ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಖಿ’ ಮತಗಟ್ಟೆ: ಪುರುಷರ ಆಕರ್ಷಣೆ!

ಅಕ್ಷರ ಗಾತ್ರ

ಧಾರವಾಡ: ಮಹಿಳಾ ಮತದಾರರನ್ನು ಉತ್ತೇಜಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಪರಿಚಯಿಸಿದ ‘ಸಖಿ’ ಎಂಬ ಗುಲಾಬಿ ಮತಗಟ್ಟೆಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈ ಮತಗಟ್ಟೆಗಳಲ್ಲಿ ಒಟ್ಟು 4,268 ಪುರುಷರು ಮತ್ತು 4,247 ಮಹಿಳೆಯರು ಸೇರಿದಂತೆ ಒಟ್ಟು 8,515 ಮತದಾರರು ಮತ ಹಾಕಿದ್ದಾರೆ.

ಜಿಲ್ಲೆಯ 15 ಮತಗಟ್ಟೆಗಳನ್ನು ಸಖಿ ಮತಗಟ್ಟೆಗೆ ಆಯ್ಕೆ ಮಾಡಲಾಗಿತ್ತು. ಪ್ರತಿ ಮತಕ್ಷೇತ್ರಗಳಲ್ಲೂ ಕನಿಷ್ಠ ಒಂದು ಗುಲಾಬಿ ಮತಗಟ್ಟೆಗಳು ಇರುವಂತೆ ವ್ಯವಸ್ಥೆ ಮಾಡಲಾಗಿತ್ತು. ನವಲಗುಂದ ಹಾಗೂ ಕುಂದಗೋಳದಲ್ಲಿ ತಲಾ ಒಂದು, ಧಾರವಾಡ, ಹುಬ್ಬಳ್ಳಿ ಧಾರವಾಡ ಕೇಂದ್ರ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ ತಲಾ 3, ಹುಬ್ಬಳ್ಳಿ ಧಾರವಾಡ ಪೂರ್ವ ಹಾಗೂ ಕಲಘಟಗಿಯಲ್ಲಿ ತಲಾ 2 ಇಂಥ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಇವುಗಳನ್ನು ವಿಶೇಷವಾಗಿ ಗುಲಾಬಿ ಬಣ್ಣದಿಂದಲೇ ಅಲಂಕರಿಸಲಾಗಿತ್ತು. ಗುಲಾಬಿ ಪರದೆ, ಗುಲಾಬಿ ಪುಗ್ಗಳು ಗುಲಾಬಿ ಬಣ್ಣ, ಸಿಬ್ಬಂದಿಯ ಉಡುಪು ಗುಲಾಬಿ, ಮತದಾರರ ಸಹಿ ಪಡೆಯುವ ಹಾಳೆಯೂ ಗುಲಾಬಿಯಾಗಿತ್ತು. ಇಷ್ಟು ಮಾತ್ರವಲ್ಲ, ಸಖಿ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬ ಸಿಬ್ಬಂದಿಯೂ ಮಹಿಳೆಯರೇ ಆಗಿದ್ದು ವಿಶೇಷವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಜಯನಗರದ ನಜಮುನ್ನಿಸಾ ಶೇಖ್‌, ’ಮಹಿಳೆಯರಿಗೆ ಪ್ರತಿ ಬಾರಿ ಚುನಾವಣೆ ಬಂದಾಗ ಮಹಿಳೆಯರು ಸಾಲಿನಲ್ಲಿ ನಿಂತು ಮತದಾನ ಮಾಡಬೇಕು ಎಂಬ ಉದ್ದೇಶ ಹಾಗೂ ಮನೆಯಲ್ಲಿನ ಕೆಲಸಗಳನ್ನು ಬಿಟ್ಟು ಮತದಾನ ಮಾಡಲು ಬರಬೇಕು ಎಂಬ ಉದ್ದೇಶದಿಂದ ಮತದಾನ ಮಾಡಲು ಬರುತ್ತಿರಲಿಲ್ಲ. ಈ ಬಾರಿ ಬಂದ ಐದು ನಿಮಿಷದಲ್ಲಿ ತಾವು ಮತದಾನ ಮಾಡಿದ್ದೇವೆ. ಈ ಬಾರಿ ಚುನಾವಣಾ ಆಯೋಗ ಮಹಿಳೆಯರಿಗಾಗಿ ಕೆಗೆದುಕೊಂಡ ಕ್ರಮ ಉತ್ತಮವಾಗಿದೆ’ ಎಂದರು.

ಬಾರಾಕೋಟ್ರಿ ನಿವಾಸಿ ಮಂಗಳಾ ರಾಜೂರ ಮಾತನಾಡಿ, ‘ಸಖಿ ಕೇಂದ್ರದಲ್ಲಿ ಎಲ್ಲ ಮಹಿಳಾ ಸಿಬ್ಬಂದಿ ಇದ್ದುದರಿಂದ ಯಾವುದೇ ಭೀತಿ ಇಲ್ಲದೆ ಮತ ಚಲಾಯಿಸಿದೆ. ಇದೊಂದು ಉತ್ತಮ ಕಾರ್ಯ’ ಎಂದರು.

ಸಂತೋಷ ನಗರ ನಿವಾಸಿ ಶ್ರೀನಿವಾಸ ಪಟ್ಟಣಶೆಟ್ಟಿ, ‘ಚುನಾವಣಾ ಆಯೋಗ ಮಹಿಳೆಯರ ದೃಷ್ಟಿಯಿಂದ ಸಖಿ ಕೇಂದ್ರ ಸ್ಥಾಪಿಸಿದ್ದು ಖುಷಿಯ ಸಂಗತಿ. ಯಾವುದೇ ತೊಂದರೆ ಇಲ್ಲದೇ ಮಹಿಳೆಯರು ಮತ ಚಲಾಯಿಸಲು ಇದು ನೆರವಾಯಿತು. ಅದರಲ್ಲೂ ಕೇಂದ್ರದಲ್ಲಿ ಎಲ್ಲ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದುದು ಉತ್ತಮ ಕಾರ್ಯ’ ಎಂದು ಮೆಚ್ಚುಗೆ ಸೂಚಿಸಿದರು.

**
ತುಂಬು ಗರ್ಭಿಣಿ ಪೂಜಾ ಚೊಳ್ಳಿ ಅವರು ಚುನಾವಣಾ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಯಿತು
– ಸ್ನೇಹಲ್ ರಾಯಮಾನೆ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT