ಕ್ರಿಕೆಟ್ ಲೋಕಕ್ಕೆ ಮತ್ತೊಬ್ಬ ಮುಂಬೈಕರ್: ಪೃಥ್ವಿ ಶಾ

7
ಪದಾರ್ಪಣೆ ಟೆಸ್ಟ್‌ನಲ್ಲಿ ಶತಕ ಗಳಿಸಿದ ಭಾರತದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದ ಪೃಥ್ವಿ

ಕ್ರಿಕೆಟ್ ಲೋಕಕ್ಕೆ ಮತ್ತೊಬ್ಬ ಮುಂಬೈಕರ್: ಪೃಥ್ವಿ ಶಾ

Published:
Updated:

ರಾಜ್‌ಕೋಟ್: ‘ಐದು ವರ್ಷಗಳ ಹಿಂದಿನ ಮಾತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್ ಎದುರಿನ ಟೆಸ್ಟ್ ನಲ್ಲಿ  ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಸರಣಿಯ ನಂತರ ಮತ್ತೆ ಭಾರತಕ್ಕೆ ಬಂದಿರುವ ವಿಂಡೀಸ್‌ ತಂಡದೆದುರೇ ಮತ್ತೊಬ್ಬ ಸಚಿನ್ ಉದಯಿಸಿದ. ಅದು ಪೃಥ್ವಿ ಶಾ’–

ಗುರುವಾರ ಮಧ್ಯಾಹ್ನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂದೇಶಗಳು ಅಪಾರ ಸಂಖ್ಯೆಯಲ್ಲಿ ಹರಿದಾಡಿದವು. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಅಂಗಳದಲ್ಲಿ ಚಿಗುರುಮೀಸೆಯ ಹುಡುಗ ಪೃಥ್ವಿ ಗಳಿಸಿದ ಶತಕದಲ್ಲಿ (134; 154ಎಸೆತ, 19ಬೌಂಡರಿ) ಕ್ರಿಕೆಟ್‌ ಪ್ರಿಯರು ‘ಮುಂಬೈಕರ್‌‘ನನ್ನು ಹುಡುಕಿದರು.

ಹೋದ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ಬಂದ ಪೃಥ್ವಿ ಪದಾರ್ಪಣೆಯಲ್ಲಿಯೇ ಮಿಂಚಿನ ಶತಕ ಹೊಡೆದರು. ಅವರ ಆಟದ ಬಲದಿಂದ ಭಾರತ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 89 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 364 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ (ಬ್ಯಾಟಿಂಗ್ 72; 137ಎಸೆತ, 4ಬೌಂಡರಿ) ಮತ್ತು ರಿಷಭ್ ಪಂತ್ (ಬ್ಯಾಟಿಂಗ್ 17; 21ಎಸೆತ, 1ಬೌಂಡರಿ, 1ಸಿಕ್ಸರ್) ಕ್ರೀಸ್‌ನಲ್ಲಿದ್ದಾರೆ.

ಆತಿಥೇಯ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಕೆ.ಎಲ್. ರಾಹುಲ್ ಮೊದಲ ಓವರ್‌ನಲ್ಲಿಯೇ ಗ್ಯಾಬ್ರಿಯಲ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿ ನಿರ್ಗಮಿಸಿದರು. ನಂತರದ ಆಟದಲ್ಲಿ ಇನ್ನೊಂದು ಬದಿಯಲ್ಲಿದ್ದ ಪೃಥ್ವಿ ಶಾ ಅವರ ಆತ್ಮವಿಶ್ವಾಸಭರಿತ ಆಟ. ಮುಂಬರುವ ನವೆಂಬರ್‌ನಲ್ಲಿ  19ನೇ ವಸಂತಕ್ಕೆ ಕಾಲಿಡುವ ಮುಂಬೈ ಪೋರ ಪೃಥ್ವಿ ವಿಂಡೀಸ್‌ ಬೌಲರ್‌ಗಳ ಬೆವರಿಳಿಸಿದರು. ‘ರಾಜ್‌ಕೋಟ್ ಹೀರೊ’ ಅನುಭವಿ ಚೇತೇಶ್ವರ್ ಪೂಜಾರ ಅವರೊಂದಿಗೆ ಚೆಂದದ ಇನಿಂಗ್ಸ್‌ ಕಟ್ಟಿದರು.

ಅಲ್ಲದೇ ವೇಗದ ಅರ್ಧಶತಕ, ಶತಕ ಗಳಿಸಿದ ಅತಿ ಕಿರಿಯ ವಯಸ್ಸಿನ ಆಟಗಾರನೆಂಬ ದಾಖಲೆಗಳನ್ನು ನಿರ್ಮಿಸಿದರು

ನಿಖರವಾದ ಬ್ಯಾಕ್‌ಫುಟ್‌ ಪಂಚ್, ಚುರುಕಾದ ಕಟ್‌ಗಳು ಮತ್ತು ಸೊಗಸಾದ ಡ್ರೈವ್‌ಗಳು ಅವರ ಆಟದ ಅಂದ ಹೆಚ್ಚಿಸಿದವು. 56 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದ ಅವರು ಹೆಚ್ಚು ಸಂಭ್ರಮಿಸಲಿಲ್ಲ.  ಆದರೆ ನಂತರದ ಆಟದಲ್ಲಿ ವಿಜೃಂಭಿಸಿದರು. ಅವರ ಆಟವನ್ನು ಪೂಜಾರ ತಣ್ಣಗೆ ಆಸ್ವಾದಿಸಿದರು!

ತಾವೆದುರಿಸಿದ 99ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. ಮೇಲಕ್ಕೆ ನೆಗೆದು ಮುಷ್ಟಿಯಿಂದ ಗಾಳಿ ಗುದ್ದಿ, ಪೆವಿಲಿಯನ್‌ನತ್ತ ಬ್ಯಾಟ್‌ ತೋರಿಸಿ ಸಂಭ್ರಮಿಸಿದರು. ನಾಯಕ ವಿರಾಟ್, ಅಜಿಂಕ್ಯ, ಕೋಚ್ ರವಿಶಾಸ್ತ್ರಿ ಮತ್ತು ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಶತಕದ ನಂತರ ಅವರ ಆಟ ನಿಧಾನವಾಯಿತು. ಶತಕದತ್ತ ಹೆಜ್ಜೆ ಹಾಕಿದ್ದ ಪೂಜಾರ (86;130ಎಸೆತ, 14ಬೌಂಡರಿ) 43ನೇ ಓವರ್‌ನಲ್ಲಿ ಔಟಾದರು. ಅದರೊಂದಿಗೆ 206 ರನ್‌ಗಳ ಜೊತೆಯಾಟ ಮುರಿದುಬಿತ್ತು.  ಎಂಟು ಓವರ್‌ಗಳ ನಂತರ ಪೃಥ್ವಿ ಕೂಡ ಬೌಲರ್‌ ಬಿಷೂಗೆ ಕ್ಯಾಚಿತ್ತು ಮರಳಿದರು.

ನಂತರ ಜೊತೆಗೂಡಿದ ಕೊಹ್ಲಿ ಮತ್ತು ರಹಾನೆ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಪೃಥ್ವಿ ಸಾಧನೆ

*ಪದಾರ್ಪಣೆ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ವಿಶ್ವದ 106ನೇ ಬ್ಯಾಟ್ಸ್‌ಮನ್‌.

 *ಚೊಚ್ಚಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ.

*ಪ್ರಥಮ ದರ್ಜೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಮೊದಲ ಟೆಸ್ಟ್‌ ಪಂದ್ಯಗಳಲ್ಲಿ ಶತಕ ಗಳಿಸಿದ ವಿಶ್ವದ ಮೂರನೇ ಆಟಗಾರ. ಭಾರತದ ಜಿ.ಆರ್‌.ವಿಶ್ವನಾಥ್‌ ಮತ್ತು ಆಸ್ಟ್ರೇಲಿಯಾದ ಡಿರ್ಕ್‌ ವೆಲ್‌ಹ್ಯಾಮ್‌ ಮೊದಲು ಈ ಸಾಧನೆ ಮಾಡಿದ್ದರು. 2016–17ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ (ತಮಿಳುನಾಡು ಎದುರು) ಪೃಥ್ವಿ ಮೂರಂಕಿಯ ಗಡಿ ದಾಟಿದ್ದರು.

*ಭಾರತದಲ್ಲಿ ಆಡಿದ ಟೆಸ್ಟ್‌ ಪಂದ್ಯದಲ್ಲಿ 50ಕ್ಕೂ ಅಧಿಕ ರನ್‌ ಗಳಿಸಿದ ಮೂರನೇ ಅತಿ ಕಿರಿಯ ಬ್ಯಾಟ್ಸ್‌ಮನ್‌. ಪಾಕಿಸ್ತಾನದ ಹನೀಫ್‌ ಮೊಹಮ್ಮದ್‌ ಮತ್ತು ಮುಷ್ತಾಕ್‌ ಮೊಹಮ್ಮದ್‌ ಅವರಿಂದ ಮೊದಲು ಈ ಸಾಧನೆ ಮೂಡಿಬಂದಿತ್ತು.

 *ಟೆಸ್ಟ್‌ ಮಾದರಿಗೆ ಪದಾರ್ಪಣೆ ಮಾಡಿದ ಭಾರತದ 13ನೇ ಅತಿ ಕಿರಿಯ ಬ್ಯಾಟ್ಸ್‌ಮನ್‌.

*ಟೆಸ್ಟ್‌ ಪಂದ್ಯವೊಂದರ ಇನಿಂಗ್ಸ್‌ನ ಮೊದಲ ಓವರ್‌ನ ಪ್ರಥಮ ಎಸೆತ ಎದುರಿಸಿದ ವಿಶ್ವದ ನಾಲ್ಕನೇ ಅತಿ ಕಿರಿಯ ಆಟಗಾರ. ಜಿಂಬಾಬ್ವೆಯ ಹ್ಯಾಮಿಲ್ಟನ್‌ ಮಸಕಜಾ, ಬಾಂಗ್ಲಾದೇಶದ ತಮಿಮ್‌ ಇಕ್ಬಾಲ್‌ ಮತ್ತು ಪಾಕಿಸ್ತಾನದ ಇಮ್ರಾನ್‌ ಫರ್ಹಾತ್‌ ಈ ಹಿರಿಮೆ ಹೊಂದಿದ್ದರು. ಭಾರತದ ಮಟ್ಟಿಗೆ ಪೃಥ್ವಿಗಿಂತಲೂ ಮೊದಲು ಬುಧಿ ಕುಂದರನ್‌ (1959–60) ಈ ಸಾಧನೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !