ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ: ಸರಣಿ ಜಯದ ಹೊಸ್ತಿಲಲ್ಲಿ ಭಾರತ

ಇಂದು: ಕೊಹ್ಲಿ, ಶ್ರೇಯಸ್‌ ಮೇಲೆ ಕಣ್ಣು
Last Updated 13 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಪೋರ್ಟ್ ಆಫ್‌ ಸ್ಪೇನ್: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಕೆರಿಬಿಯನ್ ನಾಡಿನಲ್ಲಿ ಏಕದಿನ ಕ್ರಿಕೆಟ್ ಸರಣಿ ಜಯಿಸಲು ಈಗ ಸುವರ್ಣಾವಕಾಶ ಲಭಿಸಿದೆ.

ಇಲ್ಲಿಯ ಕ್ವೀನ್ಸ್‌ ಪಾರ್ಕ್‌ನಲ್ಲಿ ಬುಧವಾರ ನಡೆಯಲಿರುವ ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯವನ್ನು ಗೆದ್ದು ಸರಣಿ ಜಯದ ಕೇಕೆ ಹಾಕುವ ಹುಮ್ಮಸ್ಸಿನಲ್ಲಿ ತಂಡವಿದೆ. ಮೂರು ಪಂದ್ಯಗಳ ಸರಣಿಯ ಕೊನೆಯ ಹಣಾಹಣಿ ಇದಾಗಿದೆ. ಮೊದಲ ಪಂದ್ಯವು ಮಳೆಯಲ್ಲಿ ಕೊಚ್ಚಿಹೋಗಿತ್ತು. ಎರಡನೇ ಪಂದ್ಯದಲ್ಲಿ ವಿರಾಟ್ ಶತಕದ ಅಬ್ಬರದಲ್ಲಿ ಭಾರತ ಗೆದ್ದಿತ್ತು. ಹೋದ ವಾರ ನಡೆದಿದ್ದ ಟ್ವೆಂಟಿ –20 ಸರಣಿಯಲ್ಲಿ ಭಾರತ ಪಾರಮ್ಯ ಮೆರೆದಿತ್ತು. ಆದ್ದರಿಂದ ಜೇಸನ್ ಹೋಲ್ಡರ್ ನಾಯಕತ್ವದ ಆತಿಥೇಯ ಬಳಗವು ಈ ಪಂದ್ಯದಲ್ಲಿ ಗೆದ್ದು ಸರಣಿ ಸಮ ಮಾಡಿಕೊಳ್ಳುವ ಛಲದಲ್ಲಿದೆ. ಆದರೆ ಹವಾಮಾನ ವರದಿಗಳ ಪ್ರಕಾರ ಮಳೆ ಬರುವ ಸಾಧ್ಯತೆಗಳೂ ಇವೆ. ಒಂದೊಮ್ಮೆ ಮಳೆರಾಯನೇ ಮೇಲುಗೈ ಸಾಧಿಸಿದರೆ ಭಾರತದ ಮಡಿಲಿಗೆ 1–0ಯಿಂದ ಸರಣಿ ಬೀಳಲಿದೆ.

ಶಿಖರ್, ಪಂತ್‌ಗೆ ಪರೀಕ್ಷೆ: ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಈ ಪಂದ್ಯವು ಮಹತ್ವದ್ದಾಗಿದೆ. ಇದೇ 22ರಂದು ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವುದರತ್ತ ಕಣ್ಣಿಟ್ಟಿರುವ ಅವರು ಇದುವರೆಗೆ ದೊಡ್ಡ ಇನಿಂಗ್ಸ್ ಆಡಿಲ್ಲ. ಆದ್ದರಿಂದ ಟಿ–20 ಮತ್ತು ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ಲಭಿಸಿರಲಿಲ್ಲ. ಅವರು ವಿಂಡೀಸ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಮೂರು ಪಂದ್ಯಗಳಲ್ಲಿ (1, 23 ಮತ್ತು 3) ಕಡಿಮೆ ಮೊತ್ತಕ್ಕೆ ಔಟಾಗಿದ್ದರು. ಅದರಿಂದಾಗಿ ಅವರು ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸುವ ಒತ್ತಡದಲ್ಲಿದ್ದಾರೆ.

ಸಿಕ್ಕ ಏಕೈಕ ಅವಕಾಶದಲ್ಲಿ ಮಿಂಚಿರುವ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿಯೂ ಸ್ಥಾನ ಗಳಿಸುವುದು ಖಚಿತವಾಗಿದೆ. ಅವರು ಹೋದ ಪಂದ್ಯದಲ್ಲಿ 68 ಎಸೆತಗಳಲ್ಲಿ 71 ರನ್‌ ಗಳಿಸಿದ್ದರು. ಇದರಿಂದಾಗಿ ಅವರಿಗೆ ನಾಲ್ಕನೇ ಕ್ರಮಾಂಕಕ್ಕೂ ಬಡ್ತಿ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ರಿಷಭ್ ಪಂತ್ ಅವರು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಬೇಕಾಗಬಹುದು. ದೆಹಲಿಯ ಯುವ ಬ್ಯಾಟ್ಸ್‌ಮನ್‌ ಕಳೆದ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮವಾದ ಆಟವಾಡಿಲ್ಲ.

ರೋಹಿತ್ ಶರ್ಮಾ ಕೂಡ ಹೋದ ಪಂದ್ಯದಲ್ಲಿ ಆತ್ಮವಿಶ್ವಾಸದ ಕೊರತೆ ಅನುಭವಿಸಿದ್ದರು. ಆದರೆ ಅವರು ಮತ್ತೆ ಲಯಕ್ಕೆ ಮರಳುವ ಕ್ಷಮತೆ ಉಳ್ಳವರಾಗಿದ್ದಾರೆ. ಕೇದಾರ್ ಜಾಧವ್, ಮನೀಷ್ ಪಾಂಡೆ ಅವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಇದು ಸೂಕ್ತ ಸಮಯ.

ಬೌಲಿಂಗ್‌ನಲ್ಲಿ ಹೆಚ್ಚು ಚಿಂತೆಯಿಲ್ಲ. ಭುವನೇಶ್ವರ್ ಕುಮಾರ್ ಹೋದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದದರು. ಮಧ್ಯಮವೇಗಿ ಮೊಹಮ್ಮದ್ ಶಮಿ, ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಈ ಪಂದ್ಯದಲ್ಲಿ ಶಮಿಗೆ ವಿಶ್ರಾಂತಿ ನೀಡಿ, ಯುವ ಬೌಲರ್ ನವದೀಪ್ ಸೈನಿಗೆ ಅವಕಾಶ ಕೊಡುವ ಸಾಧ್ಯತೆ ಇದೆ.

ವಿಂಡೀಸ್ ತಂಡದ ಬ್ಯಾಟಿಂಗ್ ಪಡೆಯು ಭಾರತದ ಬೌಲಿಂಗ್ ದಾಳಿ ಯನ್ನು ಎದುರಿಸಲು ಪರದಾಡುತ್ತಿದೆ. ಶಾಯ್ ಹೋಪ್, ಶಿಮ್ರೊನ್ ಹೆಟ್ಮೆಯರ್ ಮತ್ತು ನಿಕೊಲಸ್ ಪೂರನ್ ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಬೇಕಿದೆ. ಬೌಲರ್‌ಗಳಾದ ಶೆಲ್ಡನ್ ಕಾಟ್ರೆಲ್, ಒಷೇನ್ ಥಾಮಸ್, ಕೆಮರ್ ರೋಚ್ ಅವರು ಬ್ಯಾಟಿಂಗ್ ಪಡೆಯನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದರೆ ವಿಂಡೀಸ್ ಗೆಲುವಿನ ಸಾಧ್ಯತೆ ಹೆಚ್ಚಬಹುದು.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ನವದೀಪ್ ಸೈನಿ.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶಾಯ್ ಹೋಪ್, ಶಿಮ್ರೊನ್ ಹೆಟ್ಮೆಯರ್, ನಿಕೊಲಸ್ ಪೂರನ್, ರಾಸ್ಟನ್ ಚೇಸ್, ಫ್ಯಾಬಿಯನ್ ಅಲೆನ್, ಕಾರ್ಲೊಸ್ ಬ್ರಾಥ್‌ವೇಟ್, ಕೀಮೊ ಪಾಲ್, ಶೆಲ್ಡನ್ ಕಾಟ್ರೆಲ್, ಒಷೇನ್ ಥಾಮಸ್, ಕೇಮರ್ ರೋಚ್.

ಪಂದ್ಯ ಆರಂಭ: ಸಂಜೆ 7

ನೇರಪ್ರಸಾರ: ಸೋನಿ ನೆಟ್‌ವರ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT