ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಕಾಂಗರೂ ನಾಡಿನಲ್ಲಿ ಕುಸಿದ ‘ಪೃಥ್ವಿ’

Last Updated 21 ಡಿಸೆಂಬರ್ 2020, 12:03 IST
ಅಕ್ಷರ ಗಾತ್ರ
ADVERTISEMENT
"ಔಟಾದ ನಂತರ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದ ಪೃಥ್ವಿ ಶಾ –ಎಎಫ್‌ಪಿ ಚಿತ್ರ"

ಏಳು ವರ್ಷಗಳ ಹಿಂದಿನ ಮಾತು. 2013ರ ನವೆಂಬರ್‌ನಲ್ಲಿ ನಡೆದಿದ್ದ ಹ್ಯಾರಿಸ್‌ ಶೀಲ್ಡ್‌ ಎಲೀಟ್‌ ಡಿವಿಷನ್‌ ಕ್ರಿಕೆಟ್‌ ಪಂದ್ಯವದು. ರಿಜ್ವಿ ಸ್ಪ್ರಿಂಗ್‌ಫೀಲ್ಡ್‌ ಪ್ರೌಢಶಾಲೆಯ ಪರ ಕಣಕ್ಕಿಳಿದಿದ್ದ ಹಾಲುಗೆನ್ನೆಯ ಆ ಹುಡುಗ ಇನಿಂಗ್ಸ್‌ವೊಂದರಲ್ಲಿ ಬರೋಬ್ಬರಿ 546ರನ್‌ ಕಲೆಹಾಕಿ ಇತಿಹಾಸ ಸೃಷ್ಟಿಸಿಬಿಟ್ಟಿದ್ದ. 367 ನಿಮಿಷ ಕ್ರೀಸ್‌ನಲ್ಲಿದ್ದ ಆತ 330 ಎಸೆತಗಳನ್ನು ಆಡಿ 85 ಬೌಂಡರಿ ಹಾಗೂ ಐದು ಸಿಕ್ಸರ್‌ಗಳನ್ನೂ ಸಿಡಿಸಿದ್ದ.

ಆ ಪಂದ್ಯ ನೋಡಿದವರೆಲ್ಲಾ ಆ ಹುಡುಗನ ಗುಣಗಾನ ಮಾಡಿದ್ದರು. ಆತನ ತಾಳ್ಮೆ ಕಂಡು ಮೂಕವಿಸ್ಮಿತರಾಗಿದ್ದರು. ಭಾರತದ ಕ್ರಿಕೆಟ್‌ ಅನ್ನು ಬೆಳಗಬಲ್ಲ ಮತ್ತೊಂದು ತಾರೆಯ ಉದಯವಾಯಿತೆಂದು ಕ್ರಿಕೆಟ್‌ ಪಂಡಿತರೂ ಬಣ್ಣಿಸಿದ್ದರು. ಆ ‘ಶಾಂತ ಮೂರ್ತಿ’ಯ ಹೆಸರು ಪೃಥ್ವಿ ಶಾ.

ಆರಂಭದ ದಿನಗಳಲ್ಲಿ ಪೃಥ್ವಿ ಆಟ ಕಂಡವರೆಲ್ಲಾ ಆತನನ್ನು ಸಚಿನ್‌ ತೆಂಡೂಲ್ಕರ್‌ ಅವರ ಪಡಿಯಚ್ಚು ಎಂದೇ ವರ್ಣಿಸಿದ್ದರು. ಆತ ‘ಕ್ರಿಕೆಟ್‌ ದೇವರ’ ವಾರಸುದಾರನಾಗಲಿದ್ದಾನೆ ಎಂದು ಭವಿಷ್ಯವನ್ನೂ ನುಡಿದಿದ್ದರು.

ಅದಕ್ಕೆ ಕಾರಣ 2018ರಲ್ಲಿ ನಡೆದಿದ್ದ ಆ ಸರಣಿ. ಪೃಥ್ವಿ ಪಾಲಿಗೆ ಭಾರತ ತಂಡದ ಬಾಗಿಲು ತೆರೆದಿದ್ದು 2018ರ ಆಗಸ್ಟ್‌ನಲ್ಲಿ. ಇಂಗ್ಲೆಂಡ್‌ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಪ್ರಕಟಿಸಲಾಗಿದ್ದ ತಂಡದಲ್ಲಿ ಅವರ ಹೆಸರಿತ್ತಾದರೂ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಅದಾಗಿ ಎರಡು ತಿಂಗಳ ತರುವಾಯ (ಅಕ್ಟೋಬರ್‌ 4) ಅವರ ಟೆಸ್ಟ್‌ ಪದಾರ್ಪಣೆಯ ಕನಸು ನನಸಾಗಿತ್ತು.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಕೆ.ಎಲ್‌.ರಾಹುಲ್‌ ಜೊತೆ ಎಂಆರ್‌ಎಫ್‌ ಬ್ಯಾಟ್‌ ಹಿಡಿದು ಕ್ರೀಸ್‌ನತ್ತ ಹೊರಟಿದ್ದ ಆ ಚಿಗುರು ಮೀಸೆಯ ಹುಡುಗನನ್ನು ಕಂಡು ವೆಸ್ಟ್‌ ಇಂಡೀಸ್‌ ಬೌಲರ್‌ಗಳು ಮನಸ್ಸಿನಲ್ಲೇ ನಕ್ಕಿದ್ದುಂಟು. ಶಾನನ್‌ ಗೇಬ್ರಿಯಲ್‌, ಕೀಮೊ ಪಾಲ್‌, ಶೆರ್ಮನ್‌ ಲೂಯಿಸ್‌ ಅವರ ಬಿರುಗಾಳಿ ವೇಗದ ದಾಳಿಯನ್ನು ದಿಟ್ಟತನದಿಂದ ಎದುರಿಸಿದ್ದ ಪೃಥ್ವಿ, ಪಂದ್ಯದ ಮೊದಲ ಇನಿಂಗ್ಸ್‌ನಲ್ಲೇ ಶತಕದ ಸಂಭ್ರಮ ಆಚರಿಸಿ ಹೊಸ ಭಾಷ್ಯ ಬರೆದಿದ್ದರು. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಭಾರತದ ಅತಿ ಕಿರಿಯ (18 ವರ್ಷ, 319 ದಿನಗಳು) ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದರು. 154 ಎಸೆತಗಳಲ್ಲಿ 19 ಬೌಂಡರಿ ಸಹಿತ 134ರನ್‌ ಬಾರಿಸಿದ್ದ ಅವರಿಗೆ ‘ಪಂದ್ಯಶ್ರೇಷ್ಠ’ ಗೌರವವೂ ಒಲಿದಿತ್ತು. ಎರಡನೇ ಟೆಸ್ಟ್‌ನಲ್ಲೂ ಪೃಥ್ವಿ ಅವರ ಬ್ಯಾಟಿಂಗ್‌ ಸೊಬಗು ಅನಾವರಣಗೊಂಡಿತ್ತು.

ಔಟಾದ ನಂತರ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದ ಪೃಥ್ವಿ ಶಾ –ಎಎಫ್‌ಪಿ ಚಿತ್ರ

ಏಳು ಬೀಳಿನ ಹಾದಿ..

2018–19ರಲ್ಲಿ ಟೆಸ್ಟ್‌ ಸರಣಿ ಆಡಲು ಭಾರತ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಪೃಥ್ವಿ, 2018ರ ಡಿಸೆಂಬರ್‌ನಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಇಲೆವನ್‌ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದರು. ಅಲ್ಲಿಂದ ಅವರ ಕ್ರೀಡಾ ಬದುಕಲ್ಲಿ ಏರಿಳಿತ ಶುರುವಾಯಿತು. ಹಲವು ತಿಂಗಳು ಮೈದಾನದಿಂದ ದೂರ ಉಳಿದಿದ್ದ ಅವರಿಗೆ ಉದ್ದೀಪನಾ ಮದ್ದು ಸೇವನೆಯ ಕಳಂಕವೂ ಮೆತ್ತಿಕೊಂಡಿತು.

ಪೃಥ್ವಿಯವರ ಮೂತ್ರದ ಮಾದರಿಯಲ್ಲಿ ನಿಷೇಧಿತ ಟೆರ್ಬುಟಲೈನ್‌ ಮದ್ದಿನ ಅಂಶ ಇರುವುದು ಪರೀಕ್ಷೆಯಿಂದ ದೃಢಪಟ್ಟ ನಂತರ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅವರಮೇಲೆ ನಿಷೇಧ ಹೇರಿತ್ತು. ಸುಮಾರು ಎಂಟು ತಿಂಗಳ ‘ಅಜ್ಞಾತ ವಾಸ’ದ ಬಳಿಕ ಕ್ರಿಕೆಟ್‌ ಅಂಗಳಕ್ಕೆ ಮರಳಿದ್ದ ಅವರು ದೇಶಿಯ ಟೂರ್ನಿಗಳಲ್ಲಿ ಮಿಂಚಿದ್ದರು. ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆದಿದ್ದ ಅವರು ನ್ಯೂಜಿಲೆಂಡ್‌ ‘ಎ’ ಎದುರಿನ ಏಕದಿನ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಹೀಗಾಗಿ ಪೃಥ್ವಿಗೆ ಕಿವೀಸ್‌ ನಾಡಿಗೆ ‘ಹಾರುವ’ ಅವಕಾಶ ಸಿಕ್ಕಿತ್ತು. ನ್ಯೂಜಿಲೆಂಡ್‌ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅವರು ಮಂಕಾದರು.

ಈ ಬಾರಿಯ ಐಪಿಎಲ್‌ನಲ್ಲೂ ವೈಫಲ್ಯ ಕಂಡಿದ್ದ ಪೃಥ್ವಿಗೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅಮೋಘ ಲಯದಲ್ಲಿದ್ದ ಕೆ.ಎಲ್‌.ರಾಹುಲ್‌ ಮತ್ತು ಶುಭಮನ್‌ ಗಿಲ್‌ ಅವರನ್ನು ಹೊರಗಿಟ್ಟು ಪೃಥ್ವಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಿದ್ದು ಚರ್ಚೆಗೂ ಗ್ರಾಸವಾಗಿತ್ತು. ಇದನ್ನು ಪೃಥ್ವಿ ಸವಾಲಾಗಿ ಸ್ವೀಕರಿಸಬೇಕಿತ್ತು. ಬ್ಯಾಟ್‌ ಮೂಲಕವೇ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಬೇಕಿತ್ತು. ಆದರೆ ಹಾಗಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 4ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಹೀಗಾಗಿ ಕ್ರಿಕೆಟ್‌ ಪಂಡಿತರು ಅವರ ಮೇಲೆ ಮುಗಿಬಿದ್ದಿದ್ದಾರೆ. ಅವರನ್ನು ಮೂದಲಿಸುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿವೆ. ಹೀಗಾಗಿ ಟೀಂ ಇಂಡಿಯಾವೂ ಅವರಿಗೆ ‘ಗೇಟ್‌ ಪಾಸ್‌’ ನೀಡಲು ಮುಂದಾಗಿದೆ.

ತಮ್ಮದೇ ತಪ್ಪುಗಳಿಂದಾಗಿ ಪೃಥ್ವಿಗೆ ಇಂದು ಈ ಸ್ಥಿತಿ ಬಂದಿದೆ. ನಾಲ್ಕನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಅವರು ತಂದೆಯ ಆಸರೆಯಲ್ಲಿ ಬೆಳೆದವರು. ಸಿದ್ಧ ಉಡುಪುಗಳ ವ್ಯಾಪಾರ ನಡೆಸುತ್ತಿದ್ದ ಪಂಕಜ್‌ ಶಾ ಅವರಿಗೆ ತಮ್ಮ ಅಂಗಡಿಯನ್ನು ನಿರ್ವಹಿಸುತ್ತಲೇ ಮಗನನ್ನು ಶಾಲೆ ಹಾಗೂ ತರಬೇತಿಗೆ ಕರೆದುಕೊಂಡು ಹೋಗುವುದು ಕಷ್ಟವಾಗಿತ್ತು. ಇದನ್ನು ಅರಿತು ಮಗನ ಭವಿಷ್ಯ ರೂಪಿಸಲು ಪಣ ತೊಟ್ಟರು. ಇದಕ್ಕಾಗಿ ತಮ್ಮ ವ್ಯಾಪಾರವನ್ನೇ ನಿಲ್ಲಿಸಿಬಿಟ್ಟರು.

ಮಗನನ್ನು ಬಾಂದ್ರಾದಲ್ಲಿದ್ದ ಮಿಡ್ಲ್‌ ಇನ್‌ಕಮ್‌ ಗ್ರೂಪ್‌ (ಎಂಐಜಿ) ಕ್ಲಬ್‌ಗೆ ಸೇರಿಸಿದ ಅವರು ನಿತ್ಯವೂ ಲೋಕಲ್‌ ಟ್ರೈನ್‌ನಲ್ಲಿ ಮಗನನ್ನು ತರಬೇತಿಗೆ ಕರೆದೊಯ್ಯುತ್ತಿದ್ದರು. ಅಪ್ಪನ ಶ್ರಮ ವ್ಯರ್ಥವಾಗಲು ಬಿಡದ ಪೃಥ್ವಿ, ಶಾಲಾಮಟ್ಟದ ಟೂರ್ನಿಗಳಲ್ಲಿ ರನ್‌ ಹೊಳೆಯನ್ನೇ ಹರಿಸಿದ್ದರು. 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿ ಶಹಬ್ಬಾಸ್‌ ಎನಿಸಿಕೊಂಡಿದ್ದರು. ಸಾಗಿ ಬಂದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದ ಈ ‘ವಾಮನ ಮೂರ್ತಿ’ ಈಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಅವರೀಗ ಟೀಕೆಗಳಿಂದ ಕುಗ್ಗದೆ ಫೀನಿಕ್ಸ್‌ನಂತೆ ಪುಟಿದೆಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT