ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ಮಾಲಾ - ರಾಜ್ಯದ ಪ್ರಥಮ ಕ್ರಿಕೆಟ್ ವಿಡಿಯೊ ವಿಶ್ಲೇಷಕಿ

Last Updated 1 ಜನವರಿ 2023, 5:03 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****


ಹೆಸರು: ಮಾಲಾ ರಂಗಸ್ವಾಮಿ

ವೃತ್ತಿ: ಬಿಸಿಸಿಐ ವಿಡಿಯೊ ವಿಶ್ಲೇಷಕಿ

ಸಾಧನೆ: ಕರ್ನಾಟಕದಿಂದ ಈ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ

‌ಬೆಂಗಳೂರು ಹೊರವಲಯದ ಆಲೂರಿನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ರಣಜಿ ಪಂದ್ಯ ನಡೆದಿತ್ತು. ಇದ್ದಕ್ಕಿದ್ದಂತೆ ಮಳೆ ಆರಂಭವಾಯಿತು. ಬೌಂಡರಿಲೈನ್ ಬಳಿ ಇದ್ದ ಕಂಬವನ್ನು ಸರಸರನೇ ಹತ್ತಿದ ಆ ಮಹಿಳೆ ಅಲ್ಲಿದ್ದ ಕ್ಯಾಮೆರಾವನ್ನು ಎತ್ತಿಕೊಂಡು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಕೆಳಗಿಳಿದರು. ಅಷ್ಟರಲ್ಲಿ ಅವರು ಪೂರ್ತಿ ನೆನೆದು ಹೋಗಿದ್ದರು. ಆದರೆ ಅದನ್ನು ಲೆಕ್ಕಿಸದೇ ಕ್ಯಾಮೆರಾವನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿ ನಿಟ್ಟುಸಿರು ಬಿಟ್ಟರು.

ಹೌದು; ಅವರೇ ಮಾಲಾ ರಂಗಸ್ವಾಮಿ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ವಿಡಿಯೋ ವಿಶ್ಲೇಷಕಿ. ಕರ್ನಾಟಕದಿಂದ ಈ ಕಾರ್ಯಕ್ಕೆ ನೇಮಕವಾದ ಪ್ರಪ್ರಥಮ ಮಹಿಳೆ. ಬಿಸಿಸಿಐ ಪ್ರತಿಯೊಂದು ಪಂದ್ಯವನ್ನು ವಿಡಿಯೊ ದಾಖಲೆ ಮಾಡಿಕೊಳ್ಳುತ್ತದೆ. ಆ ಮೂಲಕ ಅಂಪೈರ್ ನಿರ್ಣಯಗಳ ವಿಶ್ಲೇಷಣೆ ಮತ್ತು ಆಟಗಾರರ ತರಬೇತಿ ಕಾರ್ಯಗಳಿಗೆ ಬಳಸುತ್ತದೆ. ಅಂತಹ ಮಹತ್ವದ ಕಾರ್ಯದಲ್ಲಿ ಮಾಲಾ ಪರಿಣತಿ ಗಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ ಪದವೀಧರೆಯಾಗಿರುವ ಮಾಲಾ ಅವರ ವೃತ್ತಿ ಮತ್ತು ಪ್ರವೃತ್ತಿಗಳು ಕ್ರಿಕೆಟ್.

ರಣಜಿ ಪಂದ್ಯಗಳು, ಬಿಸಿಸಿಐ ಟೂರ್ನಿಗಳಲ್ಲಿ ಅವರು ವಿಡಿಯೊ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿ ಮೂರು ವರ್ಷಗಳಾಗಿವೆ. 2023ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡ 19 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿಯೂ ಭಾರತ ತಂಡದ ವಿಡಿಯೊ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎನ್‌ಸಿಎ, ಕರ್ನಾಟಕ 19 ವರ್ಷದೊಳಗಿನವರ ಮಹಿಳೆಯರ ಮತ್ತು ಸೀನಿಯರ್ ತಂಡಗಳಿಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಸೂಕ್ಷ್ಮ ಮತ್ತು ಶ್ರಮದ ಕಾರ್ಯವಾಗಿರುವ ವಿಡಿಯೊ ಅನಾಲಿಸ್ಟ್ ಕಾರ್ಯವನ್ನು ಮಹಿಳೆಯರೂ ಮಾಡಬಹುದು ಎಂದು ತೋರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT