ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲರ್‌ಗಳ ಕಲಿಕಾ ತಾಣ ಐಪಿಎಲ್

ಕ್ರಿಕೆಟಿಗ, ವೀಕ್ಷಕ ವಿವರಣೆಕಾರ ಆರ್. ವಿನಯಕುಮಾರ್ ಮನದ ಮಾತು
Last Updated 30 ಅಕ್ಟೋಬರ್ 2020, 18:17 IST
ಅಕ್ಷರ ಗಾತ್ರ

ಬೆಂಗಳೂರು: ’ಐಪಿಎಲ್ ಆರಂಭವಾದಾಗಿನಿಂದಲೂ ಬ್ಯಾಟ್ಸ್‌ಮನ್‌ಗಳ ದರಬಾರು ನಡೆಯುತ್ತಲೇ ಇದೆ. ಆದರೆ ಅದಕ್ಕೆ ತಕ್ಕಂತೆ ಬೌಲರ್‌ಗಳೂ ತಮ್ಮ ಕೌಶಲಗಳನ್ನು ಉತ್ತಮಗೊಳಿಸಿಕೊಂಡಿದ್ದಾರೆ. ಈ ಟೂರ್ನಿಯು ಒಂದು ರೀತಿಯಲ್ಲಿ ಬೌಲರ್‌ಗಳಿಗೆ ಕಲಿಕಾ ತಾಣವಾಗಿದೆ‘

ಕ್ರಿಕೆಟಿಗ ಮತ್ತು ಸ್ಟಾರ್ ಸ್ಪೋರ್ಟ್ಸ್‌ ಕನ್ನಡ ವಾಹಿನಿಯ ವೀಕ್ಷಕ ವಿವರಣೆಕಾರ ಆರ್. ವಿನಯಕುಮಾರ್ ಅವರ ಮಾತುಗಳಿವು. ಕರ್ನಾಟಕ ತಂಡದ ಯಶಸ್ವಿ ನಾಯಕ, ಭಾರತ ತಂಡದಲ್ಲಿ ಆಡಿರುವ ಅನುಭವಿಯಾಗಿರುವ ಮಧ್ಮಮವೇಗಿ ವಿನಯ್ ತಮ್ಮ ಕಾಮೆಂಟ್ರಿ ಬಾಕ್ಸ್‌ ಅನುಭವವನ್ನು ’ಪ್ರಜಾವಾಣಿ‘ಯೊಂದಿಗೆ ಹಂಚಿಕೊಂಡಿದ್ದಾರೆ.

* ಐಪಿಎಲ್‌ ಟೂರ್ನಿಯೆಂದರೆ ಬ್ಯಾಟ್ಸ್‌ಮನ್‌ಗಳದ್ದೇ ಪಾರಮ್ಯ. ಬೌಲರ್‌ಗಳ ಕಥೆ ಏನು?

13 ವರ್ಷಗಳ ಹಿಂದೆ ಐಪಿಎಲ್ ಆರಂಭವಾದಾಗಿನಿಂದಲೂ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುತ್ತಿದ್ದಾರೆ. ಆಗ ಮೊದಲ ಪಂದ್ಯದಲ್ಲಿಯೇ ಬ್ರೆಂಡನ್ ಮೆಕ್ಲಮ್ ಶತಕ ಹೊಡೆದಿದ್ದರು. ಈ ಬಾರಿ ಶಾರ್ಜಾದಂತಹ ಪಿಚ್‌ಗಳಲ್ಲಿ ಬೌಲರ್‌ಗಳಿಗೆ ಕಷ್ಟದ ಸವಾಲಿದೆ. ಆದರೆ, ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಲು ಬೌಲರ್‌ಗಳೂ ತಮ್ಮ ಕೌಶಲಗಳನ್ನು ಸುಧಾರಿಸಿಕೊಂಡಿದ್ದಾರೆ. ಎಸೆತಗಳಲ್ಲಿ ವೈವಿಧ್ಯತೆ, ವೇಗವೈವಿಧ್ಯತೆ, ನಕಲ್ ಬಾಲ್, ಸ್ವಿಂಗ್, ತೋಳುಗಳ ಚಲನೆಯ ಶೈಲಿಯಲ್ಲಿ ಬದಲಾವಣೆ (ಉದಾ: ಲಸಿತ್ ಮಾಲಿಂಗ ಮಾದರಿ) ಇತ್ಯಾದಿ ಕಲಿತಿದ್ದಾರೆ. ಬ್ಯಾಕ್‌ ಆಫ್ ಲೆಂಗ್ತ್ ಕಲಿತಿದ್ದಾರೆ. ಯಶಸ್ವಿಯೂ ಆಗಿದ್ದಾರೆ. ಕಗಿಸೊ ರಬಾಡ ಇದಕ್ಕೆ ಒಳ್ಳೆ ಉದಾಹರಣೆ.

*ನಿಮ್ಮ ಕಾಮೆಂಟ್ರಿ ಬಾಕ್ಸ್‌ ಅನುಭವ ಹೇಗಿದೆ? ಐಪಿಎಲ್‌ನಲ್ಲಿ ಇದು ಮೊದಲ ಸಲವಲ್ಲವೇ?

ಹೋದ ವರ್ಷ ನಾನು ವಿಶ್ವಕಪ್ ಟೂರ್ನಿ ಸಂದರ್ಭದಲ್ಲಿ ಕಾಮೆಂಟ್ರಿ ಮಾಡಿದ್ದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಸಂದರ್ಭದಲ್ಲಿಯೂ ಮಾಡಿ್ದೆ. ಐಪಿಎಲ್‌ನಲ್ಲಿ ಮೊದಲ ಸಲ. ಒಳ್ಳೆಯ ಅನುಭವ. ಆದರೆ ಸವಾಲಿನದ್ದು. ಕೊರೊನಾ ಕಾಲವಾಗಿರುವುದರಿಂದ ಕುಟುಂಬದಿಂದ ಹೆಚ್ಚು ಸಮಯ ದೂರ ಇರಬೇಕು. 14 ದಿನಗಳ ಕ್ವಾರಂಟೈನ್ , ಮಾರ್ಗದರ್ಶಿ ಸೂತ್ರಗಳ ಕಟ್ಟುನಿಟ್ಟಿನ ಪಾಲನೆಯನ್ನು ನಿರಂತರವಾಗಿ ಮಾಡಬೇಕು. ನಮ್ಮ ಸುರಕ್ಷತೆಯ ದೃಷ್ಟಿಯಿಂದ ಇದು ಒಳ್ಳೆಯದು. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಮ್ಮದು ಒಂದು ಕುಟುಂಬವಿದ್ದಂತೆ. ತುಂಬಾ ದೊಡ್ಡ ತಂಡವಿದೆ. ಇಲ್ಲಿ ಸೀನಿಯರ್ ಜೂನಿಯರ್ ತಾರತಮ್ಯ ಇಲ್ಲ. ವೆಂಕಿ (ವೆಂಕಟೇಶ್ ಪ್ರಸಾದ್) ಅವರು ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಅವರ ಬದಲಿಗೆ ನಾನು ಕರ್ನಾಟಕದ ತಂಡದಲ್ಲಿ ಸ್ಥಾನ ಪಡೆದಿದ್ದೆ. ಈಗ ಅವರೊಂದಿಗೆ ಕಾಮೆಂಟ್ರಿ ಮಾಡುತ್ತಿರುವುದು ಸಂತಸ. ವಿಜಯ್ ಭಾರದ್ವಾಜ್, ಅಖಿಲ್, ಈ ಹಿಂದೆ ಜೆಸ್ವಂತ್ ಅವರೊಂದಿಗೆ ಕಾಮೆಂಟ್ರಿ ಮಾಡಿದ್ದೆ. ಅಲ್ಲದೇ ಹಿನ್ನೆಲೆಯಲ್ಲಿರುವ ತಂತ್ರಜ್ಞರು, ನಿರ್ಮಾಪಕರು ಮತ್ತು ಪರಿಣತರ ಸಹಾಯ ಬಹಳಷ್ಟಿದೆ.

* ಭವಿಷ್ಯದಲ್ಲಿ ಕಾಮೆಂಟೆಟರ್ ಆಗ್ತೀರಾ?

ನನ್ನಲ್ಲಿ ಇನ್ನೂ ಕೆಲವು ವರ್ಷಗಳವರೆಗೆ ಕ್ರಿಕೆಟ್ ಆಡುವ ಸಾಮರ್ಥ್ಯ ಇದೆ. ನಂತರ ಕೋಚ್ ಕೂಡ ಆಗಬಹುದು. ಕಾಮೆಂಟ್ರಿ ಕೂಡ ಇಷ್ಟದ್ದು. ಏನೇ ಆದರೂ ಕ್ರಿಕೆಟಿಗೆ ವಾಪಸ್ ಒಂದಿಷ್ಟು ಕಾಣಿಕೆ ನೀಡುವುದು ಉದ್ದೇಶ. ನಾನು ದಾವಣಗೆರೆಯಿಂದ ಬಂದವನು. ಆದ್ದರಿಂದ ಬೇರೆ ಬೇರೆ ಊರುಗಳಿಂದ ಬಂದ ಹುಡುಗರ ಬಗ್ಗೆ ಚೆನ್ನಾಗಿ ಹೇಳಬಲ್ಲೆ. ನನ್ನ ಅನುಭವದಿಂದ ಮುಂದಿನ ಪೀಳಿಗೆಗೆ ಲಾಭವಾಗಬೇಕು.

* ಈ ಟೂರ್ನಿಯಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿರುವ ಕರ್ನಾಟಕದ ಆಟಗಾರರ ಪ್ರದರ್ಶನ ಕುರಿತು ಏನು ಹೇಳ್ತೀರಿ?

ತುಂಬಾನೇ ಖುಷಿಯಾಗುತ್ತೆ ಈ ವಿಷಯದ ಕುರಿತು ಮಾತಡೋಕೆ. ಏಕೆಂದರೆ ನಾನು ರಾಜ್ಯ ತಂಡದ ನಾಯಕನಾಗಿದ್ದಾಗ ಕೆ.ಎಲ್. ರಾಹುಲ್, ಕೆ. ಗೌತಮ್, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ದೇವದತ್ತ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ಅನಿರುದ್ಧ ಜೋಶಿ, ಮಯಂಕ್ ಅಗರವಾಲ್ ಪದಾರ್ಪಣೆ ಮಾಡಿದ್ದರು. ಮನೀಷ್ ಪಾಂಡೆ ಮತ್ತು ನಾನು ಜೊತೆಯಾಗಿ ಆಡಿದ್ದೇವೆ. ಪವನ್ ಮತ್ತು ಅನಿರುದ್ಧಗೆ ಐಪಿಎಲ್ ಪದಾರ್ಪಣೆ ಅವಕಾಶ ಸಿಕ್ಕಿಲ್ಲ. ಆದರೆ ಉಳಿದವರು ಮಿಂಚುತ್ತಿದ್ದಾರೆ. ಇದೊಂದು ಸಾರ್ಥಕ ಕ್ಷಣ.

* ದೇವದತ್ತ ಪಡಿಕ್ಕಲ್ ಆರ್‌ಸಿಬಿಯಲ್ಲಿ ಉತ್ತಮವಾಗಿ ಆಡ್ತಿದ್ದಾರೆ. ಅವರ ಕುರಿತು ಏನು ಹೇಳ್ತೀರಿ?

ಮುಂದೊಂದು ದಿನ ಬಹಳ ದೊಡ್ಡ ಆಟಗಾರನಾಗುವ ಕ್ಷಮತೆ ದೇವದತ್ತನಿಗೆ ಇದೆ. ಬಹಳ ಶಿಸ್ತು ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅವರು ಆರ್‌ಸಿಬಿ ಪರ ಆಡುತ್ತಿದ್ದು, ಅರ್ಧಶತಕಗಳನ್ನು ಹೊಡೆದಿದ್ದಾರೆ. ತಮಗಿಂತಲೂ ಅನುಭವಿ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದಾರೆ. ಅವರಿಗೆ ಒಳ್ಳೆಯ ಭವಿಷ್ಯವಿದೆ.

* ಕ್ರಿಕೆಟ್ ಜೀವನದಲ್ಲಿ ಮರೆಯದ ಕ್ಷಣಗಳು ಯಾವುವು?

ನನ್ನ ಮೊದಲ ರಣಜಿ ಪಂದ್ಯದಲ್ಲಿ ಸೌರವ್ ಗಂಗೂಲಿ, ರೋಹನ್ ಗಾವಸ್ಕರ್ ಅವರನ್ನು ಔಟ್ ಮಾಡಿದೆ. ಐದು ವಿಕೆಟ್ ತೆಗೆದುಕೊಂಡೆ. ಮಹಾರಾಷ್ಟ್ರ ಮೇಲೆ ರತ್ನಗಿರಿಯಲ್ಲಿ ಹ್ಯಾಟ್ರಿಕ್, ಮುಂಬೈ ಎದುರಿನ ಕ್ವಾರ್ಟರ್‌ಫೈನಲ್‌ನಲ್ಲಿ ಹ್ಯಾಟ್ರಿಕ್, ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದು. ರಾಜ್ಯ ತಂಡ ಡಬಲ್ ಟ್ರಿಪಲ್ ಪ್ರಶಸ್ತಿ ಗೆದ್ದಿದ್ದು. ಒಂದೇ ಎರಡೇ ಹಲವಾರು ನೆನಪುಗಳಿವೆ.

* ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರಿಗೆ ಒತ್ತಡ ಯಾವ ರೀತಿಯಿದೆ?

ಲಾಕ್‌ಡೌನ್‌ನಲ್ಲಿ ಅಭ್ಯಾಸ, ಫಿಟ್‌ನೆಸ್ ಮಾಡುವುದು ಕಷ್ಟವಾಗುತ್ತಿತ್ತು. ಹೊರಾಂಗಣದಲ್ಲಿ ಅಭ್ಯಾಸ ಮಾಡುವುದು ಸಾಧ್ಯವಿರಲಿಲ್ಲ. 4–5 ತಿಂಗಳಲ್ಲಿ ದೇಹವು ಒಂದು ರೀತಿಯ ಜೀವನಶೈಲಿಗೆ ಹೊಂದಿಕೊಂಡಿರುತ್ತದೆ. ಒಮ್ಮೆ ಕ್ರೀಡಾಂಗಣಕ್ಕೆ ಇಳಿದ ತಕ್ಷಣ ಕೆಲವು ದಿನಗಳ ಅಭ್ಯಾಸದ ನಂತರ ಮೊದಲಿನ ಹಾಗೆ ಆಗ್ತಾರೆ.

* ಲಾಕ್‌ಡೌನ್ ಸಂದರ್ಭದಲ್ಲಿ ಏನು ಮಾಡಿದಿರಿ?

ಕ್ರಿಕೆಟ್ ಜೀವನದಲ್ಲಿ ಭಾರತ, ಕರ್ನಾಟಕ ಮತ್ತು ಐಪಿಎಲ್‌ ತಂಡಗಳಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ. ಅದಕ್ಕಾಗಿ ಊರೂರು ಸುತ್ತಿದ್ದೇನೆ. ಮನೆಯಲ್ಲಿ ಸಮಯ ಕಳೆದದ್ದೇ ಕಡಿಮೆ. ಲಾಕ್‌ಡೌನ್‌ನಿಂದಾಗಿ ಕುಟುಂಬದೊಂದಿಗೆ ಬಹಳಷ್ಟು ಸಮಯ ಕಳೆಯುವ ಅವಕಾಶ ಒದಗಿತು. ಮನೆಯಲ್ಲಿಯೇ ಜಿಮ್ ಇರುವುದರಿಂದ ಫಿಟ್‌ನೆಸ್‌ ವ್ಯಾಯಾಮ ನಿರಂತರವಾಗಿ ಮಾಡುತ್ತಿದ್ದೆ. ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಕಾಲ ಕಳೆದಿದ್ದು ಸಂತೃಪ್ತಿ ತಂದಿದೆ. ಒತ್ತಡದ ಜೀವನದಿಂದ ತುಸು ನಿರಾಳ ಭಾವ ಸಿಕ್ಕಿತ್ತು.

* ಕ್ರಿಕೆಟ್ ಕಲಿಕೆ ಆರಂಭಿಸಲಿರುವ ಮಕ್ಕಳಿಗೆ ನಿಮ್ಮ ಸಲಹೆ

ಕ್ರಿಕೆಟ್‌ ಒಂದು ಸುಂದರವಾದ ಆಟ. ವ್ಯಕ್ತಿತ್ವವನ್ನೂ ನಿರ್ಮಿಸುತ್ತದೆ. ಮೂಲಪಾಠವನ್ನು ಚೆನ್ನಾಗಿ ಕಲಿಯಿರಿ. ದೀರ್ಘ ಮಾದರಿಯ ಕ್ರಿಕೆಟ್ ಆಡುವತ್ತ ಹೆಚ್ಚು ಶ್ರಮವಹಿಸಬೇಕು. ಪಾಲಕರು ಮತ್ತು ಕೋಚ್‌ಗಳು ಈ ಬಗ್ಗೆ ಮಾರ್ಗದರ್ಶನ ನೀಡಬೇಕು. ಟಿ20ಯಲ್ಲಿ ಯಶಸ್ವಿಯಾದ ಆಟಗಾರರೆಲ್ಲರೂ ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಸಫಲರಾದವರು. ಆದ್ದರಿಂದ ಹಂತ ಹಂತವಾಗಿ ಮೇಲೆರುತ್ತ ಬನ್ನಿ ಐಪಿಎಲ್‌ ಒಂದೇ ಪರಮ ಗುರಿಯಲ್ಲ. ಶಾಲೆ, ವಲಯ, ಜಿಲ್ಲೆ, ರಾಜ್ಯ, ದೇಶದ ತಂಡಗಳಲ್ಲಿ ಆಡುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಆಗಲೇ ಪರಿಪೂರ್ಣ ಕ್ರಿಕೆಟಿಗನಾಗಲು ಸಾಧ್ಯ. ಎಲ್ಲಕ್ಕಿಂತ ಮುಖ್ಯ ಶಿಸ್ತು ಮತ್ತು ಫಿಟ್‌ನೆಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT