ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ ಮಾತು–ಕತೆ

Last Updated 17 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಇಂದಿನ ಕ್ರಿಕೆಟ್‌ ಆಟವು ಬೃಹದಾಕಾರವಾಗಿ ಬೆಳೆದು ನಿಂತಿದೆ. ಆರ್ಥಿಕವಾಗಿ, ತಾಂತ್ರಿಕವಾಗಿ ಬೆಳೆದಿದೆ. ಆಟಗಾರರಿಗೆ ಅಂತರರಾಷ್ಟ್ರೀಯ ಮಟ್ಟದ ಹೆಸರು ಮತ್ತು ಜ್ಞಾನಗಳು ಸಿಗುತ್ತಿವೆ. ಆದರೂ ದಶಕಗಳಷ್ಟು ಹಳೆಯದಾದ ಜನಾಂಗೀಯ ನಿಂದನೆ ಮತ್ತು ಲಿಂಗ ಸಂಬಂಧಿ ನಿಂದನೆಗಳ ನಿಷೇಧ ನಿಯಮಗಳ ಕುರಿತು ಅರಿವಿಲ್ಲವೇ. ಇತ್ತೀಚೆಗೆ ನಡೆದ ಎರಡು ಘಟನೆಗಳು ಈ ಪ್ರಶ್ನೆಯನ್ನು ಹುಟ್ಟುಹಾಕಿವೆ. ಈ ನಿಟ್ಟಿನಲ್ಲಿ ಆಟಗಾರರಿಗೆ ನೈತಿಕತೆ ಪಾಠ ಮತ್ತು ನಿಯಮಗಳ ಜಾಗೃತಿ ಮೂಡಿಸುವ ಕಾರ್ಯಕ್ಕೆ ಐಸಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನಲಾಗುತ್ತಿದೆ. ಆದರೆ ಈಗ ಆ ಕೆಲಸವನ್ನು ಸ್ಟಂಪ್‌ ಮೈಕ್‌ ಮಾಡುತ್ತಿದೆಯೇ? ಈ ಕುರಿತು ಗಿರೀಶ ದೊಡ್ಡಮನಿ ಬರೆದಿದ್ದಾರೆ.

***

ಕ್ರಿಕೆಟ್‌ ಸ್ಟಂಪ್ ಮೈಕ್‌..

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಬಾಯಿಬಡುಕತನದಿಂದ ಸಭ್ಯರ ಆಟಕ್ಕೆ ವಿವಾದದ ಮಸಿ ಮೆತ್ತುವ ಕೆಲವು ಆಟಗಾರರಿಗೆ ಈ ಹೆಸರು ಕೇಳಿದರೇ ಈಗ ನಡುಕ ಶುರುವಾಗಿದೆ. ಅದಕ್ಕಾಗಿಯೇ ಮೈಕ್ ಬಳಕೆಯ ಕುರಿತ ಪರ–ವಿರೋಧ ಚರ್ಚೆಗಳು ಈಗ ಮತ್ತೆ ಗರಿಗೆದರಿವೆ.

ಹೋದ ವಾರ ಗ್ರಾಸ್ ಐಲೆಟ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಅವರಿಗೆ ‘ಸಲಿಂಗ ಕಾಮ’ದ ಕುರಿತು ಕಾಮೆಂಟ್ ಮಾಡಿದ್ದ ವಿಂಡೀಸ್ ತಂಡದ ವೇಗಿ ಶಾನನ್ ಗ್ಯಾಬ್ರಿಯಲ್ ಇದೀಗ ನಾಲ್ಕು ಏಕದಿನ ಪಂದ್ಯಗಳಿಂದ ನಿಷೇಧಕ್ಕೊಳಗಾಗಿದ್ದಾರೆ. ಹೋದ ತಿಂಗಳು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಅವರು ದಕ್ಷಿಣ ಆಫ್ರಿಕಾದ ಬೌಲರ್ ಆ್ಯಂಡಿಲೆ ಪಿಶುವಾಯೊ ಅವರಿಗೆ ಜನಾಂಗೀಯ ನಿಂದನೆ ಮಾಡಿದ್ದರು. ಐಸಿಸಿಯು ಅವರಿಗೂ ನಾಲ್ಕು ಪಂದ್ಯಗಳ ನಿಷೇಧ ಹೇರಿದೆ.

ಕಳೆದ ಹದಿನೈದು ದಿನಗಳಲ್ಲಿ ವರದಿಯಾದ ಈ ಎರಡೂ ಪ್ರಕರಣಗಳಿಗೂ ಸ್ಟಂಪ್ ಮೈಕ್‌ ಕಾರಣ. ಮೈಕ್‌ನಲ್ಲಿ ದಾಖಲಾದ ಧ್ವನಿಯನ್ನು ಪರಿಶೀಲಿಸಿಯೇ ಐಸಿಸಿಯು ತೀರ್ಪು ನೀಡಿದೆ.

ಆದರೆ, ಇಲ್ಲಿ ಒಂದು ಪ್ರಶ್ನೆ ಕಾಡುತ್ತದೆ.ಜನಾಂಗೀಯ ಮತ್ತು ಲಿಂಗ್ ಸಂಬಂಧಿತ ನಿಂದನೆಗಳನ್ನು ಕ್ರಿಕೆಟ್ ಸೇರಿದಂತೆ ಬಹುತೇಕ ಎಲ್ಲ ಕ್ರೀಡೆಗಳಲ್ಲಿಯೂ ಹಲವಾರು ದಶಕಗಳಿಂದ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆಗಳು ಆದ ಪ್ರಕರಣಗಳೂ ಸಾಕಷ್ಟಿವೆ. ಈಗಂತೂ ಸಾಮಾಜಿಕ ಜಾಲತಾಣಗಳು, ತಂತ್ರಜ್ಞಾನ ಆಧಾರಿತ ಅಂಪೈರಿಂಗ್, ಮಾಧ್ಯಮಗಳ ಕಣ್ಣುಗಳು ಚುರುಕಾಗಿದ್ದರೂ ಆಟಗಾರರು ಇಂತಹ ತಪ್ಪುಗಳನ್ನು ಮಾಡಲು ಕಾರಣವೇನು ಎಂಬುದೇ ಆ ಪ್ರಶ್ನೆ. ಆಟಗಾರರಿಗೆ ಈ ಕುರಿತು ಸರಿಯಾದ ತಿಳುವಳಿಕೆ ನೀಡುವಲ್ಲಿ ಆ ರಾಷ್ಟ್ರಗಳ ಮಂಡಳಿಗಳು ವಿಫಲವಾಗಿವೆಯೇ ಅಥವಾ ಆಟಗಾರರಿಗೆ ಹಣ, ಪ್ರಸಿದ್ಧಿಗಳ ಅಮಲು, ಪ್ರಚಾರಪ್ರಿಯತೆಗಳಿಂದಾಗಿ ಆಟಗಾರರು ಬೇಕೆಂತಲೇ ಇಂತಹ ಪ್ರಮಾದಗಳನ್ನು ಎಸಗುತ್ತಿದ್ದಾರೆಯೇ? ಎಂಬ ಚರ್ಚೆಗಳೂ ಈಗ ಮುನ್ನೆಲೆಗೆ ಬಂದಿವೆ.

‘ಆಟಗಾರರು ನೀತಿ, ನಿಯಮಗಳ ಹದ್ದುಬಸ್ತಿನಲ್ಲಿರಬೇಕು. ಅದಕ್ಕಾಗಿ ಸ್ಟಂಪ್ ಮೈಕ್‌ಗಳನ್ನು ಈಗ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಇವತ್ತಿನ ತುರ್ತು ಅಗತ್ಯ. ಸ್ಲೆಡ್ಜಿಂಗ್‌ ಹಾಸ್ಯಭರಿತವಾಗಿ ಮತ್ತು ಸಭ್ಯತೆಯ ಎಲ್ಲೆಯೊಳಗೆ ಇರಬೇಕು. ಆಟಗಾರರ ಆಟದ ಕುರಿತು ವ್ಯಂಗ್ಯವಾಡಿಕೊಳ್ಳಿ. ಆದರೆ ಅವರ ವೈಯಕ್ತಿಕ ವಿಷಯಗಳ ಕುರಿತಲ್ಲ. ಕ್ರಿಕೆಟ್‌ ಸಭ್ಯರ ಆಟವಾಗಿಯೇ ಉಳಿಯಬೇಕು. ಅದಕ್ಕಾಗಿ ಮೈಕ್‌ ಬಳಕೆಯ ತಂತ್ರಜ್ಞಾನ ಇರಬೇಕು’ ಎಂದು ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೊಯೀನ್‌ ಅಲಿ ಹೇಳಿದ್ದಾರೆ.

ಸ್ಲೆಡ್ಜಿಂಗ್‌ಗೆ (ಕು)ಖ್ಯಾತರಾಗಿರುವ ಆಸ್ಟ್ರೇಲಿಯಾದ ಬಹಳಷ್ಟು ಆಟಗಾರರು ಮೈಕ್‌ ಬಳಕೆಗೆ ಸಹಮತ ನೀಡಿಲ್ಲ. ಸ್ಟಂಪ್‌ಗೆ ಮೈಕ್‌ಗಳನ್ನು ಸ್ವಿಚ್ ಆಫ್‌ ಮಾಡಿ ಎಂದು ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾ ಸ್ಪಿನ್ನರ್ ನೇಥನ್ ಲಯನ್ ಒತ್ತಾಯಿಸಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಸರಣಿಯಲ್ಲಿ ‘ಮೈಕ್ ವಿರೋಧಿ ಆಂದೋಲನ’ವನ್ನು ಪರೋಕ್ಷವಾಗಿ ಮಾಡಿಯೇ ಬಿಟ್ಟಿದ್ದರು. ತಂಡದ ವಿಕೆಟ್‌ಕೀಪರ್ ಟಿಮ್ ಪೇನ್ ಅವರು ತಮ್ಮ ಪ್ರಾಯೋಜಕತ್ವ ಸಂಸ್ಥೆಯ ಬಿಯರ್ ಹೆಸರು ಹೇಳುವ ಮೂಲಕ ಅಧಿಕೃತ ಬ್ರಾಡ್‌ ಕಾಸ್ಟಿಂಗ್ ಕಂಪನಿಗೆ ಮುಜುಗರ ತಂದೊಡ್ಡಿದ್ದರು. ಆ ಸಂದರ್ಭದಲ್ಲಿ ಇನ್ನೊಬ್ಬ ಆಟಗಾರ ತಮಗೆ ಪ್ರಾಯೋಜಕತ್ವ ನೀಡುತ್ತಿರುವ ಏರ್‌ವೇಸ್ ಹೆಸರು ಹೇಳಿದ್ದರು. 2006ರಲ್ಲಿ ವಿಕೆಟ್‌ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್‌ ಕೂಡ ಇಂತಹದೇ ಕುಚೋದ್ಯ ಮಾಡಿ ಅಂಪೈರ್‌ಗಳಿಂದ ಎಚ್ಚರಿಕೆ ಪಡೆದಿದ್ದರು.

ಹೋದ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಮೈಕ್‌ ಮಾತುಗಳು ದೊಡ್ಡ ಸುದ್ದಿ ಮಾಡಿದ್ದವು. ಆ ಸಂದರ್ಭದಲ್ಲಿಯೂ ಮೈಕ್‌ ನಲ್ಲಿ ಟಿಮ್ ಪೇನ್ ಮತ್ತು ವಿರಾಟ್ ಕೊಹ್ಲಿ ನಡುವಣ ಮಾತಿನ ಚಕಮಕಿ ದಾಖಲಾಗಿತ್ತು. ಆಗಲೂ ಕೂಡ ಅಲ್ಲಿಯ ಕೆಲವು ಹಿರಿಯ ಕ್ರಿಕೆಟಿಗರು ಮೈಕ್ ಬೇಡ ಎಂದೇ ಹೇಳಿದ್ದರು. ಆದರೆ ಅದೇ ಸರಣಿಯಲ್ಲಿ ಟಿಮ್ ಪೇನ್ ಮತ್ತು ಭಾರತದ ರಿಷಭ್ ಪಂತ್ ನಡುವಣ ನಡೆದಿದ್ದ ‘ಬೇಬಿ ಸಿಟ್ಟಿಂಗ್’ ಸ್ವಾರಸ್ಯಕರ ಪ್ರಕರಣವು ಉತ್ತಮ ಉದಾಹರಣೆಯಾಗಿ ಮೆಚ್ಚುಗೆ ಗಳಿಸಿತು. ಆಸ್ಟ್ರೇಲಿಯಾ ಪ್ರಧಾನಿಯೂ ರಿಷಭ್ ಅವರನ್ನು ಅಭಿನಂದಿಸಿದ್ದರು. ಇದೀಗ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಸರಣಿ ಆಡಲು ಬರುತ್ತಿದೆ. ಅವರನ್ನು ಸ್ವಾಗತಿಸಲು ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಸ್ಟಾರ್ ಸ್ಪೋರ್ಟ್ಸ್‌ ಮಾಡಿರುವ ಪ್ರಚಾರ ವಿಡಿಯೊದಲ್ಲಿ ‘ಬೇಬಿ ಸಿಟ್ಟರ್’ ವಿಷಯದ ರೂಪಕವನ್ನೇ ಮಾಡಲಾಗಿದೆ. ಈಗಾಗಲೇ ಅದು ಸಾಕಷ್ಟು ಚರ್ಚೆಯಾಗುತ್ತಿದೆ.

ಮುಂಬರಲಿರುವ ಟೂರ್ನಿಯಲ್ಲಿ ಇನ್ನಷ್ಟು ಸಿಹಿ–ಕಹಿ ಮಾತುಗಳನ್ನು ದಾಖಲಿಸಿಕೊಳ್ಳಲಿರುವ ಮೈಕ್‌ಗೆ ಪ್ರೇಕ್ಷಕರು ಕಿವಿಯಾಗಲಿದ್ದಾರೆ. ಆದರೆ, ಆಟದ ಸಭ್ಯತೆ, ಶ್ರೇಷ್ಠತೆಗಳು ಮುಕ್ಕಾಗದಿದ್ದರೆ ಸಾಕು!

ಜನಪ್ರಿಯ ಮೈಕ್ ಮಾತುಗಳು

* ಅಜರುದ್ದೀನ್–ಅಫ್ರಿದಿ: 1996ರ ಶಾರ್ಜಾ ಏಕದಿನ ಕ್ರಿಕೆಟ್ ಕಪ್ ಟೂರ್ನಿಯ ಪಂದ್ಯ ಅದು. ಪಾಕಿಸ್ತಾನ ಬೌಲರ್ ಶಾಹೀದ್ ಅಫ್ರಿದಿ ಚುಟುಕು ರನ್‌ ಅಪ್ ನೊಂದಿಗೆ ಬೌಲಿಂಗ್ ಮಾಡುತ್ತಾರೆ. ತಮ್ಮ ಓವರ್ ಬೇಗ ಮುಗಿಸಲು ಬ್ಯಾಟ್ಸ್‌ಮನ್‌ಗಳು ಬೇಗ ಸಿದ್ಧರಾಗುವಂತೆ ಒತ್ತಡ ಹೇರುವುದು ಅವರ ಶೈಲಿ. ಆ ಪಂದ್ಯದಲ್ಲಿ ಭಾರತ ತಂಡದ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಶಾಹೀದ್ ರನ್‌ ಅಪ್ ಶೈಲಿಯನ್ನು ಉದ್ದೇಶಿಸಿ, ‘ದೊಡ್ಡಣ್ಣ ಸ್ವಲ್ಪ ಸಮಯ ಕೊಟ್ಟು ಎಸೆತ ಪ್ರಯೋಗಿಸು’ ಎಂದಿದ್ದರು. ಅಪರೂಪಕ್ಕೆ ಅಜರ್‌ ಕಮೆಂಟ್ ಕೇಳಿದ್ದ ಶಾಹೀದ್ ಕ್ಷಣ ತಬ್ಬಿಬ್ಬಾಗಿದ್ದರು. ನಂತರ ಮಂದಹಾಸ ಬೀರಿದ್ದರು.

* ಮಹೇಂದ್ರಸಿಂಗ್ ಧೋನಿ–ಶ್ರೀಶಾಂತ್:ಇಂಗ್ಲೆಂಡ್‌ ಎದುರಿನ ಏಕದಿನ ಪಂದ್ಯದಲ್ಲಿ ಭಾರತ ತಂಡದ ಶ್ರೀಶಾಂತ್ ಬೌಂಡರಿಲೈನ್‌ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಇಯಾನ್ ಬೆಲ್ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ವಿಕೆಟ್‌ ಕೀಪರ್ ಮಹೇಂದ್ರಸಿಂಗ್ ಧೋನಿ, ‘ಓಯ್‌ ಶ್ರೀ, ಅಲ್ಲಿ ನಿನ್ನ ಗರ್ಲ್‌ಫ್ರೆಂಡ್ ಇಲ್ಲ. ಈ ಕಡೆ ಬಾ’ ಎಂದಿದ್ದರು. ಅದರ ಬೆನ್ನಲ್ಲಿಯೇ ಬೌಲರ್‌ಗೆ, ‘ನಡೀ ತಮ್ಮಾ ಇವನ ಘಂಟೆ (ಬೆಲ್)ಬಾರಿಸು’ ಎಂದಿದ್ದ ಧೋನಿಯ ಮಾತುಗಳು ಇಂದಿಗೂ ನಗೆಯುಕ್ಕಿಸುತ್ತವೆ

*****

ಮೈದಾನದಲ್ಲಿ ಆಟದ ಸಂದರ್ಭದಲ್ಲಿ ನಡೆಯುವ ಸಂವಹನ ಇಲ್ಲಿಯೇ ಇರಬೇಕು. ಅದು ಹೊರಗೆ ಹೋದರೆ ನಾನಾ ರೂಪ ಪಡೆದುಕೊಳ್ಳುತ್ತದೆ. ಆದ್ದರಿಂದ ಮೈಕ್ ಬಳಕೆ ಬೇಡ .
–ನೇಥನ್ ಲಯನ್, ಆಸ್ಟ್ರೇಲಿಯಾ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT