ಮಂಗಳವಾರ, ಮೇ 11, 2021
27 °C

PBKS vs CSK: ಡುಪ್ಲೆಸಿ- ಮೊಯಿನ್ ಉತ್ತಮ ಜೊತೆಯಾಟ, ಚೆನ್ನೈಗೆ ಮೊದಲ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೀಪಕ್ ಚಾಹರ್ ಮೊನಚಾದ ದಾಳಿ ಮತ್ತು ರವೀಂದ್ರ ಜಡೇಜ ಮಿಂಚಿನ ಫೀಲ್ಡಿಂಗ್‌ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಂಗಾಲು ಮಾಡಿತು. ಫಾಫ್ ಡು ಪ್ಲೆಸಿ ಮತ್ತು ಮೋಯಿನ್ ಅಲಿ ಜೋಡಿ ಬ್ಯಾಟಿಂಗ್‌ನಲ್ಲಿ ಮಿಂಚಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸುಲಭ ಜಯ ಗಳಿಸಿಕೊಟ್ಟರು.

ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಕೆ.ಎಲ್.ರಾಹುಲ್ ಬಳಗವನ್ನು ಮಣಿಸಿ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನಕ್ಕೇರಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ 107 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಇನ್ನೂ 26 ಎಸೆತಗಳು ಉಳಿದಿರುವಾಗಲೇ ನಾಲ್ಕು ವಿಕೆಟ್ ಕಳೆದುಕೊಂಡು ಜಯದ ದಡ ಸೇರಿತು. 

24 ರನ್‌ಗಳಿಗೆ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ವಿಕೆಟ್ ಕಳೆದುಕೊಂಡ ಮಹೇಂದ್ರ ಸಿಂಗ್ ಧೋನಿ ಪಡೆಯ ಫಾಫ್ ಡು ಪ್ಲೆಸಿ (36; 33 ಎಸೆತ, 3 ಬೌಂಡರಿ, 1 ಸಿಕ್ಸರ್‌) ಮತ್ತು ಮೋಯಿನ್ ಅಲಿ (46; 31 ಎ, 7 ಬೌಂ, 1 ಸಿ) ಸುಲಭ ಜಯಕ್ಕೆ ಕಾರಣರಾದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡಕ್ಕೆ ವೇಗಿ ದೀಪಕ್ ಚಾಹರ್ ಪೆಟ್ಟು ನೀಡಿದರು. ಶಾರೂಖ್‌ ಖಾನ್ (47; 36 ಎ, 4 ಬೌಂ, 2 ಸಿ) ಏಕಾಂಗಿ ಹೋರಾಟದ ಮೂಲಕ ಮೊತ್ತ ಮೂರಂಕಿ ಮೊತ್ತ ದಾಟಲು ನೆರವಾದರು. ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲೇ ಮಯಂಕ್ ಅಗರವಾಲ್ ವಿಕೆಟ್‌ ಕಳೆದುಕೊಂಡರು. ನಾಯಕ ರಾಹುಲ್ ಜೊತೆಗೂಡಿದ ಕ್ರಿಸ್ ಗೇಲ್‌ ಆರಂಭಿಕ ಆಘಾತದಿಂದ ತಂಡವನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಐದನೇ ಎಸೆತದಲ್ಲಿ ರವೀಂದ್ರ ಜಡೇಜ ಅವರ ಜಾದೂ ರಾಹುಲ್ ವಿಕೆಟ್ ಕಬಳಿಸಿತು. ದೀಪಕ್ ಎಸೆತದಲ್ಲಿ ಚೆಂಡು ಗೇಲ್ ಪ್ಯಾಡ್‌ಗೆ ಬಡಿದಿತ್ತು. ಎಲ್‌ಬಿಡಬ್ಲ್ಯುಗೆ ಮನವಿ ಸಲ್ಲಿಸುತ್ತಿದ್ದಂತೆ ಗೇಲ್‌ ಮತ್ತು ರಾಹುಲ್ ಒಂದು ರನ್‌ ಗಳಿಸಲು ಪ್ರಯತ್ನಿಸಿದರು. ಶಾರ್ಟ್‌ ಕವರ್ಸ್‌ನಲ್ಲಿದ್ದ ಜಡೇಜ ಮಿಂಚಿನ ವೇಗದಲ್ಲಿ ಚೆಂಡನ್ನು ಕೈಗೆತ್ತಿಕೊಂಡು ಸ್ಟಂಪ್‌ಗೆ ನೇರವಾಗಿ ಎಸೆದು ಬೇಲ್ಸ್‌ ಬೀಳಿಸಿದರು.

ಚಾಹರ್, ತಮ್ಮ ಮುಂದಿನ ಓವರ್‌ನಲ್ಲಿ ಕ್ರಿಸ್ ಗೇಲ್ ಮತ್ತು ನಿಕೋಲಸ್ ಪೂರನ್ ವಿಕೆಟ್ ಉರುಳಿಸಿದರು. ದೀಪಕ್ ಹೂಡಾ ಅವರೂ ಚಾಹರ್‌ಗೆ ಬಲಿಯಾದರು. 26 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡ ತಂಡಕ್ಕೆ ಶಾರೂಖ್‌ ಖಾನ್ ಮತ್ತು ಜೇ ರಿಚರ್ಡ್ಸನ್ ಆಸರೆಯಾದರು. ಇವರಿಬ್ಬರ 31 ರನ್ ಜೊತೆಯಾಟದಿಂದಾಗಿ ತಂಡದ ಮೊತ್ತ ಅರ್ಧಾಶತಕ ದಾಟಿತು. ರಿಚರ್ಡ್ಸನ್ ಔಟಾದ ನಂತರ ಶಾರೂಖ್‌ ಜೊತೆಗೂಡಿದ ಮುರುಗನ್ ಅಶ್ವಿನ್ ಏಳನೇ ವಿಕೆಟ್‌ಗೆ 30 ರನ್ ಸೇರಿಸಿ ತಂಡದ ಮೊತ್ತವನ್ನು ಶತಕದತ್ತ ಕೊಂಡೊಯ್ದರು. ಮೊಹಮ್ಮದ್ ಶಮಿ ಜೊತೆ ಶಾರೂಖ್ ಖಾನ್ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಆದರೆ ಅರ್ಧಶತಕದ ಅಂಚಿನಲ್ಲಿದ್ದಾಗ ವಿಕೆಟ್ ಕಳೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು