ಬುಧವಾರ, 22 ಏಪ್ರಿಲ್ 2026
×
ADVERTISEMENT

ರಾಹುಲ್ ದ್ರಾವಿಡ್ ಸಂದರ್ಶನ: 2001ರ ಕೋಲ್ಕತ್ತ ಇನಿಂಗ್ಸ್ ಸ್ಮರಿಸಿದ 'ಗೋಡೆ'

Published : 15 ಮಾರ್ಚ್ 2026, 1:20 IST
Last Updated : 15 ಮಾರ್ಚ್ 2026, 1:20 IST
ADVERTISEMENT
ಫಾಲೋ ಮಾಡಿ
Comments
ಪ್ರ

ಭಾರತವು ಟೆಸ್ಟ್ ಇತಿಹಾಸದಲ್ಲಿ ದಾಖಲಿಸಿದ ಅದ್ಭುತ ಗೆಲುವುಗಳಲ್ಲಿ ಕೋಲ್ಕತ್ತ ಪಂದ್ಯವೂ ಒಂದು. ಅದರ ರೂವಾರಿಗಳಲ್ಲಿ ತಾವೂ ಪ್ರಮುಖರಾಗಿದ್ದಿರಿ. 25 ವರ್ಷಗಳ ನಂತರ ಆ ಇನಿಂಗ್ಸ್‌ ಅನ್ನು ಯಾವ ರೀತಿ ನೋಡುತ್ತೀರಿ?

ತುಂಬಾ ಸಮಯವಾಯಿತು. ವೃತ್ತಿಜೀವನದ ಒಂದೊಳ್ಳೆಯ ನೆನಪು ಅದು. ಬಹಳಷ್ಟು ಬಗೆಯಲ್ಲಿ ಖುಷಿ ಕೊಟ್ಟ ಇನಿಂಗ್ಸ್‌ ಅದು. ಆಸ್ಟ್ರೇಲಿಯಾ ಎದುರು ಆ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ ನಂತರ ಮರುಹೋರಾಟ ಮಾಡಿದ್ದು ಅವಿಸ್ಮರಣೀಯವಾಗುತ್ತದೆ. ಅದೊಂದು ನಿಜಕ್ಕೂ ಬಹಳ ಮುಖ್ಯವಾದ ಗೆಲುವಾಗಿತ್ತು. ಅದು ಜನರ ಮನದಲ್ಲಿ ಅಚ್ಚೊತ್ತಿರುವುದು ತೃಪ್ತಿಕರವಾಗಿದೆ. ಈ 25 ವರ್ಷಗಳಲ್ಲಿ ದಾಖಲಾಗಿರುವ ಬಹಳಷ್ಟು ನೆನಪುಗಳಲ್ಲಿಯೂ ಆ ಇನಿಂಗ್ಸ್‌ ಸ್ಮರಣೀಯವಾಗಿರುವುದು ವಿಶೇಷ.

ಪ್ರ

ಈಡನ್ ಗಾರ್ಡನ್‌ ಹಣಾಹಣಿಗೂ ಮುಂಬೈನಲ್ಲಿ  ನಡೆಸಿದ್ದ ಟೆಸ್ಟ್‌ನಲ್ಲಿ ಭಾರತ ತಂಡ ಸೋತಿತ್ತು. ಕೋಲ್ಕತ್ತದಲ್ಲಿ ಮೊದಲ ಇನಿಂಗ್ಸ್‌ ಹಿನ್ನಡೆಯಾಗಿತ್ತು. ಫಾಲೋ ಆನ್ ಕೂಡ ಹೇರಲಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳು ಬೇಗನೆ ಪತನವಾದವು. ಆ ಸಂದರ್ಭದಲ್ಲಿ ನಿಮ್ಮ ಮನೋಭಾವ ಹೇಗಿತ್ತು?

ಸಹಜವಾಗಿಯೇ ನಾವು ಬಹಳ ಒತ್ತಡದಲ್ಲಿದ್ದೆವು. ಸತತ 16 ಟೆಸ್ಟ್‌ಗಳನ್ನು ಜಯಿಸಿದ್ದ ಆಸ್ಟ್ರೇಲಿಯಾ ಎದುರು ಆಡುತ್ತಿದ್ದೆವು. ಮುಂಬೈ ಪಂದ್ಯದಲ್ಲಿಯೂ ನಾವು ಅವರಿಗೆ ಸೋತಿದ್ದೆವು. ಸರಣಿಯ ಕುರಿತು ಬಹಳಷ್ಟು ಚರ್ಚೆಗಳುನಡೆಯುತ್ತಿದ್ದವು. ಕೋಲ್ಕತ್ತದಲ್ಲಿ ಮೊದಲ ಮೂರು ದಿನ ಅವರೇ ಮೇಲುಗೈ ಸಾಧಿಸಿದ್ದರು. ಆ ಕಠಿಣ ಪರಿಸ್ಥಿತಿಯಲ್ಲಿ ನಾವು ಎಷ್ಟು ಸಾಧ್ಯವೋ ಅಷ್ಟು ಆಟ ಮುಂದುವರಿಸುವ ಬಗ್ಗೆ ಮಾತ್ರ ಯೋಚಿಸಿದ್ದೆವು. ಬೇರೆ ಯಾವುದೇ ಆಲೋಚನೆಯೂ ಇರಲಿಲ್ಲ. ಜೊತೆಯಾಟ ಗಟ್ಟಿಯಾಗಿ ಮುಂದುವರೆಯತೊಡಗಿ ದಂತೆ  ನಮ್ಮ ಒತ್ತಡವು ನಿಧಾನವಾಗಿ ಎದುರಾಳಿಗಳತ್ತ ವರ್ಗವಾಗತೊಡ ಗಿತು. ಬಿಸಿಲಿನ ಕಾವು ಕೂಡ ಹೆಚ್ಚಿತ್ತು. ನಾವಿಬ್ಬರೂ ಪರಸ್ಪರ ಜೊತೆಯಾಟವನ್ನು ಬೆಳೆಸುವತ್ತ ಮುಂದಡಿ ಇಟ್ಟೆವು. ಪಂದ್ಯದ ಕೊನೆಯ ದಿನದಾಟದಲ್ಲಿ ಉಳಿದ ಆಟಗಾರರ ಬೆಂಬಲವೂ ಲಭಿಸಿತ್ತು.
ಪಂದ್ಯ ಗೆದ್ದೆವು. 

ಪ್ರ

ತಾವು ಯಾವಾಗಲೂ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವುದು ವಾಡಿಕೆಯಾಗಿತ್ತು. ಆದರೆ ಆ ಇನಿಂಗ್ಸ್‌ನಲ್ಲಿ 6ನೇ ಕ್ರಮಾಂಕದಲ್ಲಿ ಆಡಿ ಯಶಸ್ವಿಯಾದ ಬಗ್ಗೆ.

ಆ ಸರಣಿ ಮತ್ತು ದೇಶಿ ಕ್ರಿಕೆಟ್ ಪಂದ್ಯಗಳಲ್ಲಿ ನಾನು ರನ್‌ಗಳನ್ನು ಗಳಿಸಿದ್ದೇ. ಉತ್ತಮ ಲಯದಲ್ಲಿಯೇ ಇದ್ದೆ. ಆದರೆ ನನ್ನ ನಿರೀಕ್ಷೆಗೆ ತಕ್ಕ ಸ್ಕೋರ್‌ಗಳು ಆಗ ದಾಖಲಾಗದ ಕುರಿತ ಒತ್ತಡವೂ ಇತ್ತು. ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸೂಚನೆ ಬಂದಾಗ ಒಪ್ಪಿದ್ದೆ. ಅದು ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ತಂತ್ರವೂ ಆಗಿತ್ತು. ಆ ಹೋತ್ತಿಗೆ ಕ್ರೀಸ್‌ನಲ್ಲಿದ್ದ ಲಕ್ಷ್ಮಣ್ ಉತ್ತಮವಾಗಿ ಆಡುತ್ತಿದ್ದರು. ಅವರ ಆಟಕ್ಕೆ ಬೆಂಬಲವಾಗಿ ನಿಲ್ಲುವ ಯೋಚನೆ ಮಾತ್ರ ನನಗಿತ್ತು. ಆ ಹಂತದಲ್ಲಿ ವಿಕೆಟ್ ಕಳೆದುಕೊಂಡರೆ ಪಂದ್ಯ ಮತ್ತು ಸರಣಿ ಸೋಲು ಖಚಿತ ಎಂಬುದರ ಅರಿವಿತ್ತು. ಹೆಚ್ಚು ಹೊತ್ತು ನಾನು ಕ್ರೀಸ್‌ನಲ್ಲಿದ್ದಷ್ಟೂ ಇನಿಂಗ್ಸ್‌ ಬಲ ಹೆಚ್ಚಲಿದೆ ಎಂಬ ಭಾವನೆ ಬಂದಿತ್ತು.  ಅದರ ಪ್ರಕಾರ ಜೊತೆಯಾಟ ಬೆಳೆಸಿದೆವು. 

ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಶತಕ ಗಳಿಸಿ ಸಂಭ್ರಮಿಸಿದ ರಾಹುಲ್ ದ್ರಾವಿಡ್

ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಶತಕ ಗಳಿಸಿ ಸಂಭ್ರಮಿಸಿದ ರಾಹುಲ್ ದ್ರಾವಿಡ್ 

–ಪ್ರಜಾವಾಣಿ ಚಿತ್ರ ಸಂಗ್ರಹದಿಂದ 

ಪ್ರ

ನೀವು ಮತ್ತು ಲಕ್ಷ್ಮಣ್ ಹಲವು ಪಂದ್ಯಗಳಲ್ಲಿ ಉಪಯುಕ್ತ ಜೊತೆಯಾಟಗಳನ್ನು ಆಡಿರುವ ದಾಖಲೆಗಳಿವೆ. ಆದರೆ ಈಡನ್ ಗಾರ್ಡನ್ ಜೊತೆಯಾಟದಲ್ಲಿ ಲಕ್ಷ್ಮಣ್ ಅವರ ಇನಿಂಗ್ಸ್ ಹೇಗಿತ್ತು?

ನಾನು ಲಕ್ಷ್ಮಣ್ ಜೊತೆಗೆ ಜೂನಿಯರ್ ಕ್ರಿಕೆಟ್‌ನಲ್ಲಿ ದಕ್ಷಿಣ ವಲಯ ತಂಡದಲ್ಲಿ ಆಡಿದ್ದೆ. ದೇಶಿ ಟೂರ್ನಿಗಳಲ್ಲಿಯೂ ದೊಡ್ಡ ಜೊತೆಯಾಟಗಳನ್ನು ಆಡಿದ್ದೆವು. ಆದ್ದರಿಂದ ಪರಸ್ಪರ ಚೆನ್ನಾಗಿ ಅರಿತಿದ್ದೆವು. ಅವರೊಬ್ಬ ಅದ್ಭುತ ಬ್ಯಾಟರ್. ಎಲ್ಲ ರೀತಿಯ ಬೌಲಿಂಗ್‌ ಮುಂದೆಯೂ ಅಮೋಘವಾಗಿ ಆಡಬಲ್ಲ ಬ್ಯಾಟರ್. ಅವರ ಆಟವನ್ನು ನೋಡುತ್ತ  ಆನಂದಿಸಿದೆ. ಅವರ ಶಾಂತಚಿತ್ತದ ಆಟ ಚೆಂದ.  ಅವರ ಸ್ಟೈಲಿಷ್ ಬ್ಯಾಟಿಂಗ್‌ ನೋಡುವುದೇ ಕಣ್ಣಿಗೆ ಹಬ್ಬ. ಇನ್ನು ಅವರೊಂದಿಗೆ ಜೊತೆಯಾಟ ಕಟ್ಟುವುದು ಕೂಡ ಅದ್ಭುತ ಅನುಭವ.

ಶತಕ ಗಳಿಸಿದ ವಿವಿಎಸ್ ಲಕ್ಷ್ಮಣ್ ಅವರನ್ನು ಅಭಿನಂದಿಸಿದ ರಾಹುಲ್ ದ್ರಾವಿಡ್

ಶತಕ ಗಳಿಸಿದ ವಿವಿಎಸ್ ಲಕ್ಷ್ಮಣ್ ಅವರನ್ನು ಅಭಿನಂದಿಸಿದ ರಾಹುಲ್ ದ್ರಾವಿಡ್ 

–ಪ್ರಜಾವಾಣಿ ಚಿತ್ರ ಸಂಗ್ರಹದಿಂದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT