ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪಿಂಕ್ ಬಾಲ್ ‘ಕಮಾಲ್’

ಆಟದ ಮನೆ
Last Updated 16 ಡಿಸೆಂಬರ್ 2020, 8:59 IST
ಅಕ್ಷರ ಗಾತ್ರ

ಪಿಂಕ್‌ ಬಾಲ್‌ನಲ್ಲಿ ಆಡುವುದು ಐದು ವರ್ಷಗಳ ಹಿಂದೆ ದೊಡ್ಡ ಪ್ರಯೋಗವಾಗಿತ್ತು. ಸ್ಲಿಪ್‌ನಲ್ಲಿ ನಿಂತಿದ್ದ ಸ್ಮಿತ್ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳ ಮುಖ ಹುಳ್ಳಗೆ ಆಗಿತ್ತು. ಮಿಚೆಲ್ ಸ್ಟಾರ್ಕ್ ತರಹದ ವೇಗಿ ಸ್ವಿಂಗ್ ಕಂಡು ಖುಷಿಪಟ್ಟಿದ್ದರು. ಆಮೇಲಾಮೇಲೆ ಚೆಂಡಿನ ಬಣ್ಣ ಯಾವುದಾದರೇನು ಎಂದು ವಾರ್ನರ್ ಚಚ್ಚತೊಡಗಿದರು. ಈಗ ಅದೇ ಬಾಲ್‌ನಲ್ಲಿ ಆಡಬೇಕಾದ ಸವಾಲನ್ನು ಆಸ್ಟ್ರೇಲಿಯಾ ತಂಡವು ಭಾರತದ ಎದುರು ಇಟ್ಟಿದೆ. ಭಾರತ ಅದಕ್ಕೆ ಯಾವ ಜವಾಬು ಕೊಡುವುದೋ, ನೋಡಬೇಕು.

ಒಂದು ವರ್ಷವಾಯಿತು; ಡೇವಿಡ್ ವಾರ್ನರ್ ಪಿಂಕ್ ಬಾಲ್‌ನಲ್ಲಿ ತ್ರಿಶತಕ ದಾಖಲಿಸಿ. ಅಡಿಲೇಡ್‌ ಓವಲ್‌ನಲ್ಲಿ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಟೆಸ್ಟ್‌ ತ್ರಿಶತಕ ದಾಖಲಿಸಿರಲಿಲ್ಲ. ಪಾಕಿಸ್ತಾನದ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿ, ವಾರ್ನರ್ ಆ ಸರಣಿಯಲ್ಲಿ ಫಾರ್ಮ್ ಕಂಡುಕೊಂಡಿದ್ದರು. ಅದಕ್ಕೂ ಮೊದಲು ನಡೆದಿದ್ದ ಆ್ಯಷಸ್ ಸರಣಿಯಲ್ಲಿ ಅವರು ಇಂಗ್ಲೆಂಡ್‌ ಎದುರು ತಡಕಾಡಿದ್ದನ್ನು ಮರೆಸುವಂತೆ ಆಡಿದ್ದರು. ಮೊಹಮ್ಮದ್ ಅಬ್ಬಾಸ್ ಬೌಲಿಂಗ್‌ನಲ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಮೂಲಕ 300 ರನ್‌ಗಳ ಗಡಿಯನ್ನು ಅವರು ದಾಟಿದ್ದನ್ನು ಮರೆಯಲಾಗದು. ಪಾಕಿಸ್ತಾನದ ನಾಯಕ ಅಜರ್ ಅಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಪಿಂಕ್‌ ಬಾಲ್‌ನಲ್ಲಿ ತ್ರಿಶತಕ (ಔಟಾಗದೆ 302) ದಾಖಲಿಸಿದ್ದರು. ಆ ಮೊತ್ತವನ್ನೂ ವಾರ್ನರ್ ದಾಟಿದ್ದು (ಔಟಾಗದೆ 335) ವಿಶೇಷ. ಅಡಿಲೇಡ್ ಓವಲ್‌ನಲ್ಲಿ ಸರ್ ಡಾನ್ ಬ್ರಾಡ್‌ಮನ್ 1932ರಲ್ಲಿ ಔಟಾಗದೆ 299 ರನ್‌ ಗಳಿಸಿದ್ದೇ ಅದುವರೆಗಿನ ಗರಿಷ್ಠ ಟೆಸ್ಟ್‌ ಸ್ಕೋರ್ ಆಗಿತ್ತು. ಮೊಹಮ್ಮದ್ ಮೂಸಾ ಎಸೆತದಲ್ಲಿ ವಾರ್ನರ್ ಕ್ಯಾಚಿತ್ತಿದ್ದರು. ಆದರೆ, ಅದು ನೋಬಾಲ್ ಆಗಿದ್ದರಿಂದ ಸಿಕ್ಕ ಅವಕಾಶವನ್ನು ಅವರು ಅಷ್ಟು ದೊಡ್ಡದಾಗಿಸಿಕೊಂಡಿದ್ದು ಈಗ ನೆನಪಿಸಿಕೊಳ್ಳಲು ಕಾರಣವಿದೆ.

ವಾರ್ನರ್ ಎಡಗೈ ಆಟಗಾರ. ಅಂತೆಯೇ ರಿಷಭ್ ಪಂತ್. ಆಸ್ಟ್ರೇಲಿಯಾ ‘ಎ’ ತಂಡದ ಎದುರು ಸಿಡ್ನಿಯಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ತಡಕಾಡಿದ್ದರು. ಪೃಥ್ವಿ ಶಾ (40), ಶುಭಮನ್ ಗಿಲ್ (43) ಹೊರತುಪಡಿಸಿದರೆ ಹನುಮ ವಿಹಾರಿ, ಅಜಿಂಕ್ಯ ರಹಾನೆ ತರಹದ ಅನುಭವಿಗಳೂ ಪರದಾಡಿದ್ದರು. ರಿಷಭ್ ಪಂತ್ 5 ರನ್‌ ಗಳಿಸಿ ಎಲ್‌ಬಿಡಬ್ಲ್ಯು ಆದಾಗ ಅವರ ಮನೋಬಲ ಇನ್ನೂ ಹಳಿಗೆ ಮರಳಿಲ್ಲ ಎನಿಸಿತ್ತು. ಜಸ್‌ಪ್ರೀತ್ ಬೂಮ್ರಾ ಅರ್ಧ ಶತಕ ಗಳಿಸಿ ಆ ಇನಿಂಗ್ಸ್‌ನಲ್ಲಿ ಅಚ್ಚರಿಯೊಡ್ಡಿದರು. ಎರಡನೇ ಇನಿಂಗ್ಸ್‌ ಮಜವಾಗಿತ್ತು. ಹನುಮ ವಿಹಾರಿ 104 ರನ್‌ ಗಳಿಸಲು 194 ಎಸೆತಗಳನ್ನು ಎದುರಿಸಿದರು. ಪಂತ್ 103 ರನ್‌ ದಾಖಲಿಸಲು 73 ಎಸೆತಗಳನ್ನು ಆಡಿದರಷ್ಟೆ. ಒಂಬತ್ತು ಬೌಂಡರಿ, ಆರು ಸಿಕ್ಸರ್‌ಗಳ ಇನಿಂಗ್ಸ್‌ ಅದು. ಇಬ್ಬರೂ ಔಟಾಗಲಿಲ್ಲ. ಪಂತ್ ಮಿಡ್‌ವಿಕೆಟ್‌ ಪ್ರದೇಶವನ್ನು ಗುರಿ ಮಾಡಿ ಹೊಡೆದ ಸ್ಲಾಗ್‌ ಸ್ವೀಪ್‌ಗಳು, ಕ್ರೀಸ್‌ನಿಂದ ಆಚೆ ನುಗ್ಗಿ ಮಾಡಿದ ಡ್ರೈವ್‌ಗಳು ಕಳೆದ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಅವರಿದ್ದ ಫಾರ್ಮ್‌ ಅನ್ನು ನೆನಪಿಸಿದವು.

ಮಾನಸಿಕವಾಗಿ ಕುಸಿದಿದ್ದಾಗಲೇ ವಾರ್ನರ್‌ ಹೋದವರ್ಷ ಪುಟಿದಿದ್ದರು. ಪಂತ್‌ ಈ ಸಲ ಹಾಗೆಯೇ ಆಡುವರೇ ಎಂಬ ಕುತೂಹಲವನ್ನು ಅಭ್ಯಾಸ ಪಂದ್ಯದ ಆಟದಿಂದ ಮೂಡಿಸಿದ್ದಾರೆ.

ವಾರ್ನರ್, ಪಂತ್ ಇಬ್ಬರ ಆಟ ಪಿಂಕ್ ಬಾಲ್‌ನ ಕುರಿತು ಅನೇಕರಲ್ಲಿ ಇದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿವೆಯಷ್ಟೆ. ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಭಾರತ ಒಂದು ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಆಡಿ, ಇನಿಂಗ್ಸ್‌ ಗೆಲುವನ್ನು ಕಂಡ ನೆನಪು ಇದೆ. ಆ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ದಾಖಲಿಸಿದ್ದರು. ಹಾಗಿದ್ದೂ ಆಸ್ಟ್ರೇಲಿಯನ್ನರೇ ಹೆಚ್ಚು ಪಿಂಕ್‌ ಬಾಲ್‌ ಪಂದ್ಯಗಳನ್ನು ಆಡಿರುವುದು. ಮಿಚಲ್ ಸ್ಟಾರ್ಕ್ ಹಾಗೂ ಹ್ಯಾಜಲ್‌ವುಡ್ ತರಹದ ಮಾಗಿದ ಬೌಲರ್‌ಗಳಿಗೆ ಆ ಚೆಂಡಿನಲ್ಲಿ ಸಿಗುವ ರಿವರ್ಸ್‌ ಸ್ವಿಂಗ್‌ನ ಅರಿವಿದೆ. ಭಾರತದ ಬೌಲರ್‌ಗಳಿಗೆ ಆ ಚೆಂಡಿನ ಆಟವಿನ್ನೂ ಪ್ರಯೋಗಾವಕಾಶ.

ಪಿಂಕ್‌ ಬಾಲ್ ಹೊನಲು ಬೆಳಕಿನಲ್ಲಿ ಆಡಲು ಅನುಕೂಲವೆನ್ನುವುದು ಶೋಧ. ಕೂಕಬುರಾ ಈ ಚೆಂಡನ್ನೂ ಸಿದ್ಧಪಡಿಸಿದೆ. ಏಕದಿನದ ಪಂದ್ಯಗಳಲ್ಲಿ ಬಳಸುವ ಬಿಳಿ ಚೆಂಡು ಹೆಚ್ಚು ಕಾಲ ಬೌಲರ್‌ಗಳಿಗೆ ನೆರವಾಗುವುದಿಲ್ಲ ಎನ್ನುವ ಕಾರಣಕ್ಕೆ ಕೂಕಬುರಾ ಪಿಂಕ್ ಬಾಲನ್ನು ಪರಿಚಯಿಸಿದೆ. ಮೊದಲು ಸೀಮ್‌ನಲ್ಲಿ ಬಿಳಿ, ನೀಲಿ ಬಣ್ಣ ಇತ್ತು. ಅದರಿಂದ ಸೀಮ್‌ ಅಷ್ಟಾಗಿ ಸ್ಪಷ್ಟವಾಗುವುದಿಲ್ಲ ಎಂಬ ಸೊಲ್ಲು ಬಂದಮೇಲೆ ಈಗ ಕಪ್ಪು ಬಣ್ಣದ ಸೀಮ್‌ ಅದರಲ್ಲಿ ಇದೆ. ಆಸ್ಟ್ರೇಲಿಯನ್ನರು 2015ರಿಂದ ಇದುವರೆಗೆ ಏಳು ಪಿಂಕ್‌ ಬಾಲ್‌ ಟೆಸ್ಟ್‌ಗಳನ್ನು ಆಡಿದ್ದಾರೆ. ಒಂದು ಪಂದ್ಯದಲ್ಲೂ ಸೋತಿಲ್ಲ. ಅಡಿಲೇಡ್ ಓವಲ್ ಅಂತೂ ಆ ತಂಡದ ಅದೃಷ್ಟದ ತಾಣ. ಅಲ್ಲಿ ಈಗ ಭಾರತ ಲಿಟ್ಮಸ್ ಟೆಸ್ಟ್ ಎದುರಿಸಬೇಕಿದೆ. ಬಾಂಗ್ಲಾದೇಶದ ಎದುರಿನ ಟೆಸ್ಟ್‌ನಲ್ಲಿ ಇಶಾಂತ್ ಶರ್ಮ ಒಟ್ಟು ಒಂಬತ್ತು, ಉಮೇಶ್ ಯಾದವ್ ಒಟ್ಟು ಎಂಟು ವಿಕೆಟ್‌ಗಳನ್ನು ಪಡೆದಿದ್ದರು. ಕೊಹ್ಲಿ ಬಿಟ್ಟರೆ, ಅಜಿಂಕ್ಯ ರಹಾನೆ ಆ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ರಿಷಭ್ ಪಂತ್ ಆ ಪಂದ್ಯದಲ್ಲಿ ಆಡಿರಲಿಲ್ಲ.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಉಸ್ಮಾನ್ ಖವಾಜಾ, ಪಾಕಿಸ್ತಾನದ ಅಜರ್ ಅಲಿ ಹಾಗೂ ಅಸಾದ್ ಶಫೀಕ್ ಪಿಂಕ್ ಬಾಲ್‌ನಲ್ಲಿ ಹೆಚ್ಚು ರನ್‌ಗಳನ್ನು ಕಲೆಹಾಕಿರುವ ಬ್ಯಾಟ್ಸ್‌ಮನ್‌ಗಳು. ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯಾನ್ ಅವರಿಗೆ ಆ ಚೆಂಡಿನ ಮರ್ಮ ಚೆನ್ನಾಗಿ ಅರ್ಥವಾಗಿದೆ. ನ್ಯೂಜಿಲೆಂಡ್‌ ವೇಗಿ ಟ್ರೆಂಟ್ ಬೌಲ್ಟ್ ಎರಡೇ ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದದ್ದು ಸ್ವಿಂಗ್ ಬೌಲರ್‌ಗಳಿಗೆ ಅದರಿಂದ ಲಾಭವಿದೆ ಎನ್ನುವುದಕ್ಕೆ ಸಾಕ್ಷಿ.

2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಮೊದಲ ಸಲ ಪಿಂಕ್ ಬಾಲ್‌ನಲ್ಲಿ ಆಡಿದವು. ನ್ಯೂಜಿಲೆಂಡ್‌ ಬರೀ 202 ಹಾಗೂ 208 ರನ್‌ಗಳನ್ನು ಎರಡೂ ಇನಿಂಗ್ಸ್‌ಗಳಿಂದ ಗಳಿಸಿತು. ಆಸ್ಟ್ರೇಲಿಯಾ 3 ವಿಕೆಟ್‌ಗಳಿಂದ ಪ್ರಯಾಸದಿಂದಲೇ ಆ ಪಂದ್ಯ ಗೆದ್ದಿದ್ದು. ಮೂರೇ ದಿನಗಳಲ್ಲಿ ಪಂದ್ಯ ಮುಗಿದುಹೋದದ್ದು ಗಮನಿಸಬೇಕಾದ ಅಂಶ. ಕಳೆದ ವರ್ಷ ಬಾಂಗ್ಲಾ ಎದುರು ಕೂಡ ಹಾಗೆಯೇ ಆಗಿತ್ತು. ಅಂದರೆ, ಚೆಂಡಿನ ಬಣ್ಣಕ್ಕೆ ಕಣ್ಣು ಹೊಂದಿಕೊಳ್ಳುವವರೆಗೆ ಅದನ್ನು ಆಡುವುದು ಸುಲಭವಲ್ಲ.

ಪಿಂಕ್‌ ಬಾಲ್‌ನಿಂದ ಅನುಕೂಲಗಳಿವೆ. ಟೆಸ್ಟ್‌ ಪಂದ್ಯಕ್ಕೆ ತಕ್ಕಂತೆ ದೀರ್ಘಕಾಲ ಚೆಂಡು ಬಾಳಿಕೆ ಬರುತ್ತಿದೆ. ಇದರಿಂದ ಬೌಲರ್‌ಗಳು ಚೆಂಡನ್ನು ಬದಲಿಸುವಂತೆ ಅಂಗಲಾಚುವ ಅಗತ್ಯ ಇರುವುದಿಲ್ಲ. ಹೆಚ್ಚು ಸ್ವಿಂಗ್‌ ಲಭಿಸುವುದರಿಂದ ಬ್ಯಾಟ್ಸ್‌ಮನ್‌ಗಳು ಸವಾಲಿಗೆ ಮುಖಾಮುಖಿಯಾಗಬೇಕಾಗುತ್ತದೆ. ಅದರಲ್ಲೂ ಇಳಿಸಂಜೆ ದಾಟಿ ಕತ್ತಲು ಮೂಡುವ ಹೊತ್ತಿನಲ್ಲಿ ಫ್ಲಡ್‌ಲೈಟ್‌ ಹಾಗೂ ಸಹಜ ಮಂದ ಬೆಳಕಿಗೆ ಹೊಂದಿಕೊಂಡು ಬ್ಯಾಟ್ಸ್‌ಮನ್‌ಗಳು ಆಡುವುದು ಸುಲಭವಲ್ಲ. ವೀರೇಂದ್ರ ಸೆಹ್ವಾಗ್ ಪಿಂಕ್‌ ಬಾಲ್‌ನಲ್ಲಿ ಅಭ್ಯಾಸ ಮಾಡಿದ ನಂತರ ಇದನ್ನು ಸ್ಪಷ್ಟಪಡಿಸಿದ್ದರು. ಆ ಅವಧಿಯಲ್ಲಿ ಊಟದ ವಿರಾಮ ಘೋಷಿಸುವುದು ಉತ್ತಮ ಎಂದು ಸಲಹೆಯನ್ನೂ ನೀಡಿದ್ದರು.

ಸ್ಟೀವ್ ಸ್ಮಿತ್ ಕ್ಲೋಸ್‌ಇನ್ ಫೀಲ್ಡರ್‌ಗಳಲ್ಲಿ ಶ್ರೇಷ್ಠ ಎನಿಸಿಕೊಂಡವರು, ಅವರಿಗೆ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಚೆಂಡು ಸುಲಭವಾಗಿ ಕಣ್ಣಿಗೆ ಕಂಡಿರಲಿಲ್ಲ. ಸ್ಲಿಪ್‌ನಲ್ಲಿ ಎರಡು ಕ್ಯಾಚ್‌ಗಳನ್ನು ಅವರು ಕೈಚೆಲ್ಲಿದ್ದರು. ‘ಅದರ ಬಣ್ಣಕ್ಕೆ ಕಣ್ಣುಗಳು ಇನ್ನೂ ಹೊಂದಿಕೊಳ್ಳಬೇಕು’ ಎಂಬ ಅವರ ಆಗಿನ ಮಾತೀಗ ಹಳತಾಗಿದೆ.

ಟೆಸ್ಟ್‌ ಪಂದ್ಯಗಳಿಂದ ಪ್ರೇಕ್ಷಕರು ವಿಮುಖರಾಗಬಾರದು ಎನ್ನುವ ಕಾರಣಕ್ಕೆ ಕಂಡುಕೊಂಡ ಹೊಸ ದಾರಿ ಹಗಲು–ರಾತ್ರಿಯ ಪಂದ್ಯ. ಐದು ವರ್ಷಗಳ ಹಿಂದೆ ಆಸ್ಟ್ರೇಲಿಯಾ–ನ್ಯೂಜಿಲೆಂಡ್ ನಡುವಿನ ಪಂದ್ಯವನ್ನು ಮೂರು ದಿನಗಳಲ್ಲಿ ಒಂದೂಕಾಲು ಲಕ್ಷ ಜನ ವೀಕ್ಷಿಸಿದ್ದರು. ದಿನವಿಡೀ ಕೆಲಸ ಮಾಡಿದವರು ಸಂಜೆಯ ನಂತರ ಕ್ರೀಡಾಂಗಣಕ್ಕೆ ಬಂದೇ ಬರುತ್ತಾರೆ ಎನ್ನುವ ವಾಣಿಜ್ಯ ಲೆಕ್ಕಾಚಾರವೂ ಇದರಲ್ಲಿದೆ.

ಬ್ಯಾಟ್ಸ್‌ಮನ್‌ಗಳಿಗೆ ಈ ಚೆಂಡಿನಾಟ ಹಬ್ಬ ಎನ್ನುವುದನ್ನು ವಾರ್ನರ್, ಪಂತ್ ತರಹದ ಹೊಡೆತಗಾರರು ತೋರಿಸಿಕೊಟ್ಟಿದ್ದಾರೆ. ಬೌಲರ್‌ಗಳಿಗೂ ಇದು ವರದಾನ ಎಂದು ಹ್ಯಾಜಲ್‌ವುಡ್ ನಗುತ್ತಿದ್ದಾರೆ. ಮೊದಲ ಪಿಂಕ್‌ ಬಾಲ್ ಟೆಸ್ಟ್‌ನ ಒಂದು ಇನಿಂಗ್ಸ್‌ನಲ್ಲಿ ಮೂರು ವಿಕಟ್ ಪಡೆದು ಬೀಗಿದ್ದ ನೇಥನ್ ಲಯಾನ್ ಸ್ಪಿನ್ನರ್‌ಗಳಿಗೂ ಇದರಿಂದ ಅನುಕೂಲವಿದೆ ಎಂದು ತೋರಿಸಿಕೊಟ್ಟಿದ್ದರು. ಹೀಗಿದ್ದೂ, ವಿಂಡೀಸ್‌ನ ದೊಡ್ಡ ಹೊಡೆತಗಾರರು ಈ ಚೆಂಡಿನ ಗತಿ ಅಂದಾಜಿಸಲು ಪರದಾಡಿದ್ದಾರೆ. ನ್ಯೂಜಿಲೆಂಡ್‌ನ ಸಂಯಮದ ಮೂರ್ತಿ ವಿಲಿಯಮ್ಸನ್ ಮುಖವೂ ಹುಳ್ಳಗೆ ಆಗಿತ್ತು. ಇಂತಹ ಒಂದಿಷ್ಟು ಕುತೂಹಲ, ಪ್ರಶ್ನೆಗಳನ್ನು ಎದುರಲ್ಲಿ ಇಟ್ಟುಕೊಂಡು ಭಾರತವು ಪ್ರಬಲ ಆಸ್ಟ್ರೇಲಿಯಾದ ಸ್ವಿಂಗ್‌ಗೆ ಮುಖಾಮುಖಿಯಾಗಲಿದೆ.

ಟೆಸ್ಟ್‌ ಪಂದ್ಯವನ್ನು ನಾಲ್ಕು ದಿನಗಳಿಗೆ ಇಳಿಸಿ, ದಿನವೂ 100 ಓವರ್ ಬೌಲ್ ಮಾಡುವ ಅವಕಾಶ ಕೊಡಬೇಕು ಎಂಬ ಇನ್ನೊಂದು ಸೊಲ್ಲು ಇದೆ. ಇಂತಹ ಪಂದ್ಯಗಳು ನಡೆದು, ಮೂರ್ನಾಲ್ಕು ದಿನಗಳ ಒಳಗೇ ಫಲಿತಾಂಶ ಬರಲು ಶುರುವಾದರೆ, ಆ ಕಾಲವೂ ಬರಬಹುದು.

‘ಚೆಂಡಿನ ಬಣ್ಣ ಯಾವುದಾದರೇನು, ಹೊಡೆಯಲು ನಾವು ರೆಡಿ’ ಎನ್ನುವ ಪಂತ್ ತರಹದ ತುಡುಗು ಹುಡುಗರು ಇರುವಾಗ ಕ್ರಿಕೆಟ್‌ನ ಪಲ್ಲಟಗಳೆಲ್ಲವೂ ಒಪ್ಪಿತವಾಗಿಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT