ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಭಾರತ vs ವಿಂಡೀಸ್ | ‘ವಿರಾಟ್’ ವಿಜಯಯಾತ್ರೆಗೆ ವಿಂಡೀಸ್ ಸವಾಲು

ಭಾರತಕ್ಕೆ ಓಲ್ಡ್‌ ಟ್ರಾಫರ್ಡ್‌ನಲ್ಲಿ ಮತ್ತೊಂದು ಜಯಭೇರಿಯ ಕನಸು; ಪುಟಿದೇಳುವತ್ತ ಹೋಲ್ಡರ್ ಬಳಗದ ಚಿತ್ತ
Last Updated 27 ಜೂನ್ 2019, 3:54 IST
ಅಕ್ಷರ ಗಾತ್ರ

ಮ್ಹಾಂಚೆಸ್ಟರ್: ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣವೆಂದರೆ ಭಾರತದ ಪಾಲಿಗೆ ಅಮೃತದ ಸವಿ ಉಣಬಡಿಸಿರುವ ಅಂಗಳ. ಮೂವತ್ತಾರು ವರ್ಷಗಳ ಹಿಂದೆ ಕಪಿಲ್‌ದೇವ್ ಬಳಗದ ಭರ್ಜರಿ ಬೇಟೆ ಆರಂಭವಾಗಿದ್ದು ಇಲ್ಲಿಯೇ.

1983ರ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಗಿನ ದೈತ್ಯ ತಂಡ, ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ ಪ್ರಥಮ ಬಾರಿ ಸೋಲು ಕಾಣಿಸಿದ್ದು ಇಲ್ಲಿಯೇ. ಒಂದು ವಾರದ ಹಿಂದೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದ್ದು ಕೂಡ ಇದೇ ತಾಣದಲ್ಲಿ. ಈಗ ಇಲ್ಲಿ ವಿರಾಟ್ ಬಳಗದಲ್ಲಿ ಮತ್ತೊಂದು ಕನಸು ಗರಿಗೆದರಿದೆ. ಗುರುವಾರ ನಡೆಯಲಿರುವ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಎದುರಿಸಲು ವಿರಾಟ್ ಕೊಹ್ಲಿ ನಾಯಕತ್ವದ ತಂಡ ಸಜ್ಜಾಗಿದೆ.

ಟೂರ್ನಿಯಲ್ಲಿ ಭಾರತ ಇದುವರೆಗೆ ಒಂದೂ ಪಂದ್ಯ ಸೋತಿಲ್ಲ. ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಭಾರತವು ಭರ್ಜರಿ ಜಯ ಸಾಧಿಸಿತ್ತು. ಆದರೆ, ಅಫ್ಗಾನಿಸ್ತಾನ ಎದುರು ಪ್ರಯಾಸದ ಗೆಲುವು ಸಾಧಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಈ ಹಾದಿಯಲ್ಲಿ ರೋಹಿತ್ ಶರ್ಮಾ ಎರಡು ಶತಕ, ವಿರಾಟ್ ಕೊಹ್ಲಿ ಮೂರು ಅರ್ಧಶತಕ, ಕೆ.ಎಲ್. ರಾಹುಲ್ ಒಂದು ಅರ್ಧಶತಕ, ಜಸ್‌ಪ್ರೀತ್ ಬೂಮ್ರಾ ಒಂದು ಬಾರಿ ಪಂದ್ಯಶ್ರೇಷ್ಠ ಮತ್ತು ಮೊಹಮ್ಮದ್ ಶಮಿ ಹ್ಯಾಟ್ರಿಕ್ ಸಾಧನೆಗಳು ದಾಖಲಾಗಿವೆ. ಈ ನಡುವೆ ಒಂದು ಶತಕ ಬಾರಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿರುವ ಸಂಗತಿಗಳೂ ಆತಂಕ ಮೂಡಿಸಿದ್ದವು. ಆದರೆ ಅವರ ಬದಲಿಗೆ ಹೊಣೆ ಹೊತ್ತು ಆಡಿದವರು ತಂಡಕ್ಕೆ ಗೆಲುವಿನ ಕಾಣಿಕೆ ಕೊಟ್ಟರು. ಇದರಿಂದಾಗಿ ತಂಡ ಆತ್ಮವಿಶ್ವಾಸದಲ್ಲಿ ತೇಲುತ್ತಿದೆ.

ರೋಹಿತ್ ಮತ್ತು ರಾಹುಲ್ ಇಲ್ಲಿಯೂ ಇನಿಂಗ್ಸ್ ಆರಂಭಿಸುವುದು ಖಚಿತ. ವಿರಾಟ್ ಹೊಸ ದಾಖಲೆಗಳ ಶಿಕಾರಿ ಮಾಡಲು ಸಿದ್ಧರಾಗಿದ್ದಾರೆ. ಧೋನಿ ಕೂಡ ಸ್ಟಂಪ್‌ಗಳ ಹಿಂದೆ ಮಿಂಚಲು ಸಜ್ಜಾಗಿದ್ದಾರೆ. ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಹೆಚ್ಚು ಎಸೆತಗಳನ್ನು ಎದುರಿಸಿ ಕಡಿಮೆ ರನ್‌ ಗಳಿಸಿದರೆಂಬ ಟೀಕೆಗಳನ್ನು ಅವರು ಎದುರಿಸಿದ್ದರು. ಆದರೆ, ವಿಜಯಶಂಕರ್ ಜೊತೆಗೆ ಅವರು ಕಟ್ಟಿದ್ದ ಜೊತೆಯಾಟ ತಂಡ ಇನ್ನೂರರ ಮೊತ್ತ ದಾಟಲು ಕಾರಣವಾಗಿತ್ತು. ಕೇದಾರ್ ಜಾಧವ್ ಕೂಡ ಅರ್ಧಶತಕ ಹೊಡೆದಿದ್ದರು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಆಟಗಾರರೇ ಭಾರತ ತಂಡದ ಶಕ್ತಿಯಾಗಿದ್ದಾರೆ. ಆದ್ದರಿಂದ ವಿಂಡೀಸ್ ತಂಡವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸಿ ಯೋಜನೆ ರೂಪಿಸಬೇಕಾದ ಸವಾಲು ಇದೆ.

ವಿಂಡೀಸ್ ತಂಡದಲ್ಲಿ ಅನುಭವಿ ಆಲ್‌ರೌಂಡರ್‌ಗಳಿದ್ದಾರೆ. ನಾಯಕ ಜೇಸನ್ ಹೋಲ್ಡರ್, ಆ್ಯಷ್ಲೆ ನರ್ಸ್ ಅದರಲ್ಲಿ ಪ್ರಮುಖರಾಗಿದ್ದಾರೆ. ಆದರೆ ಅವರು ಸ್ಥಿರವಾದ ಆಟವಾಡದೇ ಇರುವುದು ತಂಡಕ್ಕೆ ಹಿನ್ನಡೆಯಾಗಲು ಕಾರಣವಾಗಿದೆ. ಜೊತೆಗೆ ರಸೆಲ್‌ ಗಾಯಾಳಾಗಿ ಟೂರ್ನಿಯಿಂದ ಹೊರಬಿದ್ದಿರುವುದು ಒಂದಿಷ್ಟು ಹೊಡೆತ ನೀಡಿದೆ.

ಇದೇ ಕ್ರೀಡಾಂಗಣದಲ್ಲಿ ಮೂರು ದಿನಗಳ ಹಿಂದೆ ನ್ಯೂಜಿಲೆಂಡ್ ಎದುರು ನಡೆದಿದ್ದ ರೋಚಕ ಪಂದ್ಯದಲ್ಲಿ ಕಾರ್ಲೋಸ್ ಬ್ರಾಥ್‌ವೇಟ್ ಶತಕ ಬಾರಿಸಿದ್ದರು. ತಂಡ ಕೇವಲ ಐದು ರನ್‌ಗಳಿಂದ ತಂಡವು ಸೋತಿತ್ತು. ಇದಕ್ಕೆ ಕಾರಣ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ. ಆರಂಭಿಕ ಆಟಗಾರ ಕ್ರಿಸ್ ಗೇಲ್ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಎಲ್ಲ ಆಟಗಾರರೂ ಸಂಘಟಿತವಾಗಿ ಹೋರಾಟ ಮಾಡಿದರೆ ಕಠಿಣ ಸವಾಲೊಡ್ಡುವ ಸಾಮರ್ಥ್ಯ ಇದೆ.

ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ವಿಂಡೀಸ್ ತಂಡದ ಖಾತೆಯಲ್ಲಿ ಉತ್ತಮ ರನ್‌ ಸರಾಸರಿ ಇದೆ. ಆದರೆ, ಕೇವಲ ಮೂರು ಪಾಯಿಂಟ್‌ಗಳಿವೆ. ಈ ಪಂದ್ಯವೂ ಸೇರಿದಂತೆ ಮೂರು ಪಂದ್ಯಗಳಲ್ಲಿ ಉತ್ತಮ ರನ್‌ ಸರಾಸರಿಯಿಂದ ಗೆಲ್ಲಬೇಕು. ಇಂಗ್ಲೆಂಡ್, ಬಾಂಗ್ಲಾ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ತಮ್ಮ ಪಾಲಿನಲ್ಲಿ ಉಳಿದಿರುವ ಪಂದ್ಯಗಳಲ್ಲಿ ಸತತವಾಗಿ ಸೋಲಬೇಕು. ಆಗ ಮಾತ್ರ ವಿಂಡೀಸ್‌ಗೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಈ ಹಾದಿಯಲ್ಲಿ ಒಂದು ಪಂದ್ಯ ಸೋತರೂ ಸೆಮಿಫೈನಲ್‌ ಹಾದಿಯಿಂದ ತಂಡವು ಹೊರಬೀಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT