ಪೃಥ್ವಿ ಶಾ ಇನ್ನಷ್ಟು ಪಕ್ವಗೊಳ್ಳಬೇಕು

7
ವೆಸ್ಟ್ ಇಂಡೀಸ್‌ ಎದುರಿನ ಪಂದ್ಯದಲ್ಲಿ ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗೆ ಹಿರಿಯರ ಸಲಹೆ

ಪೃಥ್ವಿ ಶಾ ಇನ್ನಷ್ಟು ಪಕ್ವಗೊಳ್ಳಬೇಕು

Published:
Updated:
Deccan Herald

ರಾಜ್‌ಕೋಟ್‌: ವೆಸ್ಟ್ ಇಂಡೀಸ್‌ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಪೃಥ್ವಿ ಶಾ ಅವರು ಇನ್ನಷ್ಟು ಪಕ್ವಗೊಂಡರೆ ಮಾತ್ರ ಹೆಚ್ಚಿನ ಸವಾಲುಗಳನ್ನು ಮೆಟ್ಟಿನಿಲ್ಲಲು ಸಾಧ್ಯ ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಣದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ ಶಾ 134 ರನ್‌ ಗಳಿಸಿ ಮಿಂಚಿದ್ದರು. ಈ ಮೂಲಕ ಪದಾರ್ಪಣೆ ಪಂದ್ಯದಲ್ಲಿ ಮೂರಂಕಿ ಮೊತ್ತ ತಲುಪಿದ ಭಾರತದ ಅತಿ ಕಿರಿಯ ಆಟಗಾರ ಎಂದೆನಿಸಿಕೊಂಡಿದ್ದರು. ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ ಇನಿಂಗ್ಸ್ ಮತ್ತು 272 ರನ್‌ಗಳಿಂದ ಗೆದ್ದಿತ್ತು.

ಮೋಹಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಪೃಥ್ವಿ ಅವರ ಕೆಲವು ಹೊಡೆತಗಳನ್ನು ದಿಗ್ಗಜ ಕ್ರಿಕೆಟಿಗರ ಹೊಡೆತಗಳಿಗೆ ಕ್ರಿಕೆಟ್ ಪಂಡಿತರು ಹೋಲಿಸಿದ್ದಾರೆ. ಬ್ಯಾಕ್‌ಫೂಟ್‌ನಲ್ಲಿ ಅವರು ಮಾಡುವ ಪಂಚ್‌ಗಳು ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಆಗಿದ್ದ ಕಾರ್ಲ್ ಹೂಪರ್‌ ಅವರ ಆಟವನ್ನು ನೆನಪಿಸುವಂತಿತ್ತು ಎಂದು ಹೇಳಲಾಗಿತ್ತು.

ಆದರೆ ವೆಸ್ಟ್ ಇಂಡೀಸ್‌ ತಂಡದ ಬೌಲರ್‌ಗಳು ಪರಿಣಾಮಕಾರಿ ದಾಳಿ ಸಂಘಟಿಸದೇ ಇದ್ದುದರಿಂದ ಶಾ ಅವರಿಗೆ ಸುಲಭವಾಗಿ ಶತಕ ಗಳಿಸಲು ಸಾಧ್ಯವಾಯಿತು ಎಂಬ ಮಾತು ಕೂಡ ಕೇಳಿ ಬಂದಿದೆ. ‘ಪೃಥ್ವಿ ಶಾ ಅವರು ಇದೇ ರೀತಿಯ ಆಟವನ್ನು ಮುಂದುವರಿಸಿದರೆ ವಿದೇಶಿ ನೆಲದಲ್ಲಿ ಮಿಂಚುವುದು ಕಷ್ಟ. ಮುಂದಿನ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸರಣಿ ಅವರಿಗೆ ಸವಾಲಿನದ್ದಾಗಲಿದೆ’ ಎಂದು ಹೂಪರ್ ಹೇಳಿದ್ದಾರೆ.

‘ಶಾ ಉತ್ತಮ ಬ್ಯಾಟ್ಸ್‌ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬ್ಯಾಟ್‌ ಮತ್ತು ದೇಹದ ಮಧ್ಯೆ ತುಂಬ ಅಂತರ ಇರಿಸುತ್ತಾರೆ. ಈ ತಂತ್ರ ರಾಜ್‌ಕೋಟ್‌ನಲ್ಲಿ ಯಶಸ್ಸು ಕಂಡಿದೆ. ಆದರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನೆಲದಲ್ಲಿ ಫಲಿಸುವುದು ಕಷ್ಟ’ ಎಂದು ಸುದ್ದಿಸಂಸ್ಥೆಗೆ ಹೂಪರ್ ಹೇಳಿದರು.

ಭಾರತದ ಹಿರಿಯ ಕ್ರಿಕೆಟಿಗ ಆಕಾಶ್ ಚೋ‍ಪ್ರಾ ಕೂಡ ಶಾ ಅವರ ತಂತ್ರದ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾರೆ. ‘ಶಾ ಇನ್ನಷ್ಟು ಪಕ್ವವಾಗಿ ಬ್ಯಾಟ್‌ ಬೀಸಬೇಕಾಗಿದೆ’ ಎಂದು ಹೇಳಿದ ಅವರು ‘ಅಸಾಂಪ್ರದಾಯಿಕ ಶೈಲಿಯಲ್ಲಿ ವೀರೇಂದ್ರ ಸೆಹ್ವಾಗ್ ಯಶಸ್ಸು ಕಂಡಿದ್ದಾರೆ. ಹೀಗಾಗಿ ಈ ಮಾದರಿಯ ಆಟ ಶಾ ಅವರ ಕೈ ಹಿಡಿದರೂ ಅಚ್ಚರಿಪಡಬೇಕಾಗಿಲ್ಲ’ ಎಂದಿದ್ದಾರೆ.

‘ಶಾ ಉತ್ತಮ ಆರಂಭ ಕಂಡಿದ್ದಾರೆ. ಅವರ ಬ್ಯಾಟಿಂಗ್‌ ಶೈಲಿಯಲ್ಲಿ ಕೆಲವು ಸಮಸ್ಯೆಗಳಿವೆ. ಅದು ಈಗಾಗಲೇ ಅವರ ಗಮನಕ್ಕೆ ಬಂದಿರಬಹುದು. ಸರಿಪಡಿಸಲು ಪ್ರಯತ್ನಿಸಿರಲೂಬಹುದು. ಹೀಗಾಗಿ ಅವರ ಭವಿಷ್ಯದ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ’ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುತ್ತದೆ. ಮಿಷೆಲ್ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್ ಮುಂತಾದವರ ಎಸೆತಗಳನ್ನು ಎದುರಿಸಲು ಶಾ ಅವರಿಗೆ ಕಷ್ಟವಾಗಬಹುದು. ಅದೇನೇ ಇರಲಿ, ಸದ್ಯ ನಾವೆಲ್ಲ ಅವರನ್ನು ಹುರಿದುಂಬಿಸಬೇಕಾಗಿದೆ’ ಎಂದು ನುಡಿದರು.

ಮುಂಬೈನ ಅಮೋಲ್ ಮಜುಂದಾರ್ ಕೂಡ ಶಾ ಅವರು ಭವಿಷ್ಯದಲ್ಲಿ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !