ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| IPL 2020- ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗರ ಕರಾಮತ್ತು

Last Updated 13 ಅಕ್ಟೋಬರ್ 2020, 1:49 IST
ಅಕ್ಷರ ಗಾತ್ರ
ADVERTISEMENT
""
""
""

ಕೊರೊನಾ ಸೋಂಕಿನ ಕಾರಣ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಭಾರತದಿಂದ ಸಾವಿರಾರು ಕಿಲೊಮೀಟರ್‌ ದೂರದಲ್ಲಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯುತ್ತಿದೆ. ಹೀಗಿದ್ದರೂ ಅಭಿಮಾನಿಗಳ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ.

ಕೊಲ್ಲಿ ರಾಷ್ಟ್ರದಲ್ಲಿ ನಡೆಯುತ್ತಿರುವ ಚುಟುಕು ಕ್ರಿಕೆಟ್‌ ಹಬ್ಬವು ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಇದುವರೆಗಿನ (ಅಕ್ಟೋಬರ್‌ 11) 27 ಪಂದ್ಯಗಳು ಒಂದಕ್ಕಿಂತ ಒಂದು ರೋಚಕವಾಗಿದ್ದು ಇದಕ್ಕೆ ಸಾಕ್ಷಿ. ಈ ಪೈಕಿ ಹಲವು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಭುಜಬಲದ ಪರಾಕ್ರಮ ಮೆರೆದಿದ್ದರೆ, ಕೆಲ ಬೌಲರ್‌ಗಳೂ ಕೈಚಳಕ ತೋರಿ ತಮ್ಮ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದ್ದಾರೆ.

ಹದಿಮೂರನೇ ಆವೃತ್ತಿಯ ಈ ಲೀಗ್‌ನಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿರುವವರು ಕರ್ನಾಟಕದ ಆಟಗಾರರು. ಅರಬ್ಬರ ನಾಡಿನಲ್ಲಿ ಕರುನಾಡಿನ ಪ್ರತಿಭೆಗಳು ಪ್ರಜ್ವಲಿಸುತ್ತಿವೆ. ಕನ್ನಡದ ಹುಡುಗರು, ಕಲಾತ್ಮಕ ಬ್ಯಾಟಿಂಗ್‌ ಹಾಗೂ ಮೊನಚಿನ ಬೌಲಿಂಗ್‌ ಮೂಲಕ ಕ್ರಿಕೆಟ್‌ ಪ್ರೇಮಿಗಳ ಸಂಭ್ರಮಕ್ಕೆ ಕಿಚ್ಚು ಹೊತ್ತಿಸುತ್ತಿದ್ದಾರೆ.

ಪಂಜಾಬ್‌ ತಂಡದ ‘ಕಿಂಗ್ಸ್‌’

ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡವು ಕನ್ನಡಿಗರ ಕಣಜವಾಗಿದೆ!

ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ, ನಾಯಕ ಕೆ.ಎಲ್‌.ರಾಹುಲ್‌, ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ಕೃಷ್ಣಪ್ಪ ಗೌತಮ್ ಹಾಗೂ ಜಗದೀಶನ್‌ ಸುಚಿತ್‌ ಅವರು ಈ ತಂಡದಲ್ಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅನುಭವ ಹೊಂದಿರುವ ರಾಹುಲ್‌ ಮತ್ತು ಮಯಂಕ್‌ ಅವರು ಅರಬ್ಬರ ನಾಡಿನಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಆ ಮೂಲಕ ಪಂಜಾಬ್‌ ತಂಡದ ‘ಕಿಂಗ್‌’ಗಳಾಗಿ ಮೆರೆಯುತ್ತಿದ್ದಾರೆ.

ಇನಿಂಗ್ಸ್‌ ಆರಂಭಿಸುವ ಈ ಜೋಡಿ ನಾಲ್ಕು ಪಂದ್ಯಗಳಲ್ಲಿ ಅರ್ಧಶತಕದ ಜೊತೆಯಾಟವಾಡಿ ಎಲ್ಲರ ಗಮನ ಸೆಳೆದಿದೆ. ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯ ಮೇಲೆ ಕಣ್ಣಾಡಿಸಿದರೆ ಅಲ್ಲಿ ಈ ‘ಜೋಡೆತ್ತು’ಗಳ ಹೆಸರು ಎದ್ದು ಕಾಣುತ್ತದೆ.

ಏಳು ಪಂದ್ಯಗಳಿಂದ 387 ರನ್‌ ಕಲೆಹಾಕಿರುವ ರಾಹುಲ್‌, ಅಗ್ರಪಟ್ಟ ಅಲಂಕರಿಸಿದ್ದಾರೆ. ಹೀಗಾಗಿ ‘ಆರೆಂಜ್‌ ಕ್ಯಾಪ್‌’ ಸದ್ಯ ಅವರ ಮುಡಿಗೇರಿದೆ. ಮಯಂಕ್‌ 337 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವೈಯಕ್ತಿಕ ಗರಿಷ್ಠ ಸ್ಕೋರ್‌ ಗಳಿಸಿರುವವರ ಪಟ್ಟಿಯಲ್ಲೂ ರಾಹುಲ್‌ (ಅಜೇಯ 132) ಮತ್ತು ಮಯಂಕ್‌ (106) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ದೇವದತ್ತ ಪಡಿಕ್ಕಲ್‌

‘ದೇವ’ದತ್ತ ಪ್ರತಿಭೆ..

ಕೆಲವು ವರ್ಷಗಳ ಹಿಂದೆ ವಿರಾಟ್‌ ಕೊಹ್ಲಿ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಹಾಲುಗೆನ್ನೆಯ ಆ ಹುಡುಗ ಈಗ ‘ಕಿಂಗ್‌’ ಕೊಹ್ಲಿ ಜೊತೆ ಅಮೋಘ ಇನಿಂಗ್ಸ್‌ ಕಟ್ಟಿ ಎಲ್ಲರ ಮನೆಮಾತಾಗಿದ್ದಾನೆ. 20ರ ಹರೆಯದ ಆ ತರುಣನೇ ದೇವದತ್ತ ಪಡಿಕ್ಕಲ್.

ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಆಡಿ ಗಮನ ಸೆಳೆದಿದ್ದ ದೇವದತ್ತ, ಈಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.

2019-20ನೇ ಸಾಲಿನ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು (609) ರನ್‌ ಗಳಿಸಿ ಮಿಂಚಿದ್ದ ದೇವದತ್ತ ಮೇಲೆ ಸಹಜವಾಗಿಯೇ ಬೆಟ್ಟದಷ್ಟು ನಿರೀಕ್ಷೆ ಇತ್ತು. ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು ಮೂರು ಅರ್ಧಶತಕಗಳು ಸೇರಿದಂತೆ ಒಟ್ಟು 211 ರನ್‌ ಕಲೆಹಾಕಿ ಆರ್‌ಸಿಬಿ ಫ್ರಾಂಚೈಸ್‌ ತಮ್ಮ ಮೇಲೆ ಇಟ್ಟಿದ್ದ ನಂಬಿಕೆ ಉಳಿಸಿಕೊಂಡಿದ್ದಾರೆ.

ಮನೀಶ್‌ ಪಾಂಡೆ

‘ಆರೆಂಜ್‌ ಆರ್ಮಿ’ಯಲ್ಲಿ ಮನೀಷ್‌ ‘ಶೈನ್‌’..

ಐಪಿಎಲ್‌ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ಹಿರಿಮೆ ಮನೀಷ್‌ ಪಾಂಡೆ ಅವರದ್ದು. 2009ನೇ ಆವೃತ್ತಿಯಲ್ಲಿ ಅವರು ಈ ಸಾಧನೆ ಮಾಡಿದ್ದರು. ಆಗ ಅವರಿದ್ದದ್ದು ಆರ್‌ಸಿಬಿಯಲ್ಲಿ.

31 ವರ್ಷ ವಯಸ್ಸಿನ ಮನೀಷ್‌ ಈಗ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಧಾರಸ್ಥಂಭವಾಗಿದ್ದಾರೆ. ಐಪಿಎಲ್‌ನಲ್ಲಿ 3,000 ರನ್‌ ಕಲೆಹಾಕಿರುವ ಅವರು ಇದರೊಂದಿಗೆ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ.

ಹಿಂದಿನ ಆವೃತ್ತಿಯಲ್ಲಿ 12 ಪಂದ್ಯಗಳಿಂದ ಒಟ್ಟು 344 ರನ್‌ಗಳನ್ನು ಬಾರಿಸಿದ್ದ ಬಲಗೈ ಬ್ಯಾಟ್ಸ್‌ಮನ್‌ ಮನೀಷ್‌, ಈ ಸಲವೂ ರನ್‌ ಗೋಪುರ ಕಟ್ಟುವತ್ತ ದಾಪುಗಾಲಿಟ್ಟಿದ್ದಾರೆ. ಈ ಬಾರಿ ಅವರು ಏಳು ಪಂದ್ಯಗಳಿಂದ 202 ರನ್‌ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳೂ ಸೇರಿವೆ.

ಪ್ರಸಿದ್ಧ ಕೃಷ್ಣ

ಕೆಕೆಆರ್‌ನ ವೇಗದ ‘ಅಸ್ತ್ರ’

ಐಪಿಎಲ್‌ 13ನೇ ಆವೃತ್ತಿಯ 24ನೇ ಪಂದ್ಯವದು. ಅಬುದಾಭಿಯ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 10ರಂದು ನಡೆದಿದ್ದ ಹಣಾಹಣಿಯಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ವಿರುದ್ಧ ಸುಲಭವಾಗಿ ಗೆದ್ದು ಬಿಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಂದು ನಡೆದಿದ್ದೇ ಬೇರೆ. ದಿನೇಶ್‌ ಕಾರ್ತಿಕ್‌ ಸಾರಥ್ಯದ ಕೆಕೆಆರ್‌, ಕೇವಲ ಎರಡು ರನ್‌ಗಳಿಂದ ಎದುರಾಳಿಗಳನ್ನು ಸೋಲಿಸಿಬಿಟ್ಟಿತ್ತು.

ಆ ಪಂದ್ಯದಲ್ಲಿ ಕೆಕೆಆರ್‌ ಪರಗೆಲುವು ವಾಲುವಂತೆ ಮಾಡಿದ್ದು ಕನ್ನಡಿಗ ಪ್ರಸಿದ್ಧ ಕೃಷ್ಣ. 24 ವರ್ಷ ವಯಸ್ಸಿನ ಪ್ರಸಿದ್ಧ ಆ ಹಣಾಹಣಿಯಲ್ಲಿ ತಮ್ಮ ಆತ್ಮೀಯ ಸ್ನೇಹಿತರ ವಿಕೆಟ್‌ಗಳನ್ನೇ ಉರುಳಿಸಿದ್ದರು!

ಕೆ.ಎಲ್‌.ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದ ಅವರು ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT