ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹62 ಕೋಟಿ ವೆಚ್ಚದಲ್ಲಿ 32 ಕೆರೆಗೆ ನೀರು

ಬನವಾಸಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ
Last Updated 27 ಮಾರ್ಚ್ 2018, 11:09 IST
ಅಕ್ಷರ ಗಾತ್ರ

ಬನವಾಸಿ: ಶಿರಸಿ ತಾಲ್ಲೂಕಿನ ಪೂರ್ವಭಾಗದ ಬಹುವರ್ಷಗಳ ನಿರೀಕ್ಷೆಯಾಗಿದ್ದ ವರದಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ₹ 62.54 ಕೋಟಿ ವೆಚ್ಚದ ಬನವಾಸಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ ಸೋಮವಾರ ಚಾಲನೆ ನೀಡಿದರು.

‘ಬನವಾಸಿ ಭಾಗದ ಈ ಬೃಹತ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆದಾರರು ಮುಂದಿನ ವಾರದಿಂದ ಕಾಮಗಾರಿ ಪ್ರಾರಂಭಿಸಲಿದ್ದಾರೆ. ಮೊದಲ ಹಂತದಲ್ಲಿ 32 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳ್ಳಲಿದೆ. ಇದರಿಂದ ಸುಮಾರು 7000 ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಜಲಮೂಲವಾಗಿರುವ ಕೆರೆ ಸಮೃದ್ಧವಾಗಿದ್ದರೆ, ಬಾವಿಗಳ ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ. ರೈತರು ವಾರ್ಷಿಕವಾಗಿ ಎರಡು ಬೆಳೆಗಳನ್ನು ತೆಗೆಯಲು ಸಾಧ್ಯವಾಗುತ್ತದೆ. ನಿರಂತರ ಬರಗಾಲದಿಂದ ತತ್ತರಿಸುತ್ತಿರುವ ಬನವಾಸಿ ಸುತ್ತಲಿನ ಹಳ್ಳಿಗಳಿಗೆ ಈ ಯೋಜನೆ ವರದಾನವಾಗಲಿದೆ. ಮುಂದಿನ ಹಂತದಲ್ಲಿ ಈ ಭಾಗದ ಇನ್ನಷ್ಟು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಶಾಸಕರು ಹೇಳಿದರು.

‘ಅನೇಕ ಅಭಿವೃದ್ಧಿ ಕಾಮಗಾರಿಗಳು ಈ ಹೋಬಳಿಗೆ ಬಂದಿವೆ. ಆದರೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ₹ 5 ಕೋಟಿ ವೆಚ್ಚದ ಕಾಮಗಾರಿ ಹಾಗೂ ಏತ ನೀರಾವರಿ ಕಾಮಗಾರಿಗಳನ್ನು ತಂದಿರುವುದು ಹೆಚ್ಚು ಸಮಾಧಾನ ನೀಡಿದೆ. ಅನ್ನದಾತನಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ರಸ್ತೆ, ಚರಂಡಿಯಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ, ರೈತರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ₹ 220 ಕೋಟಿ ವೆಚ್ಚದಲ್ಲಿ 129 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಮಾ.28ರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.

ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರತ್ನಾ ಶೆಟ್ಟಿ, ಸುರೇಶ ನಾಯ್ಕ, ಎಪಿಎಂಸಿ ಸದಸ್ಯ ಪ್ರಶಾಂತ ಗೌಡರ, ಗುಡ್ನಾಪುರ ಪಂಚಾಯ್ತಿ ಅಧ್ಯಕ್ಷ ಅಣ್ಣಾಜಿ ಗೌಡ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ಯಾಮಣ್ಣ ದೊಡ್ಡಮನಿ ಇದ್ದರು.

ರಘು ನಾಯ್ಕ ಸ್ವಾಗತಿಸಿದರು. ಉದಯ ಕುಮಾರ ಕಾನಳ್ಳಿ ನಿರೂಪಿಸಿದರು.

**

ಶಾಶ್ವತ ನೀರಾವರಿ ಯೋಜನೆ ಗಳಿಂದ ರೈತರ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ರೈತರನ್ನು ಅವಲಂಬಿಸಿರುವ ಕೃಷಿ ಕೂಲಿ ಕಾರ್ಮಿಕರ ಬದುಕು ಹಸನಾಗುತ್ತದೆ.

-ಶಿವರಾಮ ಹೆಬ್ಬಾರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT