ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರಿಗಾಗಿ ರೈಲ್ವೇಸ್‌ ‘ಪಯಣ’ದ ಆಯ್ಕೆ!

ರೈಲ್ವೇಸ್ ತಂಡದಲ್ಲಿರುವ ಕನ್ನಡಿಗ ಟಿ. ಪ್ರದೀಪ್ ಮನದಾಳ
Last Updated 28 ಜನವರಿ 2020, 19:59 IST
ಅಕ್ಷರ ಗಾತ್ರ

ನವದೆಹಲಿ: ಕರ್ನೇಲ್‌ ಸಿಂಗ್ ಕ್ರೀಡಾಂಗಣದಲ್ಲಿ ಎರಡು ದಿನಗಳಿಂದ ರಣಜಿ ಪಂದ್ಯದ ಬಹುತೇಕ ಅವಧಿಯನ್ನು ಕೆಟ್ಟ ಹವಾಮಾನವು ನುಂಗಿತು. ಆದರೆ ಈ ಸಮಯವನ್ನು ತನ್ನ ತವರಿನ ಗೆಳೆಯರೊಂದಿಗೆ ಕಳೆಯಲು ಬಳಸಿಕೊಂಡವರು ರೈಲ್ವೇ ಸ್ ತಂಡದಲ್ಲಿರುವ ಕನ್ನಡಿಗ ಟಿ. ಪ್ರದೀಪ್.

ಎರಡು ವರ್ಷಗಳ ಹಿಂದೆ ಕರ್ನಾಟಕ ತಂಡಕ್ಕೆ ಆಡಿದ್ದ ಕರ್ನಾಟಕದ ಪ್ರದೀಪ್ ಈ ಋತುವಿನಲ್ಲಿ ರೈಲ್ವೆ ಉದ್ಯೋಗಿಯಾಗಿದ್ದಾರೆ. ಆ ತಂಡದ ಪ್ರಮುಖ ಮಧ್ಯಮವೇಗಿಯೂ ಆಗಿದ್ದಾರೆ. ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಆಡುವ ಪುಳಕದ ಜೊತೆಗೆ ಹಳೆಯ ಗೆಳೆಯರೊಂದಿಗೆ ಕನ್ನಡದಲ್ಲಿ ಹರಟೆ ಹೊಡೆಯುವ ಅವಕಾಶವನ್ನೂ ಬಳಸಿಕೊಳ್ಳುತ್ತಿದ್ಧಾರೆ.

ಆದರೆ ತವರಿನ ರಾಜ್ಯವನ್ನು ತೊರೆದು ರೈಲ್ವೆ ತಂಡವನ್ನು ಸೇರಲು ಪ್ರದೀಪ್‌ಗೆ ಕೌಟುಂಬಿಕ ಕಾರಣವೂ ಇತ್ತು ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಯಿತು.

‘ನನ್ನ ತಂದೆ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು ನಿವೃತ್ತಿಯ ಅಂಚಿನಲ್ಲಿದ್ದರು. ಸಹೋದರನಿಗೆ ಉದ್ಯೋಗವಿರಲಿಲ್ಲ. ಆದ್ದರಿಂದ ನಾನು ನೌಕರಿ ಸೇರುವುದು ಅನಿವಾರ್ಯವಾಗಿತ್ತು. ಅದೇ ಸಂದರ್ಭದಲ್ಲಿ ಬೆನ್ನಿನ ಗಾಯದಿಂದ ಬಳಲಿದ್ದೆ. ಚೇತರಿಸಿಕೊಂಡ ಮೇಲೆ ಎಲ್ಲ ಆಯಾಮಗಳಿಂದಲೂ ಯೋಚನೆ ಮಾಡಿ ರೈಲ್ವೆ ಇಲಾಖೆಯ ಪ್ರಸ್ತಾವ ಒಪ್ಪಿಕೊಂಡೆ’ ಎಂದು ಪ್ರದೀಪ್ ಹೇಳುತ್ತಾರೆ.

2017ರಲ್ಲಿ ಪ್ರದೀಪ್ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಪದಾರ್ಪಣೆ ಮಾಡಿದ್ದರು.

‘ಮಧ್ಯಮವೇಗಿಗಳಿಗೆ ಸದಾ ಗಾಯದ ಸಮಸ್ಯೆ ಕಾಡುತ್ತದೆ. ಬ್ಯಾಂಕ್‌ಗಳಲ್ಲಿಯೂ ಈಗ ನೌಕರಿಗಳನ್ನು ನೀಡುತ್ತಿಲ್ಲ. ಆದ್ದರಿಂದ ರೈಲ್ವೆಯಲ್ಲಿ ಉದ್ಯೋಗಕ್ಕೆ ಒಪ್ಪಿಕೊಂಡೆ. ಮಧ್ಯಮವರ್ಗದ ಕುಟುಂಬ ನಮ್ಮದು. ಆರ್ಥಿಕವಾಗಿ ಸುಭದ್ರತೆಯ ಅಗತ್ಯವಿತ್ತು’ ಎಂದು ಹೇಳಿದರು.16ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದ ಪ್ರದೀಪ್, 24ನೇ ವಯಸ್ಸಿನಲ್ಲಿ ಕರ್ನಾಟಕ ತಂಡದ ಹೊಸ್ತಿಲಿಗೆ ಬಂದು ನಿಂತಿದ್ದು ಕೂಡ ಸಾಧನೆಯೇ ಸರಿ. ಪ್ರದೀಪ್ ದೇಶಿ ಕ್ರಿಕೆಟ್‌ಗೆ ಕಾಲಿಟ್ಟಾಗ ಕರ್ನಾಟಕದ ತಂಡದಲ್ಲಿ ಅನುಭವಿ ಮಧ್ಯಮವೇಗಿಗಳ ದಂಡು ಇತ್ತು.ಆರ್. ವಿನಯಕುಮಾರ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ವಿ. ಕೌಶಿಕ್ ಅವರಿದ್ದರು. ಆದ್ದರಿಂದ ರಣಜಿ ತಂಡದಲ್ಲಿ ಸ್ಥಾನ ಪಡೆಯುವುದು ಕೂಡ ಸುಲಭವಾಗಿರಲಿಲ್ಲ.‘ಕರ್ನಾಟಕ ತಂಡದಲ್ಲಿಯೇ ಆಡಬೇಕು ಎಂದು ಕಾದಿದ್ದರೆ ಹೆಚ್ಚು ಅವಕಾಶಗಳು ಸಿಗುವುದು ಕಷ್ಟ ಎಂಬುದು ನನಗೆ ಗೊತ್ತಿತ್ತು. ಈ ವಯಸ್ಸಿನಲ್ಲಿ ಕಾಯುತ್ತ ಕುಳಿತರೆ ಸಮಯ ವ್ಯರ್ಥವಾಗುತ್ತಿತ್ತು. ಇಲ್ಲಿ ಇಡೀ ಋತುವಿನಲ್ಲಿ ಆಡುವ ಅವಕಾಶ ಖಚಿತವಾಗಿದೆ. ನನ್ನ ಹಣಕಾಸಿನ ಅಗತ್ಯದ ಜೊತೆಗೆ ಕ್ರಿಕೆಟ್‌ ನತ್ತಲೂ ಗಮನ ನೀಡುವುದು ಅವಶ್ಯಕ. ಆದ್ದರಿಂದ ಇಲ್ಲಿಗೆ ಬಂದು’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಅವರಿಂದಾಗಿ ಈ ಋತುವಿನಲ್ಲಿ ರೈಲ್ವೆ ತಂಡದ ಬೌಲಿಂಗ್ ವಿಭಾಗವು ಬಲಿಷ್ಠಗೊಂಡಿದೆ. ಆರು ಪಂದ್ಯಗಳಲ್ಲಿ ಅವರು ಒಟ್ಟು 21 ವಿಕೆಟ್‌ಗಳನ್ನು ಗಳಿಸಿದ್ದಾರೆ. ಮುಂಬೈ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 37ಕ್ಕೆ6 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 46ಕ್ಕೆ2 ವಿಕೆಟ್ ಗಳಿಸಿದ್ದರು. ಆ ಪಂದ್ಯದಲ್ಲಿ ರೈಲ್ವೇಸ್ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT