ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಕ್ಕೆ ವಿದಾಯ ಹೇಳಿದ ‘ದಾವಣಗೆರೆ ಎಕ್ಸ್‌ಪ್ರೆಸ್‌’

ಪುದುಚೇರಿ ತಂಡಕ್ಕೆ ಜಿಗಿದ ವಿನಯಕುಮಾರ್
Last Updated 19 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ದಾವಣಗೆರೆ ಎಕ್ಸ್‌ಪ್ರೆಸ್’ ಆರ್. ವಿನಯಕುಮಾರ್ ಈ ಬಾರಿ ದೇಶಿ ಋತುವಿನಲ್ಲಿ ಕರ್ನಾಟಕ ತಂಡದಲ್ಲಿ ಆಡುವುದಿಲ್ಲ. ಅವರು ಪುದುಚೇರಿ ತಂಡ ಸೇರಿಕೊಳ್ಳಲಿದ್ದಾರೆ.

ಸೋಮವಾರ ರಾತ್ರಿ ದಿಢೀರ್ ಪತ್ರಿಕಾಗೋಷ್ಠಿ ಕರೆದ ವಿನಯಕುಮಾರ್ ಈ ವಿಷಯವನ್ನು ಪ್ರಕಟಿಸಿದರು.

‘ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದಾಗ ನನಗೆ 21 ವರ್ಷ ವಯಸ್ಸಾಗಿತ್ತು. ಆಗ ವೆಂಕಟೇಶಪ್ರಸಾದ್ ನಿವೃತ್ತರಾಗಿದ್ದರು. ಅವರ ಸ್ಥಾನ ನನಗೆ ಲಭಿಸಿತ್ತು. ಇದೀಗ ನಾನು ಒಂದೂವರೆ ದಶಕಗಳ ಕಾಲ ಆಡಿದ್ದೇನೆ. ಪ್ರತಿಭಾನ್ವಿತ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಅವಕಾಶ ಬಿಟ್ಟುಕೊಡುವುದು ನನ್ನ ಉದ್ದೇಶ. ಅದಕ್ಕಾಗಿ ಪುದುಚೇರಿ ತಂಡವನ್ನು ಆಟಗಾರ ಮತ್ತು ಮಾರ್ಗದರ್ಶಕನಾಗಿ ಸೇರಿಕೊಳ್ಳಲಿದ್ದೇನೆ’ ಎಂದರು.

‘ಪುದುಚೇರಿ ತಂಡಕ್ಕೆ ಕೋಚ್ ಆಗಿರುವ ಜೆ. ಅರುಣಕುಮಾರ್ ಅವರು ನನಗೆ ಎರಡು ವಾರಗಳ ಹಿಂದೆ ಆಹ್ವಾನ ನೀಡಿದ್ದರು. ಅದು ಕೂಡ ಹೊಸ ತಂಡವಾಗಿದೆ. ಅಲ್ಲಿಯ ಯುವ ಆಟಗಾರರಿಗೆ ಸಹಾಯ ಮಾಡುವ ಅವಕಾಶ ಲಭಿಸಿದೆ’ ಎಂದರು.

‘ತಂಡದಲ್ಲಿದ್ದ ಎಲ್ಲ ಗೆಳೆಯರೊಂದಿಗೆ ಉತ್ತಮ ಸಮಯ ಕಳೆದಿದ್ದೇನೆ. ಸತತ ಎರಡು ವರ್ಷ ದೇಶಿ ಕ್ರಿಕೆಟ್‌ನಲ್ಲಿ ಎರಡು ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಇರಾನಿ ಟ್ರೋಫಿ ಗೆದ್ದ ಕ್ಷಣಗಳು ಅವಿಸ್ಮರಣೀಯ. ಈಗ ಪ್ರಸಿದ್ಧಕೃಷ್ಣ, ಕಾರ್ತಿಕ್ ಮತ್ತು ಪ್ರತೀಕ್ ಜೈನ್ ಅವರಂತಹ ಆಟಗಾರರು ಈಗ ಸಿದ್ಧವಾಗಿದ್ದಾರೆ. 20 ವರ್ಷದ ಆಸುಪಾಸಿನಲ್ಲಿರುವ ಅವರಿಗೆ ಈಗ ಅವಕಾಶ ಸಿಕ್ಕರೆ ಮುಂದೆ ಅವರು ಭಾರತ ತಂಡಕ್ಕೂ ಆಡಬಹುದು. ಕರ್ನಾಟಕದಲ್ಲಿ ಎಂದಿಗೂ ಪ್ರತಿಭೆಗಳಿಗೆ ಕೊರತೆಯಿಲ್ಲ’ ಎಂದರು.

‘ಬೆಂಗಳೂರಿನಲ್ಲಿ ನಡೆದಿದ್ದ ಮುಂಬೈ ಎದುರಿನ ರಣಜಿ ಪಂದ್ಯ ಮತ್ತು ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಸಿದ್ದು ನನ್ನ ಶ್ರೇಷ್ಠ ಸಾಧನೆಗಳಾಗಿವೆ. ಕರ್ನಾಟಕವು ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿ’ ಎಂದು ವಿನಯ್ ಹೇಳಿದರು.

ದಾವಣಗೆರೆಯ ಪ್ರತಿಭೆ ವಿನಯಕುಮಾರ್ ಅವರು 2004ರಲ್ಲಿ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಬಲಗೈ ಮಧ್ಯಮವೇಗಿ ಮತ್ತು ಬ್ಯಾಟ್ಸ್‌ಮನ್ ಆಗಿ ಮಿಂಚಿದರು. ಭಾರತ ತಂಡದಲ್ಲಿ ಒಂದು ಟೆಸ್ಟ್, 31 ಏಕದಿನ ಮತ್ತು 9 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ನಡೆಯುತ್ತಿರುವ ಕೆಪಿಎಲ್ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಅವರು ನಾಯಕರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿನಯ್ ಪತ್ನಿ ರಿಚಾ ಸಿಂಗ್, ಕೆಎಸ್‌ಸಿಎ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ಹಂಗಾಮಿ ಕಾರ್ಯದರ್ಶಿ ಸುಧಾಕರ್‌ ರಾವ್, ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್, ವಕ್ತಾರ ವಿನಯ್ ಮೃತ್ಯುಂಜಯ, ಆಯ್ಕೆ ಸಮಿತಿ ಮುಖ್ಯಸ್ಥ ರಘುರಾಮ್ ಭಟ್, ಸದಸ್ಯರಾದ ಜೆ.ಅಭಿರಾಮ್, ಆನಂದ ಕಟ್ಟಿ ಹಾಜರಿದ್ದರು.

*

ವಿನಯಕುಮಾರ್ ಒಬ್ಬ ಒಳ್ಳೆಯ ಆಟಗಾರ ಮತ್ತು ನಾಯಕತ್ವದ ಗುಣಗಳಿದ್ದವರು. ತಂಡದ ಚೈತನ್ಯವನ್ನು ಕಾಪಾಡಿಕೊಂಡು ಹೋರಾಟ ಮಾಡುವ ಛಲದ ಆಟಗಾರ.
–ಸುಧಾಕರ್ ರಾವ್, ಹಂಗಾಮಿ ಕಾರ್ಯದರ್ಶಿ, ಕೆಎಸ್‌ಸಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT