ಭಾನುವಾರ, ನವೆಂಬರ್ 28, 2021
22 °C
ಅಜೇಯ 98 ರನ್‌ ಗಳಿಸಿದ ಕೆ.ಎಲ್‌.ರಾಹುಲ್; ಚೆನ್ನೈಗೆ ಆಸರೆಯಾದ ಫಫ್ ಡು ಪ್ಲೆಸಿ

DNP ಚೆನ್ನೈ ವಿರುದ್ಧ ಪಂಜಾಬ್‌ ‘ಕಿಂಗ್ಸ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ನಾಯಕ ಕೆ.ಎಲ್‌.ರಾಹುಲ್ (ಔಟಾಗದೆ 98; 42 ಎಸೆತ, 7 ಬೌಂಡರಿ, 8 ಸಿಕ್ಸರ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. 

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಆರು ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಗಳಿಸಿತು. ಫಫ್‌ ಡು ಪ್ಲೆಸಿ (76; 55 ಎ, 8 ಬೌಂ, 2 ಸಿ) ಅವರ ಏಕಾಂಗಿ ಹೋರಾಟದ ಫಲವಾಗಿ ಚೆನ್ನೈ ಆರು ವಿಕೆಟ್‌ಗಳಿಗೆ 134 ರನ್ ಗಳಿಸಿತ್ತು. ಕಿಂಗ್ಸ್ 13 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 139 ರನ್ ಗಳಿಸಿತು.

ಸಾಧಾರಣ ಮೊತ್ತ ಬೆನ್ನತ್ತಿದ ಕಿಂಗ್ಸ್ 46 ರನ್ ಗಳಿಸುವಷ್ಟರಲ್ಲಿ ಮಯಂಕ್ ಅಗರವಾಲ್ ಅವರ ವಿಕೆಟ್ ಕಳೆದುಕೊಂಡಿತು. ಅದೇ ಮೊತ್ತಕ್ಕೆ ಸರ್ಫರಾಜ್ ಖಾನ್ ಅವರ ವಿಕೆಟ್‌ ಕೂಡ  ಉರುಳಿತು. ಶಾರೂಖ್ ಖಾನ್ ಜೊತೆಗೂಡಿ ರಾಹುಲ್ 34 ರನ್‌ಗಳನ್ನು ಸೇರಿಸಿದರು. ಶಾರೂಖ್ ಕೇವಲ ಎಂಟು ರನ್ ಗಳಿಸಿ ಔಟಾದರು. ನಂತರ ಏಡನ್ ಮರ್ಕರಮ್ ಜೊತೆ 46 ರನ್‌ ಸೇರಿಸಿದರು.

ವಿಕೆಟ್‌ಗಳು ಉರುಳುತ್ತಿದ್ದರೂ ರಾಹುಲ್ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು. ಹೀಗಾಗಿ ತಂಡಕ್ಕೆ ಸುಲಭ ಜಯ ಒಲಿಯಿತು.

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಮೊತ್ತ 18 ರನ್‌ ಆಗಿದ್ದಾಗ ಋತುರಾಜ್ ಗಾಯಕವಾಡ್ ವಿಕೆಟ್ ಕಳೆದುಕೊಂಡರು. ಮೋಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್‌ಗಳು ಬೇಗನೇ ಉರುಳಿದವು. ಆದರೆ ಫಫ್ ಡು ಪ್ಲೆಸಿ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದರು. ರವೀಂದ್ರ ಜಡೇಜ ಜೊತೆ ಆರನೇ ವಿಕೆಟ್‌ಗೆ 67 ರನ್‌ ಸೇರಿಸಿ ಪ್ಲೆಸಿ ಔಟಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.