ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಣಜಿ ಟ್ರೋಫಿ ಎಂಬ ಚಿಮ್ಮುಹಲಗೆ

Last Updated 7 ಫೆಬ್ರುವರಿ 2023, 19:00 IST
ಅಕ್ಷರ ಗಾತ್ರ

ಕ್ರಿಕೆಟ್‌ ಆಟಗಾರರ ಪಾಲಿಗೆ ರಣಜಿ ಟ್ರೋಫಿ ಟೂರ್ನಿ ಕನಸುಗಳ ಕಾರ್ಖಾನೆ. ಟಿ20 ಕ್ರಿಕೆಟ್ ಭರಾಟೆಯಲ್ಲಿಯೂ ತನ್ನ ಗಾಂಭಿರ್ಯ ಉಳಿಸಿಕೊಂಡಿದೆ. ಆಟಗಾರರ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೌಶಲಗಳಿಗೆ ಸಾಣೆ ಹಿಡಿಯುತ್ತದೆ. ರಾಷ್ಟ್ರೀಯ ತಂಡ ಪ್ರವೇಶಿಸಲು ಹಲವು ಆಟಗಾರರಿಗೆ ಈಗಲೂ ಇದುವೇ ವೇದಿಕೆ

-----------------

ಸೌರಾಷ್ಟ್ರದ ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ 12 ವರ್ಷಗಳ ನಂತರ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದರು. ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಮಿಂಚಿದರು. ಅದರಿಂದಾಗಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶವನ್ನೂ ಗಿಟ್ಟಿಸಿಕೊಂಡರು.

***

ಸೂರ್ಯಕುಮಾರ್‌ ಯಾದವ್‌ಗೆ 30 ವರ್ಷ ದಾಟಿತು. ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸುವ ಸಮಯ ಮೀರಿತು ಎಂದು ಹಲವರು ವಿಶ್ಲೇಷಣೆ ನಡೆಸಿದ್ದರು. ಆದರೆ, ಅವರ ಅನಿಸಿಕೆಗಳು ಹುಸಿಯಾದವು. ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಅವಕಾಶ ಗಿಟ್ಟಿಸಿದರು. ಒಂದೇ ವರ್ಷದಲ್ಲಿ ಐಸಿಸಿ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾದರು. ಇದೀಗ ಟೆಸ್ಟ್ ತಂಡದಲ್ಲಿ ಆಡಲು ಸಿದ್ಧರಾಗಿದ್ದಾರೆ.

***

ಕ್ರಿಕೆಟ್ ಲೋಕದ ನವತಾರೆ ಶುಭಮನ್ ಗಿಲ್. ಪಂಜಾಬಿನ ಈ ಹುಡುಗನ ಬ್ಯಾಟ್‌ನಿಂದ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ, ಶತಕಗಳು ಹರಿಯುತ್ತಿವೆ. ಟೆಸ್ಟ್‌ ತಂಡದಲ್ಲಿಯೂ ತಮ್ಮ ಛಾಪು ಮೂಡಿಸಿ ಆರಂಭಿಕ ಆಟಗಾರನಾಗಿದ್ದಾರೆ. 23ರ ಹರೆಯದಲ್ಲಿಯೇ ಮೂರು ಮಾದರಿಗಳಲ್ಲಿಯೂ ಶತಕ ಹೊಡೆದ ಸಾಧನೆ ಮಾಡಿದ್ದಾರೆ. ಹೊಸ ಚೆಂಡಿನ ಹೊಳಪು ಮತ್ತು ವೇಗಕ್ಕೆ ಎದೆಗೊಟ್ಟು ನಿಲ್ಲುವ ಹುಡುಗ.

ಟಿ20 ಕ್ರಿಕೆಟ್ ಅಬ್ಬರದಲ್ಲಿಯೂ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ತನ್ನ ಸೊಬಗು ಹಾಗೂ ತಾಕತ್ತು ಉಳಿಸಿಕೊಂಡಿದೆ ಎಂಬುದಕ್ಕೆ ಈ ಮೂವರು ಉತ್ತಮ ನಿದರ್ಶನ. ಅದಕ್ಕಾಗಿಯೇ ಈಗಲೂ ರಾಜ್ಯ ತಂಡಗಳಿಗೆ ಈ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ತವಕ.

ಇವರಷ್ಟೇ ಅಲ್ಲ; ಜಾರ್ಖಂಡ್ ಹುಡುಗ ಇಶಾನ್ ಕಿಶನ್, ಕೇರಳದ ಸಂಜು ಸ್ಯಾಮ್ಸನ್, ಸೌರಾಷ್ಟ್ರದ ಚೇತೇಶ್ವರ್ ಪೂಜಾರ, ಕರ್ನಾಟಕದ ಕೆ.ಎಲ್. ರಾಹುಲ್, ಉತ್ತರಪ್ರದೇಶದ ಕುಲದೀಪ್ ಯಾದವ್, ಮಧ್ಯಪ್ರದೇಶದ ರಜತ್ ಪಾಟೀದಾರ್ ಮತ್ತು ಇದೇ ಸಾಲಿನ ಇನ್ನೂ ಕೆಲವು ಆಟಗಾರರ ಬಗ್ಗೆ ತಂಡದ ವ್ಯವಸ್ಥಾಪನ ಮಂಡಳಿಗೆ ಸದಾ ವಿಶ್ವಾಸ. ಇದಕ್ಕೆ ಕಾರಣ ಈ ಆಟಗಾರರಲ್ಲಿರುವ ಆತ್ಮವಿಶ್ವಾಸ ಮತ್ತು ಕೌಶಲಗಳು ಎಂಬುದರಲ್ಲಿ ಅನುಮಾನವೇ ಇಲ್ಲ. ಅದು ಅವರಲ್ಲಿ ಬೆಳೆದುಬಂದಿದ್ದು ರಣಜಿ ಪಂದ್ಯಗಳಲ್ಲಿ ತೋರಿದ ಸಾಧನೆಗಳಿಂದ ಅಲ್ಲವೇ?

ಆದ್ದರಿಂದಲೇ ಕ್ರಿಕೆಟ್‌ನಲ್ಲಿ ಇವತ್ತು ಅವಕಾಶಗಳು ಹಲವಾರಿದ್ದರೂ ರಣಜಿ ಟ್ರೋಫಿಯ ಹೊಳಪು ಕುಂದಿಲ್ಲ. ಈ ಕಪ್ ಗೆದ್ದರೆ ಭಾರತ ತಂಡಕ್ಕೆ ಸೇರುವ ಹಾದಿ ಸುಲಭ ಎಂಬ ಭಾವನೆ ಬತ್ತಿಲ್ಲ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗದಿದ್ದರೂ ದೇಶದ ಬಹುತೇಕ ಎಲ್ಲ ರಾಜ್ಯಗಳ ಆಟಗಾರರ ಎದುರು ಆಡಿದ ಅನುಭವ ಲಭಿಸುತ್ತದೆ. ತೋರಿದ ಸಾಮರ್ಥ್ಯದ ಆಧಾರದಲ್ಲಿ ಇರಾನಿ ಟ್ರೋಫಿ, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿಗಳಲ್ಲಿ ಆಡುವ ಮೂಲಕ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಲು ಸಾಧ್ಯವಿದೆ. ರಣಜಿ ಟ್ರೋಫಿ ಟೂರ್ನಿಯೆಂದರೆ ಭಾರತ ತಂಡದಲ್ಲಿ ಪದಾರ್ಪಣೆ ಮಾಡಲು ತವಕಿಸುವ ಮತ್ತು ಮರಳಿ ಸ್ಥಾನ ಪಡೆಯುವವರಿಬ್ಬರಿಗೂ ವೇದಿಕೆ.

ಈ ಬಾರಿಯ ಟೂರ್ನಿಯನ್ನೇ ನೋಡಿ. ಕೇರಳದ ಜಲ‌ಜ್ ಸಕ್ಸೆನಾ, ಕರ್ನಾಟಕ ತಂಡದ ಮಯಂಕ್ ಅಗರವಾಲ್, ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಮುಂಬೈನ ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ, ಬಂಗಾಳದ ಅಭಿಮನ್ಯು ಈಶ್ವರನ್, ಯುವಪ್ರತಿಭೆ ಧ್ರುವ ಶೋರೆ, ತಮಿಳುನಾಡಿನ ಎನ್. ಜಗದೀಶನ್, ಆಂಧ್ರದ ಹನುಮ ವಿಹಾರಿ ಈ ಸಾಲಿನಲ್ಲಿರುವ ಪ್ರಮುಖರು.

ಪ್ರತಿಭಾವಂತರಿಗೆ ಸ್ಥಾನ ಖಚಿತ: ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದರೆ ಅಥವಾ ವಿಕೆಟ್‌ ಪಡೆದರೆ ಭಾರತ ತಂಡದಲ್ಲಿ ಆಡುವ ಅವಕಾಶ ಖಚಿತ ಎಂಬ ಕಾಲ ಇತ್ತು. ಆದರೆ ದೇಶದಲ್ಲಿ ಕ್ರಿಕೆಟ್ ಆಡುವವರ ಸಂಖ್ಯೆ ಹೆಚ್ಚಿದಂತೆ ಇದು ಬದಲಾಗತೊಡಗಿತು. ರಣಜಿ ಟ್ರೋಫಿ ಗೆದ್ದ ತಂಡದವರಿಗೆ ಅವಕಾಶ ಕೊಡುವುದರ ಜೊತೆಗೆ ಸೋತ ತಂಡಗಳಲ್ಲಿಯೂ ಇರುವ ಪ್ರತಿಭಾವಂತರಿಗೆ ಸ್ಥಾನ ನೀಡಲು ಆರಂಭಿಸಲಾಯಿತು. ಹಾಗಾಗಿಯೇ ರಣಜಿ ಟ್ರೋಫಿ ಗೆಲ್ಲದ ತಂಡಗಳ ಕೆಲವು ಆಟಗಾರರೂ ತಮ್ಮ ಸಾಮರ್ಥ್ಯ, ಪ್ರದರ್ಶನದ ಬಲದಿಂದ ಅವಕಾಶ ಪಡೆದರು. ಉತ್ತರಪ್ರದೇಶ ತಂಡವು ಒಂದು ಬಾರಿ ಗೆದ್ದಿದೆ. ಆದರೆ, ಈ ರಾಜ್ಯದ ಹಲವು ಆಟಗಾರರು ಭಾರತ ತಂಡದಲ್ಲಿ ಆಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ವಿಜೃಂಭಿಸತೊಡಗಿದಾಗ ರಾಷ್ಟ್ರೀಯ ಆಯ್ಕೆ ಪ್ರಕ್ರಿಯೆಯೂ ಬದಲಾಯಿತು. ಐಪಿಎಲ್‌ನಲ್ಲಿ ಮಿಂಚಿದ ಆಟಗಾರರಿಗೆ ಮಣೆ ಹಾಕಲಾರಂಭಿಸಿದರು. ಆದರೆ ಇದು ದೀರ್ಘಕಾಲ ಫಲ ಕೊಡುತ್ತಿಲ್ಲವೆಂಬ ಸತ್ಯ ಈಗ ಮನವರಿಕೆಯಾಗುತ್ತಿದೆ. ಆದ್ದರಿಂದಲೇ ಟಿ20 ತಂಡಕ್ಕೆ ಆಯ್ಕೆ ಮಾಡುವಾಗ ಐಪಿಎಲ್ ಸಾಧನೆಯನ್ನು ನೋಡಲಾಗುತ್ತಿದೆ. ಫ್ರಾಂಚೈಸಿ ಲೀಗ್‌ನಲ್ಲಿ ಏನೇ ಸಾಧನೆ ಇದ್ದರೂ ದೇಶೀ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಯೇ ಪ್ರಮುಖ ಮಾನದಂಡವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಐಪಿಎಲ್ ಶುರುವಾಗುವ ಮುನ್ನ ಪಕ್ಕಾ ದೇಶೀ ಕ್ರಿಕೆಟ್‌ನಲ್ಲಿ ಮಿಂಚಿದ ಆಟಗಾರರು ಅವಕಾಶ ಪಡೆದರು. ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಜಿ.ಆರ್. ವಿಶ್ವನಾಥ್, ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ದೊಡ್ಡಗಣೇಶ್, ವೆಂಕಟೇಶ್ ಪ್ರಸಾದ್‌ ಅವರೆಲ್ಲರಿಗೂ ರಣಜಿ ಟ್ರೋಫಿಯೇ ಚಿಮ್ಮುಹಲಗೆ.

ಐಪಿಎಲ್ ಆರಂಭದ ನಂತರವೂ ಕರ್ನಾಟಕದ ಮಟ್ಟಿಗೆ ಈ ಸಮೀಕರಣ ಬದಲಾಗಿಲ್ಲ. 2013–14 ಹಾಗೂ 2014–15ರಲ್ಲಿ ರಣಜಿ ಟ್ರೋಫಿ ಗಳಿಸಿದ ನಂತರ ಸ್ಟುವರ್ಟ್ ಬಿನ್ನಿ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಎಸ್. ಅರವಿಂದ್ ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆದಿತ್ತು.

ಹೊಸ ತಂಡಗಳಿಗೆ ಅವಕಾಶ

ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ವಯ ರಚಿತವಾದ ನಿಯಮಗಳು ಜಾರಿಯಾದ ನಂತರ ರಣಜಿ ಟ್ರೋಫಿಗೆ ಹೊಸ ತಂಡಗಳು ಸೇರ್ಪಡೆಯಾದವು. ಇದಾಗಿ ಐದು ವರ್ಷ ಕಳೆದ ನಂತರ ಅದರ ಫಲ ಸಿಗುತ್ತಿದೆ.

ನಾಗಾಲ್ಯಾಂಡ್, ಉತ್ತರಾಖಂಡ, ಛತ್ತೀಸಗಢ, ತ್ರಿಪುರಾದಂತಹ ತಂಡಗಳು ಎಲೀಟ್ ಗುಂಪಿನಲ್ಲಿ ಆಡುವ ಮಟ್ಟಕ್ಕೆ ಬೆಳೆದಿವೆ. ಕೆಲವು ವರ್ಷಗಳ ಹಿಂದೆ ಕ್ರಿಕೆಟ್ ಮೈದಾನಗಳೇ ಇರದ ಮೇಘಾಲಯ, ಸಿಕ್ಕಿಂ, ಮಣಿಪುರ ತಂಡಗಳೂ ಪ್ಲೇಟ್ ಗುಂಪಿನಲ್ಲಿ ಗಮನ ಸೆಳೆಯುತ್ತಿವೆ.

ಇನ್ನೊಂದೆಡೆ ಒಂದು ಕಾಲದಲ್ಲಿ ಅಗ್ರ ಎಂಟರಲ್ಲಿ ಸ್ಥಾನ ಪಡೆಯಲೂ ಸಾಧ್ಯವಾಗದಿದ್ದ ತಂಡಗಳೂ ಕಳೆದ ಆರು ವರ್ಷಗಳಲ್ಲಿ ಟ್ರೋಫಿ ಗೆಲ್ಲುವ ಮಟ್ಟಕ್ಕೆ ಬೆಳೆದವು. ವಿದರ್ಭ, ಮಧ್ಯಪ್ರದೇಶ, ಸೌರಾಷ್ಟ್ರ ಮತ್ತು ಗುಜರಾತ್ ತಂಡಗಳು ಕಿರೀಟ ಧರಿಸಿ ಇತಿಹಾಸ ಬರೆದವು. ದೇಶೀ ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠವೆನಿಸಿದ 41 ಸಲದ ಚಾಂಪಿಯನ್ ಮುಂಬೈ ತಂಡ 2010ರಿಂದ ಇಲ್ಲಿಯವರೆಗೆ ಪ್ರಶಸ್ತಿ ಗೆದ್ದಿದ್ದು ಎರಡು ಬಾರಿ ಮಾತ್ರ. ಪ್ರಸಕ್ತ ಋತುವಿನಲ್ಲಿ ಕ್ವಾರ್ಟರ್‌ ಫೈನಲ್ ಕೂಡ ಪ್ರವೇಶಿಸದೇ ಹೊರಬಿದ್ದಿದೆ. ತಮಿಳುನಾಡು, ಮಹಾರಾಷ್ಟ್ರ, ಹೈದರಾಬಾದ್ ಮತ್ತು ಹರಿಯಾಣ ತಂಡಗಳೂ ಲೀಗ್ ಹಂತದಲ್ಲಿಯೇ ಮುಗ್ಗರಿಸಿದವು.

ಅಷ್ಟೇ ಏಕೆ; ಅತಿ ಹೆಚ್ಚು ರಣಜಿ ಟ್ರೋಫಿ ಜಯಿಸಿದ ತಂಡಗಳ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಒಂಬತ್ತು ವರ್ಷಗಳಿಂದ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಸೆಮಿಫೈನಲ್ ಆಡಲು ಸಿದ್ಧವಾಗಿದೆ.

ಕರ್ನಾಟಕ ಮತ್ತು ತಮಿಳುನಾಡು, ಕರ್ನಾಟಕ ಹಾಗೂ ಮುಂಬೈ ತಂಡಗಳ ಮುಖಾಮುಖಿಯಿಲ್ಲದ ಟೂರ್ನಿಯು ಕ್ರಿಕೆಟ್‌ಪ್ರಿಯರ ಪಾಲಿಗೆ ಸಪ್ಪೆಯೆನಿಸಿರಲೂಬಹುದು. ಆದರೆ, ಈ ಬಾರಿ ಟ್ರೋಫಿ ಗೆಲ್ಲುವ ಅವಕಾಶ ಕರ್ನಾಟಕಕ್ಕೇ ಹೆಚ್ಚು ಇದೆ. ಒಂದೊಮ್ಮೆ ಈ ಸಾಧನೆ ಮಾಡಿದರೆ ಯುವಪ್ರತಿಭೆಗಳ ದಂಡು ರಾಷ್ಟ್ರೀಯ ತಂಡಕ್ಕೆ ಹೆಜ್ಜೆಯಿಡಬಹುದು. ಅದಿಲ್ಲದಿದ್ದರೆ ಐಪಿಎಲ್‌ ಫ್ರ್ಯಾಂಚೈಸಿಗಳ ಗಮನ ಸೆಳೆದು ಕೋಟ್ಯಧೀಶರಾಗಬಹುದು!

ಇಂತಹ ಆಕರ್ಷಣೆಗಳೇ ರಣಜಿ ಟ್ರೋಫಿಯ ಹೊಳಪನ್ನು ಎಂಟೂವರೆ ದಶಕಗಳ ನಂತರವೂ ಉಳಿಸಿವೆ. ಕ್ರಿಕೆಟ್ ಎಷ್ಟೇ ರಂಗುರಂಗಾಗಿದ್ದರೂ ಬಿಳಿ ಪೋಷಾಕಿನ ಘನತೆ ಕುಂದಿಲ್ಲ. ರಣಜಿ ಪಂದ್ಯಗಳು ನಡೆಯುವ ಮೈದಾನವು ಖಾಲಿ ಇರುತ್ತವೆ. ಅಪ್ಪಟ ಕ್ರಿಕೆಟ್‌ಪ್ರೇಮಿಗಳ ಎದೆಯಲ್ಲಿ ಮಾತ್ರ ಈ ಟ್ರೋಫಿ ದೇಶೀ ಕ್ರಿಕೆಟ್‌ನ ರಾಜನೂ ಹೌದು. ಭಾರತದ ಕ್ರಿಕೆಟ್‌ ಕ್ಷೇತ್ರದ ತಾಯಿಬೇರೂ ಹೌದು. ಅದಕ್ಕಾಗಿಯೇ ಈ ಟ್ರೋಫಿ ಜಯಿಸುವುದು ಎಲ್ಲ ತಂಡಗಳಿಗೂ ಪ್ರತಿಷ್ಠೆಯ ವಿಷಯ.

ಆಯ್ಕೆ ಸಮಿತಿ ಗಮನ ಸೆಳೆಯಲು ವೇದಿಕೆ

ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಲು ರಣಜಿ ಟ್ರೋಫಿ ಉತ್ತಮ ವೇದಿಕೆ. ಟೂರ್ನಿಯಲ್ಲಿ ಹೆಚ್ಚು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುತ್ತದೆ. ಇದರಿಂದಾಗಿ ಆಯ್ಕೆಗಾರರ ಗಮನ ಸೆಳೆಯುವ ಸಾಧ್ಯತೆಗಳು ಹೆಚ್ಚು. ಅಲ್ಲದೇ ಕ್ರಿಕೆಟಿಗರ ಕೌಶಲಗಳನ್ನು ಉತ್ತಮಗೊಳಿಸಲು ಈ ಟೂರ್ನಿ ಸಹಕಾರಿ. ದೀರ್ಘ ಮಾದರಿಯಲ್ಲಿ ಆಡುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಭಾರತ, ಭಾರತ ಎ, ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿ ಟೂರ್ನಿಗಳಲ್ಲಿ ಆಡುವ ಅವಕಾಶ ಗಿಟ್ಟಿಸಲು ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಬೇಕು. ನಾನು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲು ರಣಜಿ ಟೂರ್ನಿಯಲ್ಲಿ ಚೆನ್ನಾಗಿ ಆಡಿದ್ದೇ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಟೂರ್ನಿ ಇದು. ಆದ್ದರಿಂದ ಇದರಲ್ಲಿ ಟ್ರೋಫಿ ಜಯಿಸುವುದು ಮುಖ್ಯ.

ದೊಡ್ಡಗಣೇಶ್,
ಭಾರತ ತಂಡದ ಮಾಜಿ ಆಟಗಾರ

ದೇಶೀ ಟೂರ್ನಿಯಲ್ಲಿ ಆಡುವುದು ಕಡ್ಡಾಯ

ಕೆಲವು ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಅವರು ಭಾರತ ತಂಡದ ಕೋಚ್ ಆಗಿದ್ದ ಸಂದರ್ಭದಲ್ಲಿ ಒಂದು ನಿಯಮ ಇತ್ತು. ರಾಷ್ಟ್ರೀಯ ತಂಡದಲ್ಲಿರುವ ಯಾವುದೇ ಆಟಗಾರ ಗಾಯಗೊಂಡು ಕೆಲವು ದಿನಗಳವರೆಗೆ ಹೊರಗುಳಿದಾಗ ದೇಶೀ ಟೂರ್ನಿಗಳಲ್ಲಿ ಆಡಿಯೇ ಭಾರತ ತಂಡಕ್ಕೆ ಮರಳುವ ನಿಯಮ ಅದಾಗಿತ್ತು. ಇದರಿಂದಾಗಿ ಗಾಯದಿಂದ ಚೇತರಿಸಿಕೊಂಡ ನಂತರದ ದೈಹಿಕ ಸಾಮರ್ಥ್ಯದ ಪರೀಕ್ಷೆ ದೇಶೀ ಟೂರ್ನಿಯಲ್ಲಿಯೇ ಆಗುತ್ತಿತ್ತು. ಒಂದೊಮ್ಮೆ ಚೆನ್ನಾಗಿ ಆಡಿದರೆ ಆ ಆಟಗಾರನ ಆತ್ಮವಿಶ್ವಾಸವೂ ಮರಳುತ್ತಿತ್ತು. ಇನ್ನೊಂದೆಡೆ, ಗಾಯಗೊಂಡ ಖ್ಯಾತನಾಮ ಆಟಗಾರರೂ ತಮ್ಮ ತವರು ರಾಜ್ಯ ತಂಡದಲ್ಲಿ ಪಂದ್ಯಗಳನ್ನು ಆಡುತ್ತಿದ್ದರು. ಕಾಲಕ್ರಮೇಣ ಈ ನಿಯಮ ನೇಪಥ್ಯಕ್ಕೆ ಸರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT