ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ದ್ರಾವಿಡ್ ಶಿಷ್ಯ ಇಶಾನ್ ಕಿಶನ್ ಕಿವಿಯೋಲೆ ಪ್ರೀತಿ!

Last Updated 16 ಮಾರ್ಚ್ 2021, 9:42 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ಅಂಗಳದ ’ನವಪ್ರತಿಭೆ‘ ಇಶಾನ್ ಕಿಶನ್ ಕ್ರಿಕೆಟ್‌ ಕಿಟ್‌ನಲ್ಲಿ ಆಟದ ವಸ್ತಗಳ ಜೊತೆಗೆ ಕಿವಿಯೋಲೆಗಳ ಒಂದು ಪುಟ್ಟ ಚೀಲ ಕೂಡ ಇರುತ್ತದೆಯಂತೆ!

ಮೊನ್ನೆ ಮೊಟೇರಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದ 22 ವರ್ಷದ ಇಶಾನ್ ಆಟ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಪದಾರ್ಪಣೆಯ ಪಂದ್ಯದಲ್ಲಿಯೇ ತಮ್ಮ ’ಚೋಟಾ ಡೈನಮೈಟ್‌‘ ನಿಕ್‌ನೇಮ್‌ಗೆ ತಕ್ಕಂತೆ ಸಿಕ್ಸರ್‌, ಬೌಂಡರಿಗಳನ್ನು ಸಿಡಿಸಿದರು. ಅವರ ಆಟದ ಜೊತೆಗೆ ಧರಿಸಿದ್ದ ಕಿವಿಯೋಲೆಯೂ ಅವತ್ತು ಮಿರುಗುಟ್ಟಿತ್ತು.

ಅಂದಹಾಗೆ ಇಶಾನ್ ಕಿವಿಯೋಲೆ ಪ್ರೀತಿಯ ಹಿಂದೆ ಒಂದು ಕಥೆಯೂ ಇದೆ. ಇಶಾನ್ , ಬಿಹಾರದ ನವಾದ್‌ನಲ್ಲಿ ಹುಟ್ಟಿ, ಬೆಳೆದವರು. ಶಾಲೆಯಲ್ಲಿ ಓದುವಾಗ ಭಲೇ ತುಂಟನಾಗಿದ್ದ ಇಶಾನ್‌ಗೆ ಕ್ರಿಕೆಟ್‌ ಸರ್ವಸ್ವವಾಗಿತ್ತು. ಓದು–ಬರಹ ಅಷ್ಟಕ್ಕಷ್ಟೇ. ಪುಸ್ತಕದಿಂದ ಆದಷ್ಟು ದೂರವಿರುವ ಪ್ರಯತ್ನ ಮಾಡುತ್ತಿದ್ದ ಹುಡುಗನಿಂದ ಅಪ್ಪ–ಅಮ್ಮ ಪ್ರತಿದಿನವೂ ದೂರುಗಳನ್ನು ಕೇಳುತ್ತಿದ್ದರು. ಆರನೇ ತರಗತಿಯಲ್ಲಿದ್ದ ಇಶಾನ್‌ಗೆ ಕಿವಿಯೋಲೆ ಧರಿಸುವ ಹವ್ಯಾಸ ಅಂಟಿಕೊಂಡಿತು. ಆದರೆ, ಇಶಾನ್ ಓದುತ್ತಿದ್ದ ಪ್ರತಿಷ್ಠಿತ ಶಾಲೆಯಲ್ಲಿ ಈ ರೀತಿ ಕಿವಿಯೋಲೆ ಧರಿಸುವುದು ಶಿಸ್ತು ಉಲ್ಲಂಘನೆಯಾಗಿತ್ತು. ಅದಕ್ಕಾಗಿ ಇಶಾನ್ ತಮ್ಮ ಶಿಕ್ಷಕರಿಗೆ, ’ನಾನು ಸದಾ ಕಿವಿಯೋಲೆಯನ್ನು ಧರಿಸಬೇಕೆಂಬುವುದು ನನ್ನಜ್ಜನ ಕೊನೆಯಾಸೆಯಾಗಿತ್ತು‘ ಎಂದಿದ್ದರು. ಆದರೆ ಆಗಿನ್ನೂ ಅವರ ಅಜ್ಜ ಬದುಕಿದ್ದರಂತೆ!

ಮಹೇಂದ್ರ ಸಿಂಗ್‌ ಧೋನಿ ಮತ್ತು ರಾಹುಲ್‌ ದ್ರಾವಿಡ್‌
ಮಹೇಂದ್ರ ಸಿಂಗ್‌ ಧೋನಿ ಮತ್ತು ರಾಹುಲ್‌ ದ್ರಾವಿಡ್‌

ಕೆಲವು ವರ್ಷಗಳ ಹಿಂದೆ ಈ ವಿಷಯವನ್ನು ಇಶಾನ್ ತಂದೆ ಪ್ರಣವ್ ಪಾಂಡೆ ಮತ್ತು ತಾಯಿ ಸುಚಿತ್ರಾ ಸಿಂಗ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಬಾಲ್ಯದಲ್ಲಿ ಕ್ರಿಕೆಟ್ ಆಡುವಾಗ ಅದೆಷ್ಟೋ ಮನೆಯ ಬಾಗಿಲು, ಕಿಟಕಿ ಗಾಜುಗಳನ್ನು ಒಡೆದ ಕಥೆಗಳನ್ನೂ ಹಂಚಿಕೊಂಡಿದ್ದರು. ಶಾಲೆಯ ಪರೀಕ್ಷೆಯಲ್ಲಿ ನಪಾಸಾದ ತನ್ನ ಉತ್ತರಪತ್ರಿಕೆಗಳನ್ನು ಮತ್ತು ಅಂಕಪಟ್ಟಿಗಳನ್ನು ಮನೆಗೆ ಬರುವ ದಾರಿಯಲ್ಲಿ ಎಸೆದು ಬಂದಿದ್ದೇ ಹೆಚ್ಚಂತೆ ಇಶಾನ್. ಸದಾ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಶಾನ್, ತರಗತಿಗಳಿಗೆ ಗೈರುಹಾಜರಾಗಿದ್ದೇ ಹೆಚ್ಚು ಎಂದು ಪಾಂಡೆ ನಗುತ್ತಾರೆ. ಆಗೆಲ್ಲ ಕೋಪದಿಂದ ಮಗನನ್ನು ದಂಡಿಸುತ್ತಿದ್ದ ಅಪ್ಪ–ಅಮ್ಮ ಇವತ್ತು ಹೆಮ್ಮೆಯಿಂದ ಮಾತನಾಡುವ ಮಟ್ಟಕ್ಕೆ ಇಶಾನ್ ಬೆಳೆದಿದ್ದಾರೆ.

ಕಟ್ಟಡ ನಿರ್ಮಾಣ ಉದ್ಯಮಿಯಾಗಿದ್ದ ಪಾಂಡೆ ಅವರ ಇಬ್ಬರು ಮಕ್ಕಳಲ್ಲಿ ಇಶಾನ್ ಕಿರಿಯ. ಅಣ್ಣ ರಾಜ್ ಕಿಶನ್ ಕೂಡ ಕ್ರಿಕೆಟ್ ಆಡುತ್ತಿದ್ದರು. ರಾಜ್ ಆಟವನ್ನು ನೋಡಿಕೊಂಡೇ ಬೆಳೆದ ಇಶಾನ್ ಏಳನೇ ವಯಸ್ಸಿನಲ್ಲಿ ತಮ್ಮ ಎಡಗೈ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಮನೆಯಲ್ಲಿ ಎಲ್ಲ ಅನುಕೂಲವಿದ್ದರೂ ತಂದೆ ಗೆ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಆಗಿನ ಬಿಹಾರದಲ್ಲಿ ಕ್ರಿಕೆಟ್ ಕಲಿಕೆಗೆ ಅವಕಾಶಗಳೂ ಅಷ್ಟಿರಲಿಲ್ಲ. ಆದರೆ, ಸ್ಥಳೀಯ ಕೋಚ್ ಒಬ್ಬರು ಬಂದು ಇಶಾನ್ ಪ್ರತಿಭೆಯ ಬಗ್ಗೆ ಮನದಟ್ಟು ಮಾಡಿದ್ದರು.

ಆಗ ಅವರು ಇಶಾನ್ ಮತ್ತು ರಾಜ್ ಇಬ್ಬರಿಗೂ ಕ್ರಿಕೆಟ್ ಕೋಚಿಂಗ್‌ ಗೆ ಕಳಿಸಿದರು. ಆದರೆ, ಕೆಲವೇ ದಿನಗಳಲ್ಲಿ ಇಶಾನ್ ತಮ್ಮ ಅಣ್ಣನಿಗಿಂತ ಮುಂದೆ ಸಾಗಿದರು. ಅದಕ್ಕೆ ಕಾರಣ ಅವರ ನಿರ್ಭಿಡೆಯ ವ್ಯಕ್ತಿತ್ವ. ಆದರೆ ಇಶಾನ್ ಜೂನಿಯರ್ ಕ್ರಿಕೆಟ್‌ನಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದಾಗ ದುರದೃಷ್ಟ ಕಾಡಿತ್ತು. ಬಿಹಾರ ಕ್ರಿಕೆಟ್ ಸಂಸ್ಥೆಯು ಬಿಸಿಸಿಐನ ಮಾನ್ಯತೆ ಕಳೆದುಕೊಂಡಿತ್ತು. ಅದರಿಂದಾಗಿ ರಾಜ್ಯ ಯುವಪ್ರತಿಭೆಗಳ ಭವಿಷ್ಯ ಡೋಲಾಯಮಾನವಾಗಿತ್ತು. ಅಣ್ಣ ಮತ್ತು ಸ್ನೇಹಿತರ ಸಲಹೆಯಂತೆ 15 ವರ್ಷ ವಯಸ್ಸಿನಲ್ಲಿ ಇಶಾನ್ ಜಾರ್ಖಂಡ್‌ ತಂಡಕ್ಕೆ ವಲಸೆ ಹೋದರು. ಅದು ಅವರ ಕ್ರಿಕೆಟ್ ಜೀವನದ ಮಹತ್ವದ ತಿರುವಾಯಿತು. ತಮ್ಮ ರೋಲ್‌ ಮಾಡೆಲ್ ಮಹೇಂದ್ರಸಿಂಗ್ ಧೋನಿಯ ಸಾಮಿಪ್ಯ ಸಿಕ್ಕಾಗ ವ್ಯಕ್ತಿತ್ವವೂ ಬದಲಾಗತೊಡಗಿತು.

ಆದರೆ ಅವರ ಪ್ರತಿಭೆ ಬೆಳಗಲು ಆರಂಭಿಸಿದ್ದು 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಆಡುವ ಹೊತ್ತಿನಲ್ಲಿ ಕೋಚ್ ರಾಹುಲ್ ದ್ರಾವಿಡ್ ಸಾಂಗತ್ಯಕ್ಕೆ ಬಂದಾಗ.

’ಕೆಲವು ಟೂರ್ನಿಗಳಲ್ಲಿ ಚೆನ್ನಾಗಿ ಆಡಿದ ನಂತರ ಪ್ರಸಿದ್ಧಿ ದೊರೆಯುತ್ತದೆ. ಆದರೆ ಅದು ನಿನ್ನ ಒತ್ತಡವನ್ನು ಹೆಚ್ಚಿಸುತ್ತದೆ. ಅದನ್ನು ಮೀರಿನಿಲ್ಲಬೇಕೆಂದರೆ, ಕಣಕ್ಕಿಳಿಯುವ ಪ್ರತಿಯೊಂದು ಪಂದ್ಯದಲ್ಲಿಯೂ ಆಟವನ್ನು ಆಸ್ವಾದಿಸುವ ಗುಣ ಬೆಳೆಸಿಕೊ. ಆ ಹೊತ್ತಿನ ಪರಿಸ್ಥಿತಿಯನ್ನು ಅರಿತು ಅನುಭವಿಸಿ ಆಡಬೇಕು. ನೆಟ್ಸ್‌ನಲ್ಲಿ ಮಾಡಿದ ಅಭ್ಯಾಸದ ಮಾದರಿಯನ್ನೇ ಪಂದ್ಯದಲ್ಲಿ ಆಡುವಾಗಲೂ ಮಾಡು‘ ಎಂದು ದ್ರಾವಿಡ್ ನೀಡಿದ್ದ ಸಲಹೆಯನ್ನು ಇಶಾನ್ ಇಂದಿಗೂ ಮರೆತಿಲ್ಲ. ಇದು ಅವರು ರಣಜಿ, ವಿಜಯ್ ಹಜಾರೆ ಮತ್ತು ಐಪಿಎಲ್‌ ಪಂದ್ಯಗಳಲ್ಲಿ ಗಳಿಸಿರುವ ಯಶಸ್ಸಿನ ಹಿಂದೆ ಇರುವ ಮಂತ್ರ ಕೂಡ ಹೌದು.

2016ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ –ವಿಕೆಟ್‌ಕೀಪರ್ ಆಗಿದ್ದ ಇಶಾನ್ ಮತ್ತು ರಿಷಭ್ ಪಂತ್ ಇಬ್ಬರೂ ಇದ್ದರು. ದೆಹಲಿಯ ರಿಷಭ್ ಮತ್ತು ಇಶಾನ್ ಆಟದಲ್ಲಿ ಸಾಮ್ಯತೆಗಳಿವೆ. ಇಬ್ಬರೂ ಅಕ್ರಮಣಕಾರಿ ಶೈಲಿಯ ನಿರ್ಭೀತ ಆಟಗಾರರು. ಇಬ್ಬರೂ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ತಮ್ಮ ರಾಜ್ಯ ತಂಡಗಳ ಪರ ರನ್‌ಗಳ ಗುಡ್ಡೆ ಹಾಕಿದವರೇ. ಕೀಪಿಂಗ್‌ನಲ್ಲಿಯೂ ಮಿಂಚಿದವರು. ಇದೀಗ ಭಾರತ ತಂಡದಲ್ಲಿ ಇಬ್ಬರೂ ಇದ್ದಾರೆ.

ರಣಜಿ ಕ್ರಿಕೆಟ್‌ನಲ್ಲಿ ಜಾರ್ಖಂಡ್ ಪರ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (273 ರನ್) ದಾಖಲೆ ಇಶಾನ್ ಹೆಸರಲ್ಲಿದೆ. ಅವರು ಆ ರಾಜ್ಯ ತಂಡದ ನಾಯಕ ಕೂಡ ಆಗಿದ್ದಾರೆ. 2016 ಮತ್ತು 2017ರಲ್ಲಿ ಐಪಿಎಲ್ ಟೂರ್ನಿಗಳಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಆಡಿದ್ದರು. 2018ರ ಹರಾಜಿನಲ್ಲಿ ₹ 6.2 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್‌ ತಂಡವನ್ನು ಅವರನ್ನು ತನ್ನ ತೆಕ್ಕೆಗೆಳೆದುಕೊಂಡಿತ್ತು. ಹೋದ ವರ್ಷ ಮುಂಬೈ ತಂಡವು ಐಪಿಎಲ್ ಟ್ರೋಫಿ ಜಯಿಸುವಲ್ಲಿ ಇಶಾನ್ ಪಾತ್ರವೂ ಪ್ರಮುಖವಾಗಿತ್ತು.

ಕಾಕತಾಳೀಯವೆಂಬಂತೆ, ತಮ್ಮ ಮುಂಬೈ ಇಂಡಿಯನ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಭಾರತ ಟಿ20 ಬಳಗದಲ್ಲಿ ಆಡುವ ಆರಂಭಿಕ ಸ್ಥಾನದಲ್ಲಿ ಇಶಾನ್ ಆಡಿದ್ದಾರೆ. ಅವರ ಮಿಂಚಿನಾಟದಿಂದಾಗಿ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಸ್ಥಾನ ಅಲುಗಾಡುತ್ತಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೆ ಮಾತ್ರ ಸ್ಥಾನ ಎಂಬುದು ಭಾರತ ತಂಡದಲ್ಲಿ ಮತ್ತೆ ಮತ್ತೆ ಎದ್ದು ಕಾಣುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಇಶಾನ್. ಈ ಅಗಾಧ ಪೈಪೋಟಿಯಲ್ಲಿ ಅವರು ಎಷ್ಟು ದೂರ ಸಾಗಬಲ್ಲರು ಎಂಬ ಚರ್ಚೆ ಈಗ ಕ್ರಿಕೆಟ್‌ ಚಿಂತಕರ ಚಾವಡಿಯಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT