಯಿತು.

ಪಾಕಿಸ್ತಾನ ತಂಡ ಇತ್ತೀಚಿನ ಜಿಂಬಾಬ್ವೆ ಪ್ರವಾಸದಲ್ಲಿ ಟೆಸ್ಟ್‌ ಸರಣಿಯನ್ನು 2–0 ಯಿಂದ ಕ್ಲೀನ್‌ ಸ್ವೀಪ್‌ ಮಾಡಿತ್ತು. ಏಕದಿನ ಸರಣಿಯನ್ನು 2–1 ರಿಂದ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT