ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮೇಯರ್ಸ್ ಚಿಯರ್ಸ್

Last Updated 10 ಫೆಬ್ರುವರಿ 2021, 8:14 IST
ಅಕ್ಷರ ಗಾತ್ರ

ಆಟದ ಮನೆ

ಎಡಗೈ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚು ಮೂಡಿಸತೊಡಗಿದ್ದಾರೆ. ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಇಬ್ಬರೂ ಬೌಲರ್‌ಗಳ ಬೆವರಿಳಿಸಿದ್ದನ್ನು ನೋಡಿದ ನಮಗೆ ವಿಂಡೀಸ್‌ನ ಮೇಯರ್ಸ್ ಎಂಬ ಎಲೆಮರೆಯ ಕಾಯಿ ಕಾಣಿಸಿದ್ದು ಮೊನ್ನೆಯಷ್ಟೆ. ಚೊಚ್ಚಲ ಟೆಸ್ಟ್‌ನಲ್ಲೇ ಔಟಾಗದೆ 210 ರನ್ ಹೊಡೆದು, ಬಾಂಗ್ಲಾ ವಿರುದ್ಧ ಪಂದ್ಯ ಗೆಲ್ಲಿಸಿಕೊಂಡು ಬಂದ ಅವರ ಆಟ ಕೋವಿಡ್ ಆತಂಕವನ್ನೂ ದೂರವಾಗಿಸುವಷ್ಟು ಮಜವಾಗಿತ್ತು.

ಕೋವಿಡ್ ನಂತರ ಕ್ರಿಕೆಟ್ ಉದ್ಯಾನದಲ್ಲಿ ಕೆಲವು ಹೊಸ ಹೂಗಳು ಅರಳಿ ನಿಲ್ಲತೊಡಗಿವೆ. ಮಹಮ್ಮದ್ ಸಿರಾಜ್ ವೇಗ ಕಂಡು ಆಸ್ಟ್ರೇಲಿಯನ್ನರು ದಂಗಾದದ್ದು, ಶಾರ್ದೂಲ್ ಠಾಕೂರ್ ಬ್ಯಾಟ್ ಬೀಸಿ ಆ ತಂಡದವರನ್ನು ಕಂಗಾಲಾಗಿಸಿದ್ದು, ಹನುಮ ವಿಹಾರಿ ಸಂಯಮ ದರ್ಶನ ಮಾಡಿದ್ದು ಇವನ್ನೆಲ್ಲ ನೋಡಿದೆವು. ಸಿಕ್ಕ ಅವಕಾಶವನ್ನು ಹಣ್ಣಾಗಿಸಿಕೊಳ್ಳಬೇಕು ಎಂಬ ಲಾಗಾಯ್ತಿನ ನೀತಿಪಾಠವನ್ನು ಕಣ್ಣಿಗೊತ್ತಿಕೊಂಡಂತೆ ಅನೇಕರು ಆಡತೊಡಗಿದ್ದಾರೆ. ಅದರಲ್ಲೂ ಎಡಗೈ ಬ್ಯಾಟ್ಸ್‌ಮನ್‌ಗಳು ಟೆಸ್ಟ್‌ನಲ್ಲಿ ಭರವಸೆ ಮೂಡಿಸುತ್ತಿರುವುದಕ್ಕೆ ತಾಜಾ ಉದಾಹರಣೆಗಳು ಸಿಗುತ್ತಿವೆ. ಭಾರತದ ರಿಷಭ್ ಪಂತ್ ವಿಕೆಟ್ ಕೀಪಿಂಗ್‌ನಲ್ಲಿ ಶೈಶವಾವಸ್ಥೆಯಲ್ಲಿದ್ದರೂ ಬ್ಯಾಟಿಂಗ್ ಶಕ್ತಿಯಾಗಿ ಆಸ್ಟ್ರೇಲಿಯನ್ನರು ಹಾಗೂ ಇಂಗ್ಲೆಂಡಿನವರನ್ನು ಕಾಡಿದ್ದನ್ನು ಕಂಡೆವು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ತಾಕತ್ತಿದ್ದರೆ ಹೊಡೆದು ತೋರಿಸಿ ಎನ್ನುವಂತೆ ಬೌಲಿಂಗ್ ಮಾಡಿದ್ದ ವಾಷಿಂಗ್ಟನ್ ಸುಂದರ್, ಇತ್ತೀಚಿನ ಟೆಸ್ಟ್‌ಗಳಲ್ಲಿ ಭಾರತದ ಬ್ಯಾಟಿಂಗ್ ಜಂಘಾಬಲವನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಕ್ರಿಕೆಟ್ ಆರ್ಥಿಕ ರಾಷ್ಟ್ರವಾದ ನಮ್ಮ ಕಡೆಗೇ ಕಣ್ಣುಗಳು ನೆಟ್ಟಿದ್ದಾಗ ಬಾಂಗ್ಲಾದೇಶದ ಎದುರು ಕ್ರಿಕೆಟ್‌ನ ದುರ್ಬಲ ಆರ್ಥಿಕ ದೇಶವಾದ ವೆಸ್ಟ್‌ ಇಂಡೀಸ್‌ನ ಪ್ರತಿಭಾವಂತರೊಬ್ಬರು ಮೊದಲ ಟೆಸ್ಟ್‌ನಲ್ಲೇ ದ್ವಿಶತಕ ಹೊಡೆದು, ಪಂದ್ಯವನ್ನೇ ಗೆಲ್ಲಿಸಿಕೊಟ್ಟರು. ಅವರೇ ಕೇಲ್ ಮೇಯರ್ಸ್.

ಮೇಯರ್ಸ್ ಕೂಡ ಎಡಗೈ ಬ್ಯಾಟ್ಸ್‌ಮನ್. ಬಾರ್ಬಡೋಸ್‌ನವರು. ಹೋದ ವರ್ಷ ಇಂಗ್ಲೆಂಡ್‌ಗೆ ವಿಂಡೀಸ್‌ನವರು ಪ್ರವಾಸ ಹೊರಟಾಗ ಅವರನ್ನು ರಿಸರ್ವ್ ಪ್ಲೇಯರ್ ಆಗಿ ಕರೆದುಕೊಂಡು ಹೋಗಿದ್ದರು. ಆಟವನ್ನು ಬೆಂಚಿನಿಂದಲೇ ಗಮನಿಸುತ್ತಾ ಬಂದ ಮೇಯರ್ಸ್‌ ಆಮೇಲೆ ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ20 ಪಂದ್ಯದಲ್ಲಿ ಆಡುವ ಅವಕಾಶ ಪಡೆದರು.

1992ರಲ್ಲಿ ಹುಟ್ಟಿದ ಮೇಯರ್ಸ್ ಬಾಲಪ್ರತಿಭೆಯಂತೇನೂ ಹೊಳೆದವರಲ್ಲ. 2019–20ರಲ್ಲಿ ದೇಸಿ ಕ್ರಿಕೆಟ್‌ನಲ್ಲಿ ತಮ್ಮ ಮಾಗಿದ ಆಟ ತೋರಿಸಿದರು. ರೀಜನಲ್ ಸೂಪರ್ 50 ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಳಿದು, ಲೀವರ್ಡ್‌ ಐಲೆಂಡ್ಸ್‌ ತಂಡದ ಎದುರು 113 ರನ್ ಸೇರಿಸಿದರು. ಆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೇಯರ್ಸ್ ಎರಡನೆಯವರು. ಜೆರ್ಮೇನ್ ಬ್ಲ್ಯಾಕ್‌ವುಡ್ ಮೊದಲಿಗರು.

ಹೋದವರ್ಷ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೋಸ್ ಟ್ರೈಡೆಂಟ್ ತಂಡವನ್ನು ಅವರು ಪ್ರತಿನಿಧಿಸಿದರು. ಸ್ಪಿನ್ನರ್‌ಗಳ ಎಸೆತಗಳನ್ನು ಆಡಲು ತಡಕಾಡುತ್ತಿದ್ದ ಅವರು, ವೇಗಿಗಳನ್ನು ಮಾತ್ರ ಆತ್ಮವಿಶ್ವಾಸದಿಂದ ಎದುರಿಸಿದರು.

ನಾಯಕ ಜೇಸನ್ ಹೋಲ್ಡರ್, ಉಪನಾಯಕ ರೋಸ್ಟನ್ ಚೇಸ್, ಶಾಯ್ ಹೋಪ್, ಡರೆನ್ ಬ್ರಾವೊ, ಶಮಾರ್ ಬ್ರೂಕ್ಸ್, ಶಿಮ್ರನ್ ಹೆಟ್ಮೆಯರ್, ವಿಕೆಟ್ ಕೀಪರ್ ಶೇನ್ ಡೊವ್ರಿಚ್... ಹೀಗೆ ವಿಂಡೀಸ್‌ನ ಹತ್ತು ಪ್ರಮುಖ ಕ್ರಿಕೆಟಿಗರು ಕೋವಿಡ್‌ಗೆ ಹೆದರಿ ಬಾಂಗ್ಲಾದೇಶಕ್ಕೆ ಪ್ರವಾಸ ಹೊರಡಲು ನಿರಾಕರಿಸಿದರು. ಮೊಸೆಲಿ, ಬಾನರ್, ಮೇಯರ್ಸ್ ಮೂವರಿಗೂ ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆಗೆ ಇದು ಅವಕಾಶದ ವೇದಿಕೆ ಸೃಷ್ಟಿಸಿತು.

ಏಕದಿನದ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಕೇವಲ 122, 148, 177 ರನ್ ಗಳಿಸಿದ ವಿಂಡೀಸ್ ತಂಡ ಬಾಂಗ್ಲಾ ಸ್ಪಿನ್ನರ್‌ಗಳ ಎದುರು ತಡಕಾಡಿತು. ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 259 ರನ್‌ಗಳಿಗೆ ಕುಸಿದಾಗ ಈ ತಂಡದ ಕಥೆ ಇಷ್ಟೇ ಎಂದು ಉಸಿರು ಹೊರಹಾಕಿದವರು ಅನೇಕರು. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ 171 ರನ್‌ಗಳ ಮುನ್ನಡೆ ಪಡೆದಮೇಲೆ ಈ ಪಂದ್ಯದಲ್ಲಿ ವಿಂಡೀಸ್ ಗೆಲುವು ಅಸಾಧ್ಯ ಎಂದು ಭಾವಿಸಿದವರೇ ಹೆಚ್ಚು. 395 ರನ್‌ಗಳ ಗೆಲುವಿನ ಗುರಿ ಎದುರಲ್ಲಿ. ಜಾನ್ ಕ್ಯಾಂಪ್‌ಬೆಲ್, ನಾಯಕ ಕ್ರೇಗ್ ಬ್ರಾಥ್‌ವೈಟ್, ಮೊಸೆಲಿ ಮೂವರ ವಿಕೆಟ್‌ ಉರುಳಿದಾಗ ವಿಂಡೀಸ್ ಕೇವಲ 59 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಪಟಪಟನೆ 40 ರನ್ ಕಲೆಹಾಕಿ, ಔಟಾಗಿದ್ದ ಮೇಯರ್ಸ್ ಐದನೇ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿದಾಗ ಎದುರಲ್ಲಿ ಇದ್ದುದು ಅನಿಶ್ಚಿತತೆ. ಇನ್ನೂ ನೂರಕ್ಕೂ ಹೆಚ್ಚು ಓವರ್‌ಗಳಷ್ಟು ಕಾಲ ಆಡಬೇಕಾದ ದೊಡ್ಡ ಸವಾಲು. 25ನೇ ಓವರ್‌ನಲ್ಲಿ ಆಡಲು ಇಳಿದ ಮೇಯರ್ಸ್ 127ನೇ ಓವರ್‌ವರೆಗೂ ಲಂಗರು ಹಾಕಿಕೊಂಡು ನಿಂತರು. 415 ನಿಮಿಷಗಳ ಮರೆಯಲಾಗದ ಆಟವದು. ಅವರು ಹೊಡೆದ 20 ಬೌಂಡರಿ, 7 ಸಿಕ್ಸರ್‌ಗಳು ನೋಡುಗರಿಗೂ ಹಬ್ಬ. ನಾಲ್ಕನೇ ವಿಕೆಟ್‌ಗೆ ಬಾನರ್‌ ಜತೆಗೂಡಿ 216 ರನ್‌ಗಳನ್ನು ಸೇರಿಸಿದ್ದು ವಿಂಡೀಸ್ ಪಾಳಯದಲ್ಲಿ ಗೆಲುವಿನ ಬಯಕೆ ಚಿಗುರಿಸಿತು. ಬಾನರ್ ಇನ್ನೊಂದು ತುದಿಯಲ್ಲಿ ಪರಮ ಸಂಯಮದಿಂದ ಆಡಿ 86 ರನ್ ಗಳಿಸಿದರು. 245 ಎಸೆತಗಳನ್ನು ಅವರು ಆಡಿ, ವಿಕೆಟ್ ಉಳಿಸಿಕೊಂಡರು. ಇನ್ನೊಂದು ತುದಿಯಲ್ಲಿ ಮೇಯರ್ಸ್ ತಮ್ಮ ತಾರುಣ್ಯದ ಆಟವನ್ನು ನೆನಪಿಸುವಂತೆ ಬ್ಯಾಟ್ ಬೀಸಿದರು. ಆಗೀಗ ಅವರ ಧೋರಣೆ ರಿಷಭ್ ಪಂತ್ ಅವರನ್ನೇ ನೆನಪಿಸುವ ರೀತಿ ಇತ್ತು. ಬಾಂಗ್ಲಾದ ತೈಜುಲ್ ಇಸ್ಲಾಂ ಹಾಕಿದ ಸಾಂಪ್ರದಾಯಿಕ ಎಡಗೈ ನಿಧಾನಗತಿಯ ಬೌಲಿಂಗ್, ಮೆಹದಿ ಹಸನ್ ಮಿರಾಜ್ ಹಾಗೂ ನಯೀಂ ಹಸನ್ ಆಫ್‌ಬ್ರೇಕ್‌ಗಳು ಎಲ್ಲಕ್ಕೂ ಮೇಯರ್ಸ್ ಜವಾಬು ಕೊಟ್ಟರು. ಟ್ವೆಂಟಿ20ಯಲ್ಲಿ ಸ್ಪಿನ್ ಬೌಲಿಂಗ್‌ ಎದುರಿಸಲು ಅವರು ತಡಕಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಅರ್ಥವೇ ಇಲ್ಲ ಎನ್ನುವಂತಹ ಆಟವಿದು. ತಂಡದ ಮೊತ್ತ 292 ಆಗಿದ್ದಾಗ ಜರ್ಮೇನ್ ಬ್ಲ್ಯಾಕ್‌ವುಡ್ ಕೂಡ ಔಟಾದಾಗ ವಿಂಡೀಸ್ ಗೆಲುವು ಸಾಧ್ಯವಿಲ್ಲ ಎನಿಸಿತ್ತು. ಆಗ ವಿಕೆಟ್ ಕೀಪರ್ ಜೋಷುವಾ ಡ ಸಿಲ್ವ ಅವರನ್ನು ನಿಲ್ಲಿಸಿಕೊಂಡು, ಮೇಯರ್ಸ್ ಗೆಲುವಿನ ಗುರಿಯತ್ತ ದಾಪುಗಾಲಿಟ್ಟರು. ಆ 83 ನಿಮಿಷಗಳಲ್ಲಿ ಜೋಷುವಾ 20 ರನ್ ಗಳಿಸಿದರೆ, 80 ಅನ್ನು ಮೇಯರ್ಸ್ ಸೇರಿಸಿದರು. ಇನ್ನೂ ಹದಿನೆಂಟು ಎಸೆತಗಳು ಬಾಕಿ ಇರುವಾಗ ವೆಸ್ಟ್‌ ಇಂಡೀಸ್ ಮರೆಯಲಾಗದ ವಿಜಯವನ್ನು ದಾಖಲಿಸಿತು.

ಫೆಬ್ರುವರಿ 7ರಂದು ಬಾಂಗ್ಲಾದೇಶದ ಎದುರು ರೋಚಕ ಗೆಲುವು ದಕ್ಕಿಸಿಕೊಂಡ ಮೇಲೆ ಕ್ರಿಕೆಟ್ ವೆಸ್ಟ್ ಇಂಡೀಸ್ ಒಂದು ವಿಶೇಷ ಝೂಮ್ ವಿಡಿಯೊ ಕಾಲ್ ಮಾಡಿಸಿತು. ಲೆವೆಲ್–3 ಕೋಚ್ ಕೂಡ ಆಗಿರುವ ಕ್ಲಾರ್ಕ್ ವಿಂಡೀಸ್‌ನಿಂದ ಮಾತನಾಡಿದರು. ಬಾಂಗ್ಲಾದ ಚತ್ತೋಗ್ರಾಮ್‌ನಲ್ಲಿ ಮೇಯರ್ಸ್. ಇಬ್ಬರ ಇಡುವೆ ವಿಡಿಯೊ ಸಂವಾದ. ಕ್ಲಾರ್ಕ್ ಕಂಗಳಲ್ಲಿ ಹನಿಗಳು ಜಮೆಯಾಗಿದ್ದವು. ಮೇಯರ್ಸ್ ಪದೇ ಪದೇ ಭಾವುಕರಾಗುತ್ತಿದ್ದರು. ಇವರಿಬ್ಬರೂ ಅಪ್ಪ–ಮಗ. ಮಗ ಚೊಚ್ಚಲ ಟೆಸ್ಟ್‌ನಲ್ಲೇ ಔಟಾಗದೆ ದ್ವಿಶತಕ ಗಳಿಸಿ ದಕ್ಕಿಸಿಕೊಟ್ಟ ಗೆಲುವು ಸಹಜವಾಗಿಯೇ ಅಪ್ಪನಿಗೆ ಭಾವುಕ ಸಂದರ್ಭ.

ಕ್ಲಾರ್ಕ್ ಬರೀ ಅಪ್ಪನಷ್ಟೇ ಅಲ್ಲ; ಮೇಯರ್ಸ್‌ ಪಾಲಿನ ದೀರ್ಘಾವಧಿಯ ಕೋಚ್ ಕೂಡ ಹೌದು. ಕೋವಿಡ್ ಬಂದಾಗ ಎಲ್ಲರೂ ಅಭ್ಯಾಸ ತಪ್ಪಿಸಿ ಮನೆಯಲ್ಲೇ ಉಳಿದಾಗಲೂ ಮಗನನ್ನು ಅವರು ಜಡಗಟ್ಟಿ ಕೂರಲು ಬಿಡಲಿಲ್ಲ. ತಂತ್ರಗಳನ್ನು ಸುಧಾರಿಸಿಕೊಳ್ಳಲು ಬೇಕಾದ ತರಬೇತಿಯನ್ನು ನೀಡಿದರು. ಅದು ಮೇಯರ್ಸ್‌ಗೆ ಇಂತಹ ದೊಡ್ಡ ಫಲ ಕೊಟ್ಟೀತು ಎಂದು ಯಾರೂ ಊಹಿಸಿರಲಿಲ್ಲ.

2017ರಲ್ಲಿ ಚಂಡಮಾರುತಕ್ಕೆ ಸಿಲುಕಿದ ವಿಂಡ್‌ವರ್ಡ್ಸ್‌ ದ್ವೀಪದಿಂದ ಬಾರ್ಬಡೋಸ್‌ಗೆ ವಲಸೆ ಬಂದವರು ಕ್ಲಾರ್ಕ್ ಹಾಗೂ ಮೇಯರ್ಸ್. ವಿಂಡ್‌ವರ್ಡ್ಸ್‌ನಲ್ಲಿ ಬೌಲರ್ ಆಲ್‌ರೌಂಡರ್ ಆಗಿದ್ದ ಮೇಯರ್ಸ್ ಬಾರ್ಬಡೋಸ್‌ನಲ್ಲಿ ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಪಡೆದದ್ದೇ ಭವಿಷ್ಯ ಬದಲಾಯಿತು. ಬ್ಯಾಟ್ಸ್‌ಮನ್ ಆಲ್‌ರೌಂಡರ್ ಆಗಿ ಪರಿವರ್ತಿತವಾದ ಮೇಲೆ ಒಂದು ವರ್ಷ ಗಾಯಗೊಂಡು ದೇಸಿ ಕ್ರಿಕೆಟ್ ಆಡದ ನತದೃಷ್ಟ ಅವರು. ಖುದ್ದು ಪ್ರಥಮ ದರ್ಜೆ ಕ್ರಿಕೆಟಿಗರಾಗಿ ಅನುಭವ ಇರುವ ಕ್ಲಾರ್ಕ್, ಇನ್ನಷ್ಟು ಕಾಲ ತಮ್ಮ ಮಗ ದೇಶಕ್ಕಾಗಿ ಆಡಬೇಕು ಎಂದು ಆಟವನ್ನು ತಿದ್ದುತ್ತಲೇ ಬಂದಿದ್ದಾರೆ. ಮಹತ್ವಾಕಾಂಕ್ಷೆಯ ಬಿಂಬ ಅವರ ಆನಂದಬಾಷ್ಪ.

ಕೋವಿಡ್‌ಗೆ ಅಂಜಿ ತವರಿನಲ್ಲೇ ಉಳಿದಿರುವ ವಿಂಡೀಸ್‌ನ ಅನುಭವಿ ಕ್ರಿಕೆಟಿಗರಿಗೂ ಮೇಯರ್ಸ್ ಈಗ ಬೆರಗಿನಂತೆ ಕಾಣುತ್ತಿದ್ದಾರೆ. ದೀರ್ಘಾವಧಿ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ 32ರ ಬಾನರ್ ಹಾಗೂ 28 ತುಂಬಿರುವ ಮೇಯರ್ಸ್ ವಿಂಡೀಸ್ ಕ್ರಿಕೆಟ್‌ನ ಅನಿಶ್ಚಿತತೆಯ ಕರಿಮೋಡದಲ್ಲಿ ಬೆಳ್ಳಿಗೆರೆಗಳಂತೆ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT